ಮೇಕೆದಾಟು ಯೋಜನೆಗೆ ಸಿಗುತ್ತಾ ಮುಕ್ತಿ?
5912 ಕೋಟಿ ರೂ. ವೆಚ್ಚದ ಯೋಜನೆ ನನಸಾಗುವುದೆಂದು?: ಈವರೆಗೆ ಜನಪ್ರತಿನಿಧಿಗಳ ಭರವಸೆಗಳೆಲ್ಲಾ ಹುಸಿ
Team Udayavani, Sep 14, 2020, 12:54 PM IST
ರಾಮನಗರ: ಮೇಕೆದಾಟು ಯೋಜನೆ ಕುರಿತು ಈಗ ಮತ್ತೆ ಜಿಲ್ಲೆಯಲ್ಲಿ ಚರ್ಚೆಯಾಗುತ್ತಿದೆ. ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಸೋಮವಾರ ಮೇಕೆದಾಟು ಸಮತೋಲನ ಜಲಾಶಯ (ಕುಡಿಯುವ ನೀರಿನ) ಯೋಜನೆ ಸ್ಥಳಕ್ಕೆ ಭೇಟಿ ನೀಡಲಿದ್ದು ಪರಿಶೀಲನೆ ನಡೆಸಲಿದ್ದಾರೆ.
2019ರ ಸೆಪ್ಟೆಂಬರ್‌ನಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಇಲಾಖೆ ಹಿರಿಯ ಅಧಿಕಾರಿಗಳನ್ನು ಕರೆದುಕೊಂಡು ಮೇಕೆದಾಟು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದರು. 5912 ಕೋಟಿ ರೂ. ವೆಚ್ಚದ ಈ ಯೋಜನೆಯ ಉದ್ದೇಶಿತ ಜಲಾಶಯ ನಿರ್ಮಾಣದ ಸ್ಥಳಗುರುತು ಮಾಡಿಸಿದ್ದರು. ಆಗ ಸಿಎಂ ಆಗಿದ್ದ ಎಚ್. ಡಿ.ಕುಮಾರಸ್ವಾಮಿ ತಮ್ಮ ಅವಧಿಯಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿಕೆ ನೀಡಿದ್ದರು. ತದ ನಂತರ ಸರ್ಕಾರ ಪತನವಾದ ಮೇಲೆ ಮೇಕೆದಾಟು ಯೋಜನೆಯ ಬಿಸಿ ತಣ್ಣಗಾಗಿತ್ತು. ಇದೀಗ ಮತ್ತೆ ಮೇಕೆದಾಟು ಯೋಜನೆ ಗರಿಗೆದರಿದೆ.
ಎಲ್ಲಿ ನಿರ್ಮಾಣ?: ಜಿಲ್ಲೆಯ ಕನಕಪುರ ತಾಲೂಕಿನ ಒಂಟಿಗುಂಡ್ಲು ಎಂಬ ಸ್ಥಳದಲ್ಲಿ ಮಗ್ಗೂರು ಅರಣ್ಯ ವಲಯ ಮತ್ತು ಹನೂರು ಅರಣ್ಯವಲಯದ 2 ಬೆಟ್ಟಗಳ ನಡುವೆ ಮೇಕೆ ದಾಟು ಸಮತೋಲನ ಜಲಾಶಯ (ಕುಡಿಯುವ ನೀರಿನ) ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ. ಅರ್ಕಾವತಿ ಮತ್ತು ಕಾವೇರಿ ನದಿಗಳು ಸಂಗಮಿಸುವ ಸ್ಥಳದಿಂದ 4 ಕಿ.ಮೀ. ಅಂತರದಲ್ಲಿ ಈ ಜಲಾಶಯ ನಿರ್ಮಾಣವಾಗಲಿದೆ. ರಾಮನಗರ ಜಿಲ್ಲೆ, ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸುವ ಸಲುವಾಗಿಯೇ ಈ ಯೋಜನೆ ಎಂದು ರಾಜ್ಯ ಸರ್ಕಾರ ಈಗಾಗಲೆ ಘೋಷಿಸಿದೆ. ಸುಮಾರು 66 ಟಿಎಂಸಿ ನೀರನ್ನು ಇಲ್ಲಿ ಶೇಖರಿಸಿಕೊಳ್ಳುವ ಸಾಮರ್ಥ್ಯ ಈ ಜಲಾಶಯಕ್ಕೆ ಇರಲಿದೆ. ಜತೆಗೆ 40 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಘಟಕವನ್ನೂ ಸ್ಥಾಪಿಸುವ ಉದ್ದೇಶವಿದೆ.
ರಾಜಕೀಯಕ್ಕೆ ಬಳಕೆ: ರಾಜ್ಯ ರಾಜಕಾರಣದಲ್ಲಿ ಅತ್ಯಂತ ಪ್ರಭಾವಿಗಳು ರಾಮನಗರದಿಂದಲೇ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಜಿಲ್ಲೆಗೆ ಕುಡಿಯುವ ನೀರಿನ ಸಮಸ್ಯೆ ನೀಗಿಸಬಲ್ಲ ಮೇಕೆದಾಟು ಯೋಜನೆಗೆ ಜೆಡಿಎಸ್-ಕಾಂಗ್ರೆಸ್ ರಾಜಕೀಯಕ್ಕೂ ಬಳಸಿಕೊಂಡಿದೆ. ತಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಯೋಜನೆ ಶತಸಿದ್ಧ ಎಂದು ಎರಡೂ ಪಕ್ಷಗಳ ನಾಯಕರು ಮತಯಾಚನೆ ವೇಳೆ ಹೇಳಿಕೊಂಡಿದ್ದಾರೆ. ಇದೀಗ ಬಿಜೆಪಿ ಸರದಿ ಎಂದು ಜಿಲ್ಲೆಯ ಜನತೆ ಟೀಕಾ ಪ್ರಹಾರ ನಡೆಸಿದ್ದಾರೆ. ಈ ಯೋಜನೆ ಬಗ್ಗೆ ಯಾವ ಪಕ್ಷಕ್ಕೂ ಪ್ರಾಮಾಣಿಕ ಕಾಳಜಿ ಇಲ್ಲ ಎಂದು ಆರೋಪಿಸಿದ್ದಾರೆ.
ವಿಳಂಬಕ್ಕೆ ಕಾರಣ ಏನು? : ಮೇಕೆದಾಟು ಸಮತೋಲನ ಜಲಾಶಯ (ಕುಡಿಯುವ ನೀರಿನ)ಕ್ಕೆ ಕೇಂದ್ರ ಸರ್ಕಾರ ಸಮ್ಮತಿಸಿದೆ. ಆದರೆ,ಕೇಂದ್ರದ ಪರಿಸರ ಇಲಾಖೆ, ಅರಣ್ಯ ಇಲಾಖೆ ಇನ್ನೂ ಅನುಮತಿ ನೀಡಬೇಕಾಗಿದೆ. ಮೇಕೆದಾಟುಯೋಜನೆಯಿಂದ 3,181 ಹೆಕ್ಟೇರ್ ವನ್ಯಜೀವಿ ಸಂರಕ್ಷಿತಅರಣ್ಯ ಸೇರಿ 5,051 ಹೆಕ್ಟೇರ್ ಅರಣ್ಯ ಪ್ರದೇಶ ಮುಳುಗಡೆಯಾಗುತ್ತದೆ. ಇದರಲ್ಲಿ ಶೇ.90 ಅರಣ್ಯ ಭೂಮಿ, ಉಳಿದ ಕಂದಾಯ ಭೂಮಿ ಸೇರಿದೆ. ಆನೆ, ಜಿಂಕೆ ಸೇರಿದಂತೆ ಇನ್ನಿತರ ವನ್ಯ ಸಂಕುಲ ನೆಲೆ ಕಳೆದುಕೊಳ್ಳಲಿವೆ. ಹೀಗಾಗಿ ಅರಣ್ಯ ಇಲಾಖೆ ಇನ್ನು ಅನುಮತಿ ನೀಡಿಲ್ಲ ಎಂದು ಹೇಳಲಾಗಿದೆ.
ಕುಡಿಯುವ ನೀರು, ವಿದ್ಯುತ್ ಉತ್ಪಾದನೆ : ಮೇಕೆದಾಟು ಸಮತೋಲನ ಜಲಾಶಯದ ಅಣೆಕಟ್ಟೆ ಎತ್ತರ 441.20 ಮೀಟರ್, ಅಗಲ 674.5 ಮೀಟರ್. ನೀರು ಶೇಖರಣಾ ಸಾಮರ್ಥ್ಯ 66 ಟಿಎಂಸಿ ನೀರಿನ ಹೊರ ಹರಿವಿಗಾಗಿ 15×12 ಮೀಟರ್ ಎತ್ತರದಷ್ಟು 17 ಗೇಟ್ ಅಳವಡಿಕೆ ಮಾಡಲಾಗುತ್ತದೆ. ಕುಡಿಯುವ ನೀರಿನ ಯೋಜನೆ ಜತೆಗೆ 440 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವಉದ್ದೇಶವೂ ಇದೆ. ಯೋಜನೆಯಿಂದ ತಮಿಳುನಾಡಿಗೆ ವಾರ್ಷಿಕವಾಗಿ ಬಿಡಬೇಕಾದ ನೀರಿನ ಪ್ರಮಾಣಕ್ಕೆ ಧಕ್ಕೆಯಾಗುವುದಿಲ್ಲ ಎಂಬುದು ರಾಜ್ಯ ಸರ್ಕಾರದ ಸಮಜಾಯಿಷಿ. 2018ರಲ್ಲಿ ಈ ಯೋಜನೆಯನ್ನು ಕಾರ್ಯಗತಗೊಳಿಸಲು 5912 ಕೋಟಿ ರೂ. ವೆಚ್ಚ ಅಂದಾಜಿಸಲಾಗಿತ್ತು. ಇಂಧನ ಇಲಾಖೆಯಿಂದ 2 ಸಾವಿರ ಕೋಟಿ ಹಾಗೂ ಜಲಸಂಪನ್ಮೂಲ ಇಲಾಖೆಯಿಂದ 3912 ಕೋಟಿ ವಿನಿಯೋಗಿಸಲು ನಿರ್ಧರಿಸಲಾಗಿದೆ.
ಮೇಕೆದಾಟು ಯೋಜನೆಗೆ ತಮಿಳುನಾಡು ತಗಾದೆ ಏಕೆ? : ಬೆಂಗಳೂರು ನಗರ ಮತ್ತು ರಾಮನಗರ ಜಿಲ್ಲೆಯ ಕುಡಿಯುವ ನೀರಿನ ಬವಣೆ ನೀಗಿಸುವ ಉದ್ದೇಶದ ಮೇಕೆದಾಟು ಸಮತೋಲನ ಜಲಾಶ ಯೋಜನೆಗೆ ತಮಿಳು ನಾಡು ನಿರಂತರ ವಿರೋಧ ವ್ಯಕ್ತಪಡಿಸುತ್ತಲೇ ಇದೆ. ಮೇಕೆದಾಟು ಯೋಜನೆ ಅಸ್ತಿತ್ವಕ್ಕೆ ಬಂದರೆ ಕರ್ನಾಟಕ ತನ್ನ ಪಾಲಿನ ನೀರನ್ನು ಕೊಡಲು ಸಾಧ್ಯವಿಲ್ಲ ಎಂಬ ವಾದ, ಜಲಾಶಯ ನಿರ್ಮಾಣದಿಂದ ಅಪಾರ ಪ್ರಮಾಣದ ಕಾಡು ಮುಳುಗಡೆ ಯಾಗಲಿದೆ ಎಂಬ ವಾದ ಮಂಡಿಸಿದೆ. ಸುಪ್ರೀಂ ಕೋರ್ಟಿನ ಅನುಮತಿ ಇಲ್ಲದೆ, ಇಲ್ಲವೇ ಕಾವೇರಿ ನದಿ ಪಾತ್ರದ ರಾಜ್ಯಗಳ ಅನುಮತಿ ಇಲ್ಲದೆ ಜಲಾಶಯ ನಿರ್ಮಾಣ ಕೂಡದು ಎಂದು ತಮಿಳುನಾಡು ರಾಜ್ಯ ಸರ್ಕಾರ -ಕೇಂದ್ರ ಸರ್ಕಾಕ್ಕೆ 2019ರಅಕ್ಟೋಬರ್‌ನಲ್ಲಿ ಪತ್ರ ಬರೆದಿದೆ. ಅಲ್ಲದೇ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರದ ಸಭೆಗಳಲ್ಲೂ ತಮಿಳುನಾಡು ಸರ್ಕಾರ ತನ್ನ ವಿರೋಧ ವ್ಯಕ್ತಪಡಿಸುತ್ತಲೇ ಇದೆ. ಮೇಕೆದಾಟು ಯೋಜನೆ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ 2018ರಲ್ಲಿ ಸುಪ್ರೀಂ ತೀರ್ಪು ಮತ್ತು ಕಾವೇರಿ ವಾಟರ್ ಡಿಸ್ಪ್ಯೂಟ್ಸ್ ಟ್ರಿಬ್ಯುನಲ್‌ನ (ಸಿಡಬ್ಲ್ಯೂಡಿಟಿ) ಅಂತಿಮ ತೀರ್ಪಿನ ವಿರುದ್ಧವಾಗಿದೆ. ಕಾವೇರಿ ನದಿ ನೀರಿನ ಶೇಖರಣೆಗೆ ಕರ್ನಾಟಕದ ಬಳಿ ಈಗಾಗಲೇ ಸಾಕಷ್ಟು ಶೇಖರಣ ಸಾಮರ್ಥ್ಯವಿದೆ ಎಂಬುದಾಗಿ ಇವೆರೆಡು ತೀರ್ಪುಗಳಲ್ಲಿ ಉಲ್ಲೇಖವಾಗಿದೆ. ಹೀಗಾಗಿ ಹೊಸ ಜಲಾಶಯದ ಅಗತ್ಯವಿಲ್ಲ ಎಂದು ತಮಿಳುನಾಡು ವಿರೋಧ ವ್ಯಕ್ತಪಡಿಸಿದೆ.
-ಬಿ.ವಿ. ಸೂರ್ಯಪ್ರಕಾಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.