ಹೆಚ್ಚುತ್ತಿರುವ ತೈಲ ಬೆಲೆ: ಜನರಲ್ಲಿ ಆತಂಕ
Team Udayavani, Apr 11, 2022, 2:00 PM IST
ರಾಮನಗರ: ಉಕ್ರೇನ್-ರಷ್ಯ ರಾಷ್ಟ್ರಗಳ ನಡುವಿನ ಯುದ್ಧ ಪರಿಣಾಮ ಮತ್ತು ಜಾಗತಿಕ ಬಿಕ್ಕಟ್ಟನಿಂದ ಸ್ಥಳೀಯವಾಗಿ ತೈಲ ಬೆಲೆಗಳು ನಿರಂತರವಾಗಿ ಏರಿಕೆ ಯಾಗುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿ ಸದ್ಯ ಪೆಟ್ರೋಲ್, ಡೀಸೆಲ್ ಕೊರತೆ ಇಲ್ಲ. ಆದರೆ ಏರುತ್ತಿರುವ ಬೆಲೆಯಿಂದಾಗಿ ಮುಂದೆ ತೈಲ ಸಂಸ್ಥೆಗಳು ತೈಲ ಖರೀದಿ ಮಾಡಲಾಗದೆ ಕೈ ಚೆಲ್ಲಿ ಬಿಟ್ಟರೇ? ಎಂಬ ಆತಂಕ ಜಿಲ್ಲೆಯ ಜನತೆಯಲ್ಲಿ ಮನೆ ಮಾಡಿದೆ.
ಎರಡು ಮೂರು ತಿಂಗಳುಗಳಿಂದ ದೇಶದಲ್ಲಿ ತೈಲಬೆಲೆ ಏರಿಕೆಯಾಗುತ್ತಲೇ ಇದೆ. ಇದು ಸಾಮಾನ್ಯ ಜನತೆಯ ಕಿಸೆಯ ಮೇಲೆ ಹೊರೆಯಾಗುತ್ತಿದೆ. ಸರ್ಕಾರಿ ಸಾರಿಗೆ ಸಂಸ್ಥೆಯ ಬಸ್‌ಗಳಿಗೆ ಕೂಡ ಬೆಲೆ ಏರಿಕೆ ಬಿಸಿ ತಟ್ಟಿದ್ದು, ಸಾಮಾನ್ಯ ಬಂಕ್‌ಗಳ ಮೊರೆ ಹೋಗಿದೆ. ಪೆಟ್ರೋಲ್-ಡೀಸೆಲ್ ಕೊರತೆಯಾಗಲಿದೆಯೇ? ಎಂಬ ಪ್ರಶ್ನೆಗೆ ಸದ್ಯಕ್ಕೆ ಇಲ್ಲ ಎಂಬುದು ಪೆಟ್ರೋಲ್ ಬಂಕ್ ಮಾಲಿಕರ ಅಭಿಪ್ರಾಯ.
ಯುದ್ಧ ಪರಿಸ್ಥಿತಿ, ರಷ್ಯದ ಮೇಲೆ ನಿರ್ಬಂಧಗಳು ಹೀಗೆ ವಿವಿಧ ವಿಚಾರಗಳಿಗೆ ತೈಲ ಪೂರೈಕೆಯಲ್ಲಿಯೂ ವ್ಯತ್ಯಯವಾಗಿದೆ. ಬೆಲೆ ಏರಿಕೆಯೂ ಆಗಿದೆ. ಕೆಲವೊಮ್ಮೆ ತೈಲ ಪೂರೈಕೆ ಪ್ರಮಾಣದಲ್ಲೂ ವ್ಯತ್ಯಯವಾಗುತ್ತಿದೆ. ಸದ್ಯ ಜಿಲ್ಲೆ ಯಲ್ಲಿ ಪೆಟ್ರೋಲ್-ಡೀಸೆಲ್ ಕೊರತೆ ಉಂಟಾಗಿಲ್ಲ. ಆದರೆ ದಿನ ಕಳೆದಂತೆ ಜಾಗತಿಕವಾಗಿ ಇದೇ ಪರಿಸ್ಥಿತಿ ಮುಂದುವರೆದರೆ ಕೊರತೆ ಸಾಧ್ಯತೆ ಇದೆ ಎಂದು ಕೆಲವು ಪೆಟ್ರೋಲ್ ಬಂಕ್‌ಗಳ ಮಾಲಿಕರು ತಿಳಿಸಿದ್ದಾರೆ.
ಸದ್ಯ ಸಮಸ್ಯೆಯಿಲ್ಲ: ಸರ್ಕಾರಿ ಸ್ವಾಮ್ಯದ ಪೆಟ್ರೋಲ್ ಬಂಕ್‌ಗಳಲ್ಲಿ (ಎಚ್.ಪಿ, ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ) ಬೇಡಿಕೆಗೆ ತಕ್ಕಷ್ಟು ತೈಲ ಪೂರೈಕೆಯಾಗುತ್ತಿದೆ ಎಂದು ಈ ಸಂಸ್ಥೆಗಳ ಬಂಕ್ ಮಾಲಿಕರು ತಿಳಿಸಿದ್ದಾರೆ. ಖಾಸಗಿ ಸ್ವಾಮ್ಯದ ಪೆಟ್ರೋಲ್ ಬಂಕ್‌ಗಳಲ್ಲಿ (ರಿಲಯನ್ಸ್, ಶೆಲ್, ನಾಯರ ಇತ್ಯಾದಿ) ಪೂರೈಕೆ ಸದ್ಯಕ್ಕೆ ಸಮಸ್ಯೆಯಾಗಿಲ್ಲ. ಆದರೆ ಬೆಲೆ ಮತ್ತೆ ಏರಿದರೆ ತಮ್ಮ ಸಂಸ್ಥೆಗಳಿಗೆ ಸಗಟಾಗಿ ಖರೀದಿ ಮಾಡಲು ಸಾಧ್ಯವಾಗದ ಪರಿಸ್ಥಿತಿ ಉದ್ಭವಿಸಬಹುದು ಎಂಬ ಆತಂಕವನ್ನು ಖಾಸಗಿ ಪೆಟ್ರೋಲ್ ಬಂಕ್ ಮಾಲಿಕರು ವ್ಯಕ್ತಪಡಿಸಿದ್ದಾರೆ.
ಖರೀದಿ ನಿಲ್ಲಿಸುವ ಸಾಧ್ಯತೆ: ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ಸ್ವಾಮ್ಯದ ತೈಲ ಕಂಪನಿಗಳು ನಷ್ಟದಲ್ಲಿ ನಡೆಯುತ್ತಿವೆ. ದಿನನಿತ್ಯದ ಲೆಕ್ಕಾಚಾರದಲ್ಲಿ ತೈಲ ಬೆಲೆಗಳು ಏರಿಳಿಕೆಯಾಗುತ್ತಿದೆಯಾದರೂ ಕಂಪೆನಿ ಗಳಿಗೆ ಆಗುತ್ತಿರುವ ನಷ್ಟವನ್ನು ಸರಿದೂಗಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಷ್ಟವನ್ನು ತಪ್ಪಿಸಲು ತೈಲ ಖರೀದಿಯನ್ನೇ ನಿಲ್ಲಿಸುವ ಸಾಧ್ಯತೆಗಳು ಪರಿಸ್ಥಿತಿ ಯನ್ನು ಆಧರಿಸಿವೆ ಎಂದು ಮಾಲಿಕರು ಅಭಿಪ್ರಾಯ ಪಟ್ಟಿದ್ದಾರೆ. ಕೆಎಸ್‌ಆರ್‌ಟಿಸಿಗೂ ತಟ್ಟಿದ ಬಿಸಿ ತೈಲ ಬೆಲೆ ಏರಿಕೆ ಬಿಸಿ ಕೆಎಸ್‌ಆರ್‌ಟಿಸಿ ಗೂ ತಟ್ಟಿದೆ.
ಸಾರಿಗೆ ಸಂಸ್ಥೆಯ ಡಿಪೋಗಳಲ್ಲೇ ಇರುವ ಪೆಟ್ರೋಲ್ ಬಂಕುಗಳ ಮೂಲಕ ಬಸ್‌ಗಳಿಗೆ ಡೀಸೆಲ್ ತುಂಬಿಸಲಾಗುತ್ತಿತ್ತು. ಕೆಎಸ್‌ಆರ್‌ಟಿಸಿಗೆಂದೇ ಪೂರೈಕೆಯಾಗುತ್ತಿದ್ದ ಡೀಸೆಲ್ ಬೆಲೆಗೂ ಸಾಮಾನ್ಯ ಪೆಟ್ರೋಲ್ ಬಂಕ್‌ಗಳಲ್ಲಿನ ಡೀಸೆಲ್ ಬೆಲೆಗೂ ಸುಮಾರು 11ರಿಂದ 13 ರೂ. ವ್ಯತ್ಯಾಸವಿದೆ ಎನ್ನುತ್ತಾರೆ ರಾಮನಗರ ಡಿಪೋ ಮೇನೆಜರ್ ಅವರು. ಅಧಿಕ ವೆಚ್ಚವನ್ನು ತಡೆಯಲು ತಮ್ಮ ಮೇಲಧಿಕಾರಿಗಳ ಸೂಚನೆಯ ಮೇರೆಗೆ ಡಿಪೋಗಳಲ್ಲಿರುವ ಪೆಟ್ರೋಲ್ ಬಂಕ್‌ಗಳಿಗೆ ಬದಲಿಗೆ ಹೊರಗಡೆ ಇರುವ ಪೆಟ್ರೋಲ್ ಬಂಕ್‌ಗಳಲ್ಲಿ ಡೀಸೆಲ್ ಖರೀದಿಸಲಾಗುತ್ತಿದೆ ಎಂದರು.
ರಾಮನಗರ ಡಿಪೋವೊಂದರಲ್ಲೇ ದಿನನಿತ್ಯ ಸುಮಾರು 5 ಸಾವಿರ ಲೀಟರ್ ಡೀಸಲ್ ಅಗತ್ಯವಿದೆ. ಇದೀಗ ಸರ್ಕಾರಿ ಬಸ್ಸುಗಳು ಹೊರಗಡೆ ಖರೀದಿ ಮಾಡಲಾರಂಭಿಸಿದರೆ ಜನಸಾಮಾನ್ಯರಿಗೆ ಡೀಸಲ್ ಲಭ್ಯವಾಗದೆ ಇರಬಹುದು ಎಂಬ ಅತಂಕವೂ ಮನೆ ಮಾಡಿದೆ.
ಸಂಸ್ಥೆಗೆ ನಷ್ಟವಾಗುತ್ತಿದ್ದರೂ ಗ್ರಾಹಕರ ಹಿತ ದೃಷ್ಟಿಯಿಂದ ಶೆಲ್ ಸಂಸ್ಥೆ ಸರ್ಕಾರಿ ಸ್ವಾಮ್ಯದ ಪೆಟ್ರೋಲ್ ಬಂಕ್ ಗಳಲ್ಲಿರುವ ದರಗಳನ್ನೇ ನಿಗದಿ ಮಾಡಿದೆ. ಇಲ್ಲಿ ಗ್ರಾಹಕರಿಗೆ ಅನೇಕ ಸವಲತ್ತುಗಳನ್ನು ದೊರಕಿಸಿಕೊಡಲಾಗುತ್ತಿದೆ. ಪೆಟ್ರೋಲ್ – ಡೀಸೆಲ್‌ನ ಗುಣಮಟ್ಟಕ್ಕೆ ರಾಜಿಯಾಗಿಲ್ಲ. -ಬಿ.ಉಮೇಶ್, ನಗರದಲ್ಲಿರುವ ಶೆಲ್ ಪೆಟ್ರೋಲ್ ಬಂಕ್ ಮಾಲೀಕ
ಸದ್ಯದ ಪರಿಸ್ಥಿತಿ ಮುಂದುವರಿದರೆ ಲೀಟರ್ ಪೆಟ್ರೋಲ್‌ನ ಬೆಲೆ 120 ರೂ. ತಲುಪುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಇತ್ತೀಚೆಗೆ ಕೇಂದ್ರ ಸರ್ಕಾರದ ವಿತ್ತ ಮಂತ್ರಿಗಳು ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಇದು ಸಾಧ್ಯವಾದರೆ ಪರಿಸ್ಥಿತಿಯಲ್ಲಿ ಸುಧಾರಣೆ ಸಾಧ್ಯವಿದೆ. -ಆರ್.ಕುಮಾರ್, ರಿಲಯನ್ಸ್ ಪೆಟ್ರೋಲ್ ಬಂಕ್ ಮಾಲೀಕ
-ಬಿ.ವಿ. ಸೂರ್ಯ ಪ್ರಕಾಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.