ಪ್ರತ್ಯೇಕ ತ್ಯಾಜ್ಯ ಸಂಗ್ರಹಿಸಲು ವಿಶೇಷ ವಾಹನ ಖರೀದಿ
ಮಿನಿ ಟಿಪ್ಪರ್‌ಗಳಲ್ಲಿ ಹಸಿ, ಒಣ ತ್ಯಾಜ್ಯಕ್ಕೆ ಪ್ರತ್ಯೇಕ ವಿಭಾಗ ಕಸ ವಿಂಗಡಿಸಿ ಕೊಡದಿದ್ಧರೆ ದಂಡ ಪಕ್ಕಾ
Team Udayavani, Feb 6, 2020, 5:04 PM IST
ರಾಮನಗರ: ನಗರದ ನಾಗರೀಕರಿಂದ ಹಸಿ, ಒಣ ತ್ಯಾಜ್ಯವನ್ನು ಕಡ್ಡಾಯವಾಗಿ ಬೇರ್ಪಡಿಸಿ ಸ್ವೀಕರಿಸಲು ನಗರಸಭೆ ಮುಂದಾಗಿದೆ. ಇದಕ್ಕಾಗಿಯೇ ವಿಶೇಷ ವಾಹನಗಳನ್ನು ನಗರಸಭೆ ಖರೀದಿಸಿದೆ. ನಗರಸಭೆಯ 14ನೇ ಹಣಕಾಸು ಯೋಜನೆಯಡಿಯಲ್ಲಿ ಮಿನಿ ಟಿಪ್ಪರ್‌ಗಳನ್ನು ಸುಮಾರು 29 ಲಕ್ಷ ರೂ. ವೆಚ್ಚದಲ್ಲಿ ಖರೀದಿಸಲಾಗಿದ್ದು, ಸುಮಾರು 1 ಸಾವಿರ ಕೆ.ಜಿಗೂ ಹೆಚ್ಚು ಪ್ರಮಾಣದ ಹಸಿ ಮತ್ತು ಒಣ ತ್ಯಾಜ್ಯ ಸಂಗ್ರಹಿಸುವಷ್ಟು ಸಾಮರ್ಥ್ಯ ಈ ವಾಹನ ಗಳಿಗಿದೆ. 31 ವಾರ್ಡುಗಳಲ್ಲೂ ಕಸ ಸಂಗ್ರಹಿಸಲು ನಗರಸಭೆ ಬಳಿ 8 ವಾಹನಗಳು ಇದ್ದು, ಇದೀಗ ಮತ್ತೆ 7 ವಾಹನಗಳು ಸೇರ್ಪಡೆಯಾಗಲಿವೆ. ಎರಡು ವಾರ್ಡ್ಗಳಿಗೆ ತಲಾ ಒಂದು ವಾಹನ ದಿನನಿತ್ಯ ಸಂಚರಿಸಿ ಕಸ ಸಂಗ್ರಹಿಸಲು ಅಧಿಕಾರಿಗಳು ಉದ್ದೇಶಿಸಿದ್ದಾರೆ.
ಜಿಮ್ ಪೋರ್ಟಲ್ ಮೂಲಕ ಖರೀದಿ: ಸ್ವಚ್ಚ ಭಾರತ ಮಿಷನ್ ಅಡಿಯಲ್ಲಿ ವಾಹನಗಳ ಖರೀದಿಗೆ ನಗರಸಭೆ ಪ್ರಸ್ತಾವನೆ ಸಲ್ಲಿಸಿತ್ತು. ವಾಹನಗಳ ಖರೀದಿಗೆ ಜಿಲ್ಲಾಧಿಕಾರಿಗಳು ಸಭೆ ನಡೆಸಿ ಒಪ್ಪಿಗೆ ಕೊಟ್ಟಿದ್ದರು. ಜಿಲ್ಲಾಡಳಿತದಿಂದ ತಾಂತ್ರಿಕ ಅನುಮೋದನೆ ಪಡೆ ದುಕೊಂಡ ನಂತರವೇ ವಾಹನ್ನ ಖರೀದಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಒಪ್ಪಿಗೆ ಸಿಕ್ಕ ನಂತರ ನಗರಸಭೆ ಸರ್ಕಾರ ಸ್ಥಾಪಿಸಿರುವ ಇ-ಮಾರ್ಕೆಟಿಂಗ್ ಪೋರ್ಟಲ್‌ನಲ್ಲಿ ವಾಹನಗಳ ಖರೀದಿಗೆ ಪೂರೈಕೆದಾರರನ್ನು ಆಹ್ವಾನಿಸಲಾಗಿತ್ತು. ಒಟ್ಟು 5 ಮಂದಿ ಮಾರಾಟಗಾರರು ಮುಂದೆ ಬಂದು ಕೊಟೇಷನ್ ಕೊಟ್ಟಿದ್ದರು. ಮಹಾರಾಷ್ಟ್ರದ ಸಂಸ್ಥೆಯೊಂದು ಅತಿ ಕಡಿಮೇ ದರ ನಮೂದಿಸಿದ್ದರಿಂದ ಅವರಿಂದ ಈ ವಾಹನಗಳನ್ನು ಖರೀದಿಸಲಾಗಿದೆ. ಸದರಿ ಮಾರಾಟಗಾರರು ದೇವನಹಳ್ಳಿ, ದೊಡ್ಡಬಳ್ಳಾಪುರಗಳಲ್ಲಿಯೂ ಇಂತಹ ವಾಹನಗಳನ್ನು ಮಾರಾಟ ಮಾಡಿದ್ದಾರೆ. ಇವೆಲ್ಲವನ್ನು ಪರಿಗಣಿಸಿ ವಾಹನಗಳನ್ನು ಖರೀದಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ಲಾಸ್ಟಿಕ್ ತ್ಯಾಜ್ಯ ರಸ್ತೆಯಲ್ಲಿ ಬೀಸಾಡಬೇಡಿ: ಪರಿಸರ ರಕ್ಷಣೆ ಎಲ್ಲ ನಾಗರಿಕರ ಹೊಣೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಮನೆ, ಅಂಗಡಿ ಮಳಿಗೆಗಳ ಮಾಲೀಕರು ರಸ್ತೆ ಬದಿಯಲ್ಲಿ ಬೀಸಾಡದೆ ನಗರಸಭೆಯ ಕಸ ಸಂಗ್ರಹ ವಾಹನಕ್ಕೆ ಕೊಡಬೇಕು ಎಂದು ಪರಿಸರ ಅಧಿಕಾರಿ ರಾಜಶ್ರೀ ನಾಗರೀಕರಿಗೆ ಮನವಿ ಮಾಡಿದ್ದಾರೆ.
ಮನೆ, ಮನೆಯಿಂದ ಕಸ ಸಂಗ್ರಹಿಸುವಾಗಲೇ ಹಸಿ ಮತ್ತು ಒಣ ಕಸವನ್ನು ಸಂಗ್ರಹಿಸಲು ನೂತನ ವಾಹನಗಳು ಅನುಕೂಲವಾಗಿವೆ. ನಾಗರಿಕರು ಹಸಿ ಮತ್ತು ಒಣಕಸ ಬೇರ್ಪಡಿಸಿ ನೀಡಬೇಕು. ಹಸಿ ಕಸವನ್ನು ನಗರಸಭೆ ಗೊಬ್ಬರವನ್ನಾಗಿ ಪರಿವರ್ತಿಸುತ್ತಿದೆ. ಈ ಗೊಬ್ಬರವನ್ನು ಖರೀದಿಸಲು ಅನೇಕ ರೈತರು ಆಸಕ್ತಿ ತೋರಿಸಿದ್ದಾರೆ. ಸದ್ಯದಲ್ಲೇ ಈ ವಾಹನಗಳು ಸಾರ್ವಜನಿಕರ ಬಳಕೆಗೆ ನಿಯೋಜನೆಯಾಗಲಿವೆ.
● ಬಿ.ಶುಭಾ, ಆಯುಕ್ತರು, ನಗರಸಭೆ
ಎಚ್ಚರಿಕೆ!
ಹಸಿ ಮತ್ತು ಒಣ ತ್ಯಾಜ್ಯವನ್ನು ಸಂಗ್ರಹಣೆಯ ಮೂಲದಲ್ಲೇ ಪ್ರತ್ಯೇಕಿಸಿ ಕೊಡಬೇಕಾದ್ದು ನಾಗರಿಕರ ಕರ್ತವ್ಯ. ಇದು ಕಾನೂನು ಕೂಡ. ಹಸಿ ಮತ್ತು ಒಣ ತ್ಯಾಜ್ಯವನ್ನು ಪ್ರತ್ಯೇಕಿಸಿ ಕೊಡದಿದ್ದರೆ, ನಗರ ಸಭೆ ಸಿಬ್ಬಂದಿ ತ್ಯಾಜ್ಯ ಸಂಗ್ರಹಿಸಲು ನಿರಾಕರಿಸಲು ಅಧಿಕಾರವಿದೆ. ಸಹಕರಿಸದ ಕುಟುಂಬಗಳಿಗೆ ದಂಡ ವಿಧಿಸುವ ಅಧಿಕಾರವೂ ನಗರಸಭೆಗಿದೆ. ಪರಿಸರ ರಕ್ಷಣೆಗಾಗಿ ನಾಗರೀಕರು ಕಾನೂನು ಪಾಲಿಸಬೇಕಾಗಿದೆ.
●ಬಿ.ವಿ.ಸೂರ್ಯ ಪ್ರಕಾಶ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.