ರಾಮನಗರ: ಕೋವಿಡ್ ಗೆ ಮೂವರು ವಾರಿಯರ್ಸ್ ಬಲಿ
ಇಬ್ಬರು ಸರ್ಕಾರಿ ವೈದ್ಯರು, ಒಬ್ಬ ಪೊಲೀಸ್ ಪೇದೆ ,ಕುಟುಂಬಗಳಿಗೆ ತಲುಪಬೇಕಾಗಿದೆ ಪರಿಹಾರ
Team Udayavani, Oct 20, 2020, 2:43 PM IST
ರಾಮನಗರದಲ್ಲಿಕೋವಿಡ್ 19 ಸೋಂಕಿನಿಂದ ಮೃತ ಪಟ್ಟ ಪೊಲೀಸ್ ಎ.ಎಸ್.ಐ ಅವರಿಗೆ ಎಸ್ಪಿ ಎಸ್.ಗಿರೀಶ್ ಅವರಿಂದ ಅಂತಿಮ ನಮನ.( ಸಂಗ್ರಹ ಚಿತ್ರ)
ರಾಮನಗರ: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿಗೆ ಮೂವರು ಕೋವಿಡ್ ವಾರಿಯರ್ ಮೃತಪಟ್ಟಿದ್ದು, ವಾರಿಯರ್ಸ್ ಗೆ ಸರ್ಕಾರ ಘೋಷಿಸಿರುವ ಪರಿಹಾರದ ಮೊತ್ತ ಮೃತರ ಕುಟುಂಬವನ್ನು ಇನ್ನಷ್ಟೇ ತಲುಪಬೇಕಾಗಿದೆ.
ವಾರಿಯರ್ಸ್ ಗೆ 50 ಲಕ್ಷ ರೂ. ವರೆಗೆ ಪರಿಹಾರ: ಇಬ್ಬರು ಸರ್ಕಾರಿ ವೈದ್ಯರು, ಒಬ್ಬ ಪೊಲೀಸ್ ಪೇದೆ ಸೇರಿ ಜಿಲ್ಲೆಯಲ್ಲಿ ಮೂವರು ಕೋವಿಡ್ ವಾರಿಯರ್ಸ್ ಮೃತ ಪಟ್ಟಿದ್ದಾರೆ. ಕೋವಿಡ್ ವಾರಿಯರ್ಸ್ ಗೆ ಸಿಗಬೇಕಾದ ಪರಿಹಾರದ ಮೊತ್ತಕ್ಕೆ ಸಂಬಂಧಿಸಿದ ಇಲಾಖೆಗಳು ಅರ್ಜಿಯನ್ನು ಸರ್ಕಾರಕ್ಕೆ ಕಳುಹಿಸಲಾಗಿದ್ದು, ಇನ್ನಷ್ಟೇ ಈ ಕುಟುಂಬಗಳಿಗೆ ಪರಿಹಾರ ತಲುಪಬೇಕಾಗಿದೆ. ಕನಕಪುರ ತಾಲೂಕಿನಲ್ಲಿ ವೈದ್ಯಾಧಿಕಾರಿಯಾಗಿದ್ದ ಡಾ. ಮಂಜುನಾಥ್ ಮತ್ತು ಚನ್ನಪಟ್ಟಣ ತಾಲೂಕಿನಲ್ಲಿ ಮಕ್ಕಳ ತಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದ ಡಾ. ಮಂಜುನಾಥ್ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಇಬ್ಬರೂ ವೈದ್ಯರ ಕುಟುಂಬಗಳಿಗೆ ಸರ್ಕಾರ ತಲಾ 50 ಲಕ್ಷ ರೂ. ಪರಿಹಾರ ನೀಡುವ ಬಗ್ಗೆ ಸಲ್ಲಿಸಿದ ಅರ್ಜಿಗಳು ವಿಲೇವಾರಿಗೆ ಸಿದ್ಧವಾಗಿದ್ದು, ಕೆಲವೇ ದಿನಗಳಲ್ಲಿ ಪರಿಹಾರದ ಮೊತ್ತ ಈ ಕುಟುಂಬಗಳ ಕೈ ಸೇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಮನಗರ ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್‌ಐ ಶಿವಲಿಂಗಯ್ಯ ಎಂಬುವರು ಸಹ ಕೋವಿಡ್-19 ಸೋಂಕಿನಿಂದ ಮೃತ ಪಟ್ಟಿದ್ದು, ಇವರಿಗೂ ಸರ್ಕಾರ 30 ಲಕ್ಷ ರೂ. ಪರಿಹಾರ ಘೋಷಿಸಿದೆ. ಇವರ ಕುಟುಂಬ ಸದಸ್ಯರು ನೀಡಿದ ಅರ್ಜಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಪರಿಹಾರ ಇನ್ನು ತಲುಪಬೇಕಾಗಿದೆ.
ಶಿಕ್ಷಕರಿಗಿಲ್ಲ ವಾರಿಯರ್ ಪರಿಹಾರ: ಜಿಲ್ಲೆಯಲ್ಲಿ ಇಲ್ಲಿಯವರೆಗೆ ಸರ್ಕಾರಿ ಶಾಲೆಯ ಮೂವರು ಶಿಕ್ಷಕರು ಕೋವಿಡ್-19 ಸೋಂಕಿನಿಂದ ಮೃತಪಟ್ಟಿದ್ದಾರೆ. ಖಾಸಗಿ ಅನುದಾನ ರಹಿತ ಶಾಲೆ ಮತ್ತು ಅನುದಾನಿತ ಶಾಲೆಯ ತಲಾ ಒಬ್ಬ ಶಿಕ್ಷಕರು ಸೋಂಕಿಗೆ ಬಲಿಯಾಗಿದ್ದಾರೆ. ಆದರೆ ಇವರ್ಯಾರು ಕೋವಿಡ್‌ವಾರಿಯರ್ ಅಡಿಯಲ್ಲಿ ಬರದ ಕಾರಣ ಇವರಿಗೆ ಪರಿಹಾರದ ಹಣ ಸಿಗುವುದಿಲ್ಲ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿ ಮೃತ ಪಟ್ಟ ಶಿಕ್ಷಕರಿಗೆ ಇಲಾಖೆಯಿಂದ ದೊರಕಬೇಕಾದ ವಿಮೆ ಪರಿಹಾರದ ಮೊತ್ತ ಮತ್ತು ಇತರ ಸೌಲಭ್ಯವನ್ನು ಶೀಘ್ರದಲ್ಲೇ ಕೊಡಿಸುವ ಪ್ರಾಮಾಣಿಕ ಪ್ರಯತ್ನ ನಡೆದಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕೋವಿಡ್ ಪರೀಕ್ಷೆಗೆ ಒಳಗಾದವರೆಷ್ಟು? : ಜಿಲ್ಲೆಯಲ್ಲಿ ಇಲ್ಲಿಯವರೆಗೆ61,302 ಮಂದಿಗೆಕೋವಿಡ್ ಪರೀಕ್ಷೆ ಮಾಡಲಾಗಿದೆ. (ಅ.18ಕ್ಕೆ ಇದ್ದಂತೆ) ಈ ಪೈಕಿ 6,866 ಮಂದಿಗೆ ಪಾಸಿಟಿವ್,53,574 ಮಂದಿಗೆ ನೆಗೆಟಿವ್ ವರದಿ ಬಂದಿದೆ. ಪಾಸಿಟಿವ್ ಪೈಕಿ6,276 ಮಂದಿ ಗುಣಮುಖರಾಗಿದ್ದು,61 ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಸದ್ಯ801 ಸಕ್ರಿಯ ಸೋಂಕಿತರಿದ್ದಾರೆ. ಸಕ್ರಿಯ ಸೋಂಕಿತರ ಪೈಕಿಕೋವಿಡ್ ರೆಫರಲ್ ಆಸ್ಪತ್ರೆಯಲ್ಲಿ44,ಕೆಂಗೇರಿ ಬಳಿಯ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ 198 ಮಂದಿ,ಕನಕಪುರದ ದಯಾನಂದ ಆಸ್ಪತ್ರೆ ಮತ್ತು ರಾಮನಗರದ ರಾಮಕೃಷ್ಣ ಆಸ್ಪತ್ರೆಯಲ್ಲಿ 58 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
–ಬಿ.ವಿ.ಸೂರ್ಯ ಪ್ರಕಾಶ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.