ಅಯೋಧ್ಯೆ ಮಾದರಿಯಲ್ಲಿ ರಾಮನಗರದ ಬೆಟ್ಟ ಅಭಿವೃದ್ಧಿ: ಸಿಎಂಗೆ ಅಶ್ವತ್ಥನಾರಾಯಣ ಪತ್ರ
ಸುಗ್ರೀವನಿಂದ ಪ್ರತಿಷ್ಠಾಪಿತವಾಗಿದ್ದೆಂಬ ಐತಿಹ್ಯ ಹೊಂದಿರುವ ರಾಮದೇವರ ಬೆಟ್ಟ
Team Udayavani, Dec 21, 2022, 3:49 PM IST
ಬೆಳಗಾವಿ: ಮುಜರಾಯಿ ಇಲಾಖೆಯ ಅಧೀನದಲ್ಲಿರುವ ರಾಮನಗರದ ಐತಿಹಾಸಿಕ ರಾಮದೇವರ ಬೆಟ್ಟದಲ್ಲಿರುವ 19 ಎಕರೆ ಪ್ರದೇಶದಲ್ಲಿ ಅಯೋಧ್ಯೆಯ ರಾಮ ಮಂದಿರದಂತೆಯೇ ಒಂದು ದೇವಸ್ಥಾನವನ್ನು ನಿರ್ಮಿಸಲು ತ್ವರಿತವಾಗಿ ಒಂದು ಅಭಿವೃದ್ಧಿ ಸಮಿತಿಯನ್ನು ರಚಿಸಬೇಕು ಎಂದು ಕೋರಿ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬುಧವಾರ ಪತ್ರ ಬರೆದಿದ್ದಾರೆ.
ವಾನರ ಸಂತತಿಯ ಸುಗ್ರೀವನಿಂದ ಪ್ರತಿಷ್ಠಾಪಿತವಾಗಿದ್ದೆಂಬ ಐತಿಹ್ಯ ಹೊಂದಿರುವ ರಾಮದೇವರ ಬೆಟ್ಟವನ್ನು ದಕ್ಷಿಣದ ಅಯೋಧ್ಯೆಯಂತೆ ಬೆಳೆಸಬೇಕೆನ್ನುವುದು ರಾಮನಗರ ಜಿಲ್ಲೆಯ ಸಾರ್ವಜನಿಕರು ಮತ್ತು ಭಕ್ತಾದಿಗಳ ಒತ್ತಾಯವಾಗಿದೆ. ಬೆಂಗಳೂರಿಗೆ ಸನಿಹದಲ್ಲಿರುವ ಈ ಬೆಟ್ಟವನ್ನು ಭಕ್ತರ ಅಪೇಕ್ಷೆಯಂತೆ ಅಭಿವೃದ್ಧಿಪಡಿಸುವುದರಿಂದ ಸಂಸ್ಕೃತಿ ರಕ್ಷಣೆ ಮತ್ತು ಪ್ರವಾಸೋದ್ಯಮ ಬೆಳವಣಿಗೆ ಎರಡನ್ನೂ ಸಾಧಿಸಲು ಅವಕಾಶವಿದೆ ಎಂದು ಅವರು ತಮ್ಮ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.
ಶ್ರೀರಾಮನು ವನವಾಸದ ದಿನಗಳಲ್ಲಿ ಸೀತೆ ಮತ್ತು ಲಕ್ಷ್ಮಣರೊಂದಿಗೆ ರಾಮದೇವರ ಬೆಟ್ಟದಲ್ಲಿ ಒಂದು ವರ್ಷದ ಮಟ್ಟಿಗೆ ಇದ್ದನೆಂಬ ನಂಬಿಕೆ ಇದೆ. ಇಲ್ಲಿರುವ ಪಾತಾಳಗಂಗೆಯ ಉದ್ಭವಕ್ಕೆ ರಾಮನೇ ಕಾರಣ ಎನ್ನುವ ಶ್ರದ್ಧೆ ಇದೆ. ಅಲ್ಲದೆ ಸಪ್ತರ್ಷಿಗಳು ಕೂಡ ಇಲ್ಲಿ ತಪಸ್ಸನ್ನು ಆಚರಿಸಿರುವ ಕುರುಹುಗಳಿವೆ. ಹಾಗೆಯೇ, ಈ ಬೆಟ್ಟವು ದೇಶದ ಏಕೈಕ ರಣಹದ್ದುಗಳ ಸಂರಕ್ಷಿತ ಪ್ರದೇಶವಾಗಿದೆ. ಈ ಪಕ್ಷಿಗಳಿಗೂ ರಾಮಾಯಣಕ್ಕೂ ಸಂಬಂಧವಿರುವುದು ಕೂಡ ಗಮನಾರ್ಹವಾಗಿದೆ ಎಂದು ಸಚಿವರು ಪ್ರಸ್ತಾಪಿಸಿದ್ದಾರೆ.
ಐತಿಹಾಸಿಕ ತಾಣವಾಗಿರುವ ರಾಮದೇವರ ಬೆಟ್ಟವು ತ್ರೇತಾಯುಗದಷ್ಟು ಹಿಂದಿನ ಪರಂಪರೆಯನ್ನು ಹೊಂದಿದೆ. ಇದನ್ನು ಆಕರ್ಷಕವಾಗಿ ಅಭಿವೃದ್ಧಿ ಪಡಿಸಿ, ಮುಂದಿನ ತಲೆಮಾರುಗಳಿಗೂ ದಾಟಿಸಬೇಕು ಎನ್ನುವುದು ಸ್ಥಳೀಯ ಜನರ ಅಭಿಲಾಷೆಯಾಗಿದೆ ಎಂದು ಅವರು ಪತ್ರದಲ್ಲಿ ಗಮನ ಸೆಳೆದಿದ್ದಾರೆ.
ಮುಜರಾಯಿ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಅವರಿಗೂ ಸಚಿವರು ಈ ಪತ್ರವನ್ನು ಬರೆದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.