ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೊಳಿಸಿ
Team Udayavani, Mar 7, 2020, 6:15 PM IST
ರಾಮನಗರ: ಬೇಸಿಗೆ ಪ್ರಾರಂಭವಾಗುತ್ತಿದ್ದು, ಜಿಲ್ಲೆಯಲ್ಲಿ ನಿಷ್ಕ್ರಿಯಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸಮರ್ಪಕವಾಗಿ ನಿರ್ವಹಣೆಗೊಳಿಸಿ ಆರಂಭಿಸಬೇಕು. ಅಗತ್ಯವಿರುವ ಕಡೆ ಕೊಳವೆ ಬಾವಿಗಳನ್ನು ಕೊರೆಸಬೇಕು, ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಿರಿ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು ಮತ್ತು ಸದಸ್ಯರು ಮತ್ತು ಅಧಿಕಾರಿಗಳಿಗೆ ಆಗ್ರಹಿಸಿದರು.
ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ 16ನೇ ಸಾಮಾನ್ಯ ಸಭೆಯಲ್ಲಿ ಕಳೆದ ಸಭೆಯ ಅನುಪಾಲನಾ ವರದಿ ಮೇಲೆ ಚರ್ಚೆ ಆರಂಭವಾಗುತ್ತಿದ್ದಂತೆ ಸದಸ್ಯರು ಕುಡಿಯುವ ನೀರಿನ ಬಗ್ಗೆ ಗಮನ ಸೆಳದು ಚರ್ಚೆ ಆರಂಭಿಸಿದರು.
ಈ ವಿಚಾರದ ಬಗ್ಗೆ ಮಾತನಾಡಿದ ಸದಸ್ಯ ಗಂಗಾಧರ್, ಜಿಲ್ಲೆಯಲ್ಲಿ ಜನ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನೆಚ್ಚಿಕೊಂಡಿದ್ದಾರೆ. ಆದರೆ ಅನೇಕ ಗ್ರಾಮಗಳಲ್ಲಿ ಈ ಘಟಕಗಳು ನಿಷ್ಕ್ರಿಯವಾಗಿವೆ. ಯಾವ ಘಟಕವನ್ನು ಯಾರು ನಿರ್ವಹಿಸುತ್ತಿದ್ದಾರೆ ಎಂಬುದೇ ಗೊತ್ತಿಲ್ಲ. ದುರಸ್ತಿ ಮಾಡುವಂತೆ ಯಾರನ್ನು ಕೇಳಬೇಕು ಎಂದು ಜನಗೊಂದಲದಲ್ಲಿದ್ದಾರೆ. ಘಟಕಗಳ ಮೇಲೆ ನಿರ್ವಹಣೆ ಮಾಡುತ್ತಿರುವ ಏಜನ್ಸಿ ಮತ್ತು ಸಂಬಂಧಿಸಿದ ವ್ಯಕ್ತಿಯ ಮೊಬೈಲ್ ಸಂಖ್ಯೆ ನಮೂದಿಸಿ ಎಂದು ಪಟ್ಟುಹಿಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಎಚ್.ಬಸಪ್ಪ, ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ವಸುತ್ತಿರುವ ಏಜೆನ್ಸಿಗಳ ಪ್ರತಿನಿಧಿಗಳನ್ನು ಸಂಪರ್ಕಿಸಲು ಅನುವಾಗುವಂತೆ ಅವರ ಮೊಬೈಲ್ ಸಂಖ್ಯೆಗಳನ್ನು ನಮೂದಿಸಿ. ಹಾಗೂ ಏಜೆನ್ಸಿಗಳ ಪ್ರತಿನಿಧಿಗಳ ತುರ್ತು ಸಭೆ ಆಯೋಜಿಸುವಂತೆ ಅಧಿಕಾರಿ ವರ್ಗಕ್ಕೆ ಸೂಚನೆ ಕೊಟ್ಟರು.
ಮಾಗಡಿ ತಾಲೂಕು ಬರಪಟ್ಟಿಗೆ: ಕೊಳವೆ ಬಾವಿಗಳ ವಿಚಾರದಲ್ಲಿ ಮಾತನಾಡಿದ ಸಿಇಒ ಇಕ್ರಂ, ತಾಲೂಕು ಮಟ್ಟದಲ್ಲಿ ಟಾಸ್ಕ್ಫೋರ್ಸ್ ಸಮಿತಿ ಗಳಿದ್ದು, ಆಯಾ ತಾಲೂಕಿನ ಶಾಸಕರು, ತಹಶೀಲ್ದಾರ್ ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳನ್ನೊಳಗೊಂಡ ಸಮಿತಿಗಳಿವೆ. ಸಮಿತಿಯ ಅನುಮೋದನೆ ಪಡೆದು, ಹೊಸ ಬೋರ್‌ವೆಲ್ ಕೊರೆಯಬಹುದು. ರಾಮನಗರ,ಕನಕಪುರ ತಾಲೂಕು ಗಳನ್ನು ಬರಪೀಡಿತ ಎಂದು ಘೋಷಿ ಲಾಗಿದೆ. ಈ ತಾಲೂಕಿನ ಟಾಸ್ಕ್ಫೋರ್ಸ್ ಸಮಿತಿಗೆ ಸರ್ಕಾರ ತಲಾ 50 ಲಕ್ಷ ರೂ. ಹಾಗೂ ಚನ್ನಪಟ್ಟಣ ಹಾಗೂ ಮಾಗಡಿ ತಾಲೂಕುಗಳಿಗೆ ತಲಾ 10 ಲಕ್ಷ ರೂ. ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿದೆ. ಮಾಗಡಿ ತಾಲೂಕನ್ನು ಬರ ಪೀಡಿತ ಎಂದು ಪರಿಗಣಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ನಡೆಯುತ್ತಿರುವ 4 ವಸತಿನಿಲಯಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಈ ಹಾಸ್ಟೆಲ್‌ಗಳಿಗೆ ಸ್ವಂತ ಕಟ್ಟಡ ನಿರ್ಮಿಸಿಕೊಳ್ಳಲು ಸರ್ಕಾರದಿಂದ ಅನುದಾನಕ್ಕಾಗಿ ಪತ್ರ ಬರೆಯಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಜಿಲ್ಲಾ ಪಂಚಾಯತ್ ಅಭಿವೃದ್ಧಿ ಅನುದಾನದಲ್ಲಿ ಜಿಲ್ಲಾ ಮಟ್ಟದಲ್ಲಿ ವಿಕಲ ಚೇತನರಿಗೆ ಶೇ.5ರಷ್ಟು ಅನುದಾನವನ್ನು ವೆಚ್ಚ ಮಾಡಬೇಕಿದ್ದು, 2019-20ನೇ ಸಾಲಿನಲ್ಲಿ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಮಾಡಿರುವ ವೆಚ್ಚದ ವಿವರಗಳ ಮಾಹಿತಿಯನ್ನು ಅಧಿಕಾರಿಗಳು ನೀಡಿದರು.
ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಂಕರ್, ಪ್ರಸನ್ನ ಕುಮಾರ್, ನಾಗರತ್ನ ಚಂದ್ರೇ ಗೌಡ, ಜಿಪಂ ಉಪಕಾರ್ಯದರ್ಶಿ ಉಮೇಶ್ ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.