Savandurga Hill: ಸಾವನದುರ್ಗ ಚಾರಣಿಗರ ಡೆತ್‌ಸ್ಪಾಟ್?
Team Udayavani, Dec 30, 2023, 3:01 PM IST
ರಾಮನಗರ: ಏಷ್ಯಾದ ಅತಿದೊಡ್ಡ ಏಕಶಿಲಾ ಬೆಟ್ಟಗಳಲ್ಲಿ ಒಂದೆನಿಸಿರುವ ಸಾವನದುರ್ಗ ಬೆಟ್ಟ ಚಾರಣಿಗರ ಪಾಲಿನ “ಸಾವಿನ’ ದುರ್ಗವಾಗಿ ಪರಿಣ ಮಿಸಿರುವಂತಿದೆ. ಸಾವನದುರ್ಗ ಬೆಟ್ಟದಲ್ಲಿ ಆಗಾಗ ಚಾರಣಿಗರು ನಾಪತ್ತೆ ಯಾಗುತ್ತಿರುವುದು, ಸಾವಿಗೀಡಾಗುತ್ತಿರುವ ಪ್ರಕರಣಗಳು ಹೆಚ್ಚಾಗಿದೆ.
ಬೆಂಗಳೂರಿಗೆ ಸಮೀಪದಲ್ಲಿರುವ ಸಾವನದುರ್ಗ ಬೆಟ್ಟ ರಮಣೀಯ ನಿಸರ್ಗ ಸೌಂದರ್ಯವನ್ನು ತನ್ನ ಮಡಿಲಲ್ಲಿರಿಸಿಕೊಂಡಿದೆ. ಅತ್ಯಂತ ಕಡಿದಾದ ಏಕಶಿಲಾ ಬೆಟ್ಟದ ಮೇಲೆ ನಿಂತು ಮಂಚನಬೆಲೆ ಜಲಾಶಯ, ವಿಶಾಲವಾದ ಸಾವನದುರ್ಗ ಅರಣ್ಯಪ್ರದೇಶದ ವಿಹಂಗಮ ನೋಟ ಪ್ರವಾಸಿಗರಿಗೆ ಮುದ ನೀಡುತ್ತದೆ. ಸೌಂದರ್ಯದ ಮಡಿಲಲ್ಲಿ ಅಪಾಯವೂ ಕಾಣಸಿತ್ತಿದೆ.
15ಕ್ಕೂ ಹೆಚ್ಚು ಮಂದಿ ಸಾವು: 15 ವರ್ಷಗಳಿಂದ ಸಾವನದುರ್ಗ ಬೆಟ್ಟದಲ್ಲಿ 15ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. 2013ರಲ್ಲಿ ಬೆಂಗಳೂರಿನ 5 ಮಂದಿ ವಿದ್ಯಾರ್ಥಿಗಳು ಎರಡು ಕಲ್ಲುಗಳ ನಡುವೆ ಸಿಲುಕಿದ್ದರು. 10 ತಾಸುಗಳ ಕಾರ್ಯಾಚರಣೆ ನಡೆಸಿ ಚಾರಣಿಗೆ ಕೋತಿರಾಮನನ್ನು ಕರೆಸಿ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಲಾಗಿತ್ತು. ಅದೇ ರೀತಿ ಕೆಲವರನ್ನು ಸ್ಥಳೀಯರು ರಕ್ಷಿಸಿದ ಉದಾಹರಣೆ ಗಳಿವೆ. ಇದೀಗ ಉತ್ತರ ಭಾರತದ ಪ್ರವಾಸಿಗ ಸಾವಿಗೀಡಾಗಿದ್ದು ನಾಲ್ಕು ದಿನಗಳ ಬಳಿಕ ಶವವಾಗಿ ಪತ್ತೆಯಾಗಿದ್ದಾನೆ. ಪದೇ ಪದೆ ಬೆಟ್ಟದಲ್ಲಿ ಸಾವುಗಳು ಸಂಭವಿಸುತ್ತಲೇ ಇವೆ. ಸ್ಥಳೀಯರ ಮಾಹಿತಿಯಂತೆ ಸಾವನದುರ್ಗ ಚಾರಣದ ವೇಳೆ 15ಕ್ಕೂ ಹೆಚ್ಚು ಮಂದಿ ಬೆಟ್ಟದಿಂದ ಬಿದ್ದು ಸಾವಿಗೀಡಾಗಿದ್ದು, ನಾಪತ್ತೆಯಾಗಿದ್ದ 20ಕ್ಕೂ ಹೆಚ್ಚು ಮಂದಿಯನ್ನು ಹರಸಾಹಸ ಪಟ್ಟು ಪತ್ತೆಹಚ್ಚಲಾಗಿದೆ.
ಮೂಲಸೌಕರ್ಯದ ಕೊರತೆ: ಬೆಂಗಳೂರು ಸುತ್ತಾ ಇರುವ ನವದುರ್ಗ ಗಳಲ್ಲಿ ಸಾವನದುರ್ಗವೂ ಒಂದು. ಚಾರಣಿಗರ ಪಾಲಿಗೆ ಕರಿಕಲ್ಲು ಮತ್ತು ಬಿಳಿಕಲ್ಲು ಏಕಶಿಲಾಬೆಟ್ಟವನ್ನು ಹೊಂದಿರುವ ಸಾವನದುರ್ಗ ಹಾಟ್‌ಸ್ಪಾಟ್ ಆಗಿದ್ದು, ವಾರಾಂತ್ಯದಲ್ಲಿ ಈ ಬೆಟ್ಟದ ಚಾರಣಕ್ಕೆ 5 ಸಾವಿರದ ವರೆಗೆ ಪ್ರವಾಸಿಗರು ಆಗಮಿಸುತ್ತಾರೆ. ಇಂಥ ಚಾರಣ ಪ್ರದೇಶದಲ್ಲಿ ಮೂಲಸೌಕರ್ಯ ಕೊರತೆ ಅಪಾಯಕ್ಕೆ ಎಡೆಮಾಡಿಕೊಟ್ಟಿದೆ. ಬೆಟ್ಟಕ್ಕೆ ಹತ್ತುವ ಮತ್ತು ಇಳಿಯುವ ಸ್ಥಳಗಳಲ್ಲಿ ಯಾವುದೇ ರಕ್ಷಣಾ ಸೌಲಭ್ಯವಿಲ್ಲ. ಸುರಕ್ಷತಾ ಮಾಹಿತಿಯಿಲ್ಲ. ಎಕೋ ಟೂರಿಸಮ್ ಹೆಸರಿನಲ್ಲಿ ಚಾರಣಿಗರಿಗೆ 300 ರೂ. ಶುಲ್ಕವನ್ನು ಆನ್‌ಲೈನ್ ಬುಕ್ಕಿಂಗ್ ಮೂಲಕ ಪಡೆಯಲಾಗುತ್ತಿದೆಯಾದರೂ ಚಾರಣಿಗರಿಗೆ ಕನಿಷ್ಠ ಸೌಕರ್ಯವನ್ನೂ ಕಲ್ಪಿಸಿಲ್ಲ. ಬೆಟ್ಟದ ಮೇಲ್ಭಾಗದಲ್ಲಿ ಕೆಲವರು ನೀರಿನ ಬಾಟಲಿಗಳನ್ನು 100 ರೂ.ಗಳಿಗೆ ಮಾರಾಟ ಮಾಡುತ್ತಿದ್ದು, ಚಾರಣಿಗರು ವಿಧಿಯಿಲ್ಲದೆ ಖರೀದಿಸುವಂತಾಗಿದೆ. ಅಲ್ಲದೆ ಮಾರ್ಗಮಧ್ಯೆ ಬೆದರಿಕೆ, ಕಳವು ಪ್ರಕರಣಗಳು ನಡೆದಿವೆ. ಚಾರಣಿಗರಿಗೆ ಇಷ್ಟೆಲ್ಲಾ ಸಮಸ್ಯೆಯಿದ್ದರೂ ಅರಣ್ಯ ಇಲಾಖೆ ಮತ್ತು ಇಕೋ ಟೂರಿಸಂ ವಿಭಾಗ ಜಾಣಮೌನ ವಹಿಸಿದೆ. ಇನ್ನಾದರೂ ಸೌಕರ್ಯ ಕಲ್ಪಿಸಬೇಕಿದೆ ಎಂಬುದು ಚಾರಣಿಗರ ಒತ್ತಾಯವಾಗಿದೆ.
ದಾರಿ ತಪ್ಪಿದರೆ ಹೊರಬರುವುದು ಕಷ್ಟಸಾಧ್ಯ:
ಬೆಂಗಳೂರಿನಿಂದ 60 ಕಿಮೀ ದೂರದಲ್ಲಿರುವ ಸಾವನದುರ್ಗ ಏಕಶಿಲಾ ಬೆಟ್ಟ 1,226 ಮೀ. ನಷ್ಟು ಎತ್ತರವಿದೆ. ಈ ಬೆಟ್ಟದ ಮೇಲಾºಗದಲ್ಲಿ ಹೊಯ್ಸಳದೊರೆ 3ನೇಬಲ್ಲಾಳನ ಕಾಲದಲ್ಲಿ ನಿರ್ಮಿಸಿದ್ದು ಎನ್ನಲಾದ ಕೋಟೆಯಿದ್ದು, 1,040 ಮೀ. ಎತ್ತರ ಚಾರಣ ಮಾಡಿದರೆ ಈ ಕೋಟೆಯನ್ನು ತಲುಪ ಬಹುದು. ಬೆಟ್ಟದ ಮೇಲಿಂದ ನಿಂತು ನೋಡಿದರೆ ಸಾವನ ದುರ್ಗ ಅರಣ್ಯ ಪ್ರದೇಶದ ಹಸಿರು ಸಿರಿ, ಮಂಚನಬೆಲೆ ಜಲಾಶಯ ಹಾಗೂ ಸುತ್ತಮುತ್ತಲ ಬೆಟ್ಟುಗುಡ್ಡಗಳು, ಜಲಾಶಯಗಳನ್ನ ವೀಕ್ಷಣೆ ಮನೋಹರವಾಗಿರುತ್ತದೆ. ರಾತ್ರಿ ಬೆಟ್ಟದ ಮೇಲೆ ನಿಂತು ನೋಡಿದರೆ ಬೆಂಗಳೂರಿನ ವಿದ್ಯುತ್ ದೀಪಗಳ ಸೌಂದರ್ಯ ಕಾಣುತ್ತವೆ. ಇದಕ್ಕಾಗಿಯೇ ಚಾರಣಪ್ರಿಯರು ಇತರ ಆಗಿಸುವುದಿದೆ.
ಸಾವನದುರ್ಗ ಬೆಟ್ಟವನ್ನು ಕಣ್ಣಾಮುಚ್ಚಾಲೆ ಬೆಟ್ಟ ಎಂದೂಸ್ಥಳೀಯರು ಕರೆಯುವುದುಂಟು. ಈ ಬೆಟ್ಟದ ಪ್ರದೇಶವನ್ನು ಚೆನ್ನಾಗಿ ತಿಳಿದಿರುವ ಕೆಲ ಸ್ಥಳೀಯರನ್ನು ಹೊರತುಪಡಿಸಿದರೆ ಉಳಿದವರಿಗೆ ಬೆಟ್ಟ ಹತ್ತಿ ಇಳಿಯುವುದು ಸಾಕಷ್ಟು ಸವಾಲಿನ ಕೆಲಸ. ಬೆಟ್ಟ ಹತ್ತಿ ಇಳಿಯಲು ನಾಲ್ಕು ದಿಕ್ಕಿನಿಂದಲೂ ದಾರಿಯಿದೆ. ಕತ್ತಲೆ ವೇಳೆ ಬೆಟ್ಟ ಇಳಿಯುವಾಗ ಸಣ್ಣದಾಗಿ ದಾರಿ ತಪ್ಪಿದರೂ ಅರಣ್ಯದಲ್ಲಿ ದಿಕ್ಕು ತಪ್ಪಿದಂತಾಗುತ್ತದೆ. ಇನ್ನು ಎರಡು ಬೆಟ್ಟಗಳ ನಡುವೆ 800 ಅಡಿಗೂ ಆಳವಾದ ಕಂದಕವಿದ್ದು ಕಲ್ಲುಗಳ ಎಡೆಗೆ ಸಿಲುಕಿಕೊಂಡರೆ ಹೊರಬರುವುದು ಅಸಾಧ್ಯ.
ಸಾವನದುರ್ಗದಲ್ಲಿ ಆಗಬೇಕಿರುವುದೇನು?:
- ಸಾವನದುರ್ಗ ದಲ್ಲಿ ಚಾರಣಿಗರಿಗೆ ಸೂಕ್ತ ಮಾಹಿತಿ ನೀಡುವ ಫಲಕ, ಸಿಬ್ಬಂದಿ ಬೇಕು.
- ಸಂಜೆ 5ರ ಬಳಿಕ ಬೆಟ್ಟದ ಮೇಲಿರಲು ಅವಕಾಶ ನೀಡಬಾರದು.
- ಬೆಟ್ಟದ ಮೇಲೆ ಚಾರಣಿಗರಿಗೆ ಮೂಲಸೌಕರ್ಯದ ವ್ಯವಸ್ಥೆ ಆಗಬೇಕು.
- ಚಾರಣಿಗರಿಗೆ ರಕ್ಷಣೆ ನೀಡುವ ಉದ್ದೇಶ ದಿಂದ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು.
- ಚಾರಣಿಗರು ಸುಲಭವಾಗಿ ಹತ್ತಿ ಇಳಿಯಲು ರೇಡಿಯಂ ಮಾರ್ಕ್ ಮಾರ್ಗಸೂಚಿ ಬೇಕು.
- ಬೆಟ್ಟದಲ್ಲಿ ಸೋಲಾರ್ ದೀಪವ್ಯವಸ್ಥೆ ಬೇಕು.
- ಬೆಟ್ಟದಿಂದ ಅರಣ್ಯ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಗಳನ್ನು ಬಂದ್ ಮಾಡಬೇಕು.
- ಬೆಟ್ಟಕ್ಕೆ ಹತ್ತಿ ಇಳಿಯುವ ಪ್ರಾಸಿಗರ ಮೇಲೆ ನಿಗಾವಹಿಸಲು ಸಿಸಿ ಕ್ಯಾಮರಾ ಅಳವಡಿಕೆ ಮಾಡಬೇಕು.
ಆನ್‌ಲೈನ್ ಮೂಲಕ ನೋಂದಾಯಿಸಿಕೊಂಡ ಚಾರಣಿಗರ ಸುರಕ್ಷತೆ ಬಗ್ಗೆ ಗಮನಹರಿಸಲಾಗುತ್ತಿದೆ. ಅನ ಧಿಕೃತ ಮಾರ್ಗಗಳನ್ನು 2014ರಲ್ಲೇ ಮುಚ್ಚಲಾಗಿತ್ತು. ಕೆಲ ಸ್ಥಳೀಯರು ಗಲಾಟೆ ಮಾಡಿ ಇದನ್ನು ತೆರವುಗೊಳಿಸಿದರು. ಪದೇ ಪದೆ ಪ್ರಕರಣಗಳು ಮರುಕಳುಹಿಸುತ್ತಿರುವ ಹಿನ್ನೆಲೆಯಲ್ಲಿ ಕೆಲ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆ ಮುಂದಾಗಿದೆ.-ರಾಮಕೃಷ್ಣಪ್ಪ, ರಾಮನಗರ ಡಿಸಿಎಫ್
ಸಾವನದುರ್ಗದಲ್ಲಿ ಅವಘಡಗಳು ಸಂಭವಿಸುತ್ತಿದ್ದು, ಸಾವಿನದುರ್ಗವಾಗಿ ಪರಿಣಮಿಸಿದೆ. ಚಾರಣಿಗರಿಗೆ ಸೂಕ್ತ ಸೌಕರ್ಯ ಇಲ್ಲದಿರುವುದೇ ಇದಕ್ಕೆ ಕಾರಣ. ಸಾವು ನೋವು ಸಂಭವಿಸುತ್ತಿದ್ದರೂ ಯಾರೂ ಗಮನಹರಿಸುತ್ತಿಲ್ಲ. ಇನ್ನಾದರೂ ಜಿಲ್ಲಾಡಳಿತ- ಸ್ಥಳೀಯ ಜನಪ್ರತಿನಿ ಧಿಗಳು ಕ್ರಮವಹಿಸಬೇಕಿದೆ.-ಕಸ್ತೂರಿ ಕಿರಣ್, ಮಾಗಡಿ ನಿವಾಸಿ
-ಸು.ನಾ.ನಂದಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.