ಬಿಸಿಲಿನ ಝಳಕ್ಕೆ ಜಿಲ್ಲೆ ಜನತೆ ಹೈರಾಣ
Team Udayavani, Mar 14, 2019, 9:14 AM IST
ರಾಮನಗರ: ರೇಷ್ಮೆ ಜಿಲ್ಲೆ ರಾಮನಗರದಲ್ಲಿ ಬಿಸಿಲಿನ ತಾಪಮಾನ 36 ಡಿಗ್ರಿ ತಲುಪಿದೆ. ಬೇಸಿಗೆಯ ಆರಂಭದಲ್ಲೇ ಜಿಲ್ಲೆಯ ಜನತೆ ಬಿಸಿಲಿನ ಝಳಕ್ಕೆ ಹೈರಾಣಾಗಿದ್ದಾರೆ. ಎಳೆನೀರು, ಕಲ್ಲಂಗಡಿ ಹಣ್ಣು, ತಂಪು ಪಾನಿಯಗಳಿಗೆ ಮೊರೆ ಹೋಗುತ್ತಿದ್ದಾರೆ.
ಬೆಂಗಳೂರು-ಮೈಸೂರು ಹೆದ್ದಾರಿ ಬದಿಯಲ್ಲಿ ಎಳೆನೀರು, ಕಲ್ಲಂಗಡಿ ಹಣ್ಣು, ಕಬ್ಬಿನ ಹಾಲು ಮಾರಾಟ ಬಿರುಸಾಗಿ ನಡೆಯುತ್ತಿದೆ. ನಗರ ಪ್ರದೇಶಗಳಲ್ಲೂ ಎಳೆನೀರು, ಬಗೆಬಗೆಯ ಹಣ್ಣುಗಳು ವಿಶೇಷವಾಗಿ ಕಿತ್ತಳೆ, ಮೋಸಂಬಿ ಹಣ್ಣುಗಳು ಹೆಚ್ಚು ಮಾರಾಟಕ್ಕಿವೆ. ಸೌತೆ ಕಾಯಿಗೆ ಬೇಡಿಕೆ ಹೆಚ್ಚುತ್ತಿದೆ. ನೀರಿನಂಶದ ಹಣ್ಣು, ತರಕಾರಿಗಳಿಗೆ ಜನ ಮೊರೆ ಹೋಗುತ್ತಿದ್ದಾರೆ.
ಮುಂಜಾನೆಯೇ ತಾಪಮಾನ ಹೆಚ್ಚಳ: ಕಳೆದ ಕೆಲವು ದಿನಗಳಿಂದ ಹಗಲಿನ ವೇಳೆ ತಾಪಮಾನ 36ರಿಂದ 38 ತಲುಪುತ್ತಿದೆ. ಬೆಳಗ್ಗೆ ಸೂರ್ಯೋದಯದ ವೇಳೆಗೆ ತಾಪಮಾನದಲ್ಲಿ ಹೆಚ್ಚಳ ಕಾಣುತ್ತಿದೆ. ರಾತ್ರಿ 25 ರಿಂದ 30 ಡಿಗ್ರಿ ಆಸುಪಾಸಿನಲಿರುವ ತಾಪಮಾನ, ಮುಂಜಾನೆ ಸೂರ್ಯೋದಯದ ವೇಳೆ 32 ರಿಂದ 33 ಡಿಗ್ರಿ ತಲುಪುತ್ತಿದೆ. ಸಂಜೆ 5 ಗಂಟೆ ವೇಳೆಗೂ ತಾಪಮಾನ 33 ಡಿಗ್ರಿ ಆಸುಪಾಸಿನಲ್ಲೇ ಇರುತ್ತಿದೆ. ಸೂರ್ಯ ನೆತ್ತಿ ಮೇಲಿದ್ದಾಗ, ಕೆಲವರು ತಮ್ಮ ಚರ್ಮ ಬಾಧಿಸುವ ಲಕ್ಷಣಗಳ ಬಗ್ಗೆ ಅನುಭವ
ಹಂಚಿಕೊಂಡಿದ್ದಾರೆ. ಇದನ್ನು ವೈದ್ಯರು ಸನ್‌ಬರ್ನ್ಎಂದು ಹೇಳಿದ್ದು, ಕೆಲವು ಮುಲಾಮುಗಳನ್ನು ಉಪಯೋಗಿಸುವಂತೆಯೂ ವೈಯಕ್ತಿಕ ತಪಾಸಣೆಯ ನಂತರ ಸೂಚಿಸುತ್ತಿರುವುದಾಗಿ ಕೇಳಿ ಬಂದಿದೆ.
ಎಳೆ ನೀರಿಗೆ ಹೆಚ್ಚಿದ ಬೇಡಿಕೆ: ಬಿಸಿಲಿನ ಝಳಕ್ಕೆ ಹೈರಾಣಾಗುವ ನಾಗರಿಕರು ತಮ್ಮ ದೇಹದಲ್ಲಿ ನೀರಿನಂಶದ ಕೊರತೆಯನ್ನು ನೀಗಿಸಲು ಎಳೆ ನೀರಿಗೆ ಮೊರೆ ಹೋಗುತ್ತಿರುವುದರಿಂದ ಬೇಡಿಕೆ ಏರುತ್ತಿದೆ. ಕೆಲವು ವಾರಗಳ ಹಿಂದೆ 22ರಿಂದ 25 ರೂಪಾಯಿ ಇದ್ದ ಎಳೆನೀರಿನ ಬೆಲೆ ಈಗ 30 ರೂಪಾಯಿಗೆ ಏರಿದೆ. ಬೇಕರಿಗಳು, ಹೋಟೆಲ್‌ಗಳಲ್ಲಿ ತಂಪು ಪಾನೀಯ ಮಾರಾಟವು ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಮಜ್ಜಿಗೆಯ ಪಾಕೆಟ್‌ಗಳ ಬೇಡಿಕೆಗೂ ಕೊರತೆ ಏನಿಲ್ಲ.
ವ್ಯಾಪಾರಿಗಳಿಗೆ ಲಾಭ: ಬಿಸಿಲಿನ ತಾಪ ಹೆಚ್ಚಾದಂತೆಲ್ಲ, ರೋಗ ರುಜಿನಗಳು ಮನೆ ಮಾಡುತ್ತವೆ. ರಸ್ತೆ ಬದಿಯಲ್ಲಿ ಮಜ್ಜಿಗೆ ಮಾರಾಟದ ಮಡಿಕೆಗಳು ತಲೆ ಎತ್ತುತ್ತವೆ. ಕತ್ತರಿಸಿಟ್ಟ ಹಣ್ಣುಗಳು ಯಥೇಚ್ಚವಾಗಿ ದೊರೆಯುತ್ತದೆ. ಹೀಗೆ ವ್ಯಾಪಾರ
ಮಾಡುವವರ ಪೈಕಿ ಲಾಭ ಮಾಡಿಕೊಳ್ಳುವ ಮಂದಿಯೇ ಹೆಚ್ಚು, ಬಹುತೇಕರು ಸ್ವತ್ಛತೆಗೆ ಆದ್ಯತೆ ಕೊಡುವುದಿಲ್ಲ, ಎಚ್ಚರ ವಹಿಸಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ತಾಜಾ ಹಣ್ಣಿನ ಜ್ಯೂಸ್ ಉತ್ತಮ: ಬಿಸಿಲಿನ ಝಳದಿಂದ ದೇಹದಲ್ಲಿನ ನೀರಿನಂಶ ಕೊರತೆಯನ್ನು ನೀಗಿಸಲು ಸಿದ್ಧಪಡಿಸಿದ ತಂಪು ಪಾನಿಯಕ್ಕಿಂದ ತಾಜಾ ಹಣ್ಣಿನ ಜ್ಯೂಸ್ ಉತ್ತಮ. ಆದರೆ, ಹೀಗೆ ಜ್ಯೂಸ್ ಮಾಡಿಕೊಡುವ ಸ್ಥಳ ಶುಚಿತ್ವವನ್ನು ಕಾಪಾಡಿಕೊಂಡಿದೆಯೇ, ಅವರು ಬಳಸುವ ನೀರು ಶುದ್ಧತೆಯಿಂದ ಇದೆಯೇ ಎಂಬುದನ್ನು ಖಾತರಿ ಪಡಿಸಿಕೊಳ್ಳಿ. ಪ್ರಕೃತಿ ದತ್ತವಾಗಿ ಸಿಗುವ ಹಣ್ಣು, ತರಕಾರಿಗಳನ್ನು ಅಥವಾ ಇವುಗಳಿಂದ ಮಾಡಿದ ಆಹಾರವನ್ನೇ ಸೇವಿಸಬೇಕಾಗಿದೆ.
ಬಿಸಿಲಿನ ತಾಪಕ್ಕೆ ಬಳಲಿದ ವ್ಯಕ್ತಿಯನ್ನು ಕಂಡಾಕ್ಷಣ ಆತನನ್ನು ನೆರಳಿನಲ್ಲಿ ಮಲಗಿಸಿ, ಬಟ್ಟೆಯನ್ನು ಸಡಲಿಸಿ, ಕುಡಿಯಲು ಶುದ್ಧ ನೀರು ಅಥವಾ ಎಳೆನೀರು ಅಥವಾ ತಾಜಾ ಹಣ್ಣಿನ ರಸ, ಒಆರ್‌ಎಸ್ ದ್ರಾವಣವನ್ನು ಕೊಡಿ, ದೇಹದಲ್ಲಿ ಇಂಗಿಹೋಗಿರುವ ನೀರಿನಂಶವನ್ನು ಮರು ತುಂಬಿಸುವ ಅವಶ್ಯಕತೆ ಇರುವುದರಿಂದ ಆತನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಿರಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ರಾಮನಗರದಲ್ಲಿ ತಿಂಗಳಿಗೆ ನಾಲ್ಕು ಗಂಟೆ ಮಾತ್ರ ನೀರು ಜಿಲ್ಲಾ ಕೇಂದ್ರ ರಾಮನಗರದಲ್ಲಿ ತಿಂಗಳಿಗೆ ಕೇವಲ ನಾಲ್ಕು ಗಂಟೆ ಮಾತ್ರ ನೀರು ಸರಬರಾಜು ಆಗುತ್ತಿದೆ. ವಾರಕ್ಕೊಮ್ಮೆ ಮಾತ್ರ ಒಂದು ಗಂಟೆ ಸಮಯ ನೀರು ಸರಬರಾಜು ಆಗುತ್ತಿದೆ. ಜಲಮಂಡಳಿ ಪೂರೈಸುತ್ತಿರುವ ನೀರಿನ್ನು ಕುಡಿಯಲು ಬಳಸಬೇಡಿ ಎಂದು ಸ್ವಯಂ ಜಲಮಂಡಳಿಯೇ ನಾಗರಿರನ್ನು ಎಚ್ಚರಿಸಿದೆ. ಹೀಗಾಗಿ ಕುಡಿಯವ ನೀರಿಗಾಗಿ ನಾಗರಿಕರು ಶುದ್ಧ ಕುಡಿಯುವ ನೀರಿನ ಘಟಕಗಳ ಮುಂದೆ ಸಾಲುಗಟ್ಟಿ ನಿಲ್ಲಬೇಕಾದ ಪರಿಸ್ಥಿತಿ ಹಲವಾರು ತಿಂಗಳುಗಳಿಂದ ಕಾಡುತ್ತಿದೆ.
ಬೇಸಿಗೆಯ ಸಂದರ್ಭದಲ್ಲಿ ಕೃತಕವಾಗಿ ತಯಾರಿಸಿದ ತಂಪು ಪಾನಿಯಕ್ಕಿಂತ ತಾಜಾ ಹಣ್ಣಿನ ರಸ ಅತ್ಯುತ್ತಮ. ನೀರಿನಂಶ ಇರುವ ಕಲ್ಲಂಗಡಿ ಹಣ್ಣು, ಕರ್ಬೂಜ, ಸೌತೆ ಕಾಯಿ ಸೇವಿಸುವುದು ಉತ್ತಮ. ಧಾರಾಳವಾಗಿ ಶುದ್ಧ ನೀರು ಕುಡಿಯಬೇಕು.
ಡಾ.ವಿಜಯ ನರಸಿಂಹ, ಜಿಲ್ಲಾ ಶಸ್ತ್ರಚಿಕಿತ್ಸಕರು, ರಾಮನಗರ
ಬಿ.ವಿ.ಸೂರ್ಯ ಪ್ರಕಾಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.