ಸದ್ಯಕ್ಕೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಇಲ್ಲ
ಸ್ಪರ್ಧಾಕಾಂಕ್ಷಿಗಳಲ್ಲಿ ನಿರಾಸೆ • ವಾರ್ಡ್ ಮೀಸಲಾತಿ, ವಿಂಗಡಣೆ ವಿಚಾರದಲ್ಲಿ ನ್ಯಾಯಾಲಯಕ್ಕೆ ಮೊರೆ
Team Udayavani, May 4, 2019, 1:16 PM IST
ರಾಮನಗರ: ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಣೆಯಾಗಿದೆ. ಆದರೆ, ರಾಮನಗರ ಜಿಲ್ಲೆಯ ಮೂರು ನಗರಸಭೆಗಳು ಮತ್ತು ಒಂದು ಪುರಸಭೆಗೆ ಚುನಾವಣೆ ಘೋಷಣೆಯಾಗಿಲ್ಲ. ಮೀಸಲಾತಿ, ವಾರ್ಡ್‌ಗಳ ಗಡಿ ಮರು ವಿಂಗಡಣೆ ವಿಚಾರದಲ್ಲಿ ಕೋರ್ಟ್ ಮೆಟ್ಟಿಲೇರಿರುವುದರಿಂದ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾಗಿಲ್ಲ ಎಂದು ತಿಳಿದು ಬಂದಿದೆ.
ರಾಮನಗರ ಮತ್ತು ಕನಕಪುರ ನಗರಸಭೆಗಳ ಚುನಾಯಿತ ಪ್ರತಿನಿಧಿಗಳ ಆಡಳಿತಾವಧಿ ಕಳೆದ ಮಾರ್ಚ್ 16ಕ್ಕೆ ಅಂತ್ಯಗೊಂಡಿದೆ. ಚನ್ನಪಟ್ಟಣ ನಗರಸಭೆಯ ಅಧಿಕಾರ ಅವಧಿ ಮಾ.14ರಂದು, ಮಾಗಡಿ ಪುರಸಭೆಯ ಅಧಿಕಾರ ಅವಧಿ ಮಾರ್ಚ್ 18ಕ್ಕೆ ಅಂತ್ಯಗೊಂಡಿದೆ. ಜಿಲ್ಲಾಧಿಕಾರಿಗಳು ರಾಮನಗರ, ಚನ್ನಪಟ್ಟಣ ಮತ್ತು ನಗರಸಭೆಗಳ ಆಡಳಿತಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಾಗಡಿ ಪುರಸಭೆಯ ಆಡಳಿತಾಧಿಕಾರಿಯಾಗಿ ಉಪವಿಭಾಗಾಧಿಕಾರಿಗಳು ಅಧಿಕಾರ ವಹಿಸಿಕೊಂಡಿದ್ದಾರೆ.
ಚುನಾವಣೆ ಘೋಷಣೆಯಾಗಿಲ್ಲ ಏಕೆ?: ಜಿಲ್ಲೆಯ ನಾಲ್ಕು ಸ್ಥಳೀಯ ನಗರಸಂಸ್ಥೆಗಳಿಗೆ ಚುನಾವಣೆ ಘೋಷಣೆಯಾಗದಿರಲು ಕಾರಣ ಕೆಲವರು ವಾರ್ಡ್ ಮೀಸಲಾತಿ ಮತ್ತು ವಾರ್ಡ್ ಮರು ವಿಂಗಡಣೆಯ ವಿಚಾರದಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ರಾಮನಗರ ನಗರಸಭೆಯ ವಿಚಾರದಲ್ಲಿ ವಾರ್ಡ್‌ಗಳ ಮೀಲಾತಿ ಮತ್ತು ವಾರ್ಡ್‌ಗಳ ಮರು ವಿಂಗಡಣೆ ವಿಚಾರದಲ್ಲಿ ನಗರಸಭೆಯ ಮಾಜಿ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ವಾರ್ಡ್‌ಗಳ ಸಂಖ್ಯೆ 3, 4, 6, 29 ಸೇರಿದಂತೆ ಕೆಲವು ವಾರ್ಡ್‌ಗಳಲ್ಲಿ ಮೀಸಲಾತಿ ಮೂರನೇ ಬಾರಿಗೂ ಒಂದೇ ಮೀಸಲಾತಿ ಘೋಷಣೆಯಾಗಿದೆ. ಕಾನೂನು ಪ್ರಕಾರ ಒಂದೇ ಮೀಸಲಾತಿ ನಿರಂತರವಾಗಿ ಮೂರು ಬಾರಿಗೆ ಬರುವಂತಿಲ್ಲ ಎಂಬುದು ಅವರ ವಾದ.
2018ರಲ್ಲಿ ಸರ್ಕಾರ ಮೀಸಲಾತಿ ನಿಗದಿ ಹೊರಡಿಸಿದ ಪಟ್ಟಿಯಲ್ಲಿ ಸುಮಾರು 9 ವಾರ್ಡ್‌ಗಳಲ್ಲಿ ಮೂರನೇ ಬಾರಿಗೂ ಒಂದೇ ರೀತಿಯ ಮೀಸಲಾತಿ ಮುಂದುವರಿಸಿರುವುದನ್ನು ಆಕ್ಷೇಪಿಸಿ ಚೇತನ್ ಕುಮಾರ್ ನ್ಯಾಯಾಲಯದ ಮೆಟ್ಟಿಲೇರಿದ್ದರು.
ವಾರ್ಡ್ ಮರು ವಿಂಗಡಣೆಯಲ್ಲಿ ಲೋಪ: ಇನ್ನೊಂದೆಡೆ ವಾರ್ಡ್ ಮರು ವಿಂಗಡಣೆಯಲ್ಲಿ ಲೋಪಗಳಾಗಿದ್ದವು. ಕಳೆದ ವರ್ಷ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ಈ ಲೋಪಗಳನ್ನು ಸರಿಪಡಿಸಬಹುದಿತ್ತು. ಆದರೆ, ಲೋಪಗಳನ್ನು ಗಮನಕ್ಕೆ ತೆಗೆದುಕೊಳ್ಳದೆ, ಮುಂದುವರಿಸಿದ್ದರಿಂದ ಈ ಬಗ್ಗೆಯೂ ನ್ಯಾಯಾಲಯದ ಗಮನ ಸೆಳೆಯಲಾಗಿತ್ತು.
ಉದಾಹರಣೆಗೆ ಅರ್ಕೇಶ್ವರ ಕಾಲೋನಿಗೆ ಮೂರು ವಾರ್ಡ್‌ಗಳ ಆಚೆ ಇರುವ ಕೊತ್ತಿಪುರವನ್ನು ಸೇರಿಸಿದ್ದಾರೆ. ಇದು ನ್ಯಾಯವಲ್ಲ. 1ನೇ ವಾರ್ಡ್‌ನ ಗಡಿಗೆ ಸೇರದ ಮಾರುತಿ ನಗರವನ್ನು ಸೇರಿಸಿರುವುದು ಮತ್ತೂಂದು ಲೋಪ ಎಂಬುದು ಜನಪ್ರತಿನಿಧಿಗಳ ವಾದ. ವಾರ್ಡ್‌ನ ಗಡಿಗೆ ಹೊಂದಿಕೊಂಡಂತಿರುವ ಮತ್ತೂಂದು ವಾರ್ಡ್‌ನ ಪ್ರದೇಶವನ್ನು ಮತ್ತೂಂದು ವಾರ್ಡ್‌ಗೆ ಸೇರಸಿದರೆ ಯಾರ ಆಕ್ಷೇಪವೂ ಇಲ್ಲ ಎಂದು ವಾದಿಸಿರುವ ಪ್ರತಿನಿಧಿಗಳು. 2-3 ವಾರ್ಡ್ ಗಳ ಆಚೆ ಇರುವ ಪ್ರದೇಶವನ್ನು ಸೇರಿಸಿದರೆ ಹೇಗೆ ಎಂದು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ನ್ಯಾಯಾಲಯ ಕೂಡ ಇವರ ವಾದವನ್ನು ಒಪ್ಪಿ ಸರಿಸಪಡಿಸಿ ನಂತರ ಚುನಾವಣೆಗೆ ಹೋಗುವಂತೆ ಸೂಚಿಸಿದೆ ಎಂದು ತಿಳಿದು ಬಂದಿದೆ.
ಅಧಿಕಾರಿಗಳಿಂದ ಮಾಜಿ ಸದಸ್ಯರಿಗೆ ಸಂಕಟ: ಇದೀಗ ಈ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರಿಗಳದ್ದೇ ದರ್ಬಾರು ನಡೆಯುತ್ತಿದೆ. ಆದರೆ, ಸಮಸ್ಯೆಗಳ ಪರಿಹಾರಕ್ಕೆ ಜನ ಮಾತ್ರ ನಿಕಟ ಪೂರ್ವ ಸದಸ್ಯರುಗಳ ಬಳಿ ಅಲವತ್ತುಕೊಳ್ಳುತ್ತಿದ್ದಾರೆ. ಜನರ ಬಗ್ಗೆ ಕಾಳಜಿ ಇರುವ ಮಾಜಿ ಸದಸ್ಯರು ತಮ್ಮ ವ್ಯಾಪ್ತಿಯ ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಅಧಿಕಾರಿಗಳ ಬಳಿ ಚರ್ಚೆ ನಡೆಸುತ್ತಿದ್ದಾರೆ. ಪರಿಹಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಅಧಿಕಾರ ಇದ್ದಾಗ ಮೇಜು ಕುಟ್ಟಿ ಕೆಲಸ ಮಾಡಿಸಿಕೊಳ್ಳುತ್ತಿದ್ದೆವು, ಈಗ ಅಧಿಕಾರಿಗಳು ಹೇಳಿದ್ದೇ ವೇದ ವಾಕ್ಯವಾಗಿದೆ ಎಂದು ಬೇಸರಿಸಿಕೊಳ್ಳುವ ಪ್ರತಿನಿಧಿಗಳು ಉಂಟು.
ಅಧಿಕಾರಿಗಳಿಗೂ ತಲೆ ನೋವು: ಇನ್ನೊಂದೆಡೆ ಅಧಿಕಾರಿಗಳಿಗೂ ತಲೆ ನೋವುಗಳು ಇಲ್ಲದ್ದಿಲ್ಲ. ಪ್ರತಿಯೊಂದು ಸಮಸ್ಯೆಗೂ ತಾವೆ ಹೊಣೆಗಾರರು ಆಗಬೇಕಾದ ಅನಿವಾರ್ಯತೆ ಇದೆ. ಚುನಾಯಿತ ಪ್ರತಿನಿಧಿಗಳ ಕೆಲಸವನ್ನು ಅಧಿಕಾರಿಗಳೇ ನಿಭಾಯಿಸಬೇಕಾಗಿದೆ. ಇದು ಸಾಧ್ಯವಾಗದೆ ಜನಸಾಮಾನ್ಯರು ದಿನನಿತ್ಯ ಅಧಿಕಾರಿಗಳನ್ನು ನಿತ್ಯ ತರಾಟೆಗೆ ತೆಗೆದುಕೊಳ್ಳುತ್ತಿರುವ ಪ್ರಸಂಗಗಳಿಗೆ ಕೊರತೆ ಏನಿಲ್ಲ. ಕುಡಿಯುವ ನೀರು, ಕಸ ವಿಲೇವಾರಿ, ಒಳಚರಂಡಿ ವ್ಯವಸ್ಥೆ ವಿಚಾರದಲ್ಲಿನ ಸಮಸ್ಯೆಗಳೇ ಅಧಿಕಾರಿ ವರ್ಗವನ್ನು ಬಾಧಿಸುತ್ತಿದೆ.
ಚುನಾವಣೆ ಗುಂಗಿನಲ್ಲೇ ಇದ್ದೇವೆ: ಕಳೆದ ಮೇ ತಿಂಗಳಲ್ಲಿ ರಾಜ್ಯದ ಸಾರ್ವತ್ರಿಕ ಚುನಾವಣೆ, ನಂತರ ನವೆಂಬರ್‌ನಲ್ಲಿ ರಾಮನಗರದಲ್ಲಿ ಉಪಚುನಾವಣೆ ತದನಂತರ ಲೋಕಸಭಾ ಚುನಾವಣೆ, ಹೀಗೆ ಸಾಲು ಸಾಲು ಚುನಾವಣೆ ನಡೆದಿದ್ದು, ಅದೇ ಗುಂಗಿನಲ್ಲಿದ್ದೇವೆ. ನಗರಸಭೆಯ ಚುನಾವಣೆಗಳು ಸಹ ಈಗಲೇ ಮುಗಿದು ಹೋಗಿದ್ದರೆ ಚೆನ್ನಾಗಿತ್ತು ಎಂದು ರಾಜಕೀಯ ಪಕ್ಷಗಳ ಕಾರ್ಯಕರ್ತರು ಪ್ರತಿಕ್ರಿಯಿಸಿದ್ದಾರೆ.
ರಾಜ್ಯದಲ್ಲಿ ಬಹುತೇಕ ಸ್ಥಳೀಯ ಚುನಾವಣೆ ನಡೆಸಲು ಚುನಾವಣಾ ಆಯೋಗ ಈಗಾಗಲೇ ದಿನ ನಿಗದಿಪಡಿಸಿ, ಘೋಷಣೆ ಮಾಡಿದೆ. ಇಲ್ಲಿನ ಪುರಸಭೆಯ ಆಡಳಿತ ಮಂಡಳಿಗೆ ಒಟ್ಟು 23 ವಾರ್ಡ್ ಗಳಾಗಿ ವಿಂಗಡಿಸಲಾಗಿದೆ. ಈ ಸಂಬಂಧ ಕ್ಷೇತ್ರ ವಿಂಗಡಣೆ ಮತ್ತು ಮೀಸಲಾತಿ ಸಹ ಘೋಷಣೆಯಾಗಿದೆ.
ಪುರಸಭಾ ಮಾಜಿ ಅಧ್ಯಕ್ಷ ಪಿ.ವಿ.ಸೀತಾರಾಂ ಇತರರು ಸಾರ್ವಜನಿಕ ಹಿತಾಶಕ್ತಿ ಬಯಸಿ ವಾರ್ಡ್ ಗಳ ವಿಂಗಡಣೆ ಮತ್ತು ಮೀಸಲಾತಿಯನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಸಚಿವ ಡಿ.ಕೆ.ಶಿವಕುಮಾರ್ ತಡೆಯಾಜ್ಞೆ ತೆರವಾಗದಂತೆ ಅಫೀಲ್ ಹಾಕುವ ಮೂಲಕ ನೋಡಿಕೊಂಡಿದ್ದಾರೆ ಎಂದು ಪಿ.ವಿ.ಸೀತಾರಾಂ ತಿಳಿಸಿದ್ದಾರೆ.
ಮೇ 26ರ ನಂತರ ತಡೆಯಾಜ್ಞೆ ತೆರವುಗೊಳ್ಳಬಹುದು. ಅಲ್ಲಿಯವರಿಗೂ ಮುಂದುವರಿಯಲಿದೆ. ಆ ನಂತರದಲ್ಲಿ ಸ್ಥಳೀಯ ಚುನಾವಣೆ ಘೋಷಣೆಯಾಗಬಹುದು ಎಂಬುದು ಸೀತಾರಾಂ ಲೆಕ್ಕಾಚಾರ.
ಬಹುತೇಕ ಮೇ 6ರಂದು ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ತೆರವಾಗುವ ಸಂಭವವಿದ್ದು, ಚುನಾವಣೆ ನಡೆಸಲು ಆದೇಶ ಹೊರಬೀಳಲಿದೆ ಎಂಬ ವಿಶ್ವಾಸವಿದೆ ಎಂದು ಪುರಸಭೆ ಮಾಜಿ ಉಪಾಧ್ಯಕ್ಷ ನಾಗೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಾಗಡಿ ಪುರಸಭೆ ಆಡಳಿತ ಮಂಡಳಿಯ ಅವಧಿ ಫೆ.16ಕ್ಕೆ ಮುಗಿದಿದ್ದು, ಸದ್ಯಕ್ಕೆ ಉಪವಿಭಾಗಾಧಿಕಾರಿಗಳು ಕಾರ್ಯಭಾರ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.