Water Problem: ಜಿಲ್ಲೆಯಲ್ಲೂ ಹೆಚ್ಚಿದ ಕುಡಿವ ನೀರಿನ ಬವಣೆ
Team Udayavani, Mar 9, 2024, 4:48 PM IST
ರಾಮನಗರ: ಬೇಸಿಗೆ ಸಮೀಪಿಸಿದ ಬೆನ್ನಲ್ಲೇ ಜಿಲ್ಲೆಯಲ್ಲಿ ಕುಡಿವ ನೀರಿನ ಬವಣೆ ಹೆಚ್ಚಿದೆ. ಒಂದೆಡೆ ಬೆಂಗಳೂರಿನ ನೀರಿನ ದಾಹ ನೀಗಿಸಲು ರಾಮನಗರದಿಂದ ನೀರು ಪೂರೈಸುವುದಾಗಿ ಉಪಮುಖ್ಯಮಂತ್ರಿ ಹೇಳುತ್ತಿದ್ದರೆ, ಮತ್ತೂಂದೆಡೆ ಅವರ ತವರು ಜಿಲ್ಲೆಯಲ್ಲೇ ಕುಡಿಯುವ ನೀರಿನ ಕೊರತೆ ಹೆಚ್ಚುತ್ತಿದ್ದು, ಬೇಸಿಗೆ ಆರಂಭದ ದಿನಗಳಲ್ಲೇ ಈ ಪರಿಯಾದರೆ, ಬೇಸಿಗೆ ತೀವ್ರಗೊಂಡರೆ ಕತೆ ಏನು ಎಂಬುದು ಜನತೆಯ ಪ್ರಶ್ನೆಯಾಗಿದೆ.
ಜಿಲ್ಲೆಯ ಬಹುತೇಕ ಪಟ್ಟಣಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಜನತೆ ಖಾಸಗಿ ಬೋರ್ ವೆಲ್‌ಗಳಿಗೆ ಮೊರೆ ಹೋಗಿದ್ದಾರೆ. ಮತ್ತೂಂದೆಡೆ ಒಂದೊಂದೆ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಪರದಾಟ ಆರಂಭಗೊಂಡಿದ್ದು, ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಶೇ.50 ಹಳ್ಳಿಗಳಲ್ಲಿ ನೀರಿನ ಭವಣೆ ಎದುರಾಗಲಿದೆ ಎಂದು ಪಂಚಾಯತ್‌ರಾಜ್ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ.
108 ಹಳ್ಳಿಗಳಲ್ಲಿ ನೀರಿಗೆ ಆಹಾಕಾರ: ಜಿಲ್ಲೆಯಲ್ಲಿ ಈಗಾಗಲೇ 108 ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗಿದೆ ಎಂದು ಪಂಚಾಯತ್‌ರಾಜ್ ಇಲಾಖೆ ಮಾಹಿತಿ ನೀಡಿದೆ. ಕನಕಪುರ ತಾಲೂಕಿನಲ್ಲಿ 18, ಚನ್ನ ಪಟ್ಟಣ 10, ರಾಮನಗರ 32 ಹಾಗೂ ಮಾಗಡಿ 44 ಹಳ್ಳಿಗಳು ಹಾಗೂ ಹಾರೋಹಳ್ಳಿ 04 ಗ್ರಾಮಗಳಲ್ಲಿ ಕುಡಿ ವ ನೀರಿಗಾಗಿ ಪರದಾಡುವ ಪರಿಸ್ಥಿತಿ ಸೃಷ್ಠಿಯಾಗಿದೆ. ಕುಡಿಯುವ ನೀರಿನ ಬವಣೆ ತೀವ್ರವಾಗಿರುವ ಕನಕಪುರ ತಾಲೂಕಿನ ಬೇವುದೊಡ್ಡಿ ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿದ್ದರೆ, ಉಳಿದ 6 ಗ್ರಾಮಗಳಿಗೆ ಖಾಸಗಿ ಕೊಳವೆಬಾವಿಯನ್ನು ಬಾಡಿಗೆಗೆ ಪಡೆದು ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಕೆಲ ಗ್ರಾಮಗಳಲ್ಲಿ ಹೊಸದಾಗಿ ಕುಡಿವ ನೀರಿನ ಕೊಳವೆ ಬಾವಿ ಕೊರೆಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.
ನಗರದಲ್ಲಿ ಹೆಚ್ಚಿದ ನೀರಿನ ಬವಣೆ: ಜಿಲ್ಲೆಯ ನಗರ ಪ್ರದೇಶಗಳಲ್ಲಿ ಸಹ ಕುಡಿವ ನೀರಿನ ಸಮಸ್ಯೆ ಉಲ್ಬಣಿಸುತ್ತಿದ್ದು, ಜಿಲ್ಲಾ ಕೇಂದ್ರದಲ್ಲಿ ನೀರಿನ ಬವಣೆ ತೀವ್ರವಾಗಿದೆ. ಚನ್ನಪಟ್ಟಣ ನಗರಸಭೆಯಲ್ಲಿ 10 ವಾರ್ಡು, ಕನಕಪುರ ನಗರಸಭೆಯಲ್ಲಿ 02 ವಾರ್ಡ್ , ರಾಮನಗರ ನಗರಸಭೆಯಲ್ಲಿ 19 ವಾರ್ಡ್ ಹಾಗೂ ಹಾರೋಹಳ್ಳಿ ಪಪಂನಲ್ಲಿ 03 ವಾರ್ಡುಗಳಲ್ಲಿ ಕುಡಿಯುವ ನೀರಿನ ಆಹಾಕಾರ ತೀವ್ರ ಗೊಂಡಿದೆ. ರಾಮನಗರಪಟ್ಟಣಕ್ಕೆ 15 ದಿನಗಳಿಗೆ ಒಂದು ಬಾರಿ ಒಂದು ತಾಸುಗಳ ಕಾಲ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ.
ಚನ್ನಪಟ್ಟಣದಲ್ಲಿ ವಾರಕ್ಕೆ ಒಮ್ಮೆ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದು, ಅರ್ಕಾವತಿ ಮತ್ತು ಶಿಂಷಾದಲ್ಲಿ ನೀರಿನ ಲಭ್ಯತೆ ಕಡಿಮೆಯಾಗಿ ರುವುದು ಈ ಎರಡೂ ಪಟ್ಟಣದಲ್ಲಿ ನೀರಿನ ಬವಣೆ ಮತ್ತಷ್ಟು ಹೆಚ್ಚಿಸಲಿದೆ. ಸದ್ಯಕ್ಕೆ ರಾಮನಗರ ನಗರಸಭೆ ವ್ಯಾಪ್ತಿಯ 9 ವಾರ್ಡ್‌ಗಳಿಗೆ ನಗರಸಭೆ ಟ್ಯಾಂಕರ್ ಮೂಲಕ ಕುಡಿವ ನೀರನ್ನು ಸರಬರಾಜು ಮಾಡಲಾಗು ತ್ತಿದ್ದು, ಇದು ಸಾಕಾಗುತ್ತಿಲ್ಲ. ಹೀಗಾಗಿ 22 ಟ್ಯಾಂಕರ್ ಗಳಲ್ಲಿ ನೀರು ಪೂರೈಕೆ ಮಾಡಲು ಸಿದ್ಧತೆಗಳು ನಡೆದಿವೆ.
ಟ್ಯಾಂಕರ್‌ಹಾವಳಿ : ನಗರದ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿರುವ ಬೆನ್ನಲ್ಲೇ ಖಾಸಗಿ ಟ್ಯಾಂಕರ್‌ಗಳ ಹಾವಳಿಯೂ ತೀವ್ರಗೊಂಡಿದೆ. ಈ ಹಿಂದೆ ನಗರ ಪ್ರದೇಶದಲ್ಲಿ 300 ರೂ.ಗಳಿಗೆ ಟ್ಯಾಂಕರ್ ನೀರು ಪೂರೈಕೆ ಮಾಡುತ್ತಿದ್ದವರು ಇದೀಗ 500 ರೂ. ವರೆಗೆ ಹಣ ಪಡೆಯುತ್ತಿದ್ದಾರೆ. ಇನ್ನು ಗ್ರಾಮಾಂತರ ಪ್ರದೇಶದಲ್ಲಿ ಈ ಮೊತ್ತ 600 ರೂ. ಗಡಿದಾಟಿದೆ. ಜಿಲ್ಲೆಯಲ್ಲಿ ದುಬಾರಿ ದರ ಪಡೆಯುತ್ತಿರುವ ಖಾಸಗಿ ನೀರಿನ ಟ್ಯಾಂಕರ್‌ಗಳಿಗೆ ಕಡಿವಾಣ ಹಾಕುವವರು ಇಲ್ಲವಾಗಿದ್ದಾರೆ.
-ಸು.ನಾ.ನಂದಕುಮಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.