ನೆರೆ ಸರಿಯಿತು ಊರು ಕರೆಯಿತು
ಮನೆ ತುಂಬಿಕೊಂಡ ಕೆಸರು ನೀರು-ದುರ್ವಾಸನೆ | ಪಠ್ಯಪುಸ್ತಕ-ದಾಖಲೆ ಪ್ರವಾಹಕ್ಕೆ ಆಹುತಿ | ಶುದ್ಧ ನೀರು-ವಿದ್ಯುತ್ ಕೊರತೆ ತೀವ್ರ
Team Udayavani, Aug 22, 2019, 12:54 PM IST
ರಾಯಬಾಗ ತಾಲೂಕಿನ ಹಳೆದಿಗ್ಗೇವಾಡಿಯಲ್ಲಿ ಪ್ರವಾಹಕ್ಕೆ ಜಲಾವೃತಗೊಂಡ ಕಬ್ಬು ಬೆಳೆ
ಸಂಭಾಜಿ ಚವ್ಹಾಣ
ರಾಯಬಾಗ: ಕೃಷ್ಣಾ ನದಿ ಪ್ರವಾಹ ಇಳಿಮುಖವಾದಂತೆ ಪರಿಹಾರ ಕೇಂದ್ರ ಮತ್ತು ತಮ್ಮ ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದಿದ್ದ ನೆರೆ ಸಂತ್ರಸ್ತರು ಮರಳಿ ತಮ್ಮ ಮನೆಗಳತ್ತ ಹೆಜ್ಜೆಇಟ್ಟು, ನೀರು, ಕೆಸರುಗಳಿಂದ ತುಂಬಿದ್ದ ಮನೆಗಳ ಸ್ವಚ್ಛತೆಯಲ್ಲಿ ನಿರತರಾಗಿದ್ದಾರೆ.
ಪ್ರವಾಹಕ್ಕೆ ಒಳಗಾದ ಕೃಷ್ಣಾ ನದಿ ತೀರದ ಗ್ರಾಮಗಳಾದ ನಸಲಾಪುರ, ಬಾವನಸೌಂದತ್ತಿ, ಹಳೆದಿಗ್ಗೇವಾಡಿ, ಜಲಾಲಪೂರ, ಭಿರಡಿ, ಚಿಂಚಲಿ, ಕುಡಚಿ, ಶಿರಗೂರ, ಗುಂಡವಾಡ, ಸಿದ್ದಾಪೂರ, ಖೆಮಲಾಪೂರ ಗ್ರಾಮಗಳ ಬೀದಿಗಳಲ್ಲಿ, ಮನೆಗಳಲ್ಲಿ ಎಲ್ಲಿ ನೋಡಿದಲ್ಲಿ ದುರ್ವಾಸನೆ ಹರಡಿದ್ದು, ಗ್ರಾಮಗಳಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಉಂಟಾಗಿದೆ. ಮನೆಗಳು ಕಸಕಡ್ಡಿಗಳಿಂದ, ಕೆಸರಿನಿಂದ ತುಂಬಿದ್ದು ಸ್ವಚ್ಛತಾ ಕಾರ್ಯ ನಡೆದಿದೆ. ಹಳ್ಳಿಗಳಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.
ರೈತರು ತಮ್ಮ ಮನೆಗಳಲ್ಲಿ ಸಂಗ್ರಹಿಸಿದ್ದ ದವಸಧಾನ್ಯಗಳು ಕೊಳೆತು ನಾರುತ್ತಿದ್ದು, ಉಪಯೋಗಕ್ಕೆ ಬಾರದಂತಾಗಿ ಹೊರಗೆಚೆಲ್ಲುತ್ತಿದ್ದಾರೆ. ಅಳಿದುಳಿದ ಶೇಂಗಾ, ಜೋಳ, ಗೋವಿನ ಜೋಳ, ಗೋಧಿ ಸೇರಿದಂತೆ ಇತರೆ ಧಾನ್ಯಗಳನ್ನು ಬಿಸಿಲಿನಲ್ಲಿ ಹರಡಿರುವ ದೃಶ್ಯ ಎಲ್ಲೆಡೆ ಗೋಚರಿಸುತ್ತಿದೆ.
ಕೃಷ್ಣಾ ನದಿ ತೀರದ ಗ್ರಾಮಗಳ ರಸ್ತೆಗಳು ಪ್ರವಾಹದ ಹೊಡೆತಕ್ಕೆ ಕೊಚ್ಚಿ ಹೋಗಿವೆ. ಕಳೆದ ಕೆಲ ದಿನಗಳ ಹಿಂದೆ ನಿರ್ಮಿಸಿದ್ದ ಹೊಸ ದಿಗ್ಗೇವಾಡಿ-ಹಳೆ ದಿಗ್ಗೇವಾಡಿ ರಸ್ತೆಡಾಂಬರ್ ಕಿತ್ತು ಹೋಗಿದೆ. ಪ್ರವಾಹಕ್ಕೆ ಸಾಕಷ್ಟು ಮನೆಗಳು ಹಾನಿಗೀಡಾಗಿದ್ದು, ಮನೆ ಕಳೆದುಕೊಂಡವರು ಅತಂತ್ರರಾಗಿ ಬೀದಿ ಪಾಲಾಗಿದ್ದಾರೆ. ಪ್ರವಾಹದಿಂದ ಹಳೆದಿಗ್ಗೇವಾಡಿ ಗ್ರಾಮದಲ್ಲಿ ಹಳೆಕಾಲದ ಧಾನ್ಯಗಳ ಸಂಗ್ರಹಿಸಲು ನಿರ್ಮಿಸುತ್ತಿದ್ದ ಹಗೆಗಳು ಕಂಡು ಬಂದಿವೆ.
ಪ್ರವಾಹ ಪೀಡಿತ ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ ಮತ್ತು ಶುದ್ಧ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಪ್ರವಾಹಕ್ಕೆ ಒಳಗಾದ ಗ್ರಾಮಗಳಿಗೆಎಲ್ಲ ಮೂಲಭೂತ ಸೌಕರ್ಯಗಳನ್ನು ಕೂಡಲೇ ಒದಗಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.
ಪ್ರವಾಹದಿಂದ ನದಿ ನೀರು ಜಮೀನುಗಳಲ್ಲಿ ಹೊಕ್ಕಿದ್ದರಿಂದ ಬೆಳೆ ಸಂಪೂರ್ಣ ನಾಶಗೊಂಡಿದ್ದು, ಬೆಳೆಗಳು ನೀರು ಪಾಲಾಗಿದೆ. ಇದರಿಂದ ದನಕರುಗಳಿಗೆ ಮೇವಿನ ಸಮಸ್ಯೆಉಂಟಾಗಿದೆ. ಮನೆಗಳಲ್ಲಿ ಮತ್ತು ಶಾಲೆಗಳಲ್ಲಿ ನೀರು ನುಗ್ಗಿದ್ದರಿಂದ ವಿದ್ಯಾರ್ಥಿಗಳ ಪುಸ್ತಕಗಳು ಮತ್ತು ರೈತರ ದಾಖಲೆ, ಕಾಗದ ಪತ್ರಗಳು ನೀರು ಪಾಲಾಗಿ ಹಾಳಾಗಿವೆ. ಪಠ್ಯ, ಪುಸ್ತಕಗಳನ್ನು ಹಾಗೂ ದಾಖಲೆಗಳನ್ನು ಬಿಸಿಲಿಗೆ ಇಟ್ಟು ಒಣಗಿಸಲಾಗುತ್ತಿದೆ.
ಖೆಮಲಾಪುರ ಮತ್ತು ಶಿರಗೂರ ಗ್ರಾಮದ ಇನ್ನು ಕೆಲ ನಿರಾಶ್ರಿತರು ಪರಿಹಾರ ಕೇಂದ್ರಗಳಲ್ಲಿ ನೆಲೆಸಿದ್ದಾರೆ. ಕೆಲ ಮನೆಗಳು ಸಂಪೂರ್ಣವಾಗಿ ನೆಲಸಮಗೊಂಡಿದ್ದರೆ, ಇನ್ನು ಕೆಲ ಮನೆಗಳು ಶಿಥಿಲಗೊಂಡಿವೆ. ಇದರಿಂದ ಜನರು ಮನೆಗಳಲ್ಲಿ ಬಂದು ನೆಲೆಸಲು ಹಿಂಜರಿಯುತ್ತಿದ್ದಾರೆ. ಮನೆ ಕಳೆದುಕೊಂಡವರಿಗೆ ತಾತ್ಕಾಲಿಕ ಶೆಡ್ ನಿರ್ಮಿಸಿಕೊಡಬೇಕೆಂದು ನಿರಾಶ್ರಿತರು ಆಗ್ರಹಿಸಿದ್ದಾರೆ.
ಜಾನುವಾರುಗಳು ರೋಗದಿಂದ ಬಳಲುತ್ತಿದ್ದು, ಪಶು ವೈದ್ಯರು ಜಾನುವಾರುಗಳಿಗೆ ಚಿಕಿತ್ಸೆ ನೀಡಬೇಕು. ಶಾಲೆಗಳು ಕೆಸರುಗದ್ದೆಯಾಗಿದ್ದು, ದುರ್ನಾತ ಬೀರುತ್ತಿವೆ. ಅವುಗಳನ್ನು ಸ್ವಚ್ಛಗೊಳಿಸಬೇಕು. ವಿದ್ಯುತ್ ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಮತ್ತು ನೆರೆ ಪೀಡಿತ ಗ್ರಾಮಗಳಲ್ಲಿ ಶೀಘ್ರ ಮನೆಗಳ ಸರ್ವೇ ನಡೆಸಬೇಕೆಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bantwala: ಅಧಿಕಾರಿಗಳ ನಡೆ ವಸತಿ ನಿಲಯಗಳ ಕಡೆ; ವಿನೂತನ ಕಾರ್ಯಕ್ರಮ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.