ಗಣಪತಿ ಕೆರೆ ಚಿತ್ರಣ ಶೀಘ್ರ ಬದಲು: ಶಾಸಕ ಹಾಲಪ್ಪ
Team Udayavani, Jan 2, 2020, 6:14 PM IST
ಸಾಗರ: ಬಿಜೆಪಿ ಪಕ್ಷದ ವಿವಿಧ ಪ್ರಮುಖರು, ಜನಪ್ರತಿನಿಧಿಗಳು ನೋಡ ನೋಡುತ್ತಿದ್ದಂತೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೊಡೆಯುವವವರಂತೆ ಕೈ ಎತ್ತಿದರು. ಒಂದು ಕ್ಷಣ ಶಾಸಕ ಹಾಲಪ್ಪ ಕೂಡ ಬೆದರಿದವರಂತೆ ದೇಹ ಕುಗ್ಗಿಸಿದರು. ಕೆಲ ಕ್ಷಣಗಳಲ್ಲಿಯೇ ನೋಡುತ್ತಿದ್ದವರಿಗೆ ಹಿರಿಯರಾದ ಕಾಗೋಡು ಹಾಲಪ್ಪ ಅವರಿಗೆ ಬೆನ್ನು ತಟ್ಟಿದ್ದು, ಹಸ್ತಲಾಘವ ಕೊಟ್ಟಿದ್ದು ಮತ್ತು ಕೆಲ ಹೆಜ್ಜೆ ಹೆಗಲ ಮೇಲೆ ಕೈ ಹಾಕಿ ಗಣಪತಿ ಕೆರೆ ದಂಡೆಯ ಮೇಲೆ ಸಾಗಿದ ಅಪರೂಪದ ದೃಶ್ಯ ಕಾಣಸಿಕ್ಕಿತು.
ಈ ಘಟನೆ ಮಂಗಳವಾರ ಸಂಜೆ ಶಾಸಕ ಎಚ್.ಹಾಲಪ್ಪ ಗಣಪತಿ ಕೆರೆ ಸುತ್ತ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಲು ತೆರಳಿದ್ದ ಸಮಯದಲ್ಲಿ ನಡೆದಿದ್ದು, ಆಕಸ್ಮಿಕವಾಗಿ ಎದುರಾದ ಕಾಗೋಡು ಹೃದಯಪೂರ್ವಕವಾಗಿ ಹಾಲಿ ಶಾಸಕರಿಗೆ ಅಭಿನಂದನೆ ಹೇಳಿದ್ದು ಗಮನ ಸೆಳೆಯಿತು.
ಕಾಗೋಡು ಅವರಿಗೆ ಗಣಪತಿ ಕೆರೆ ಅಭಿವೃದ್ಧಿ ಕುರಿತಾಗಿ ಮಾಹಿತಿ ನೀಡಿದ ಹಾಲಪ್ಪ, ಮುಂದಿನ ಹದಿನೈದು ದಿನಗಳ ಒಳಗೆ ಗಣಪತಿ ಕೆರೆಯ ಚಿತ್ರಣವನ್ನೇ ಬದಲಾಯಿಸುತ್ತೇನೆ. ಈಗಾಗಲೇ ಕೆರೆಯ ಸುತ್ತ ವಾಯುವಿಹಾರ ನಡೆಸಲು ಸುಸಜ್ಜಿತವಾದ ಕಾಮಗಾರಿ ನಡೆಸಲಾಗುತ್ತಿದೆ. ಬಿಎಚ್ ರಸ್ತೆ ಪಕ್ಕದಲ್ಲಿ ಇಂದಿರಾ ಗಾಂಧಿ ಕಾಲೇಜು ಎದುರು ಭಾಗದಲ್ಲಿರುವ ಕೆರೆಯ ಜಾಗವನ್ನು ಈಗಾಗಲೇ ಸಮತಟ್ಟು ಮಾಡಲಾಗುತ್ತಿದೆ. ಈ ಕೆರೆಗೆ ಮುಖ್ಯವಾಗಿ ಹರಿದು ಬರುತ್ತಿರುವ ಎಸ್ ಎನ್ ನಗರ ಕೆರೆಯ ನೀರಿನ ತೋಡನ್ನು ಮುಚ್ಚುವುದಿಲ್ಲ ಎಂದರು.
ಕೆರೆ ಅಭಿವೃದ್ಧಿ ಕಾಮಗಾರಿಗಳ ಜೊತೆಗೆ ಮುಂದಿನ ವಾರದಲ್ಲಿ ಈ ಭಾಗದಲ್ಲಿ ಕೆರೆ ಹಬ್ಬ ಆಯೋಜಿಸಲು ಕೂಡ ಚಿಂತಿಸಲಾಗಿದೆ. ಆ ಮೂಲಕ ಜನ ಸಾಗರದ ಅಪರೂಪದ ಗಣಪತಿ ಕೆರೆಯನ್ನು ವೈಭವೋಪೇತ ಮಾದರಿಯಲ್ಲಿ ನೋಡುವಂತಾಗಬೇಕು ಎಂಬುದು ನನ್ನ ಬಯಕೆ ಎಂದರು.
ಒಂದು ಹಂತದಲ್ಲಿ ಕಾಗೋಡು ಹಾಲಪ್ಪ ಅವರ ಬೆನ್ನು ತಟ್ಟಿ, ಉತ್ತಮವಾದ ಕೆಲಸವನ್ನು ಮಾಡುತ್ತಿದ್ದೀರಿ. ಒಳ್ಳೆಯ ಕೆಲಸ ಮಾಡಿ. ಇಲ್ಲಿ ಸಮತಟ್ಟು ಮಾಡಲು ತರಿಸಿರುವ ಮಣ್ಣು ಅತ್ಯಂತ ಯೋಗ್ಯವಾದುದಾಗಿದೆ. ಇಂತಹ ಗುಣಮಟ್ಟದ ಕಾಮಗಾರಿ ಮಾಡುವುದಕ್ಕೆ ನಮ್ಮ ಬೆಂಬಲವಿದೆ ಎಂದರು. ನಗರಸಭೆಯ ಮುಖ್ಯ ಇಂಜಿನಿಯರ್ ಎಚ್. ನಾಗಪ್ಪ. ನಗರಸಭೆ ಸದಸ್ಯರಾದ ಟಿ.ಡಿ. ಮೇಘರಾಜ್, ಆರ್. ಶ್ರೀನಿವಾಸ್ ಗಣೇಶ್ ಪ್ರಸಾದ್, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಐ.ವಿ. ಹೆಗಡೆ, ಲಿಂಗರಾಜ್, ಬಿ.ಟಿ. ರವೀಂದ್ರ, ವಿನಾಯಕ ರಾವ್ ಮನೇಘಟ್ಟ, ಅರುಣ್ ಕುಗ್ವೆ ಇನ್ನಿತರರು ಇದ್ದರು.
ದಿನದ ಬೆಳಗಿನ ಸಮಯದಲ್ಲಿ ನಡೆದ ಮಲೆನಾಡು ರೈಲ್ವೆ ಹೋರಾಟ ಸಮಿತಿಯವರ ಪ್ರತಿಭಟನಾ ಸಭೆಯಲ್ಲಿ ಕಾಂಗ್ರೆಸ್‌ನ ಕಾಗೋಡು ಹಾಗೂ ಇತರ ನಾಯಕರು ಶಾಸಕ ಹಾಲಪ್ಪ ಅವರನ್ನು ಹಿಗ್ಗಾಮುಗ್ಗಾ ಟೀಕಿಸಿದ್ದನ್ನು ನೋಡಿದ ಜನ ಸಂಜೆ ಈ ಇಬ್ಬರ ನಡುವೆ ಪ್ರೀತಿ ಉಕ್ಕಿ ಹರಿದಿದ್ದನ್ನು ನೋಡಿ ಗೊಂದಲಕ್ಕೊಳಗಾದರು ಎಂಬ ವಿಶ್ಲೇಷಣೆ ಪ್ರತ್ಯಕ್ಷದರ್ಶಿಗಳಿಂದ ಕೇಳಿ ಬಂದಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.