ದಾರಿ ತಪ್ಪಿದ ಮಗು; ಪೋಷಕರನ್ನು ಸೇರಿಸಿದ ವಾಟ್ಸ್‌ಆ್ಯಪ್ ಗ್ರೂಪ್!
Team Udayavani, Jul 22, 2019, 4:30 PM IST
ಸಾಗರ: ಗಾಂಧಿನಗರದ ಕಂಬಳಿಯರ ಕೇರಿ ಬಳಿ ಪತ್ತೆಯಾದ ಮಗು ವಾಟ್ಸ್ ಆ್ಯಪ್ ಸಹಾಯದಿಂದ ಕಾಲು ಗಂಟೆಯಲ್ಲಿಯೇ ಪೋಷಕರ ಮಡಿಲು ಸೇರಿತು.
ಸಾಗರ: ಇಲ್ಲಿನ ಗಾಂಧಿನಗರದ ಕಂಬಳಿಯರ ಕೇರಿ ಬಳಿ ಭಾನುವಾರ ನಸುಕಿನಲ್ಲಿ ಮಗುವೊಂದು ಪತ್ತೆಯಾಗಿದ್ದು, ತಕ್ಷಣ ಈ ಸುದ್ದಿ ವಾಟ್ಸ್‌ಆ್ಯಪ್ ಗ್ರೂಪ್‌ಗ್ಳಲ್ಲಿ ಹರಿದಾಡಿದ ಹಿನ್ನೆಲೆಯಲ್ಲಿ ಕಾಲುಗಂಟೆಯೊಳಗೇ ಮಗು ಪೋಷಕರ ಮಡಿಲು ಸೇರಿದ ಘಟನೆ ನಡೆದಿದೆ.
ಭಾನುವಾರ ಬೆಳಗ್ಗೆ ಸುಮಾರು 5-30ರ ಹೊತ್ತಿಗೆ ವಾಕಿಂಗ್ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ರಸ್ತೆ ಬದಿಗೆ ಮಗುವೊಂದು ಅಳುತ್ತಿರುವುದು ಗಮನಕ್ಕೆ ಬಂದಿದೆ. ಸ್ಥಳೀಯರು ಮಗುವಿನ ಫೋಟೋ, ವಿವರಗಳನ್ನು ವಾಟ್ಸ್‌ಆ್ಯಪ್ ಗ್ರೂಪ್‌ಗ್ಳಲ್ಲಿ ಪೋಸ್ಟ್ ಮಾಡಿದ್ದಾರೆ. ಗಾಂಧಿನಗರದ ನಿವಾಸಿಗಳು ಪೊಲೀಸರಿಗೆ ದೂರವಾಣಿ ಮೂಲಕ ಮಗು ಪತ್ತೆಯಾದ ಸಂಗತಿ ತಿಳಿಸಿದ್ದಾರೆ. ಅಷ್ಟರಲ್ಲಿ ಮಗುವಿನ ಪೋಷಕರ ಗಮನಕ್ಕೆ ಕೂಡ ವಾಟ್ಸ್‌ಆ್ಯಪ್ ಸಂದೇಶ ಸಿಕ್ಕಿದ ಕೂಡಲೇ ಗಾಂಧಿ ನಗರದ ಕಂಬಳಿಯರಕೇರಿಯತ್ತ ಧಾವಿಸಿದ್ದಾರೆ. ಬೆಳಲಮಕ್ಕಿ ಭಾಗದಲ್ಲಿದ್ದ ಪೋಷಕರು ಭಾನುವಾರ ಬೆಳಗ್ಗೆ ಹಾಲು ಖರೀದಿಗಾಗಿ ಮನೆಯಿಂದ ಹೊರಟಿದ್ದಾರೆ. ಆಗ ಪೋಷಕರನ್ನು ಹಿಂಬಾಲಿಸಿ ಮಗು ಸಹ ಹೊರಟಿರುವುದನ್ನು ಅವರು ಗಮನಿಸಿರಲಿಲ್ಲ. ದಾರಿ ತಪ್ಪಿಸಿಕೊಂಡ ಮಗು ಗಾಂಧಿ ನಗರದ ಅಂಗನವಾಡಿ ಬಳಿ ಬಂದಿದೆ. ಅಳುತ್ತಿದ್ದ ಮಗುವನ್ನು ಬೆಳಗಿನ ವಾಯುವಿಹಾರ ನಿರತರಾಗಿದ್ದ ಶಿರಿಜಾನ್ ಎಂಬಾಕೆ ಗಮನಿಸಿ ಕಾರ್ಯಪ್ರವೃತ್ತರಾದುದರಿಂದ ಮಗು ಪೋಷಕರ ಮಡಿಲು ಸೇರಿದೆ. ಈ ಸಂದರ್ಭ ಸ್ಥಳೀಯ ವಾರ್ಡ್ ಸದಸ್ಯ ಅರವಿಂದ್ ರಾಯ್ಕರ್, ಶಶಿಕಾಂತ್, ಶಿರಿಜಾನ್ ಮತ್ತಿತರರು ಇದ್ದರು. ಸಾಮಾಜಿಕ ಜಾಲತಾಣಗಳ ಬಗ್ಗೆ ತೀವ್ರಸ್ಥರದ ಅಪಸ್ವರ ಕೇಳಿಬರುತ್ತಿರುವ ಸಂದರ್ಭದಲ್ಲಿ ಇಂತಹ ಘಟನೆಗಳು ಸೋಶಿಯಲ್ ಮೀಡಿಯಾಗಳನ್ನು ಜನಪರವಾಗಿಯೂ ಹೇಗೆ ಬಳಸಬಹುದು ಎಂಬುದಕ್ಕೆ ಇದು ತಕ್ಕ ಉದಾಹರಣೆ ಎಂದು ಜನ ಆಡಿಕೊಳ್ಳುತ್ತಿದ್ದ ದೃಶ್ಯ ಸ್ಥಳದಲ್ಲಿ ಕಂಡುಬಂದಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.