ಕುಸಿಯುವ ಹಂತದಲ್ಲಿ ಐತಿಹಾಸಿಕ ಕನ್ಯಾಕೋಳೂರ ಅಗಸಿ
Team Udayavani, Nov 13, 2019, 3:37 PM IST
ಶಹಾಪುರ: ನಗರದ ಪೂರ್ವ ದಿಕ್ಕಿಗೊಂದು ಮತ್ತು ಪಶ್ಚಿಮ ದಿಕ್ಕಿಗೊಂದು ಎರಡು ಐತಿಹಾಸಿಕ ಅಗಸಿಗಳಿಲ್ಲಿವೆ. ಪಶ್ಚಿಮ ದಿಕ್ಕಿನ ದಿಗ್ಗಿ ಅಗಸಿಯನ್ನು ಈಗಾಗಲೇ ದುರಸ್ತಿಗೊಳಿಸಲಾಗಿದೆ. ಕನ್ಯಾಕೋಳೂರ ಅಗಸಿ ಮಾತ್ರ ಯಾವುದೇ ದುರಸ್ತಿ ಇಲ್ಲದ ಕಾರಣ ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ.
ನಗರದಲ್ಲಿ ಪುರಾತನ ಕಾಲದ ಅಗಸಿಗಳು ಇವತ್ತಿಗೂ ಸುಂದರವಾಗಿವೆ. ಆದರೆ ಶಿಥಿಲಾವಸ್ಥೆವಾಗಿ ಸಂಪೂರ್ಣ ನೆಲ ಕಚ್ಚುವ ಹಂತದಲ್ಲಿವೆ. ದಿಗ್ಗಿ ಅಗಸಿಯನ್ನು ಒಂದಿಷ್ಟು ದುರಸ್ತಿಗೊಳಿಸಲಾಗಿದೆ. ಅದು ತನ್ನ ಪ್ರಾಮುಖ್ಯತೆ ಉಳಿಸಿಕೊಂಡಿದೆ. ಆದರೆ ಕನ್ಯಾಕೋಳೂರ ಅಗಿಸಿ ಇಷ್ಟರಲ್ಲಿಯೇ ಸಂಪೂರ್ಣ ಕುಸಿದು ತನ್ನ ಅಸ್ತಿತ್ವವನ್ನೆ ಕಳೆದುಕೊಂಡು ಇತಿಹಾಸ ಪುಟದಿಂದ ಮರೆಯಾಗುವ ಸಾಧ್ಯತೆ ಎದುರಾಗಿದೆ.
ಪ್ರಾಚ್ಯವಸ್ತು ಇಲಾಖೆ ಹಾಗೂ ಪ್ರವಾಸೋಧ್ಯಮ ಇಲಾಖೆ ಈ ಕುರಿತು ಗಮನಹರಿಸಬೇಕಿದೆ. ಅಲ್ಲದೆ ಪ್ರಾಗೈತಿ ಹಾಸಿಕ ಸ್ಥಳಗಳ ರಕ್ಷಣೆಗೆ ಮುಂದಾಗಬೇಕು ಎಂದು ಇಲ್ಲಿನ ಕರ್ನಾಟಕ ಮಾದಿಗರ ಸಂಘ ತಾಲೂಕು ಶಾಖೆ ಒತ್ತಾಯಿಸಿದ್ದು, ಅಲ್ಲದೆ ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದೆ.
ಪ್ರಾಗೈತಿಹಾಸಿಕ ಸ್ಥಳವಾದ ಅಗಸಿ ರಕ್ಷಣೆಗೆ ಜಿಲ್ಲಾಡಳಿತ ಮುಂದಾಗಬೇಕು. ಅಗಸಿ ಕಲ್ಲುಗಳು ನಿತ್ಯ ಬೀಳುತ್ತಿವೆ. ಹೀಗಾಗಿ ನಾಗರಿಕರ ಸಂಚಾರಕ್ಕೆ ಆತಂಕ ಉಂಟು ಮಾಡಿದೆ. ಹಿಂದೊಮ್ಮೆ ನಾಗರಿಕರೆ ಅದರ ಅಲ್ಪ ಸ್ವಲ್ಪ ದುರಸ್ತಿ ಕಾರ್ಯ ಮಾಡಿದ್ದಾರೆ. ಆದರೆ ಇದೀಗ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು, ಪಕ್ಕದಲ್ಲಿಯೇ ಸರ್ಕಾರಿ ಶಾಲೆಯೊಂದು ಇದ್ದು, ಮಕ್ಕಳು ಅಗಸಿ ಮೂಲಕ ಸಂಚರಿಸುತ್ತಾರೆ.
ಮಧ್ಯಂತರ ವೇಳೆ ಪಕ್ಕದಲ್ಲಿಯೇ ಆಟವಾಡುತ್ತಿರುತ್ತಾರೆ. ಹೀಗಾಗಿ ಅನಾಹುತ ಸಂಭವಿಸುವ ಮೊದಲೇ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮಕ್ಕೆ ಮುಂದಾಗಬೇಕು ಎಂಬುದು ಬಡಾವಣೆ ನಾಗರಿಕರ ಆಗ್ರಹವಾಗಿದೆ.
ಅಗಸಿ ಮೂಲಕವೇ ಸಾಕಷ್ಟು ವಾಹನಗಳು ಸಂಚರಿಸುತ್ತವೆ. ಅಗಸಿ ಬೀಳುವ ಹಂತದಲ್ಲಿರುವುದರಿಂದ ಜನರು ಆತಂಕದಿಂದಲೇ ಜೀವ ಕೈಯಲ್ಲಿ ಹಿಡಿದು ಸಾಗುವ ಸ್ಥಿತಿ ನಿರ್ಮಾಣವಾಗಿದೆ. ಇಲ್ಲವಾದಲ್ಲಿ ಹೆದ್ದಾರಿ ಬದಿಯಿಂದ ಸುತ್ತುವರೆದು ಬರುವಂತಾಗಿದೆ ಎಂದು ನಾಗರಿಕರು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.