57 ಲಕ್ಷ ಬಿಪಿಎಲ್ ಪಡಿತರ ಚೀಟಿ ರದ್ದು
Team Udayavani, Jul 12, 2017, 4:00 AM IST
ಶಿವಮೊಗ್ಗ: ‘ಸರ್ವಂ ಆಧಾರ ಮಯಂ’ ಎಂಬ ಮಂತ್ರ ಪಠಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಡೆಯ ಪರಿಣಾಮ ಅನರ್ಹ ಪಡಿತರ ಚೀಟಿದಾರರ ಪತ್ತೆ ಹಚ್ಚುವ ಕೆಲಸ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪಾಲಿಗೆ ವರದಾನವಾಗಿದೆ. ಆಧಾರ್ ಕಡ್ಡಾಯದ ಬಳಿಕ ಈ ತನಕ ಇಲಾಖೆ ರಾಜ್ಯಾದ್ಯಂತ ಬರೊಬ್ಬರಿ 57,88,296 ಅನರ್ಹ ಬಿಪಿಎಲ್ ಪಡಿತರ ಚೀಟಿಯನ್ನು ರದ್ದುಪಡಿಸಿದೆ.
ಬಿಪಿಎಲ್ ಪಡಿತರರನ್ನು ಬಡತನ ಮಟ್ಟದಿಂದ ಮೇಲೆತ್ತುವ ಉದ್ದೇಶದಿಂದ ಆ ವರ್ಗದ ಮಂದಿಗೆ ಸರಕಾರ ವಿವಿಧ ರೀತಿಯ ಸೌಲಭ್ಯ ನೀಡಿತ್ತು. ಆದರೆ ನಕಲಿ ಬಿಪಿಎಲ್ ಕಾರ್ಡುಗಳೇ ಹೆಚ್ಚಾಗಿ ಸರಕಾರದ ಆಶಯದ ಮೂಲಕ್ಕೇ ಕೊಡಲಿಯೇಟು ಬಿದ್ದಿತ್ತು. ಸರಕಾರದ ಹಣ ಅನವಶ್ಯಕವಾಗಿ ಹರಿದು ಹೋಗಿತ್ತು. ಈ ಹೊತ್ತಿನಲ್ಲಿ ನೆರವಿಗೆ ಬಂದ ‘ಆಧಾರ್’ ಈ ನಕಲಿ ಕಾರ್ಡುಗಳನ್ನು ದೊಡ್ಡ ಮಟ್ಟದಲ್ಲಿ ನಿರ್ಮೂಲನೆ ಮಾಡಿದೆ. ಒಂದು ಕಾಲಕ್ಕೆ ಐಚ್ಛಿಕ ಆಗಿದ್ದ ಆಧಾರ್ ಇಂದು ಪ್ರತಿಯೊಂದಕ್ಕೂ ಕಡ್ಡಾಯವಾಗತೊಡಗಿದ್ದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಧಾರ್ ಅನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳತೊಡಗಿದೆ.
ಲಿಂಕ್ ಇಲ್ಲದ ಕಾರ್ಡ್ ಅನರ್ಹ: ಪಡಿತರ ಚೀಟಿಗೆ ಆಧಾರ್ ಸಂಪರ್ಕಗೊಳಿಸುವುದನ್ನು ಕಡ್ಡಾಯಗೊಳಿಸಿತು. ಪಡಿತರ ಚೀಟಿಯೊಂದಿಗೆ ಆಧಾರ್ ಲಿಂಕ್ ಮಾಡಿಕೊಳ್ಳಲು ನೀಡಲಾಗಿದ್ದ ಮಾ.31ರ ಅವಧಿ ಮುಗಿದ ಅನಂತರ ಆಧಾರ್ ಲಿಂಕ್ ಇಲ್ಲದ ಪಡಿತರ ಚೀಟಿಯನ್ನು ಹಂತ ಹಂತವಾಗಿ ರದ್ದು ಮಾಡುತ್ತ ಬಂದಿರುವ ಇಲಾಖೆ ಈ ತನಕ 57ಲಕ್ಷ ಅನರ್ಹ ಪಡಿತರ ಚೀಟಿಯನ್ನು ರದ್ದು ಮಾಡಿರುವುದು ಗರಿಷ್ಠ ಸಾಧನೆಯಾಗಿದೆ. ಇದರ ಪರಿಣಾಮ ಒಂದು ಕಾರ್ಡ್‌ಗೆ ಒಂದು ತಿಂಗಳಿಗೆ 5ಕೆಜಿ ಅಕ್ಕಿ ಲೆಕ್ಕ ಹಿಡಿದರೂ ಒಂದು ತಿಂಗಳಿಗೆ 2,89,41,480 ಕೆಜಿ ಅಕ್ಕಿ ಉಳಿತಾಯವಾದಂತಾಗಿದೆ.
ರಾಜ್ಯದಲ್ಲಿ ಗರಿಷ್ಠ ಮಟ್ಟದಲ್ಲಿ ಬಿಪಿಎಲ್ ಕಾರ್ಡ್ ರದ್ದಾದ ಜಿಲ್ಲೆಗಳಲ್ಲಿ ಹೈದರಾಬಾದ್ ಕರ್ನಾಟಕ ಜಿಲ್ಲೆಗಳು ಮುಂಚೂಣಿಯಲ್ಲಿವೆ. ಈ ಪೈಕಿ ಕಲಬುರ್ಗಿ 4,20,037, ರಾಯಚೂರು 4,19,766, ವಿಜಯಪುರ 3,63,219, ಬೆಳಗಾವಿ 3,41,441 ಹಾಗೂ ಬಳ್ಳಾರಿ 2,66,080 ಕಾರ್ಡ್‌ಗಳು ಸೇರಿವೆ. ಪ್ರಸ್ತುತ ರಾಜ್ಯಾದ್ಯಂತ 3,54,59,461 ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್‌ದಾರರು ಉಳಿದುಕೊಂಡಿದ್ದಾರೆ.
ಆಧಾರ್ ಕಡ್ಡಾಯ: ರಾಜ್ಯಾದ್ಯಂತ ಅನರ್ಹ ಹಾಗೂ ನಕಲಿ ಪಡಿತರ ಚೀಟಿಗಳು ಇವೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪಡಿತರ ಚೀಟಿಯೊಂದಿಗೆ ಪಡಿತರ ಕುಟುಂಬದ ಪ್ರತಿಯೊಬ್ಬರೂ ತಮ್ಮ ಆಧಾರ್ ಅನ್ನು ಪಡಿತರ ಚೀಟಿ ಸಂಖ್ಯೆಯೊಂದಿಗೆ ಕಡ್ಡಾಯವಾಗಿ ಲಿಂಕ್ ಮಾಡಿಕೊಳ್ಳಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸೂಚನೆ ನೀಡಿತ್ತು. ಆರಂಭದಲ್ಲಿ ಇದನ್ನು ಪಡಿತರ ಚೀಟಿದಾರರು ಅಷ್ಟು ಗಂಭೀರವಾಗಿ ಪರಿಗಣಿಸಿರಲಿಲ್ಲ. ಯಾವಾಗ ಮಾ.31ರ ಅನಂತರವೂ ಬಹಳಷ್ಟು ಪಡಿತರ ಚೀಟಿದಾರರು ಆಧಾರ್‌ನ್ನು ಪಡಿತರ ಚೀಟಿಯೊಂದಿಗೆ ಲಿಂಕ್ ಮಾಡಿಕೊಳ್ಳಲಿಲ್ಲವೋ ಆಗ ಇಲಾಖೆ ಬಿಗಿ ಕ್ರಮಕ್ಕೆ ಮುಂದಾಯಿತು. ಇದರ ಪರಿಣಾಮ ಆಧಾರ್‌ನೊಂದಿಗೆ ಲಿಂಕ್ ಮಾಡಿ ಕೊಳ್ಳದ ಪಡಿತರ ಚೀಟಿಗೆ ಆಹಾರ ವಿತರಣೆಯನ್ನೇ ರದ್ದುಪಡಿಸಿತು. ಇದರಿಂದಾಗಿ ಲಕ್ಷಾಂತರ ಕ್ವಿಂಟಲ್ ಪಡಿತರ ಉಳಿತಾಯವಾಯಿತು. ಮಾತ್ರವಲ್ಲ ನಕಲಿ ಕಾರ್ಡುಗಳ ಲೆಕ್ಕ ಸಿಗತೊಡಗಿತು. ಬಹಳಷ್ಟು ಪ್ರಕರಣದಲ್ಲಿ ಪಡಿತರ ಚೀಟಿ ಯಲ್ಲಿರುವವರ ಪೈಕಿ ಒಬ್ಬರು ತಮ್ಮ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಕೊಂಡಿರುತ್ತಾರೆ. ಉಳಿದವರು ಮಾಡಿಕೊಂಡಿರುವುದಿಲ್ಲ. ಅಂತಹ ಸಂದರ್ಭದಲ್ಲೂ ಪಡಿತರ ಚೀಟಿ ರದ್ದಾಗುತ್ತದೆ.
ಇನ್ನಾದರೂ ಆಧಾರ್ ಲಿಂಕ್ ಮಾಡಿ
ಒಂದು ವೇಳೆ ಪಡಿತರ ಚೀಟಿಯಲ್ಲಿರುವವರ ಪೈಕಿ ಯಾರೊಬ್ಬರೂ ಆಧಾರ್ ಲಿಂಕ್ ಮಾಡಿಸಿಕೊಂಡಿರದಿದ್ದರೆ ಅಂತಹ ಪಡಿತರ ಚೀಟಿ ತಾನಾಗಿಯೇ ರದ್ದಾಗುತ್ತದೆ. ಆಗ ಸಕಾಲ ವ್ಯವಸ್ಥೆಯಡಿ ಹೊಸದಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ನಿಜವಾಗಿಯೂ ಬಿಪಿಎಲ್ ಅರ್ಹತೆ ಇದ್ದೂ ಪಡಿತರ ಚೀಟಿಯಲ್ಲಿರುವವರ ಪೈಕಿ ಒಬ್ಬರು ಆಧಾರ್ ಲಿಂಕ್ ಮಾಡಿಕೊಂಡು ಉಳಿದವರು ಮಾಡಿಕೊಳ್ಳದಿದ್ದರೆ ತಕ್ಷಣವೇ ಸಮೀಪದ ಖಾಸಗಿ ಸೇವಾ ಕೇಂದ್ರ ಅಥವಾ ಇಲಾಖೆಯ ಕಚೇರಿಗೆ ತೆರಳಿ ಲಿಂಕ್ ಮಾಡಿಸಬಹುದು. ಹೊಸದಾಗಿ ರಾಜ್ಯಾದ್ಯಂತ ಬಿಪಿಎಲ್ ಪಡಿತರ ಚೀಟಿ ಕೋರಿ 1,40,2,056 ಅರ್ಜಿ ಸಲ್ಲಿಕೆಯಾಗಿದೆ. ಈ ಪೈಕಿ 16,81,079 ಅರ್ಜಿದಾರರು ಅಗತ್ಯ ದಾಖಲೆ ಹಾಗೂ ಪ್ರಕ್ರಿಯೆ ಪೂರೈಸಿದ್ದು, ಇದರಲ್ಲಿ 8,62,860 ಅರ್ಜಿ ಮೊದಲ ಹಂತದಲ್ಲಿ ವಿಲೇವಾರಿಗೆ ಸಿದ್ಧಗೊಂಡಿವೆ.
– ಗೋಪಾಲ್ ಯಡಗೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.