ಮಲೆನಾಡಿಗೆ ಕೊಡುಗೆಗಳ ಸುರಿಮಳೆ…
Team Udayavani, Feb 9, 2019, 10:42 AM IST
ಶಿವಮೊಗ್ಗ: ಜಿಲ್ಲೆಯ ಪ್ರಮುಖ ನಿರೀಕ್ಷೆಗಳನ್ನು ಈಡೇರಿಸುವ ಭರವಸೆ ಮೂಲಕ ಈ ಬಾರಿಯ ರಾಜ್ಯ ಬಜೆಟ್ ಆಶಾದಾಯಕವೆನಿಸಿದೆ. ಜಿಲ್ಲೆಯ ಪ್ರಮುಖ ಏತ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಪಾಲನ್ನು ಕೊಡಲಾಗಿದೆ. ಈ ವರ್ಷ ಕಾಡುತ್ತಿರುವ ಮಂಗನ ಕಾಯಿಲೆ ಬಗ್ಗೆ ಸಂಶೋಧನೆ, ಚಿಕಿತ್ಸೆ, ವಿಮಾನ ನಿಲ್ದಾಣ ಅಭಿವೃದ್ಧಿಗೆ ಚಾಲನೆ, ಕಾಲುಸಂಕ, ಮಿನಿ ಸೇತುವೆಗಳ ಅಭಿವೃದ್ಧಿ, ಮಹಾನಗರ ಪಾಲಿಕೆಗೆ 350 ಕೋಟಿ, ಮಲೆನಾಡು ಭಾಗದ ಭತ್ತದ ಬೆಳಗಾರರಿಗೆ ವಿಶೇಷ ಪ್ರೋತ್ಸಾಹ ಧನ, ಮಲೆನಾಡು ಅಭಿವೃದ್ಧಿ ಪ್ರಾಧಿಕಾರಕ್ಕೆ 70 ಕೋಟಿ, ಹೀಗೆ ಜಿಲ್ಲೆಗೆ ಸಾಲು ಸಾಲು ಯೋಜನೆಗಳು ದೊರೆತಿವೆ.
ನೀರಾವರಿಗೆ ಬಂಪರ್: ಜಿಲ್ಲೆಯ ಅನೇಕ ನೀರಾವರಿ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಖುದ್ದು ಬಿ.ಎಸ್. ಯಡಿಯೂರಪ್ಪ ಅವರು ಸಚಿವ ಡಿ.ಕೆ. ಶಿವಕುಮಾರ್ ಮನೆಗೆ ತೆರಳಿ ಮನವಿ ಸಲ್ಲಿಸಿದ್ದರು. ಇದಕ್ಕೂ ಮೊದಲು ಲೋಕಸಭೆ ಉಪ ಚುನಾವಣೆ ಪ್ರಚಾರದ ವೇಳೆ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಅನುದಾನ ಕೊಡುವುದಾಗಿ ಸಿಎಂ ಕುಮಾರಸ್ವಾಮಿ ಭರವಸೆ ನೀಡಿದ್ದರು. ಜತೆಗೆ ಶಾಸಕರು, ಕಾಂಗ್ರೆಸ್, ಜೆಡಿಎಸ್ ಮುಖಂಡರು ಸಹ ಮನವಿ ಸಲ್ಲಿಸಿದ್ದರು. ಒಟ್ಟಿನಲ್ಲಿ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಒಳ್ಳೆಯ ಅನುದಾನ ಹರಿದು ಬಂದಿದ್ದು ವಿವರ ಇಂತಿದೆ.
ಶಿವಮೊಗ್ಗ ತಾಲೂಕಿನ ಹೊಸಹಳ್ಳಿ ಗ್ರಾಮದ ಹತ್ತಿರ ತುಂಗಾ ನದಿಯಿಂದ ನೀರನ್ನೆತ್ತಿ ಕುಂಸಿ, ಮಲೇಶಂಕರ, ಸಿರಿಗೆರೆ, ತಮ್ಮಡಿಹಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಕೆರೆಗಳಿಗೆ, ಶಿಕಾರಿಪುರ ಮತ್ತು ಶಿರಾಳಕೊಪ್ಪ ತಾಲೂಕಿನ ಪಟ್ಟಣಗಳ ಹಾಗೂ ಗ್ರಾಮಾಂತರ ಪ್ರದೇಶಗಳಿಗೆ ಹಾಗೂ ಸೊರಬ ತಾಲೂಕಿನ ಕೆರೆೆಗಳಿಗೆ ವರದಾ ನದಿಯಿಂದ ಮೂಗೂರು ಕೆರೆಗೆ ನೀರು ತುಂಬಿಸುವ ಯೋಜನೆಗೆ 250 ಕೋಟಿ ಹಣ ಮೀಸಲಿಡಲಾಗಿದೆ.
ಶಿಕಾರಿಪುರ ತಾಲೂಕಿನ ಸುಮಾರು 200 ಕೆರೆಗಳನ್ನು ತುಂಬಿಸುವ ಉಡುಗಣಿ- ತಾಳಗುಂದ- ಹೊಸೂರು ಏತ ನೀರಾವರಿ ಯೋಜನೆಗೆ 200 ಕೋಟಿ ಹಣ ಮೀಸಲಿಡಲಾಗಿದೆ. ಭದ್ರಾವತಿ ತಾಲೂಕಿನ ಕಂಬದಾಳ್, ಹೊಸೂರು ಗ್ರಾಮಗಳ ಕೆರೆ ತುಂಬಿಸುವ ಯೋಜನೆಗೆ 20 ಕೋಟಿ, ಶಿವಮೊಗ್ಗ ಜಿಲ್ಲೆಯ ಹೊಳೆ ಹನಸವಾಡಿ ಗ್ರಾಮದ ಹತ್ತಿರ ಹರಿಯುತ್ತಿರುವ ತುಂಗಾ ನದಿಯಿಂದ ಏತ ನೀರಾವರಿ ಮೂಲಕ ಬಿಕ್ಕೋನಹಳ್ಳಿ, ಕೊಮ್ಮನಾಳು ಅಬ್ಬಲಗೆರೆ, ಬೀರನಕೆರೆ, ಕುಂಚೇನಹಳ್ಳಿ, ಕಲ್ಲಾಪುರ ಗ್ರಾಮಗಳ ಒಟ್ಟು 8 ಕೆರೆಗಳಿಗೆ ನೀರು ತುಂಬಿಸಲು 13 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ.
ಮಳೆಗಾಲದಲ್ಲಿ ಕಾಲುಸಂಕದಿಂದ ಜಾರಿ ತೀರ್ಥಹಳ್ಳಿಯ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟ ಹಿನ್ನೆಲೆಯಲ್ಲಿ ಕಿರುಸೇತುವೆಗಳನ್ನು ಅಭಿವೃದ್ಧಿಪಡಿಸಲು ಆದ್ಯತೆ ನೀಡಲಾಗಿದೆ. ಕರಾವಳಿ ಹಾಗೂ ಮಲೆನಾಡಿಗೆ 1317 ಕಿರುಸೇತುವೆ ಪೂರ್ಣಕ್ಕೆ ಅನುಮತಿ ಸಿಕ್ಕಿದ್ದು, ಜಿಲ್ಲೆಯ ಸಾಗರ, ತೀರ್ಥಹಳ್ಳಿ, ಹೊಸನಗರ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
ಭತ್ತದ ಬೆಳೆಗಾರರಿಗೆ: ಜಿಲ್ಲೆಯಲ್ಲಿ ಸುಮಾರು 1 ಲಕ್ಷ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗುತ್ತಿದ್ದು, ಬಜೆಟ್‌ನಲ್ಲಿ ಕರಾವಳಿ ಹಾಗೂ ಮಲೆನಾಡು ಭತ್ತ ಬೆಳೆಗಾರರಿಗೆ ಹೆಕ್ಟೇರ್‌ಗೆ 7500 ರೂ. ಮೀಸಲಿಡಲಾಗಿದೆ. ಜಿಲ್ಲೆಯ ಸಾವಿರಾರು ರೈತರಿಗೆ ಇದು ಅನುಕೂಲವಾಗುವ ಸಾಧ್ಯತೆ ಇದೆ.
ಪಾಲಿಕೆಗೂ ಅನುದಾನ: ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಗೆ 125 ಕೋಟಿ ವಿಶೇಷ ಅನುದಾನ ಕೊಡಲಾಗಿದೆ. ಅಲ್ಲದೇ ಪಾಲಿಕೆ ವ್ಯಾಪ್ತಿಯಲ್ಲಿ ನಿರಂತರ ಪರಿವೇಷ್ಟಕ ಶಬ್ದ ಮಾಪನ ಕೇಂದ್ರಗಳನ್ನು ಸ್ಥಾಪಿಸಲು ಬಜೆಟ್‌ನಲ್ಲಿ ತಿಳಿಸಲಾಗಿದೆ.
ಮಠಗಳಿಗೂ ಹಣ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹಂಚಿನ ಸಿದ್ದಾಪುರದ ಶ್ರೀ ಸಿದ್ದರಾಮೇಶ್ವರಸ್ವಾಮಿ ಟ್ರಸ್ಟ್‌ಗೆ 1 ಕೋಟಿ ರೂ., ಶಿವಮೊಗ್ಗದ ಶ್ರೀ ರೇಣುಕಾನಂದ ಸ್ವಾಮೀಜಿ ನಾರಾಯಣಗುರು ಮಹಾಸಂಸ್ಥಾನ ಮಠಕ್ಕೆ 3 ಕೋಟಿ ರೂ. ಮೀಸಲಿಡಲಾಗಿದೆ.
ಏರ್‌ಪೋರ್ಟ್‌ಗೆ ಮರುಜೀವ: ಸೋಗಾನೆ ಬಳಿ ಇರುವ ಏರ್‌ಪೋರ್ಟ್ ಅನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಡಿ ಅಭಿವೃದ್ಧಿಪಡಿಸಲು ಬಜೆಟ್‌ನಲ್ಲಿ ತೀರ್ಮಾನಿಸಲಾಗಿದ್ದು ಟೆಂಡರ್ ಪ್ರಕ್ರಿಯೆಯಲ್ಲಿದೆ ಎಂದು ಸರಕಾರ ಹೇಳಿದೆ. ಈ ಮೂಲಕ ಏರ್‌ಪೋರ್ಟ್ ಆರಂಭ ಕನಸು ನನಸಾಗುವುದೇ ಕಾದು ನೋಡಬೇಕಿದೆ.
ಉದ್ಯೋಗ ಪರಿಣತಿ ಕೇಂದ್ರ: ವಿಶ್ವವಿದ್ಯಾಲಯಗಳಲ್ಲಿ ಉದ್ಯೋಗ ಪರಿಣತಿ ಕೇಂದ್ರ ಆರಂಭಿಸುವುದಾಗಿ ಸರಕಾರ ಹೇಳಿದ್ದು, ಕುವೆಂಪು ವಿಶ್ವವಿದ್ಯಾಲಯ ಹಾಗೂ ಕೃಷಿ ಮತ್ತು ತೋಟಗಾರಿಕೆ ವಿವಿಯಲ್ಲಿ ಕೇಂದ್ರ ಆರಂಭವಾಗಲಿದೆ
ಮಾನವ- ಆನೆ ಸಂಘರ್ಷ: ಶಿವಮೊಗ್ಗದ ಆಗುಂಬೆ ಹಾಗೂ ಉಬ್ರಾಣಿ ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ‘ಉಪಯೋಗಿಸಿದ ರೈಲುಹಳಿ ತಡೆಗೋಡೆಯಿಂದ ಮಾನವ-ಆನೆ ಸಂಘರ್ಷ ನಿಯಂತ್ರಣ’ ಜಿಲ್ಲೆಗೆ ದೊರೆಯುವ ಸಾಧ್ಯತೆ ಇದೆ.
ಮಂಗನ ಕಾಯಿಲೆ ಮದ್ದಿಗಾಗಿ ಸಂಶೋಧನೆ
ಶಿವಮೊಗ್ಗವಷ್ಟೇ ಅಲ್ಲದೇ ರಾಜ್ಯದ ಇತರೆ ರಾಜ್ಯಗಳಿಗೂ ವ್ಯಾಪಿಸಿರುವ ಮಂಗನ ಕಾಯಿಲೆಯನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿದ್ದು ಲಸಿಕೆ ಕಂಡುಹಿಡಿಯಲು 5 ಕೋಟಿ ಹಣ ಮೀಸಲಿಟ್ಟಿದೆ. ಇದರಿಂದಲಾದರೂ ಲಸಿಕೆ ಇಲ್ಲದ ಕಾಯಿಲೆಗೆ ಮದ್ದು ಸಿಗಬಹುದೇ ಎಂದು ನಿರೀಕ್ಷಿಸಲಾಗುತ್ತಿದೆ. ಅತಿ ಹೆಚ್ಚು ಹಾನಿ ಮಾಡಿರುವ ಶಿವಮೊಗ್ಗ ಜಿಲ್ಲೆ ಆಸ್ಪತ್ರೆಯಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಮಂಗನ ಕಾಯಿಲೆ ಸಂಶೋಧನಾ ಕೇಂದ್ರ ಹಾಗೂ ಚಿಕಿತ್ಸಾ ಘಟಕ ತೆರೆಯಲು 5 ಕೋಟಿ ಮೀಸಲಿಟ್ಟಿರುವುದು ಆಶಾದಾಯಕವಾಗಿದೆ.
ಮಂಗನ ಕಾಯಿಲೆ ಮದ್ದಿಗಾಗಿ ಸಂಶೋಧನೆ
•ಕೆಎಫ್‌ಡಿ ಸಂಶೋಧನೆ- ಚಿಕಿತ್ಸೆಗೆ ಅನುದಾನ •ಕಾಲುಸಂಕ- ಮಿನಿ ಸೇತುವೆಗಳ ಅಭಿವೃದ್ಧಿಗೆ ಯೋಜನೆ ಶಿವಮೊಗ್ಗವಷ್ಟೇ ಅಲ್ಲದೇ ರಾಜ್ಯದ ಇತರೆ ರಾಜ್ಯಗಳಿಗೂ ವ್ಯಾಪಿಸಿರುವ ಮಂಗನ ಕಾಯಿಲೆಯನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿದ್ದು ಲಸಿಕೆ ಕಂಡುಹಿಡಿಯಲು 5 ಕೋಟಿ ಹಣ ಮೀಸಲಿಟ್ಟಿದೆ. ಇದರಿಂದಲಾದರೂ ಲಸಿಕೆ ಇಲ್ಲದ ಕಾಯಿಲೆಗೆ ಮದ್ದು ಸಿಗಬಹುದೇ ಎಂದು ನಿರೀಕ್ಷಿಸಲಾಗುತ್ತಿದೆ. ಅತಿ ಹೆಚ್ಚು ಹಾನಿ ಮಾಡಿರುವ ಶಿವಮೊಗ್ಗ ಜಿಲ್ಲೆ ಆಸ್ಪತ್ರೆಯಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಮಂಗನ ಕಾಯಿಲೆ ಸಂಶೋಧನಾ ಕೇಂದ್ರ ಹಾಗೂ ಚಿಕಿತ್ಸಾ ಘಟಕ ತೆರೆಯಲು 5 ಕೋಟಿ ಮೀಸಲಿಟ್ಟಿರುವುದು ಆಶಾದಾಯಕವಾಗಿದೆ.
ಎಂಪಿಎಂಗೆ ಸುಣ್ಣ
ಎಂಪಿಎಂ ಸಕ್ಕರೆ ಕಾರ್ಖಾನೆ ವಿಚಾರವಾಗಿ ಸರಕಾರ ಮಲತಾಯಿ ಧೋರಣೆ ಮುಂದುವರಿಸಿದೆ. ರಾಜ್ಯದಲ್ಲಿರುವ ಸರಕಾರಿ ಸ್ವಾಮ್ಯದ ಸಕ್ಕರೆ ಕಾರ್ಖಾನೆಗಳು ಇರುವುದೇ ಎರಡು. ಮಂಡ್ಯ ಮೈಶುಗರ್‌ಗೆ 100 ಕೋಟಿ ರೂ. ಕೊಟ್ಟಿರುವ ಸರಕಾರ, ಎಂಪಿಎಂಗೆ ಬಿಡಿಗಾಸು ಕೊಟ್ಟಿಲ್ಲ.
ರೈಲ್ವೆ ಯೋಜನೆಗಳಿಗಿಲ್ಲ ಅನುದಾನ
ಜಿಲ್ಲೆಯ ಪ್ರಮುಖ ರೈಲ್ವೆ ಯೋಜನೆಗಳಿಗೆ ರಾಜ್ಯದ ಪಾಲಿನ ಅನುದಾನ ನೀಡಿಲ್ಲ. ಶಿಕಾರಿಪುರ- ರಾಣೆಬೆನ್ನೂರು, ಶಿವಮೊಗ್ಗ- ಹರಿಹರ, ಶಿವಮೊಗ್ಗ- ಮಂಗಳೂರು ಯೋಜನೆಗಳ ಬಗ್ಗೆ ಯಾವುದೇ ಪ್ರಸ್ತಾಪ ಆಗಿಲ್ಲ. ಜಿಲ್ಲೆಯಲ್ಲಿ ಸಾಕಷ್ಟು ನೀರಾವರಿ ಯೋಜನೆಗಳಿದ್ದು ಅವುಗಳು ಅನುದಾನ ಬೇಡುತ್ತಿವೆ.
ರಾಜ್ಯ ಸಮ್ಮಿಶ್ರ ಸರ್ಕಾರದ ಈ ಬಜೆಟ್ ಒಂದು ದಿನದ ಪ್ರಚಾರಕ್ಕಷ್ಟೇ ಸೀಮಿತವಾಗಿದೆ. ಅಪೇಕ್ಷೆ ಇಲ್ಲದ ಬಜೆಟ್ ಆಗಿದೆ. ಸರ್ಕಾರದಲ್ಲಿ ಹಣವಿಲ್ಲದ ಬರಿಗೈ ಬಜೆಟ್ ಆಗಿದೆ. ಈ ಬಾರಿಯೂ ಕರಾವಳಿ ಹಾಗೂ ಮಲೆನಾಡು ಭಾಗವನ್ನು ನಿರ್ಲಕ್ಷಿಸಿದ್ದಾರೆ. ಇದೊಂದು ಸುಳ್ಳಿನ ಕಂತೆಯ ಬಜೆಟ್. ಸಮ್ಮಿಶ್ರ ಸರ್ಕಾರವೇ ಅಸ್ತಿತ್ವದ ಅತಂತ್ರ ಸ್ಥಿತಿಯಲ್ಲಿರುವಾಗ ಯಾವ ಉದ್ದೇಶಕ್ಕಾಗಿ ಈ ಬಜೆಟ್ ಬೇಕಾಗಿತ್ತು?
•ಆರಗ ಜ್ಞಾನೇಂದ್ರ, ಶಾಸಕ
ಶಿಕಾರಿಪುರ: ತಾಲೂಕಿಗೆ ನೀರಾವರಿ ಯೋಜನೆ ಅಗತ್ಯವಿತ್ತು. ಈ ವಿಚಾರವಾಗಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಯಡಿಯೂರಪ್ಪ ಹಾಗೂ ರಾಘವೇಂದ್ರ ಹೋರಾಟ ಮಾಡಿದ್ದರ ಫಲವಾಗಿ ಮತ್ತು ತಾಲೂಕಿನ ರೈತರ ಕಷ್ಟಗಳನ್ನು ಅರಿತ ನಮ್ಮ ನಾಯಕರು ಪಕ್ಷಾತೀತವಾಗಿ ತಾಲೂಕಿನ ಸಮಸ್ತ ಜನರ ಒಳಿತಿಗಾಗಿ ನೀರಾವರಿಗೆ ಹಣ ಮಂಜೂರು ಮಾಡಿಸುವಲ್ಲಿ ಸಫಲರಾಗಿದ್ದಾರೆ.
•ಗುರುಮೂರ್ತಿ ಕೆ.ಎಸ್., ಜಿಲ್ಲಾ ಬಿಜೆಪಿ ಕಾರ್ಯದರ್ಶಿ
ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ಕೊಟ್ಟಿರುವುದು ಬಿಟ್ಟರೆ ಕೈಗಾರಿಕೆ ದೃಷ್ಟಿಯಿಂದ ಯಾವುದೇ ಯೋಜನೆಗಳಿಲ್ಲ. 7 ಕೈಗಾರಿಕೆ ಕ್ಲಸ್ಟರ್ ಘೋಷಿಸಿದ್ದಾರೆ. ಅದರಲ್ಲಿ ಶಿವಮೊಗ್ಗದ ಹೆಸರಿಲ್ಲ. ಏರ್‌ಪೋರ್ಟ್ ಅಭಿವೃದ್ಧಿಗೆ ಚಕಾರ ಎತ್ತಿಲ್ಲ.
• ಜೆ.ಆರ್. ವಾಸುದೇವ್, ಅಧ್ಯಕ್ಷ, ಚೇಂಬರ್ ಆಫ್ ಕಾಮರ್ಸ್
ರಾಜ್ಯ ಬಜೆಟ್ ಎಲ್ಲ ವರ್ಗದ ಜನರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ರಚಿಸಿರುವ ಉತ್ತಮ ಬಜೆಟ್ ಆಗಿದೆ.
•ಟಿ. ಚಂದ್ರೇಗೌಡ, ಕಾಂಗ್ರೆಸ್ ನಗರಾಧ್ಯಕ್ಷ
ಮುಖ್ಯ ಮಂತ್ರಿ ಕುಮಾರಸ್ವಾಮಿ ಶುಕ್ರವಾರ ಮಂಡಿಸಿರುವ ರಾಜ್ಯ ಬಜೆಟ್ ಉತ್ತಮ ಬಜೆಟ್ ಆಗಿದೆ. ಆಟೋ ಡ್ರೈವರ್, ರೈತರು ಸೇರಿದಂತೆ ಎಲ್ಲ ವರ್ಗದವರ ಹಿತ ಕಾಯಲು ರೂಪಿಸಿರುವ ಉತ್ತಮ ಬಜೆಟ್ ಆಗಿದೆ. ಮೋದಿ ಸರ್ಕಾರದ ಕೇಂದ್ರ ಬಜೆಟ್ ತನ್ನ ಅಧಿಕಾರದ ಅವಧಿಯ ಕೊನೆಯಲ್ಲಿ ಜನರ ಮೂಗಿಗೆ ತುಪ್ಪ ಸವರುವ ಬಜೆಟ್ ಆಗಿದ್ದರೆ ರಾಜ್ಯ ಸರ್ಕಾರದ ಬಜೆಟ್ ಜನರ ಹಿತ ಕಾಯುವ ಉತ್ತಮ ಬಜೆಟ್ ಆಗಿದೆ.
•ಎಂ.ಜೆ.ಅಪ್ಪಾಜಿ, ಮಾಜಿ ಶಾಸಕ
ರಾಜ್ಯ ಬಜೆಟ್ ಮೇಲ್ನೋಟಕ್ಕೆ ರಾಜಕೀಯ ಪ್ರೇರಿತ ಬಜೆಟ್ ಎಂಬುದು ಗೋಚರವಾಗುತ್ತದೆ. ಬಹುತೇಕ ಅಂಶಗಳಲ್ಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಬಜೆಟ್ ಅನ್ನು ಕಾಪಿ ಮಾಡಿದ ರೀತಿ ತೋರುತ್ತದೆ. ಆದರೂ ರೈತರಿಗೆ, ಕಾರ್ಮಿಕರಿಗೆ, ಮಧ್ಯಮ ವರ್ಗದವರಿಗೆ ಬಜೆಟ್‌ನಲ್ಲಿ ನೀಡಿರುವ ಘೋಷಣೆ ಜನರಲ್ಲಿ ನಿರೀಕ್ಷೆ ಹುಟ್ಟಿಸುತ್ತದೆಯಾದರೂ ಬಹುಮತವಿಲ್ಲದೆ ಸದನದಲ್ಲಿ ಮಂಡಿಸಿರುವ ಬಜೆಟ್ ಇದು ಎನ್ನಬಹುದು.
•ಜಿ.ಧರ್ಮಪ್ರಸಾದ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ.
ರಾಜ್ಯ ಬಜೆಟ್‌ನಲ್ಲಿ ಜನರಿಗೆ ವಿವಿಧ ಯೋಜನೆಗಳ ಬಗ್ಗೆ ಹೇಳಿದೆಯಾದರೂ ಸಂಪನ್ಮೂಲದ ಬಗ್ಗೆ ಸರಿಯಾಗಿ ಹೇಳದೆ ಇರುವುದು ನೋಡಿದರೆ ಜನರ ಕಣ್ಣೊರೆಸುವ ತಂತ್ರಗಾರಿಕೆಯಿಂದ ಕೂಡಿದೆ ಎನಿಸುತ್ತದೆ. ಸರ್ಕಾರ ಇಷ್ಟೊಂದು ಆಶ್ವಾಸನೆಗಳ ಬಜೆಟ್‌ಗೆ ಹಣ ಎಲ್ಲಿಂದ ತರುತ್ತದೆ ಎಂಬುದು ಪ್ರಶ್ನಾರ್ಥಕವಾಗಿದೆ.
•ಮಂಗೋಟೆ ರುದ್ರೇಶ್, ಬಿಜೆಪಿ ಭದ್ರಾವತಿ ಗ್ರಾಮಾಂತರ ಘಟಕದ ಅಧ್ಯಕ್ಷ
ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿದ ಸಮ್ಮಿಶ್ರ ಸರ್ಕಾರದ ಈ ಬಜೆಟ್ ಜನಪ್ರಿಯ ಬಜೆಟ್ ಆಗಿದೆ. ಕೃಷಿ, ಆರೋಗ್ಯ, ಶಿಕ್ಷಣ ಕ್ಷೇತ್ರಗಳಿಗೆ ಒತ್ತು ನೀಡಿ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ಆದರೆ ಮಠ, ಮಂದಿರಗಳಿಗೆ ಕೋಟಿ ಕೋಟಿ ಅನುದಾನ ನೀಡುವ ಈ ಸರ್ಕಾರದ ಬಜೆಟ್‌ನಲ್ಲಿ ಸಮಾಜವಾದಿ ಹೋರಾಟಗಾರ ಶಾಂತವೇರಿ ಗೋಪಾಲಗೌಡರ ಅಧ್ಯಯನ ಪೀಠ ಹಾಗೂ ಹುಟ್ಟೂರಿನ ಅಭಿವೃದ್ಧಿಯನ್ನು ಕೈ ಬಿಟ್ಟಿದ್ದು ನಿಜಕ್ಕೂ ಮಲೆನಾಡಿನ ದುರಂತ.
•ನೆಂಪೆ ದೇವರಾಜ್ , ಚಿಂತಕರು
ಜೆಡಿಎಸ್ ಸರ್ವಾಧಿಕಾರ ಧೋರಣೆ ಅನುಸರಿಸಿದ್ದು ಬಿಜೆಪಿ, ಕಾಂಗ್ರೆಸ್‌ನ ಯಾವುದೇ ಯೋಜನೆಗಳನ್ನು ಮುಂದುವರಿಸಿಲ್ಲ. ಬಜೆಟ್ ಪ್ರತಿ ಕೊಡದೆ ಸಿಎಂ ಸಂಪ್ರದಾಯಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ನೀರಾವರಿ ಯೋಜನೆಗಳಿಗೆ 12 ಸಾವಿರ ಕೋಟಿ ಸಾಕಾಗುವುದಿಲ್ಲ. ಪ್ರಮುಖ ಯೋಜನೆಗಳ ಪ್ರಸ್ತಾವ ಇಲ್ಲ. ಕೈಗಾರಿಕೆಗಳಿಗೆ ಶೂನ್ಯ ಕೊಡುಗೆ ನೀಡಲಾಗಿದೆ. ಯಾರ ಸಲಹೆ ಪಡೆಯದೆ ತರಾತುರಿಯಲ್ಲಿ ಬಜೆಟ್ ಮಂಡಿಸಿದಂತಿದೆ.
• ಎಸ್. ರುದ್ರೇಗೌಡ, ಎಂಎಲ್ಸಿ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ
ರಾಜ್ಯ ಬಜೆಟ್ ಉತ್ತಮ ಅಂಶಗಳಿಂದ ಕೂಡಿದೆ. ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ಬೋಗಸ್ ಆಗಿದ್ದು ಜನಪರವಾಗಿರಲಿಲ್ಲ. ಆದರೆ ಮುಖ್ಯಮಂತ್ರಿಗಳು ಸರ್ವರನ್ನೂ ಒಳಗೊಂಡಂತೆ ಬಜೆಟ್ ಮಂಡಿಸಿದ್ದು ಇದು ಜನಪರವಾಗಿದೆ.
• ಬಿ.ಕೆ. ಸಂಗಮೇಶ್, ಶಾಸಕ
ಕೆರೆ ತುಂಬಿಸುವ, ಚೆಕ್ ಡ್ಯಾಂ, ಸಣ್ಣ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ಕೊಟ್ಟಿರುವುದು ಸ್ವಾಗತಾರ್ಹ. ದೊಡ್ಡ ಯೋಜನೆಗಳಿಗಿಂತ ಇದು ಉತ್ತಮ. ಸಾಲಮನ್ನಾ ಬಗ್ಗೆ ನಿಖರವಾಗಿ ತಿಳಿಸಿಲ್ಲ. ಟರ್ಮ್ ಲೋನ್ ಬಗ್ಗೆ ಪ್ರಸ್ತಾಪ ಮಾಡುವುದಾಗಿ ತಿಳಿಸಿದ್ದರೂ ಆದರೆ ಏನು ಮಾಡಿಲ್ಲ. ಬೆಂಬಲ ಬೆಲೆಗೆ ಖರೀದಿ ಖಾತ್ರಿ ಬೇಡಿಕೆ ಇತ್ತು ಅದರ ಬಗ್ಗೆಯೂ ಯಾವುದೇ ಸ್ಪಷ್ಟತೆ ಇಲ್ಲ.
• ಕೆ.ಟಿ. ಗಂಗಾಧರ್, ರೈತ ಮುಖಂಡ
ಶಿವಮೊಗ್ಗ ಜಿಲ್ಲೆಯ ಮಲೆನಾಡು ಪ್ರದೇಶವನ್ನು ಬೆನ್ನು ಬಿಡದೇ ಕಾಡುತ್ತಿರುವ ಮಂಗನ ಕಾಯಿಲೆ ಪತ್ತೆ ಹಚ್ಚಲು ಹಾಗೂ ಶಾಶ್ವತವಾಗಿ ಪರಿಹಾರ ಕಂಡು ಹಿಡಿಯುವ ಸಲುವಾಗಿ ಶಿವಮೊಗ್ಗ ಜಿಲ್ಲಾ ಆಸ್ಪತ್ರೆಯಲ್ಲಿ 5 ಕೋಟಿ ರೂ.ಗಳ ವೆಚ್ಚದಲ್ಲಿ ಮಂಗನ ಕಾಯಿಲೆಯ ಸಂಶೋಧನಾ ಮತ್ತು ಚಿಕಿತ್ಸಾ ಘಟಕ ಪ್ರಾರಂಭ, ಶಿವಮೊಗ್ಗ ಜಿಲ್ಲೆ ಹೊಳೆ ಹನಸವಾಡಿ ಗ್ರಾಮದ ಹತ್ತಿರ ತುಂಗಾ ನದಿಯಿಂದ ಏತ ನೀರಾವರಿ ಮೂಲಕ 8 ಕೆರೆಗಳಿಗೆ ನೀರು ತುಂಬಿಸಲು 13 ಕೋಟಿ ಪ್ರಮುಖ ಕೊಡುಗೆಗಳು. ಹೆಚ್ಚು ಅನುದಾನ ಬಿಡುಗಡೆ ಮಾಡುವ ಮೂಲಕ ಸಿಎಂ ಬಜೆಟ್‌ನಲ್ಲಿ ಪ್ರಬುದ್ಧತೆ ಮೆರೆದಿದ್ದಾರೆ.
•ಆರ್.ಎಂ.ಮಂಜುನಾಥ ಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್
Anandapura: ನಿಂತಿದ್ದ ಕಾರಿಗೆ ಇನ್ನೊಂದು ಕಾರು ಡಿಕ್ಕಿ ಹೊಡೆದು ಕಾರು ಪಲ್ಟಿ
Sagara: ವಿದ್ಯುತ್ ಟ್ರಾನ್ಸ್ ಫಾರ್ಮರ್‌ಗೆ ನೇಣು ಬಿಗಿದು ಯುವಕ ಆತ್ಮಹತ್ಯೆ
Sagara: ಮಿಡಿ ಮಾವು, ವಿಶ್ವವಿದ್ಯಾಲಯದ ನಡೆದಾಡುವ ವಿಶ್ವಕೋಶ ಬಿ.ವಿ.ಸುಬ್ಬರಾವ್ ಇನ್ನಿಲ್ಲ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Puttur: ಇದು ಅಜಿತರ ಸಾಹಸ : ರಬ್ಬರ್ ತೋಟದಲ್ಲಿ ಕಾಫಿ ಘಮ ಘಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.