ಅಡಿಕೆ ಆಮದು ವಿಚಾರದಲ್ಲಿ ಅಪಪ್ರಚಾರ: ಸಚಿವ ಆರಗ ಜ್ಞಾನೇಂದ್ರ
ರಾಜಕೀಯ ಲಾಭಕ್ಕಾಗಿ ವಿಪಕ್ಷಗಳಿಂದ ಸಲ್ಲದ ಆರೋಪ
Team Udayavani, Oct 3, 2022, 11:17 PM IST
ಹೊಸನಗರ: ಭೂತಾನ್‌ನಿಂದ ಹಸಿ ಅಡಿಕೆ ಆಮದು ವಿಚಾರವಾಗಿ ಆಗಿರುವ ಬಹುದೊಡ್ಡ ಅಪಪ್ರಚಾರದಿಂದ ಅಡಿಕೆ ಬೆಳೆಗಾರರು ಆತಂಕಗೊಂಡಿದ್ದಾರೆ ಎಂದು ಗೃಹ ಸಚಿವ, ಅಡಕೆ ಪ್ರಕೋಷ್ಠದ ಅಧ್ಯಕ್ಷ ಆರಗ ಜ್ಞಾನೇಂದ್ರ ಹೇಳಿದರು.
ತಾಲೂಕಿನ ನಗರ ಗುಜರಿಪೇಟೆ ಚೇತನ ಬಳಗದ 25ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಸುದ್ದಿ ಗಾರೊಂದಿಗೆ ಮಾತನಾಡಿದ ಅವರು, ಅಡಿಕೆ ಆಮದು ವಿಚಾರವಾಗಿ ಶೀಘ್ರದಲ್ಲೇ ಕೇಂದ್ರಕ್ಕೆ ನಿಯೋಗ ಹೋಗಲಿದೆ ಎಂದು ಭರವಸೆ ನೀಡಿದರು.
ಭೂತಾನ್ ವಿಚಾರದಲ್ಲಿ ಒಂದು ವಿಚಾರ ವನ್ನು ಗಮನಿಸಬೇಕಿದೆ. ನಮ್ಮಲ್ಲಿ ಪ್ರೊಸಸ್ ಆಗಿರುವ ಅಡಿಕೆ, ಒಣ ಅಡಿಕೆ ಮತ್ತು ಒಣ ಅಡಿಕೆಯ ಉತ್ಪನ್ನಗಳಾದ ಗುಟ್ಕಾ, ಪಾನ್ ಮಸಾಲ, ಸ್ವೀಟ್ ಸುಫಾರಿಗಳು ಭೂತಾನ್‌ಗೆ ಹೋಗುತ್ತಿವೆ. ಭೂತಾನ್‌ನಿಂದ ನಮಗೇನು ಬರುತ್ತಿದೆ. ಅದಕ್ಕಿಂತ ಹೆಚ್ಚು ಅಲ್ಲಿಗೆ ಹೋಗುತ್ತಿದೆ ಎಂದರು.
17 ಸಾವಿರ ಟನ್ ಅಡಕೆ ಆಮದಾಗುತ್ತಿದೆ ಎಂದು ಭಾರೀ ಪ್ರಚಾರ ಪಡೆದಿದೆ. ಆದರೆ ಅದು ಹಸಿ ಅಡಿಕೆ, ಆಮದಿನ ಷರತ್ತುಗಳನ್ನು ನೋಡಿದೆ. ಅದರ ಪ್ರಕಾರ ಇಲ್ಲಿಗೆ ಅಡಕೆಯನ್ನು ತರಲು ಸಾಧ್ಯವಾಗುವುದಿಲ್ಲ. ಸಮುದ್ರ ಮಾರ್ಗದಿಂದ ತರಬೇಕು. ಆದರೆ ಅಡಕೆ ದರಕ್ಕಿಂತ ಸಾರಿಗೆ ವೆಚ್ಚವೇ ದುಪ್ಪಟ್ಟಾಗುತ್ತದೆ. ಹಾಗಾಗಿ ಅಡಕೆ ಬಂದೇ ಬರುತ್ತೆ ಎಂದು ಹೇಳಲಾಗದು ಎಂದರು.
ಭೂತಾನ್ ದೇಶದ ಜತೆ ಭಾರತದ ಭಾರೀ ದೊಡ್ಡ ಬಾಂಧವ್ಯವಿದೆ. ಚೀನ ಪಕ್ಕದಲ್ಲಿರುವ ಭೂತಾನ್ ನಮ್ಮ ದೇಶದ ಆಯಕಟ್ಟಿನ ಜಾಗ. ನಮ್ಮ ಮಿಲಿಟರಿ ನೆಲೆ ಕೂಡ ಆಗಿದೆ. ನಮಗೆ ಎಲ್ಲ ರೀತಿಯಿಂದಲೂ ಸಹಕಾರ ನೀಡುವ ಪ್ರದೇಶ. ಹೀಗಾಗಿ ಭೂತನ್ ಅನ್ನು ಚೆನ್ನಾಗಿಟ್ಟುಕೊಳ್ಳಬೇಕಿದ್ದು ಈ ನಿಟ್ಟಿನಲ್ಲಿ ಭೂತಾನ್ ಸೇರಿ 5 ದೇಶಗಳ ಜತೆ ಕೆಲವು ವ್ಯಾಪಾರ ಒಪ್ಪಂದಗಳು ಆಗಿವೆ ಎಂದರು.
ಭಯ ಬೇಡ
ಈ ಬಗ್ಗೆ ದೊಡ್ಡಮಟ್ಟದ ಸುದ್ದಿಯಾದ ಕಾರಣ ರೈತರು ಆತಂಕಗೊಂಡಿದ್ದಾರೆ. ಆದರೆ ಭಯದ ಅಗತ್ಯವಿಲ್ಲ. ಅಡಿಕೆಗೆ ಭಾರತವೇ ಬಹುದೊಡ್ಡ ಮಾರುಕಟ್ಟೆ. 25 ವರ್ಷಗಳಿಂದ ಅಡಿಕೆ ಬೆಳೆ ಮೂರು ಪಟ್ಟು ಜಾಸ್ತಿಯಾಗಿದೆ. ಆದರೂ ಅಡಿಕೆಗೆ ಬೇಡಿಕೆ ಇದ್ದು ದರ ಹೆಚ್ಚಾಗುತ್ತಿದೆ ಎಂದರು.
ಕಾಂಗ್ರೆಸ್ ಅರೋಪ ವಿಪರ್ಯಾಸ
ಅಡಿಕೆ ಕೊಯ್ಲಿಗೆ ಬಂದ ಸಂದರ್ಭದಲ್ಲಿ ಒಂದಲ್ಲ ಒಂದು ಸುದ್ದಿ ಹಬ್ಬಿಸುವ ಕೆಲಸವನ್ನು ದಲ್ಲಾಳಿ ವ್ಯಾಪಾರಿಗಳು ಮಾಡುತ್ತಾರೆ. ಇದರ ಜತೆಗೆ ಕಾಂಗ್ರೆಸ್ ಕೂಡ ಆರೋಪ ಮಾಡುತ್ತಿದೆ. ಈ ಹಿಂದೆ ಅಡಕೆ ಹಾನಿಕಾರಕ ಎಂದು ಕೋರ್ಟ್‌ಗೆ ಅಫಿದವಿತ್ ನೀಡಿದೆ. ಅದನ್ನು ತೆಗೆಸುವ ವಿಶೇಷ ಪ್ರಯತ್ನವನ್ನು ನಾವೆಲ್ಲ ಮಾಡುತ್ತಿದ್ದೇವೆ. ಅದೇನಾದರೂ ಜಾರಿಯಾದಲ್ಲಿ ಅಡಕೆ ಬೆಳೆಯುವುದಿರಲಿ. ಗಿಡಗಳನ್ನು ನಾಶ ಮಾಡಬೇಕಾದ ಸ್ಥಿತಿ ಬರುತ್ತದೆ. ಕಾಂಗ್ರೆಸ್ ಸರಕಾರ ಅಡಿಕೆಗೆ ಮಾಡಿದ ಅನ್ಯಾಯವನ್ನು ಬೆಳೆಗಾರರು ಎಂದೂ ಮರೆಯಲು ಸಾಧ್ಯವಿಲ್ಲ. ಆದರೆ ಈಗ ಕಾಂಗ್ರೆಸ್ ಈ ವಿಚಾರ ಮುಂದಿಟ್ಟುಕೊಂಡು ಚುನಾವಣ ವರ್ಷವಾದ ಕಾರಣ ರಾಜಕೀಯ ಲಾಭ ಪಡೆಯಲು ಹವಣಿಸುತ್ತಿದೆ ಎಂದು ಆರೋಪಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.