ಲಾಕ್‌ಡೌನ್‌ನಲ್ಲೇ ಹೆಚ್ಚು ಬಾಲ್ಯ ವಿವಾಹ
Team Udayavani, Sep 23, 2020, 7:06 PM IST
ಸಾಂದರ್ಭಿಕ ಚಿತ್ರ
ಶಿವಮೊಗ್ಗ: ಲಾಕ್‌ಡೌನ್ ಅವ ಧಿಯಲ್ಲಿ ಇಡೀ ದೇಶವೇ ಸ್ತಬ್ಧವಾಗಿತ್ತು. ಆದರೆ, ಬಾಲ್ಯ ವಿವಾಹವೆಂಬ ಸಾಮಾಜಿಕ ಪಿಡುಗೊಂದು ಮತ್ತೆ ಆರ್ಭಟಿಸಿತ್ತು.
ಹೌದು, ಮಾರ್ಚ್‌ನಲ್ಲಿ ಜಾರಿಯಾದ ಲಾಕ್ ಡೌನ್‌ನಿಂದ ಈವರೆಗೆ ಜಿಲ್ಲೆಯಲ್ಲಿ ಅತಿ ಹೆಚ್ಚು ಬಾಲ್ಯ ವಿಹಾಹಗಳು ಬೆಳಕಿಗೆ ಬಂದಿರುವುದು ಆತಂಕಕಾರಿ ಬೆಳವಣಿಗೆಯಾಗಿಯಿದೆ. ಎಷ್ಟೇ ಜಾಗೃತಿ ಮೂಡಿಸಿದರೂ ಆರ್ಥಿಕ ಪರಿಸ್ಥಿತಿ, ಪ್ರೀತಿ-ಪ್ರೇಮ, ಅಕ್ರಮ ಸಂಬಂಧ ಇತರೆ ಕಾರಣಗಳಿಗೆ ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗುತ್ತಲೇ ಇವೆ.ಇಂತಹ ಅನೇಕ ಪ್ರಕರಣಗಳನ್ನು ಭೇದಿಸಲು ಸಾರ್ವಜನಿಕರು, ಕುಟುಂಬದ ಶತ್ರುಗಳು, ಊರಿನ ಹಿರಿಯ ಮುಖಂಡರು, ಪ್ರೇಮ ವೈಫಲ್ಯಗೊಂಡ ಯುವಕರು, ಆಶಾ ಕಾರ್ಯಕರ್ತೆಯರು ಸಹಕಾರಿಯಾಗಿರುವುದು ವಿಶೇಷ. ಲಾಕ್ ಡೌನ್ ಅವ ಧಿಯಲ್ಲಿ ಯಾವುದೇ ಮದುವೆ ಸಮಾರಂಭಗಳಿಗೆ ಪೊಲೀಸರ ಅನುಮತಿ ಪಡೆಯುವುದು ಕಡ್ಡಾಯವಾಗಿದ್ದರಿಂದ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ.
53 ಪ್ರಕರಣ ಭೇದಿಸಿದ ಪೊಲೀಸರು: ಮಾರ್ಚ್‌ನಿಂದ ಆಗಸ್ಟ್‌ವರೆಗೆ 9 ಬಾಲಕಿಯರ ಬಾಲ್ಯವಿವಾಹಗಳು ನಡೆದಿವೆ. 6 ಬಾಲಕರು ಹಾಗೂ 48 ಬಾಲಕಿಯರ ವಿವಾಹಗಳನ್ನು ತಡೆಯಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಯಶಸ್ವಿಯಾಗಿದ್ದಾರೆ. 2019-20ನೇ ಸಾಲಿನಲ್ಲಿ (ಫೆಬ್ರವರಿ ಕೊನೆವರೆಗೆ) ಇಬ್ಬರು ಬಾಲಕರು ಹಾಗೂ 46 ಬಾಲಕಿಯರ ವಿವಾಹಗಳನ್ನು ತಡೆಯಲಾಗಿದ್ದು, ಓರ್ವ ಬಾಲಕ ಹಾಗೂ 15 ಬಾಲಕಿಯರ ವಿವಾಹಗಳು ನಡೆದಿದ್ದು ಮಕ್ಕಳ ಪೋಷಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕಳೆದ ವರ್ಷ ಅಂಕಿ-ಅಂಶಕ್ಕೆ ಹೋಲಿಸಿದರೆ ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಭಾರೀ ಏರಿಕೆ ಕಂಡಿವೆ. ಜಿಲ್ಲೆಯಲ್ಲಿ ಈ ಅವಧಿಯಲ್ಲಿ ಪತ್ತೆಯಾಗಿರುವ ಪ್ರಕರಣಗಳಲ್ಲಿ ಶೇ.50ರಷ್ಟು ವಿವಾಹಗಳು ಆರ್ಥಿಕ ಸಂಕಷ್ಟದಿಂದ ನಡೆದಿದ್ದರೆ, ಬಾಕಿ ಪ್ರಕರಣಗಳು ಪ್ರೀತಿ, ಪ್ರೇಮ ಪ್ರಕರಣಗಳು, ಲೈಂಗಿಕ ದೌರ್ಜನ್ಯಕ್ಕೆ ಹೆದರಿ, ಯುವತಿ ಇತರೆ ಜಾತಿ, ಧರ್ಮದ ಯುವಕನ ಜತೆ ಪರಾರಿಯಾಗುವ ಆತಂಕದಿಂದ ವಿವಾಹಗಳು ನಡೆದಿವೆ ಅಥವಾ ನಡೆಯಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅವುಗಳನ್ನು ತಡೆಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಜಾಗೃತಿಯಿಂದ ಮಾಹಿತಿ ಬಹಿರಂಗ: ಜಿಲ್ಲೆಯಲ್ಲಿ ಪ್ರತಿ ಹಳ್ಳಿಗಳಲ್ಲೂ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದ್ದು ಇಲಾಖೆಯ 1098 ಸಹಾಯವಾಣಿಗೆ ಅನೇಕ ದೂರುಗಳು ಬಂದಿವೆ. ಆಶಾ ಕಾರ್ಯಕರ್ತೆಯರು ಮನೆ- ಮನೆ ಭೇಟಿ ಕೊಡುತ್ತಿರುವ ಕಾರಣ ಅವರಿಗೇ ಅನೇಕ ಮಂದಿ ಮಾಹಿತಿ ಕೊಟ್ಟ ಉದಾಹರಣೆಗಳು ಇವೆ. ಮದುವೆ ಛತ್ರದ ಮಾಲೀಕರಿಗೂ ಜಾಗೃತಿ ಮೂಡಿಸಲಾಗಿದ್ದು ಹುಡುಗ, ಹುಡುಗಿಯ ವಯಸ್ಸು ಪರಿಶೀಲಿಸಿ ಅನುಮತಿ ನೀಡುತ್ತಿದ್ದಾರೆ. ಈ ವೇಳೆಯೂ ಅನೇಕ ಮಾಹಿತಿ ಹೊರಬಿದ್ದಿವೆ. ಹೀಗೆ ಅನೇಕ ಮಾರ್ಗಗಳಿಂದ ಮಾಹಿತಿ ಪಡೆದು ಬಾಲ್ಯ ವಿವಾಹಕ್ಕೆ ಬ್ರೇಕ್ ಹಾಕಲಾಗಿದೆ.
ಟಿಕ್‌ಟಾಕ್ ಪ್ರೀತಿ, ಮದುವೆ : ಲಾಕ್‌ಡೌನ್ ಅವ ಧಿಯಲ್ಲಿ ನಡೆದ ಬಾಲ್ಯವಿವಾಹ ಇಲಾಖೆ ಗಮನ ಸೆಳೆದಿದೆ. ಟಿಕ್‌ಟಾಕ್ ಬಳಸುವ ಬಾಲಕಿ ಹಾಗೂ ಯುವಕನ ನಡುವೆ ಪರಿಚಯವಾಗಿದ್ದು, ಪ್ರೇಮಾಂಕುರವಾಗಿದೆ. ಈ ವಿಷಯ ತಿಳಿದ ಹುಡುಗಿ ಮನೆಯವರು ಅದೇ ಹುಡುಗನ ಜತೆ ಮದುವೆಗೆ ನಿರ್ಧಾರ ಮಾಡಿದ್ದಾರೆ. ಈ ವಿಚಾರ ಅ ಧಿಕಾರಿಗಳಿಗೆ ತಿಳಿದು ಮನೆ ಬಳಿ ತಲುಪಿದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಹಾಗೂ ಮದುವೆ ಎಲ್ಲಿ ನಡೆದಿತ್ತು ಎಂಬುದು ತಿಳಿಯದಾಗಿತ್ತು. ಮಾರನೇ ದಿನ ಆ ಬಾಲಕಿ ಹಾಗೂ ಯುವಕನನ್ನು ವಿಚಾರಣೆ ನಡೆಸಿದಾಗ ಮದುವೆ ವಿಷಯ ಹುಡುಗನ ಮನೆಯವರಿಗೇ ತಿಳಿದಿರಲಿಲ್ಲ. ಬಳಿಕ ಯುವಕನನ್ನು ಬಂಧಿ ಸಿ, ಯುವತಿಯ ಕೌನ್ಸೆಲಿಂಗ್ ಮಾಡಿ ಪೋಷಕರ ಜವಾಬ್ದಾರಿ ಮೇರೆಗೆ ಮನೆಗೆ ಕಳುಹಿಸಲಾಗಿದೆ.
ಮಾಹಿತಿ ಸಿಕ್ಕ ಕೂಡಲೇ ತಡ ಮಾಡದೆ ಬಾಲ್ಯ ವಿವಾಹ ತಡೆಯಲು ಕ್ರಮ ಕೈಗೊಂಡಿದ್ದೇವೆ. ಮದುವೆ ಆದವರ ಮೇಲೆ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಮನೆಯವರಿಂದ ತೊಂದರೆ ಇದ್ದರೆ ಅಂತಹ ಮಕ್ಕಳಿಗೆ ಬಾಲ ಮಂದಿರದಲ್ಲಿ ಕೌನ್ಸೆಲಿಂಗ್ ಮಾಡಲಾಗುತ್ತಿದೆ. ಹುಡುಗಿ ಬೇರೆಯವರನ್ನು ಲವ್ ಮಾಡುವ ಭಯ, ಸಂಬಂಧದಲ್ಲೇ ಮದುವೆ ಮಾಡಿಕೊಡುವ ಉದ್ದೇಶದಿಂದ ಬಹುತೇಕ ವಿವಾಹಗಳು ನಡೆಯುತ್ತಿವೆ. -ಜಿ.ಜಿ.ಸುರೇಶ್, ಉಪ ನಿರ್ದೇಶಕರು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
-ಶರತ್ ಭದ್ರಾವತಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.