ನಾವು ಭದ್ರಾವತಿ ಕಬ್ಬಿಣದಂತೆ.. ನಮ್ಮನೇನೂ ಮಾಡಲಾಗದು
ನೋಡ್ತಾ ಇರಿ.. ನಮಗೆ ಅನ್ಯಾಯ ಮಾಡಿದವರ ಮನೆ ಹಾಳಾಗುತ್ತೆ !ಶಾಸಕ ಬಿ.ಕೆ. ಸಂಗಮೇಶ್ವರ ವಾಗ್ಧಾಳಿ
Team Udayavani, Mar 14, 2021, 6:11 PM IST
ಶಿವಮೊಗ್ಗ: ನನ್ನ, ನನ್ನ ಕುಟುಂಬ ಹಾಗೂ ನಮ್ಮ ಕಾರ್ಯಕರ್ತರ ಮೇಲೆ ಸುಳ್ಳು ಕೇಸು ಹಾಕಿಸಿ ರಾಜಕೀಯವಾಗಿ ಮುಗಿಸಲು ಬಿಜೆಪಿಯವರು ಯತ್ನಿಸಿದ್ದಾರೆ ಎಂದು ಶಾಸಕ ಬಿ.ಕೆ. ಸಂಗಮೇಶ್ವರ್ ಹೇಳಿದರು.
ನಗರದಲ್ಲಿ ಜಿಲ್ಲಾ ಕಾಂಗ್ರೆಸ್‌ನಿಂದ ಆಯೋಜಿಸಿದ್ದ ಜನಾಕ್ರೋಶ ಹಾಗೂ ಶಿವಮೊಗ್ಗ ಚಲೋ ಸಮಾವೇಶದಲ್ಲಿ ಅವರು ಮಾತನಾಡಿದರು. ಬಿಜೆಪಿಯ ಕುತಂತ್ರ ರಾಜಕಾರಣಕ್ಕೆ ಇದೇ ಸಾಕ್ಷಿ. 2011ರಲ್ಲಿ ನನ್ನನ್ನು ಬಿಜೆಪಿಗೆ ಕರೆದಿದ್ದರು. ಆದರೆ ನಾನು ಹೋಗಿರಲಿಲ್ಲ. ಆಗ ನಮ್ಮ ಮನೆಗೆ ಪೊಲೀಸರನ್ನು ಕಳುಹಿಸಿ ನಮ್ಮ ಮೇಲೆ ಹಲ್ಲೆ ನಡೆಸಿ ಜೈಲಿಗೆ ಕಳುಹಿಸಿದ್ದರು. ಭದ್ರಾವತಿಯಲ್ಲಿ ಬಿಜೆಪಿಗೆ ನೆಲೆಯಿಲ್ಲ. ಹಾಗಾಗಿ ಕುತಂತ್ರದ ರಾಜಕಾರಣ ಮಾಡಿ ಭದ್ರಾವತಿಯಲ್ಲಿ ಗೆಲ್ಲಲು ಹೊರಟಿದ್ದಾರೆ. ಅದು ಸಾಧ್ಯವಿಲ್ಲ. ನಾವು ಭದ್ರಾವತಿಯ ಕಬ್ಬಿಣದಂತೆ. ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಶಾಸಕ ಬಿ.ಕೆ. ಸಂಗಮೇಶ್ವರ್ ಹೇಳಿದರು.
ಮಾಡೋದೆಲ್ಲ ಅನಾಚಾರ ಮನೆ ಮುಂದೆ ಬೃಂದಾವನ ಎಂಬ ಕೆಲಸವನ್ನು ಯಡಿಯೂರಪ್ಪ ಹಾಗೂ ಈಶ್ವರಪ್ಪ ಮಾಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕದೆ ಜನ ಅವರ ಅಧಿ ಕಾರದ ದುರ್ಬಳಕೆಗೆ ತಕ್ಕ ಪಾಠ ಕಲಿಸಬೇಕು. ಶಿವಮೊಗ್ಗದಲ್ಲಿ ಯಡಿಯೂರಪ್ಪ, ಈಶ್ವರಪ್ಪ ಹಾಗೂ ರಾಘವೇಂದ್ರ ಹೇಳಿದ್ದನ್ನು ಕೇಳಲೇಬೇಕಿದೆ. ಕತ್ತೆಗೆ ಎಂಟು ಕಾಲಿದೆ ಎಂದರೂ ಒಪ್ಪಬೇಕು. ಇಲ್ಲ ನಾಲ್ಕು ಕಾಲು ಎಂದರೆ ಕೇಸು ಹಾಕಿಸುತ್ತಾರೆ ಎಂದು ಲೇವಡಿ ಮಾಡಿದರು.
ಯಾವುದೇ ರಾಜಕಾರಣಿಗಳು ಧರ್ಮವನ್ನು ಒಡೆಯುವ ಕೆಲಸ ಮಾಡಬಾರದು. ನಾವೂ ಹಿಂದುಗಳೇ. ನಾವೇನು ಪಾಕಿಸ್ತಾನದಿಂದ ಬಂದವರಲ್ಲ. ನನ್ನ ಹೆಸರು ಸಂಗಮೇಶ್ವರ್. ಶಿವನ ಹೆಸರನ್ನು ಇಟ್ಟುಕೊಂಡಿದ್ದೇನೆ. ನನಗೆ ಅನ್ಯಾಯ ಮಾಡಿದವರ ಮನೆ ಹಾಳಾಗುತ್ತದೆ. ಇನ್ನು ಮೂರು ತಿಂಗಳು ಕಾಯಿರಿ. ಅವರ ಮನೆಯ ಸ್ಥಿತಿ ಏನಾಗುತ್ತದೆ ಎಂದು ನೋಡಿ ಎಂದು ಯಡಿಯೂರಪ್ಪ ಕುಟುಂಬಕ್ಕೆ ಶಾಪ ಹಾಕಿದರು.
ಲಜ್ಜೆ ಬೇಡವೇ: ಭಾರತೀಯ ದಂಡ ಸಂಹಿತೆಯಲ್ಲಿ ಸೆಕ್ಷನ್ 307 ಎಂದರೆ ತೀವ್ರತರವಾದ ಹೊಡೆತ ಬಿದ್ದರೆ ಈ ಸೆಕ್ಷನ್ ಹಾಕುತ್ತಾರೆ. ಆಡಳಿತ ನಡೆಸುವವರಿಗೆ ಲಜ್ಜೆ ಬೇಡವೇ? ಅ ಧಿಕಾರ ಇದೆ ಎಂದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ ಅನ್ನು ಹೇಗೆ ಬೇಕೋ ಹಾಗೆ ಹಾಕಬಹುದೇ ಎಂದು ಮಾಜಿ ಸಭಾಪತಿ ರಮೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮ ತೆರಿಗೆ ಹಣದಲ್ಲಿ ಪೊಲೀಸರಿಗೆ ಸಂಬಳ ನೀಡುತ್ತೇವೆ. ನೀವು ಬಿಜೆಪಿ ಪೊಲೀಸರಲ್ಲ ನೆನಪಿರಲಿ. ಶ್ರೀರಾಮ ರಾಜ. ಆತ ಮರ್ಯಾದಾ ಪುರುಷ. ಆದರೆ ಬಿಜೆಪಿಯವರ ರಾಮ “ಸಿಡಿ ರಾಮ’. ಆ ಸಿಡಿ ಅಸಲಿನೋ ನಕಲಿನೋ ಅದು ನಮಗೆ ಸಂಬಂಧವಿಲ್ಲ. ಶ್ರೀರಾಮ ಜನಾಭಿಪ್ರಾಯಕ್ಕೆ ಬೆಲೆ ಕೊಟ್ಟು ಹೆಂಡತಿಯನ್ನೇ ಕಾಡಿಗೆ ಕಳುಹಿಸಿದ್ದ. ಆದರೆ ಶ್ರೀರಾಮನ ಹೆಸರು ಹೇಳುವ ಬಿಜೆಪಿಯವರು ಬಾಂಬೆಗೆ ಹೋಗುತ್ತಾರೆ. ಬಿಜೆಪಿಯವರು ಬಾಂಬೆ ರಾಮಂದಿರು. ಬಿಜೆಪಿಯವರು ಬಾಂಬೆಗೆ ಹೋಗಿ ಭಗವದ್ಗೀತೆ ಓದುತ್ತಾರೆಯೇ ಎಂದು ಪ್ರಶ್ನಿಸಿದ ಅವರು, ಸಿಡಿ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐಟಿಗೆ ಎಫ್‌ಐಆರ್ ದಾಖಲಿಸುವ ಅಧಿ ಕಾರ ಇಲ್ಲ ಎಂದರು.
ನಾವು ಬದುಕಿದ್ದಾಗಲೇ ನರೇಂದ್ರ ಮೋದಿ ಪ್ರಧಾನಿಯಾಗಿದ್ದು ನಮ್ಮ ಸೌಭಾಗ್ಯ ಎಂದು ವ್ಯಂಗ್ಯವಾಡಿದ ರಮೇಶ್ ಕುಮಾರ್, ಕೊರೊನಾ ಬಂದಾಗ ಪ್ರಧಾನಿ ಚಪ್ಪಾಳೆ ತಟ್ಟಿ, ದೀಪಹಚ್ಚಿ ಎನ್ನುತ್ತಾರೆ. ಇದು ದೇಶದ ಆರ್ಥಿಕ ಸ್ಥಿತಿ ತೋರುತ್ತದೆ. ಶ್ಯಾಮ್ ಪ್ರಸಾದ್ ಮುಖರ್ಜಿ, ದೀನದಯಾಳ್ ಉಪಾಧ್ಯಾಯ, ವಾಜಪೇಯಿ ಹೆಸರಿನಲ್ಲಿ ಇದೀಗ ಅಧಿ ಕಾರ ಮಾಡುತ್ತಿರುವುದೇನು. ಧರ್ಮದ ಹೆಸರಿನಲ್ಲಿ, ಹಿಂಸೆಯ ಹೆಸರಿನಲ್ಲಿ ಎಷ್ಟು ದಿನ ಅಧಿ ಕಾರ ನಡೆಸಲು ಸಾಧ್ಯ. ಅಚ್ಚೇ ದಿನ್ ಅಚ್ಚೇ ದಿನ್ ಎನ್ನುತ್ತೀರಾ. ಯಾವಾಗ ಅಚ್ಚೇ ದಿನ್ ಬರುತ್ತದೆ. ಪೆಟ್ರೋಲ್ ಬೆಲೆ 100 , ಗ್ಯಾಸ್ ಬೆಲೆ 850 ಆಗಿದೆ. ದಿನಕ್ಕೊಂದರಂತೆ ಬಾಂಬೆಯಿಂದ ಸಿಡಿ ಬರುತ್ತಿವೆ. ಇದೇ ಅಚ್ಚೇ ದಿನವೇ ಎಂದು ಪ್ರಶ್ನಿಸಿದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಮಾತನಾಡಿ, ಕೈಯಲ್ಲಾಗದವರು ಮೈ ಪರಚಿಕೊಂಡರು ಎಂಬಂತಾಗಿದೆ ಬಿಜೆಪಿ ಸ್ಥಿತಿ. ಬಿಜೆಪಿಯವರಿಗೆ ಹುಚ್ಚು ಹಿಡಿದಿದೆ. ಹಾಗಾಗಿ ಶಾಸಕ ಸಂಗಮೇಶ್ವರ್ ಮೇಲೆ ಕೇಸು ಹಾಕಿಸಿದ್ದಾರೆ. ಎಸ್‌ಪಿ ಬಿಜೆಪಿ ಪೊಲೀಸ್ ವರಿಷ್ಠಾ ಧಿಕಾರಿಯಲ್ಲ ಬದಲಿಗೆ ಸರ್ಕಾರಿ ಅಧಿ ಕಾರಿ ಎಂಬುದನ್ನು ಅರಿಯಬೇಕು ಎಂದರು.
ಶ್ರೀರಾಮ ಬಿಜೆಪಿಯವರಿಗೆ ಮಾತ್ರ ಹುಟ್ಟಿಲ್ಲ : ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್‌ಗೆ ಅನ್ಯಾಯವಾಗಿದೆ. ಹೀಗಾಗಿ ನಾವು ಹೋರಾಟ ನಡೆಸಿ ಅವರ ಹಿಂದೆ ನಿಲ್ಲಬೇಕು. ಶ್ರೀರಾಮ ಬಿಜೆಪಿಯವರಿಗಾಗಿ ಮಾತ್ರ ಹುಟ್ಟಿಲ್ಲ. ಶ್ರೀರಾಮ ಶಾಂತಿ, ನ್ಯಾಯ, ಧರ್ಮದ ಸಂಕೇತ. ಬಿಜೆಪಿಯವರು ಶ್ರೀರಾಮನ ಹೆಸರು ಹೇಳಿಕೊಂಡು ಅನ್ಯಾಯ, ಅಧರ್ಮ ಮಾಡುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಜಿ. ಪರಮೇಶ್ವರ್ ವಾಗ್ಧಾಳಿ ನಡೆಸಿದರು.
ಕೆಲ ವರ್ಷದ ಹಿಂದೆ ಬಿಜೆಪಿಯವರು ರಾಮನ ಹೆಸರು ಹೇಳಿ ಇಟ್ಟಿಗೆ ಹೊತ್ತು ಓಡಾಡಿದ್ದರು. ಈಗ ಆ ಇಟ್ಟಿಗೆಗಳು ಎಲ್ಲಿವೆ ಎಂದರೆ ಬಿಜೆಪಿಯವರ ಬಳಿ ಉತ್ತರವಿಲ್ಲ. ಇದೀಗ ರಾಮಮಂದಿರ ನಿರ್ಮಾಣ ಮಾಡಲು 2200 ಕೋಟಿ ಹಣ ಸಂಗ್ರಹವಾಗಿದೆ ಎಂದು ಬಿಜೆಪಿಯವರು ಹೇಳುತ್ತಾರೆ. ಆದರೆ ಈ ಹಿಂದೆ ರಾಮನ ಹೆಸರಿನಲ್ಲಿ ಸಂಗ್ರಹಿಸಿದ ಹಣ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.
ಯಡಿಯೂರಪ್ಪ ಅವರು ಯಾವ ಪುರುಷಾರ್ಥಕ್ಕೆ ಸಿಎಂ ಆಗಿದ್ದೀರಿ? ನಮ್ಮ 15 ಜನ ಶಾಸಕರನ್ನು ಆಮಿಷವೊಡ್ಡಿ ಕರೆದುಕೊಂಡು ಹೋಗಿ ಏನೇನೋ ರೆಕಾರ್ಡ್ ಮಾಡಿದ್ದಾರಂತೆ. ಬಿಜೆಪಿಯವರು ಮಾಡಿರುವ ರೆಕಾಡಿಂìಗ್‌ಗಳು ಈಗ ಒಂದೊಂದಾಗಿ ಹೊರಬರುತ್ತಿವೆ ಎಂದರು.
ಪ್ರತಿ ದಿನ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಬಿಜೆಪಿಯವರ ಪ್ರತಿಕ್ರಿಯೆ ಏನು. ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಜಾಸ್ತಿಯಾಗುತ್ತಿದೆ. ಮೊದಲು ಜನರಿಗೆ ನ್ಯಾಯ ಒದಗಿಸಿ. ರೈತರು ಮೂರು ತಿಂಗಳಿನಿಂದ ದೆಹಲಿ ಗಡಿಯಲ್ಲಿ ಕುಳಿತಿದ್ದಾರೆ. ಕೇಂದ್ರ ಸರ್ಕಾರಕ್ಕೆ ರೈತರ ಬಗ್ಗೆ ಸ್ವಲ್ಪವೂ ಕನಿಕರ ಇಲ್ಲವೇ ಎಂದು ಪ್ರಶ್ನಿಸಿದರು.
ಮಾಜಿ ಸಚಿವ ಯು.ಟಿ. ಖಾದರ್ ಮಾತನಾಡಿ, ಕರುಣೆ ಹಾಗೂ ಮಾನವೀಯತೆ ಇಲ್ಲದ ಸರ್ಕಾರ ಎಂದರೆ ಅದು ರಾಜ್ಯದ ಬಿಜೆಪಿ ಸರ್ಕಾರ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನಜೀವನಕ್ಕೆ ಮಾರಕವಾಗಿದ್ದು, ಈ ಸರ್ಕಾರಗಳನ್ನು ಕಿತ್ತುಹಾಕಬೇಕಿದೆ. ದೇಶದಲ್ಲಿ ಯಾರೂ ಕೋಮವಾದಿಗಳಾಗಬಾರದು. ಬದಲಿಗೆ ಜಾತ್ಯಾತೀತರಾಗಿ. ಅಲ್ಪಸಂಖ್ಯಾತರು ಕೋಮುವಾದಿಗಳಾದರೆ ಅದು ಅವರಿಗೇ ನಷ್ಟ. ಬಹುಸಂಖ್ಯಾತರು ಕೋಮುವಾದಿಗಳಾದರೆ ಅದು ದೇಶಕ್ಕೆ ನಷ್ಟ. ಅಲ್ಪಸಂಖ್ಯಾತರಿರಲಿ, ಬಹುಸಂಖ್ಯಾತರಿರಲಿ ಯಾರೂ ಕೋಮುವಾದಿಗಳಾಗಬಾರದು ಎಂದರು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ
ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಓರ್ವ ಶಾಸಕ ಸಂಗಮೇಶ್ವರ್ ಮಾತ್ರ ಇದ್ದಾರೆ. ಸಂಗಮೇಶ್ವರ್ ಅವರನ್ನು ತುಳಿಯಲು ಬಿಜೆಪಿ ಹೊರಟಿದೆ. ಶಿವಮೊಗ್ಗ ಜಿಲ್ಲೆ ಹೋರಾಟದ ಜಿಲ್ಲೆ. ಇಲ್ಲಿ ಹೋರಾಟಕ್ಕೆ ಮತ್ತೆ ಇದೀಗ ಕಾಲ-ಸಂದರ್ಭ ಕೂಡಿಬಂದಿದೆ. ಬಿಜೆಪಿ ನೇತೃತ್ವದ ಸರ್ಕಾರವನ್ನು ಕಿತ್ತು ಹಾಕಲೇಬೇಕಿದೆ. ಇದಕ್ಕಾಗಿ ಹೋರಾಟ ಮಾಡಲೇಬೇಕು. ಬಿಜೆಪಿಯನ್ನು ಶಿವಮೊಗ್ಗದಿಂದ ಹಾಗೂ ರಾಜ್ಯದಿಂದಲೇ ಕಿತ್ತು ಹಾಕೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಮಾಜಿ ಸಚಿವ ಕೃಷ್ಣ ಭೈರೇಗೌಡ, ವಿನಯ್‌ಕುಮಾರ್ ಸೊರಕೆ, ಕಾರ್ಯಾಧ್ಯಕ್ಷ ಧ್ರುವನಾರಾಯಣ್, ಕೆ.ಬಿ. ಪ್ರಸನ್ನಕುಮಾರ್, ರಾಜೇಗೌಡ ಮಾತನಾಡಿದರು. ಕಿಮ್ಮನೆ ರತ್ನಾಕರ್, ಶಾಂತನ ಗೌಡ್ರು, ಲಕ್ಷ್ಮೀ ಹೆಬ್ಟಾಳ್‌ಕರ್, ಈಶ್ವರ್ ಖಂಡ್ರೆ, ಜಾರ್ಜ್ ಫರ್ನಾಂಡಿಸ್, ಟಿ. ರಘುಮೂರ್ತಿ, ಬಿ.ಎನ್. ಚಂದ್ರಪ್ಪ, ಪ್ರತಾಪ್‌ಚಂದ್ರ ಶೆಟ್ಟಿ, ಸಲೀಂ ಅಹಮ್ಮದ್, ಭೀಮಾ ನಾಯ್ಕ, ಎನ್.ಎ. ಹ್ಯಾರಿಸ್, ಡಿ. ಬಸವರಾಜ್, ರಾಮಲಿಂಗಾ ರೆಡ್ಡಿ ಸೇರಿದಂತೆ ಅನೇಕ ಶಾಸಕರು, ಮಾಜಿ ಶಾಸಕರು, ಎಂಎಲ್‌ಸಿಗಳು, 18 ಘಟಕಗಳ ಅಧ್ಯಕ್ಷರು, ಜಿಪಂ, ತಾಪಂ ಅಧ್ಯಕ್ಷರು, ಅನೇಕ ಮುಖಂಡರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 153: ವೈಯಕ್ತಿಕ ಅಭಿಪ್ರಾಯ ಬೇರೆ, ಕರ್ತವ್ಯ ಬೇರೆ
BBK11: ಮಾನಸಿಕವಾಗಿ ತುಂಬಾ ಕುಗ್ಗಿ ಹೋಗಿದ್ದೇನೆ.. ಕಿಚ್ಚನ ಮುಂದೆ ಕಣ್ಣೀರಿಟ್ಟ ಭವ್ಯ
JDS: 2028ಕ್ಕೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂಬುದು ಭ್ರಮೆ: ಜಿ.ಟಿ.ದೇವೇಗೌಡ ಟಾಂಗ್
Chandan Shetty: ಕಾಟನ್ ಕ್ಯಾಂಡಿ ಹಾಡು; ಚಂದನ್‌ಶೆಟ್ಟಿ ವಿರುದ್ಧ ಕೃತಿಚೌರ್ಯ ದೂರು
Delhi Polls: ಮಾಜಿ ಸಿಎಂ ಪುತ್ರ ಸೇರಿ 29 ಅಭ್ಯರ್ಥಿಗಳ ಬಿಜೆಪಿಯ 2ನೇ ಪಟ್ಟಿ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.