ತುಂಗಾ ನದಿಯಲ್ಲಿ ಮೀನುಗಳ ಸಾವು
Team Udayavani, Apr 26, 2019, 6:02 AM IST
ಶಿವಮೊಗ್ಗ: ಸಮೀಪದ ಸಂಸ್ಕೃತ ಗ್ರಾಮ ಎಂದೇ ಖ್ಯಾತಿ ಪಡೆದಿರುವ ಮತ್ತೂರು ಹಾಗೂ ಹೊಸಹಳ್ಳಿಯ ತುಂಗಾ ನದಿಯಲ್ಲಿ ನಿತ್ಯ ನೂರಾರು ಮೀನುಗಳು ಸಾಯುತ್ತಿದ್ದು, ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ತುಂಗಾ ಪಾತ್ರದ ಮತ್ಸ್ಯಧಾಮದಲ್ಲಿ ಏ.20ರಿಂದ ಮೀನುಗಳ ಸಾವಿನ ಸಂಖ್ಯೆ ಹೆಚ್ಚಿದ್ದು, ಇದುವರೆಗೆ ಸಾವಿರಾರು ಜಲಚರಗಳು ಜೀವ ಕಳೆದುಕೊಂಡಿವೆ. ಹರಿಯುವ ನೀರಿನಲ್ಲಿ ಹಸಿರು ಪಾಚಿ ಕಾಣಿಸಿಕೊಂಡ ಮರುದಿನದಿಂದಲೇ ಮೀನುಗಳ ಕಳೇಬರ ಸಿಗಲಾರಂಭಿಸಿದೆ. ದೊಡ್ಡ ಮೀನುಗಳು ದಡದಲ್ಲಿ ಸತ್ತು ಬಿದ್ದು ನಾಲ್ಕು ದಿನಗಳಿಂದ ಹದ್ದುಗಳಿಗೆ ಆಹಾರವಾಗುತ್ತಿವೆ. ಹದ್ದುಮೀನು, ಸುರಗಿ, ಕೊಳಸ, ರೋಹು, ಕುಚ್ಚು, ಗೌರಿ, ಔಲು, ಕಾಟ್ಲಾ, ಗೆಂಡೆ, ಮಹಶಿರ, ಮುರಗೋಡು ಸೇರಿ ಹೊಳೆಯಲ್ಲಿ 25-30 ಬಗೆಯ ಮೀನುಗಳಿದ್ದು, ಇವುಗಳ ಜೀವಕ್ಕೆ ಕುತ್ತು ಬಂದಿದೆ.
ಮೀನುಗಳನ್ನು ಹಿಡಿಯುವುದಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಅಡಕೆ ಬೆಳೆಗೆ ಬಳಸುವ ರಾಸಾಯನಿಕ ಪದಾರ್ಥವಾದ ಮೈಲುತುತ್ತವನ್ನು ನದಿಯಲ್ಲಿ ಮಿಶ್ರಣ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ. ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಚೇರಿಯಲ್ಲಿರುವ ಜಿಲ್ಲಾ ಸಾಂಕ್ರಾಮಿಕ ರೋಗಗಳ ಕಣ್ಗಾವಲು ಘಟಕಕ್ಕೆ ಪರೀಕ್ಷೆಗಾಗಿ ನೀರಿನ ಮಾದರಿಯನ್ನು ಕಳುಹಿಸಿಕೊಡಲಾಗಿದೆ ಎಂದು ಶಿವಮೊಗ್ಗದ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಎಸ್.ರಾಘವೇಂದ್ರ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.