ಮಸಾಜ್ ಸೆಂಟರ್‌ಗಳಿಂದ ಕಾನೂನು ಉಲ್ಲಂಘನೆ!
Team Udayavani, Jun 11, 2017, 3:45 AM IST
ಶಿವಮೊಗ್ಗ: ದೇಹಕ್ಕೆ ತೀರಾ ಶ್ರಮವಾದಾಗ ಮಾಡುವ ಅಭ್ಯಂಜನದ ಇನ್ನೊಂದು ರೂಪವಾಗಿ ಇತ್ತೀಚಿನ ವರ್ಷಗಳಲ್ಲಿ ಬೆಳೆದು ಬಂದ ಬ್ಯಾಂಕಾಕ್ ಮಾದರಿಯ ಅಂಗಮರ್ಧನ ಅಥವಾ ಮಸಾಜ್ ಸೆಂಟರ್ ಎಲ್ಲ ಕಾನೂನುಗಳನ್ನು ಮೀರಿ ಬೆಳೆಯುತ್ತಿದ್ದು, ರಾಜ್ಯಾದ್ಯಂತ ಇಂತಹ ಕೇಂದ್ರಗಳು ಪಾರ್ಥೇನಿಯಂನಂತೆ ಹಬ್ಬುತ್ತಿದೆ. ಆದರೆ ಕಾನೂನು ಉಲ್ಲಂಘಿಸಿ ನಡೆಯುವ ಈ ಕೇಂದ್ರಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ.
ಆಯುರ್ವೇದ ಪರಂಪರೆಯಲ್ಲಿ ಈ ರೀತಿಯ ಅಂಗಮರ್ಧನಕ್ಕೆ ವಿಶೇಷ ಹೆಸರುಂಟು. ಈಗಲೂ ಅನೇಕ ಆಯುರ್ವೇದ ಚಿಕಿತ್ಸಾ ಕೇಂದ್ರಗಳಲ್ಲಿ ಈ ರೀತಿಯ ಮಸಾಜ್ ಸೆಂಟರ್‌ಗಳು ಇವೆ. ಇವೆಲ್ಲವೂ ಆಯುರ್ವೇದ ಶಾಸ್ತ್ರದಲ್ಲಿ ಹೇಳಿದಂತೆ ಚಿಕಿತ್ಸಾ ರೂಪದಲ್ಲಿ ನಡೆಯುವ ಚಿಕಿತ್ಸೆಗಳು. ಆದರೆ ಇತ್ತೀಚಿನ ವರ್ಷಗಳಲ್ಲಿ ಇದು ಮಾರಾಟದ ಸರಕಾಗಿದ್ದು, ಮಸಾಜ್ ಎಂಬುದು “ತೃಪ್ತಿ’ ಒದಗಿಸುವ ಕೇಂದ್ರಗಳಾಗಿಯೂ ಬದಲಾಗುತ್ತಿದೆ ಎಂಬುದು ಕೇಳಿ ಬರುತ್ತಿರುವ ಆರೋಪ.
ಕಾನೂನಿನ ಎಲ್ಲ ನಿಯಮಗಳನ್ನು ಉಲ್ಲಂಘಿಸಿ ಇದು ನಡೆಯುತ್ತಿದ್ದರೂ, ಇದರ ತಂಟೆಗೆ ಯಾವ ಅಧಿಕಾರಿಗಳೂ ಹೋಗುತ್ತಿಲ್ಲ ಎನ್ನುವುದೇ ಇದರಲ್ಲಿನ ವಿಶೇಷ.
ಮೂಲದ ಪ್ರಕಾರ ರಾಜ್ಯದಲ್ಲಿ ಸುಮಾರು 500 ಸೆಂಟರ್‌ಗಳು ನಡೆಯುತ್ತಿದ್ದು, ಇದರಲ್ಲಿ ಶೇ. 90ರಷ್ಟು ಯಾವುದೇ ಪರವಾನಗಿ ಇಲ್ಲದೆ ನಡೆಯುತ್ತಿವೆ. ಇವುಗಳಲ್ಲಿ ಬಹುತೇಕ ಸೆಂಟರ್‌ಗಳು ಇರುವುದು ಬೆಂಗಳೂರಿನಲ್ಲಿ. ಮೊದಮೊದಲು ನಿಜಾರ್ಥದಲ್ಲಿ ಮಸಾಜ್ ಕೇಂದ್ರಗಳನ್ನು ನಡೆಸಲಾಗುತ್ತಿದ್ದು, ನಿಧಾನವಾಗಿ ಕೆಲವರು ಇದನ್ನು ಬೇರೆಯದೇ ಉದ್ದೇಶದಿಂದ ಸ್ಥಾಪಿಸಿದ್ದಾರೆ ಎಂಬ ದೂರುಗಳು ಕೇಳಿ ಬಂದವು. ಇಂತಹ ಕೇಂದ್ರಗಳಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ದೂರಿನ ಮೇರೆಗೆ ಸಿಸಿಬಿ ಮತ್ತು ಇತರೆ ಸಂಸ್ಥೆಗಳು ಬೆಂಗಳೂರು ಮತ್ತು ನೆರೆಯ ರಾಮನಗರ, ಮಂಡ್ಯ ಮೊದಲಾದ ನಗರಗಳಲ್ಲಿ ಕೂಡ ದಾಳಿ ನಡೆಸಿದವು. ಹೀಗಾಗಿ ಈ ಕೇಂದ್ರಗಳು ಅಲ್ಲಿಂದ ದೂರದ ಪ್ರವಾಸಿ ಕೇಂದ್ರಗಳಿಗೆ ತೆರಳಿವೆ. ಪ್ರಮುಖ ಸ್ಟಾರ್ ಹೋಟೆಲ್‌ಗಳಲ್ಲಿ ಕೂಡ ಈ “ಸೇವೆ’ ವ್ಯಾಪಕವಾಗಿದೆ.
ಇದರ ಜತೆಗೆ ಕೂದಲು ಕಸಿ, ಬೊಜ್ಜು ಕರಗಿಸುವುದು, ಸೂಜಿ ಚಿಕಿತ್ಸೆಗಳು ಕೂಡ ನಡೆಯುತ್ತಿವೆ. ನಾನಾ ಬಗೆಯ ರಾಸಾಯನಿಕಗಳ ಬಳಕೆ ಇಲ್ಲಿ ಹೇರಳವಾಗಿ ಮಾಡಲಾಗುತ್ತಿದೆ. ಲೇಸರ್ ಚಿಕಿತ್ಸೆ ನೀಡುವಂತಹ ಸೇವೆ ಕೂಡ ನಡೆಸಲಾಗುತ್ತಿದೆ. ಇವೆಲ್ಲವೂ ಮನುಷ್ಯ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಲ್ಲವಾಗಿವೆ. ಇಂತಹ ಸೇವೆ ನೀಡುವ ಕೇಂದ್ರಗಳಲ್ಲಿ ಯಾವುದೇ ವೈದ್ಯರು ಇರುವುದಿಲ್ಲ. ಆದರೂ ಯಾವುದೇ ಅಧಿಕಾರಿಗಳು ಈ ಬಗ್ಗೆ ಗಮನವನ್ನೇ ಹರಿಸುತ್ತಿಲ್ಲ.
ಸುತ್ತೋಲೆಗೆ ಬೆಲೆ ಇಲ್ಲ: ರಾಜ್ಯದಲ್ಲಿ ಈ ರೀತಿ ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿರುವ ಮಸಾಜ್ ಪಾರ್ಲರ್‌ಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿ ಕ್ರಮ ಕೈಗೊಳ್ಳುವ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಈ ತೀರ್ಮಾನ ಜಾರಿಯಾದ ಕುರಿತು ವರದಿ ನೀಡುವಂತೆ 2017 ರ ಜ.10ರಂದು ಎರಡನೇ ಬಾರಿಗೆ ಸುತ್ತೋಲೆ ಹೊರಡಿಸಲಾಗಿದೆ. ಆದರೆ ಇದುವರೆಗೆ ಕ್ರಮ ಕೈಗೊಂಡ ಕುರಿತು ವರದಿ ಸಲ್ಲಿಸಿರುವ ಕುರಿತು ಮಾಹಿತಿಯೇ ಇಲ್ಲ ಎಂದು ಮೂಲಗಳು ಹೇಳುತ್ತದೆ.
ಹೊಸ ಮಸಾಜ್, ಹೇರ್ ಕ್ಲಿನಿಕ್‌ಗಳು ಸರ್ಕಾರದ ಮಾರ್ಗದರ್ಶಿ ನಿಯಮದ ಪ್ರಕಾರ ಕೆಪಿಎಂಇ ಕಾಯ್ದೆಯಡಿ ಕಡ್ಡಾಯವಾಗಿ ನೋಂದಣಿ ಆಗಬೇಕು. ಅದೇ ರೀತಿ ಈಗಾಗಲೇ ಸ್ಥಾಪನೆಯಾಗಿರುವ ಕೇಂದ್ರಗಳಲ್ಲಿ ನೀಡಲಾಗುತ್ತಿರುವ ಸೇವೆಯ ಗುಣಮಟ್ಟ ಮತ್ತು ಸೌಲಭ್ಯದ ಕುರಿತು ಪರಿಶೀಲಿಸಲಾಗುವುದು. ಈ ಹಂತದಲ್ಲಿ ಏನಾದರೂ ಲೋಪದೋಷ ಕಂಡುಬಂದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
– ಡಾ.ಎಂ.ಲೋಕೇಶ್, ಡಿಸಿ, ಶಿವಮೊಗ್ಗ.
– ಗೋಪಾಲ್ ಯಡಗೆರೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.