ಬಾಲ್ಯ ವಿವಾಹ ತಡೆ ಕಾನೂನು ಅರಿವು ಮೂಡಿಸಿ: ನ್ಯಾ| ಮಹಾಂತಪ್ಪ
Team Udayavani, Oct 20, 2021, 6:23 PM IST
ಸಾಗರ: ಪ್ರತಿಯೊಬ್ಬರಿಗೂ ದೈನಂದಿನ ಬದುಕಿನಲ್ಲಿ ಕಾನೂನಿನ ತಿಳುವಳಿಕೆ ಅತ್ಯಗತ್ಯ. ಬಾಲ್ಯ ವಿವಾಹ ತಡೆಗೆ ಕಾನೂನು ಜಾರಿಯಲ್ಲಿದ್ದು ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದು ಜಿಲ್ಲಾ ಐದನೇ ಹೆಚ್ಚುವರಿ ಸತ್ರ ನ್ಯಾಯಾ ಧೀಶರಾದ ಮಹಾಂತಪ್ಪ ಎ.ಡಿ. ತಿಳಿಸಿದರು.
ಇಲ್ಲಿನ ತಾಪಂ ಸಾಮರ್ಥ್ಯ ಸೌಧದಲ್ಲಿ ತಾಪಂ, ವಕೀಲರ ಸಂಘ ಮತ್ತು ಕಾನೂನು ಸೇವಾ ಸಮಿತಿ ವತಿಯಿಂದ 75ನೇ “ಆಜಾದಿ ಕೀ ಅಮೃತ ಮಹೋತ್ಸವ’ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು ಮತ್ತು ಬಾಲ್ಯ ವಿವಾಹ ತಡೆ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. ಇಂದಿಗೂ ಗ್ರಾಮಾಂತರ ಪ್ರದೇಶದ ಜನರಲ್ಲಿ ಕಾನೂನಿನ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲವಾಗಿದೆ. ಮೌಡ್ಯತೆಯಿಂದ ಬಾಲ್ಯವಿವಾಹದಂತಹ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಮಹಿಳೆಯರು, ಮಕ್ಕಳು, ಹಿಂದುಳಿದ ವರ್ಗಗಳ ರಕ್ಷಣೆಗೆ ಕಾನೂನಿನಲ್ಲಿ ಸಾಕಷ್ಟು ಅವಕಾಶವಿದ್ದು, ಅದರ ಬಗ್ಗೆ ಮಾಹಿತಿ ತಲುಪಿಸುವ ಕೆಲಸವಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಧಾನ ಸಿವಿಲ್ ನ್ಯಾಯಾಧಿಧೀಶರಾದ ರಹೀಂ ಆಲಿ ಎಂ. ನದಾಫ್, ಸಮಾಜವನ್ನು ಕಟ್ಟುವ ಮಹತ್ತರವಾದ ಜವಾಬ್ದಾರಿ ಯುವಜನರು ಮತ್ತು ಸರ್ಕಾರಿ ನೌಕರರ ಮೇಲೆ ಇದೆ. ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಸಂವಿಧಾನದಲ್ಲಿ ಸಾಮಾಜಿಕ ಭದ್ರತೆಗೆ ಸಂಬಂ ಸಿದಂತೆ ಸಾಕಷ್ಟು ಕಾನೂನುಗಳಿದ್ದು, ಅದರ ಅನುಷ್ಠಾನಕ್ಕೆ ಹೆಚ್ಚಿನ ಕಾಳಜಿ ಅಗತ್ಯ ಎಂದರು.
ಸಹಾಯಕ ಆಯುಕ್ತ ಡಾ| ನಾಗರಾಜ್ ಎಲ್., ತಾಪಂ ಇಒ ಪುಷ್ಪಾ ಎಂ. ಕಮ್ಮಾರ್, ವಕೀಲರ ಸಂಘದ ಅಧ್ಯಕ್ಷ ರವೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ರಮೇಶ್ ಮರಸ, ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ, ಕ್ಷೇತ್ರ ಶಿಕ್ಷಣಾಧಿ ಕಾರಿ ಬಿಂಬ ಕೆ.ಆರ್., ನಗರಸಭೆ ಆಯುಕ್ತ ರಾಜು ಡಿ. ಬಣಕಾರ್, ಸಹಾಯಕ ನಿರ್ದೇಶಕ ಬಾಲಸುಬ್ರಹ್ಮಣ್ಯ, ನಿತ್ಯಾನಂದ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.