ಮಂಗನಕಾಯಿಲೆಗೆ ಮತ್ತಿಬ್ಬರು ಬಲಿ
Team Udayavani, Jan 6, 2019, 1:25 AM IST
ಸಾಗರ: ಮಾರಣಾಂತಿಕ ಮಂಗನ ಕಾಯಿಲೆಗೆ ಮತ್ತಿಬ್ಬರು ಬಲಿಯಾಗಿದ್ದಾರೆ. ಅಲ್ಲದೆ ತಾಲೂಕಿನ ಕೆಲವೆಡೆ ಮಂಗಗಳ ಸಾವೂ ಸಹ ಮುಂದುವರಿದಿದ್ದು, ಕಾಡುಗಳಲ್ಲಿ ಮಂಗನ ಮೃತದೇಹಗಳು ಪತ್ತೆಯಾಗುತ್ತಲೇ ಇವೆ.
ನಾಲ್ಕು ದಿನಗಳ ಹಿಂದೆ ಮಗ ಮಂಜುನಾಥ್‌ನನ್ನು ಕಳೆದುಕೊಂಡಿದ್ದ ಜ್ವರದಿಂದ ಬಳಲಿ ಮಂಗನಕಾಯಿಲೆಗೆ ತುತ್ತಾಗಿದ್ದ ಅರಳಗೋಡು ಗ್ರಾಪಂ ವ್ಯಾಪ್ತಿಯ ಭಾರಂಗಿ ಹೋಬಳಿಯ ಕಂಚಿಕೈ ಗ್ರಾಮದ ರಾಮವ್ವ (56) ಶುಕ್ರವಾರ ರಾತ್ರಿ ಹಾಗೂ ಜೀಗಳದ ಶ್ವೇತಾ ಜೈನ್ (17) ಶನಿವಾರ ಮೃತಪಟ್ಟಿದ್ದಾರೆ.
ರಾಮವ್ವರ ಪುತ್ರ ಮಂಜುನಾಥ್ ಕಳೆದ ನಾಲ್ಕು ದಿನದ ಹಿಂದೆ ಇದೇ ಕಾಯಿಲೆಯಿಂದ ಮೃತಪಟ್ಟಿದ್ದರು. ಮಂಗಳವಾರ ಮಗ ಸತ್ತ ದಿನವೇ ರಾಮವ್ವ ತೀವ್ರ ಜ್ವರದಿಂದ ಬಳಲುತ್ತಿದ್ದರು. ಸಾಗರದ ಉಪ ವಿಭಾಗೀಯ ಆಸ್ಪತ್ರೆಯಲ್ಲಿನ ಚಿಕಿತ್ಸೆಗೆ ಸ್ಪಂದಿಸದ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ.
ತೀವ್ರ ಜ್ವರಕ್ಕೆ ತುತ್ತಾಗಿ ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜೀಗಳದ ದೇವರಾಜ್- ಲತಾ ಅವರ ಪುತ್ರಿ ಶ್ವೇತಾ ಜೈನ್ ಶನಿವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ. ಸಾಗರದಲ್ಲಿ ಓದುತ್ತಿದ್ದ ಶ್ವೇತಾ ರಜೆಯ ಹಿನ್ನೆಲೆಯಲ್ಲಿ ವಾರದ ಹಿಂದೆ ಮನೆಗೆ ತೆರಳಿದ್ದಳು. ಇದರಿಂದ ಸಾಗರ ತಾಲೂಕಿನಲ್ಲಿ ಮಂಗನ ಕಾಯಿಲೆಗೆ ಒಟ್ಟು ಏಳು ಮಂದಿ ಮೃತಪಟ್ಟಂತಾಗಿದೆ. ಈ ಮಧ್ಯೆ ತಾಲೂಕಿನ ಕೆಲವೆಡೆ ಶನಿವಾರವೂ ಮೃತ ಮಂಗಗಳು ಪತ್ತೆಯಾಗಿವೆ.
ಭಾನುಳಿ ಗ್ರಾಪಂ ವ್ಯಾಪ್ತಿಯ ಕೊಂಚವಳ್ಳಿ ಗಣಪಗಾರುವಿನಲ್ಲಿ ಮಂಗವೊಂದು ಮೃತಪಟ್ಟ ಮಾಹಿತಿ ಪಡೆದ ಅರಣ್ಯ ಹಾಗೂ ಪಶು ಸಂಗೋಪನಾ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಕಾರ್ಗಲ್‌ನಲ್ಲಿ ಇನ್ನೊಂದು ಮೃತ ಮಂಗ ಪತ್ತೆಯಾಗಿದೆ.
ಮಂಗನ ಕಾಯಿಲೆ ಸಂಬಂಧ ಕೆಎಫ್‌ಡಿ ಶಿವಮೊಗ್ಗ ವಿಭಾಗದ ಉಪ ನಿರ್ದೇಶಕ ಡಾ.ರವಿಕುಮಾರ್ ಉದಯವಾಣಿಯೊಂದಿಗೆ ಮಾತನಾಡಿ, ಈವರೆಗೆ 18 ಪ್ರಕರಣಗಳು ಖಚಿತಪಟ್ಟಿವೆ. ಅದರಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಉಳಿದ 15 ಜನ ಈಗಾಗಲೇ ಗುಣಮುಖರಾಗಿದ್ದಾರೆ. ಇನ್ನೂ 20 ರೋಗಿಗಳ ರಕ್ತ ಪರೀಕ್ಷೆ ವರದಿ ಇನ್ನಷ್ಟೇ ಬರಬೇಕಿದೆ. ಈ ಮಾಹಿತಿಯನ್ನು ಆದಷ್ಟು ಕ್ಷಿಪ್ರವಾಗಿ ಪಡೆಯುವ ಪ್ರಯತ್ನ ನಡೆಸಿದ್ದು, ಇಂದೇ ಲಭ್ಯವಾಗುವ ಸಾಧ್ಯತೆಯಿದೆ ಎಂದರು.
ಪ್ರಸ್ತುತ ಮೆಗ್ಗಾನ್‌ನಲ್ಲಿ ಮೂವರು ಮತ್ತು ಸಾಗರದಲ್ಲಿ ನಾಲ್ವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮಣಿಪಾಲ್ ಅಥವಾ ಇನ್ನಾವುದೇ ಬೇರೆ ಆಸ್ಪತ್ರೆಗೆ ಶಂಕಿತ ಕೆಎಫ್‌ಡಿ ರೋಗಿಗಳು ಚಿಕಿತ್ಸೆಗೆ ತೆರಳಿರುವ ಕುರಿತು ನಮಗೆ ಮಾಹಿತಿಯಿಲ್ಲ ಎಂದರು.
ಸ್ಥಳೀಯ ಜನರ ಮಾಹಿತಿಯ ಪ್ರಕಾರ 12 ಜನರನ್ನು ಜ್ವರದ ಹಿನ್ನೆಲೆಯಲ್ಲಿ ಮಣಿಪಾಲದ ಆಸ್ಪತ್ರೆಗೆ ಸೇರಿಸಲಾಗಿದೆ. ಶನಿವಾರ ಅರಳಗೋಡಿನಲ್ಲಿ ಒಂದು ಜ್ವರದ ಪ್ರಕರಣ ಕಾಣಿಸಿಕೊಂಡಿದೆ. ಆ ಭಾಗದ ಬಹುತೇಕ ಜನ ಜೀವಭಯಕ್ಕೊಳಗಾಗಿದ್ದು ಪರ ಊರುಗಳಿಗೆ ತೆರಳಿದ್ದಾರೆ.ಶನಿವಾರ ಶಾಸಕ ಹಾಲಪ್ಪ ಅರಳಗೋಡಿಗೆ ಭೇಟಿ ನೀಡಿ ಸ್ಥಳ ಸಮೀಕ್ಷೆ ನಡೆಸಿದರು. ಸಾಗರದಲ್ಲೂ ತಾಯಿ ಮಗು ಆಸ್ಪತ್ರೆಯಲ್ಲಿ ಆರೋಗ್ಯ ಕಾರ್ಯದರ್ಶಿ, ಜಿಪಂ ಸಿಇಒ ಹಾಗೂ ಇತರ ಅ ಧಿಕಾರಿಗಳ ಜೊತೆ ಸಭೆ ನಡೆಸಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ಲಸಿಕೆ ಇಲ್ಲ!
ಕೆಎಫ್‌ಡಿ ಪ್ರತಿಬಂಧಕ ಚುಚ್ಚುಮದ್ದು ಅಗತ್ಯವಿದ್ದಷ್ಟು ಲಭ್ಯವಿದೆ ಎಂಬ ಮಾಹಿತಿಯನ್ನು ಕ್ಯಾಸನೂರು ಅರಣ್ಯ ರೋಗದ ವಿಭಾಗ ಹೇಳುತ್ತಿದೆಯಾದರೂ ಸಾಗರದ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಲಸಿಕೆ ಕೇಳಿಕೊಂಡು ಬಂದವರನ್ನು ಬರಿಗೈಯಲ್ಲಿ ವಾಪಸ್ ಕಳಿಸಲಾಗುತ್ತಿದೆ. ಈ ಆಸ್ಪತ್ರೆಯಲ್ಲಿ ಲಸಿಕೆ ಕೊಡುವುದಿಲ್ಲ, ಬೇಕಾದವರೂ ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ತೆಗೆದುಕೊಳ್ಳಬೇಕು ಎಂದು ತಿಳಿಸುತ್ತಿರುವ ಕುರಿತು ಹಲವರು ಆಕ್ಷೇಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.