ರಾಜ್ಯಕ್ಕೆ ಸದೃಢವಾದ ಸಾಂಸ್ಕೃತಿಕ ನೀತಿ: ನಾ.ಮೊಗಸಾಲೆ ಪ್ರತಿಪಾದನೆ
Team Udayavani, Mar 13, 2022, 5:46 PM IST
ಸಾಗರ: ರಾಜ್ಯಕ್ಕೆ ಒಂದು ಸದೃಢವಾದ ಸಾಂಸ್ಕೃತಿಕ ನೀತಿಯ ಅಗತ್ಯವಿದೆ. ಇದರಿಂದ ಸಾಹಿತ್ಯ ಮತ್ತು ಸಾಂಸ್ಕೃತಿಕ ನೆಲಗಟ್ಟಿನಲ್ಲಿ ಕೆಲಸ ಮಾಡುತ್ತಿರುವವರ ಪ್ರತಿಭೆಗೆ ಪ್ರೋತ್ಸಾಹ ಸಿಗುತ್ತದೆ ಎಂದು ಡಾ. ನಾ.ಮೊಗಸಾಲೆ ಪ್ರತಿಪಾದಿಸಿದರು.
ಇಲ್ಲಿನ ಮಲೆನಾಡು ಸಿರಿ ಸಭಾಂಗಣದಲ್ಲಿ ಸೋಮವಾರ ಪರಸ್ಪರ ಸಾಹಿತ್ಯ ವೇದಿಕೆ ವತಿಯಿಂದ ಕೊಡಮಾಡುವ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ
ಸಂತ ಶಿಶುನಾಳ ಪ್ರಶಸ್ತಿ ಪುರಸ್ಕೃತರಾಗಿ ಮಾತನಾಡಿದ ಅವರು, ಬೇರೆಬೇರೆಯವರ ಹೆಸರಿನಲ್ಲಿ ರಾಜ್ಯ ಸರ್ಕಾರ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಸ್ಥಾಪಿಸಿದೆ. ಆದರೆ ಅಲ್ಲಮಪ್ರಭು, ಸಂತ ಶಿಶುನಾಳ ಶರೀಫರ ಹೆಸರಿನಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಿಲ್ಲ. ಎಲ್ಲೋ ಒಂದು ಕಡೆ ನಮ್ಮ ಸರ್ಕಾರಗಳು ಇವರಿಬ್ಬರನ್ನೂ ಮರೆತು ಬಿಟ್ಟಿವೆ ಎನಿಸುತ್ತಿದೆ ಎಂದರು.
ಪ್ರಶಸ್ತಿ ಪುರಸ್ಕೃತರ ಕುರಿತಾಗಿ ಮಾಡಿದ ಹಿರಿಯ ಸಾಹಿತಿ ಡಾ. ಜಿ.ಎಸ್.ಭಟ್, ಡಾ. ಮೊಗಸಾಲೆ ಅವರು ಆರ್ಯುವೇದ ವೈದ್ಯರಾಗಿ ಕಾಂತಾವರ ಕನ್ನಡ ಸಂಘವನ್ನು ಸ್ಥಾಪಿಸಿ ಇಪ್ಪತ್ತಕ್ಕೂ ಹೆಚ್ಚಿನ ಕಾದಂಬರಿ, ಕವನ ಸಂಕಲನ ಬರೆದಿದ್ದಾರೆ. ಇದರ ಜೊತೆಗೆ ಕಥಾ ಸಂಗ್ರಹ, ವೈದ್ಯಕೀಯ ಸಾಹಿತ್ಯ ಕೃತಿ ಹೀಗೆ ಸಾಹಿತ್ಯದ ಬೇರೆಬೇರೆ ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ. ರೆ.ಎಫ್ ಕಿಟೆಲ್ ಪ್ರಶಸ್ತಿ ಪಡೆದಿರುವ ವಿ. ಗಣಪತಿ ನಾಯಕ ಅವರು ಪ್ರೌಢಶಾಲೆಯಲ್ಲಿ ಅಧ್ಯಾಪನಾ ವೃತ್ತಿ ನಡೆಸುವ ಜೊತೆಗೆ ಕಾವ್ಯ, ವಿಮರ್ಶೆ, ಚಿಂತನ, ಅಂಕಣ ಬರಹ, ಜಾನಪದ ಸಂಗ್ರಹ, ಸಂಶೋಧನೆ, ಜನಾಂಗಿಕ ಅಧ್ಯಯನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅಕ್ಕಮಹಾದೇವಿ ಪ್ರಶಸ್ತಿಗೆ ಭಾಜನರಾಗಿರುವ ರುದ್ರಮ್ಮ ಅವರ ಕುರಿತ ಅಕ್ಷರರೂಪದ ಯಾವುದೇ ದಾಖಲೆಗಳು ಇಲ್ಲ. ಆದರೆ ರುದ್ರಮ್ಮ ಅವರು ವೀರಶೈವ ಜನಾಂಗಕ್ಕೆ ಸೇರಿದವರಾಗಿದ್ದರೂ, ಪರಿಶಿಷ್ಟ ಜನಾಂಗದ ಮೂವರು ಮಕ್ಕಳನ್ನು ದತ್ತು ತೆಗೆದುಕೊಂಡು ತಮ್ಮ ಆಸ್ತಿಯನ್ನು ಅವರ ಹೆಸರಿಗೆ ಬರೆದು ಕೊಡುವ ಮೂಲಕ ಶ್ರೇಷ್ಟತೆಯನ್ನು ಮೆರೆದಿದ್ದಾರೆ ಎಂದರು.
ರುದ್ರಮ್ಮ ಪರವಾಗಿ ಉಪನ್ಯಾಸಕ ನರಸಿಂಹಮೂರ್ತಿ ಪ್ರಶಸ್ತಿ ಸ್ವೀಕರಿಸಿದರು. ವೇದಿಕೆಯಲ್ಲಿ ಹಿರಿಯ ಸಾಹಿತಿ ಡಾ. ನಾ.ಡಿಸೋಜಾ ಉಪಸ್ಥಿತರಿದ್ದರು. ವೇದಿಕೆ ಅಧ್ಯಕ್ಷ ಡಾ. ಸಫ್ರಾರ್ಜ್ ಚಂದ್ರಗುತ್ತಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣಪತಿ ಎಂ.ಎಸ್. ವಂದಿಸಿದರು. ದತ್ತಾತ್ರೇಯ ಬೊಂಗಾಳೆ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಕನ್ನಡ ಭಾಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.