ಈಗ ಮಂತ್ರಿಯಾಗುವ ಬಗ್ಗೆ ಆಸೆಯನ್ನೇ ಬಿಟ್ಟಿದ್ದೇನೆ: ಕೆ.ಎಸ್ ಈಶ್ವರಪ್ಪ
Team Udayavani, Jan 20, 2023, 4:35 PM IST
ಶಿವಮೊಗ್ಗ: ನಾನು ಸಚಿವ ಸ್ಥಾನದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಮಂತ್ರಿಯಾದರೆ ಆಯಿತು ಇಲ್ಲದಿದ್ದರೆ ಇಲ್ಲ. ನನ್ನನ್ನು ಮಂತ್ರಿ ಮಾಡಬೇಕು ಎಂಬ ಆಸೆ ವ್ಯಕ್ತಪಡಿಸಿದ್ದೆ. ಮುಖ್ಯಮಂತ್ರಿಗಳಿಗೂ ಈ ಬಗ್ಗೆ ತಿಳಿಸಿದ್ದೇನೆ. ಮಂತ್ರಿ ಮಾಡುವ ಬಗ್ಗೆ ಏನು ಸಮಸ್ಯೆ ಇದೆಯೋ ಗೊತ್ತಿಲ್ಲ. ಈಗ ಮಂತ್ರಿಯಾಡುವ ಬಗ್ಗೆ ಆಸೆಯನ್ನೇ ಬಿಟ್ಟಿದ್ದೇನೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
ರಾಜ್ಯ ಮತ್ತು ಕೇಂದ್ರದ ನಾಯಕರಿಗೆ ಇನ್ನೊಂದು ಸಮಸ್ಯೆ ಉಂಟು ಮಾಡಲು ನಾನು ಇಷ್ಟ ಪಡುವುದಿಲ್ಲ. ನನಗೆ ಕಳಂಕ ಇದ್ದಿದ್ದು ನಿಜ ಅದು ತನಿಖೆ ನಂತರ ಉಳಿದಿಲ್ಲ. ಸರ್ಕಾರದಲ್ಲಿ ಮಂತ್ರಿ ಆಗಲೇಬೇಕು ಎಂದು ನಾನೇ ಇನ್ನೊಂದು ಸಮಸ್ಯೆ ಉಂಟು ಮಾಡಲು ಹೋಗಲ್ಲ. ಅಧಿಕಾರ ನಡೆಸುವಾಗ ಏನೇನು ಸಮಸ್ಯೆ ಇರುವುದೋ ಗೊತ್ತಿಲ್ಲ ಎಂದರು.
ತಾಂಡಗಳಿಗೆ ಪತ್ರ ನೀಡಿದ ವಿಚಾರಕ್ಕೆ ಸಿದ್ದರಾಮಯ್ಯ ಆಕ್ಷೇಪಕ್ಕೆ ತಿರುಗೇಟು ನೀಡಿದ ಈಶ್ವರಪ್ಪ, ಅವರು ಅಡಿಗೆ ಮಾಡಿದ ಮೇಲೆ ಯಾಕೆ ಬಡಿಸಲಿಲ್ಲ. ಅದು ಈಗ ಹಳಸಿ ಹೋಗಿದೆ. ಯಾವುದೇ ಸರ್ಕಾರ ಮಾಡಿದ್ದನ್ನು ಸ್ವಾಗತ ಮಾಡಬೇಕು. ಕಂದಾಯ ಸಚಿವ ಆರ್ ಅಶೋಕ್ ಅವರು ಲಂಬಾಣೆ ತಾಂಡಗಳನ್ನು ಕಂದಾಯ ಗ್ರಾಮಗಳೆಂದು ಗುರುತಿಸಿದ್ದಾರೆ. ಈಗ ಈ ಕಾರ್ಯ ಗಿನ್ನಿಸ್ ದಾಖಲೆಯ ಸ್ಥಾನ ಪಡೆಯುತ್ತಿದೆ. ಇದು ಕಾಂಗ್ರೆಸ್ ಮಾಡಿದ್ದೋ ಬಿಜೆಪಿ ಮಾಡಿದ್ದೋ ಎಂಬುದರ ಬಗ್ಗೆ ಜನ ತೀರ್ಮಾನ ಮಾಡುತ್ತಾರೆ ಎಂದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಕೃಷ್ಣನಿಗಿಂತ ಹೆಚ್ಚಿನ ಚಾಣಾಕ್ಷತೆಯನ್ನು ನಮ್ಮ ನಾಯಕರು ತೋರಿಸುತ್ತಾರೆ. ಅನೇಕ ರಾಜ್ಯಗಳಲ್ಲಿ ಹೊಸ ಹೊಸ ಮುಖಗಳಿಗೆ ಅವಕಾಶ ಕೊಟ್ಟಿದ್ದಾರೆ. ಅನೇಕ ತಂತ್ರಗಳ ಮೂಲಕ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ. ನನಗಿಂತ ಹೆಚ್ಚು ಅನುಭವ ಉಳ್ಳವರು ಬುದ್ದಿವಂತರು ತಂತ್ರಗಾರಿಕೆ ಬಲ್ಲವರು ಇರಬಹುದು. ಇನ್ಮುಂದೆ ಇಡೀ ದೇಶದ ನಾಯಕರು ಕರ್ನಾಟಕದಲ್ಲಿ ಇರುತ್ತಾರೆ. ಕರ್ನಾಟಕ ಎಂದು ಅಲ್ಲ ಚುನಾವಣೆ ಸಂದರ್ಭದಲ್ಲಿ ಸಂಘಟನೆ ಕಟ್ಟಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತದೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.