ರೈತ ನಾಯಕ ಟಿಕಾಯತ್ ಮೇಲಿನ ಹಲ್ಲೆಗೆ ಖಂಡನೆ
ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ: ಜಯಂತ್
Team Udayavani, Jun 1, 2022, 5:01 PM IST
ಸಾಗರ: ಬೆಂಗಳೂರಿನ ಗಾಂಧಿ ಭವನದಲ್ಲಿ ರಾಷ್ಟ್ರೀಯ ರೈತ ನಾಯಕ ರಾಕೇಶ್ ಟಿಕಾಯತ್ ಮೇಲೆ ಮಸಿ ಎರಚಿ, ಹಲ್ಲೆ ನಡೆಸಿದ ಕೃತ್ಯವನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್. ಜಯಂತ್ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ರೈತವಿರೋಧಿ ಕೃಷಿ ಕಾಯ್ದೆಯನ್ನು ಹಿಂದಕ್ಕೆ ಪಡೆಯುವಲ್ಲಿ ನಡೆದ ಹೋರಾಟದಲ್ಲಿ ರಾಕೇಶ್ ಟಿಕಾಯತ್ ಪ್ರಮುಖ ಪಾತ್ರ ವಹಿಸಿದ್ದರು. ಪತ್ರಿಕಾ ಸಂದರ್ಶನ ಸಂದರ್ಭದಲ್ಲಿ ಪತ್ರಕರ್ತರ ಸೋಗಿನಲ್ಲಿ ಬಂದು ಟಿಕಾಯತ್ ಮೇಲೆ ಹಲ್ಲೆ ನಡೆಸಿ, ಮಸಿ ಎರಚಿದ ಘಟನೆ ರೈತರಿಗೆ ಮತ್ತು ರಾಜ್ಯದ ಜನರಿಗೆ ಮಾಡಿದ ಅವಮಾನವಾಗಿದೆ ಎಂದು ಹೇಳಿದರು.
ಇಂತಹ ಘಟನೆಗಳು ರಾಜ್ಯದಲ್ಲಿ ಅಸುರಕ್ಷತೆಗೆ ಸಾಕ್ಷಿಯಾಗಿದೆ. ಮಸಿ ಬಳಿಯುವುದು, ಹಲ್ಲೆಯಂತಹ ಕೃತ್ಯ ನಡೆಯುತ್ತಾ ಹೋದರೆ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗುವ ಸಾಧ್ಯತೆ ಇದೆ. ಘಟನೆಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ಸೂಕ್ತ ತನಿಖೆ ನಡೆಸಬೇಕು. ಯಾವುದೇ ಒತ್ತಡಕ್ಕೆ ಮಣಿಯದೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವ ಮೂಲಕ ರಾಜ್ಯ ಸರ್ಕಾರ ಜನರ ವಿಶ್ವಾಸ ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಇತ್ತೀಚಿನ ದಿನಗಳಲ್ಲಿ ಸಾಗರದಲ್ಲಿ ಹಲ್ಲೆಯಂತಹ ಕೃತ್ಯ ಜಾಸ್ತಿಯಾಗುತ್ತಿದೆ. ಹಲ್ಲೆ ನಡೆಸುವವರು ಯಾವುದೇ ಪಕ್ಷದವರಾಗಿದ್ದರೂ ಅಂತಹವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಕಟ್ಟುನಿಟ್ಟಾಗಿ ತನಿಖೆ ನಡೆಸುವ ಸಂದರ್ಭದಲ್ಲಿ ರಾಜಕೀಯ ವ್ಯಕ್ತಿಗಳು ಪೊಲೀಸ್ ಕಾರ್ಯವೈಖರಿಯಲ್ಲಿ ಹಸ್ತಕ್ಷೇಪ ಮಾಡಬಾರದು. ಎರಡು ಗುಂಪುಗಳ ನಡುವೆ ಪದೇ ಪದೇ ಹಲ್ಲೆಯಂತಹ ಘಟನೆಗಳು ನಡೆಯುತ್ತಿರುವುದರಿಂದ ಕ್ಷೇತ್ರದ ಶಾಸಕ ಹಾಲಪ್ಪ ಹರತಾಳು ಎರಡೂ ಗುಂಪುಗಳ ನಡುವೆ ರಾಜಿ ಮಾಡಿಸಿ ಮುಂದೆ ದೊಡ್ಡಮಟ್ಟದ ಅವಘಡ ನಡೆಯದಂತೆ ಗಮನ ಹರಿಸಬೇಕು. ಹಲ್ಲೆಗೂ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರಿಗೂ ಯಾವುದೇ ಸಂಬಂಧವಿಲ್ಲ. ಘಟನೆಗೆ ಕಾರಣವಾದವರ ವಿರುದ್ಧ ಸೂಕ್ತ ತನಿಖೆ ನಡೆಸಿ ಎಂದು ಬೇಳೂರು ಡಿವೈಎಸ್‌ಪಿ ಕಚೇರಿಗೆ ಮನವಿ ಸಲ್ಲಿಸಿದ್ದಾರೆ ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ರತ್ನಾಕರ ಹೊನಗೋಡು ಮಾತನಾಡಿ, ಸಾಗರದಲ್ಲಿ ಅಶಾಂತಿ ಮತ್ತು ಭಯದ ವಾತಾವರಣ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಆಡಳಿತ ಪಕ್ಷ ಕುಮ್ಮಕ್ಕು ನೀಡುತ್ತಿದೆ. ಸಾಗರದಲ್ಲಿ ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿ ಪ್ರಕರಣವನ್ನು ತಿರುಚುವ ಕೆಲಸ ಮಾಡಲಾಗುತ್ತಿದೆ. ಪೊಲೀಸರಿಗೆ ನಿಷ್ಪಕ್ಷಪಾತ ತನಿಖೆ ನಡೆಸಲು ಆಡಳಿತ ಪಕ್ಷ ಅವಕಾಶ ಕಲ್ಪಿಸಬೇಕು. ಘಟನೆಯಲ್ಲಿ ಯಾವುದೇ ಪಾತ್ರವಿಲ್ಲದವರ ಮೇಲೆ ಸಹ ಪ್ರಕರಣ ದಾಖಲಿಸಲಾಗಿದ್ದು, ತಕ್ಷಣ ಅವರ ಹೆಸರನ್ನು ಕೈ ಬಿಡಬೇಕು. ಅಮಾಯಕರ ವಿರುದ್ಧ ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿದರೆ ಕಾಂಗ್ರೆಸ್ ಹೋರಾಟ ಕೈಗೆತ್ತಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ನಗರ ಕಾಂಗ್ರೆಸ್ ಅಧ್ಯಕ್ಷ ಐ.ಎನ್. ಸುರೇಶಬಾಬು ಮಾತನಾಡಿದರು. ಗೋಷ್ಠಿಯಲ್ಲಿ ಮಹಾಬಲ ಕೌತಿ, ಭರ್ಮಪ್ಪ ಅಂದಾಸುರ, ಡಿ.ದಿನೇಶ್, ಸದ್ದಾಂ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.