ಕೃಷಿ ಕಾಯ್ದೆ ಪ್ರತಿ ಸುಟ್ಟು ಪ್ರತಿಭಟನೆ
Team Udayavani, Mar 27, 2021, 8:23 PM IST
ಶಿವಮೊಗ್ಗ: ಕೇಂದ್ರದ ನೂತನ ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಕರೆ ನೀಡಲಾಗಿದ್ದ ಭಾರತ್ ಬಂದ್ ಶಿವಮೊಗ್ಗದಲ್ಲಿ ಪ್ರತಿಭಟನೆಗಷ್ಟೇ ಸೀಮಿತವಾಯಿತು. ಸಂಯುಕ್ತ ಕಿಸಾನ್ ಮೋರ್ಚಾ ಐಕ್ಯ ಹೋರಾಟ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ವಿವಿಧ ಪ್ರಗತಿ ಪರ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾ ಧಿಕಾರಿಗಳ ಕಚೇರಿ ಎದುರು ಇರುವ ರಸ್ತೆಯಲ್ಲಿ ಕೃಷಿ ಕಾಯ್ದೆಗಳ ಪ್ರತಿಯನ್ನು ಸುಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಆವರಣದ ಮುಂಭಾಗದಲ್ಲಿಯೇ ಪ್ರತಿಭಟನಾ ಸಭೆ ನಡೆಸಿದ ರೈತ ಮತ್ತು ವಿವಿಧ ಸಂಘ ಸಂಸ್ಥೆಗಳ ಮುಖಂಡರು ಭಾರತ್ ಬಂದ್ ಕರೆಕೊಟ್ಟಿದ್ದರೂ ಕೂಡ ನಾವು ಕೇವಲ ಪ್ರತಿಭಟನೆಗೆ ಮಾತ್ರ ಸೀಮಿತಗೊಳಿಸಿದ್ದೇವೆ. ಕೃಷಿ ಕಾಯ್ದೆಗಳ ಪ್ರತಿಗಳನ್ನು ನಾವೇ ಸುಡುವ ಮೂಲಕ ಇದನ್ನು ರದ್ದುಗೊಳಿಸಿದ್ದೇವೆ. ರೈತ ಹೋರಾಟ ಮತ್ತಷ್ಟು ಮುಂದುವರೆಯುತ್ತದೆ ಎಂಬುದಕ್ಕೆ ಇದೇ ಸಾಕ್ಷಿ ಎಂದರು.
ರೈತ ಮುಖಂಡ ಎಚ್.ಆರ್. ಬಸವರಾಜಪ್ಪ ಮಾತನಾಡಿ, ದಕ್ಷಿಣ ಭಾರತದಲ್ಲಿ ರೈತ ಚಳವಳಿ ತಲೆಯೆತ್ತಿ ನಿಂತಿದೆ ಎನ್ನುವುದಕ್ಕೆ ಇದೇ ಸಾಕ್ಷಿಯಾಗಿದೆ. ಸರ್ಕಾರ ಪ್ರತಿಭಟನಾಕಾರರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಯಾವುದೇ ಕಾರಣಕ್ಕೂ ರೈತ ವಿರೋಧಿ ಕಾಯ್ದೆಯನ್ನು ವಾಪಸ್ ತೆಗೆದುಕೊಳ್ಳುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದರು. ಮಾ.20 ರಂದು ಶಿವಮೊಗ್ಗದಲ್ಲಿ ನಡೆದ ರೈತ ಮಹಾ ಪಂಚಾಯತ್‌ನಲ್ಲಿ ರಾಷ್ಟ್ರೀಯ ರೈತ ಮುಖಂಡ ರಾಕೇಶ್ ಟಿಕಾಯತ್ ವಿರುದ್ದ ಶಿವಮೊಗ್ಗ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ. ಆದರೆ ಯಾಕಾಗಿ ಎಂಬುದು ತಿಳಿದಿಲ್ಲ.
ಅವರು ಕೊಲೆ ಮಾಡಿ ಎಂದು ಕರೆ ನೀಡಿಲ್ಲ. ಕೈಕಾಲು ಕಡಿಯಿರಿ ಎಂದಿಲ್ಲ. ಬೆಂಕಿ ಹಚ್ಚಿ ಎಂದಿಲ್ಲ. ಭಾಷಣದಲ್ಲಿ ಯಾವುದೇ ಉದ್ರೇಕಕಾರಿ ಮಾತನಾಡಿಲ್ಲ. ಆದರೂ ಪೊಲೀಸರು ಕೇಸು ದಾಖಲಿಸಿಕೊಂಡು ಮತ್ತಷ್ಟು ಗೊಂದಲ ಸೃಷ್ಟಿ ಮಾಡಿಕೊಂಡಿದ್ದಾರೆ ಎಂದರು. ವಕೀಲ ಕೆ.ಪಿ. ಶ್ರೀಪಾಲ್ ಮಾತನಾಡಿ, ಯಾರ ವಿರುದ್ಧ ಕೇಸ್ ದಾಖಲಿಸಬೇಕೋ ಅದನ್ನು ಮಾಡುವುದಿಲ್ಲ. ಹಾಗೆ ಕೇಸು ದಾಖಲಿಸಿದ್ದರೆ ಬಹಳಷ್ಟು ಜನ ಇಂದು ಜೈಲಿನಲ್ಲಿ ಇರಬೇಕಾಗುತ್ತಿತ್ತು. ಕೈ-ಕಾಲು ಕಡಿಯಿರಿ ಎಂದ ರಾಜಕಾರಣಿಗಳನ್ನು ಪೊಲೀಸರು ಸುಮ್ಮನೆ ಬಿಟ್ಟಿದ್ದಾರೆ. ಕೆಲವರು ಪ್ರಚೋದನಕಾರಿ ಹೇಳಿಕೆ ನೀಡಿ ಪ್ರಜಾಪ್ರಭುತ್ವವನ್ನೇ ಕಗ್ಗೊಲೆ ಮಾಡಿದ್ದಾರೆ.
ಅವರೆಲ್ಲರನ್ನು ಬಿಟ್ಟು ರೈತರ ಸಮಸ್ಯೆಗಳನ್ನು ಹೇಳಲು ಬಂದವರ ಮೇಲೆ ದೂರು ದಾಖಲಿಸಿಕೊಂಡಿರುವುದು ನಾಚಿಕೆಗೇಡಿನ ವಿಷಯ ಎಂದರು. ನೆಹರೂ ಕ್ರೀಡಾಂಗಣದಲ್ಲಿ ರೈತ ಮಹಾ ಪಂಚಾಯತ್ ಸಭೆ ನಡೆಸಲು ಅನುಮತಿ ಕೇಳಲಾಗಿತ್ತು. ಆದರೆ ಇಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಬಿಟ್ಟು ಬೇರೆ ಯಾವುದಕ್ಕೂ ಅವಕಾಶ ಕೊಡುವುದಿಲ್ಲ ಎಂದು ಹೇಳಿದ್ದರು. ಆದರೆ ನಾಳೆ ಉಪನ್ಯಾಸ ಕಾರ್ಯಕ್ರಮವೊಂದನ್ನು ನಡೆಸಲು ಅನುಮತಿ ನೀಡಲಾಗಿದೆ ಎಂದು ತಿಳಿದುಬಂದಿದೆ.
ಅಲ್ಲಿ ಉಪನ್ಯಾಸ ಕಾರ್ಯಕ್ರಮ ಆಗಬಾರದು. ಒಂದು ವೇಳೆ ಕಾರ್ಯಕ್ರಮ ನಡೆದರೆ ಜಿಲ್ಲಾ ಧಿಕಾರಿಗಳನ್ನೂ ಸೇರಿಸಿಕೊಂಡು ಪಿಸಿಆರ್ ಕೇಸ್‌ನ್ನು ನಾವೇ ದಾಖಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಕೆ.ಎಲ್. ಅಶೋಕ್ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿದ್ದರೆ ಬಿಜೆಪಿ ಸರ್ಕಾರ ರೈತ ಮುಖಂಡನ ಮೇಲೆ ಹಾಕಿರುವ ಕೇಸ್ ವಾಪಸ್ ಪಡೆಯಬೇಕು. ಹೀಗೆ ಹೆದರಿಸುವ ಮೂಲಕ ಹೋರಾಟವನ್ನು ಬಗ್ಗು ಬಡಿಯುತ್ತೇವೆ ಎಂಬ ಭ್ರಮೆ ಬೇಡ.
ಇಡೀ ದೇಶದ ರೈತರು ರಾಕೇಶ್ ಟಿಕಾಯತ್ ಅವರ ಪರವಾಗಿರುತ್ತಾರೆ. ಕಾಡ್ಗಿಚ್ಚಿನಂತೆ ಹೋರಾಟ ಹಬ್ಬುತ್ತದೆ. ಹಾಗಾಗಿ ಸರ್ಕಾರ ಎಚ್ಚರಿಕೆಯಿಂದ ಇರಬೇಕು ಎಂದರು. ವಿವಿಧ ಪಕ್ಷಗಳ ಮುಖಂಡರಾದ ಎಂ.ಶ್ರೀಕಾಂತ್, ಎನ್.ರಮೇಶ್, ಜಿ.ಪಲ್ಲವಿ, ಎಚ್.ಸಿ. ಯೋಗೀಶ್, ಆರ್.ಎಂ. ಮಂಜುನಾಥ ಗೌಡ, ಬಿ.ಎ.ರಮೇಶ್ ಹೆಗ್ಡೆ, ನಾಗರಾಜ್ ಕಂಕಾರಿ, ಟಿ.ಎಚ್. ಹಾಲೇಶಪ್ಪ ಮುಂತಾದವರು ಮಾತನಾಡಿದರು. ಪ್ರತಿಭಟನೆಯಲ್ಲಿ ಪ್ರಮುಖರಾದ ಕಾಶಿ ವಿಶ್ವನಾಥ್, ಜಾರ್ಜ್, ವಸಂತ್‌ಕುಮಾರ್, ಯಶವಂತರಾವ್ ಘೋರ³ಡೆ, ಪಾಲಾಕ್ಷಿ, ಮಂಜುನಾಥ್, ನಾರಾಯಣ ಸೇರಿದಂತೆ ಹಲವರಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosanagar: ನಾಪತ್ತೆಯಾದ 78 ದಿನದ ಬಳಿಕ ವ್ಯಕ್ತಿಯ ಮೃತದೇಹ ಪತ್ತೆ, ತನಿಖೆಗೆ ಪತ್ನಿಯ ಆಗ್ರಹ
Ripponpet ಬೀದಿ ನಾಯಿ ಕೊಂದು ಆಟೋಗೆ ಕಟ್ಟಿಕೊಂಡು ಎಳೆದೊಯ್ದ ಕ್ರೂರಿ
Shimoga: ಬೀದಿ ನಾಯಿಯನ್ನು ಕ್ರೂರವಾಗಿ ಕೊಂದು ಆಟೋದಲ್ಲಿ ಎಳೆದೊಯ್ದ ವ್ಯಕ್ತಿ
ಅಡಿಕೆ ಬೆಳೆಗಾರರು ಆತಂಕವಿಲ್ಲದೆ ಕೃಷಿಯಲ್ಲಿ ತೊಡಗಿಕೊಳ್ಳಿ: ಶಿವರಾಜ್ ಸಿಂಗ್ ಚೌಹಾಣ್
Sagara: ಜ. 22ರಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಡಾಕ್ಟರೇಟ್ ಪ್ರದಾನ