ನೀರಿನ ಸಮಸ್ಯೆ ಪರಿಹರಿಸಲು ಒತ್ತಾಯಿಸಿ ಪ್ರತಿಭಟನೆ
ಕೊಡ ಹಿಡಿದು ಧರಣಿ ನಡೆಸಿದ ಪಾಲಿಕೆ ವಿಪಕ್ಷ ಸದಸ್ಯರು
Team Udayavani, Mar 12, 2022, 2:53 PM IST
ಶಿವಮೊಗ್ಗ: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಪಾಲಿಕೆ ಆಡಳಿತ ವಿಫಲವಾಗಿದೆ ಎಂದು ಆರೋಪಿಸಿ ಪಾಲಿಕೆ ವಿರೋಧ ಪಕ್ಷದ ಸದಸ್ಯರು ಪಾಲಿಕೆ ಎದುರು ಕೊಡಪಾನಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.
ನಗರದಲ್ಲಿ ಕುಡಿಯುವ ನೀರಿನ ಸರಬರಾಜು ಹಾಗೂ ನಿರ್ವಹಣೆಗಾಗಿ ಮತ್ತು ಪ್ರತ್ಯೇಕ ಕಾಮಗಾರಿಗಾಗಿ ಉಪವಿಭಾಗಗಳನ್ನು ಪ್ರಾರಂಭಿಸಲು ಪಾಲಿಕೆ ನಿರ್ಣಯ ಕೈಗೊಂಡು ಅನೇಕ ತಿಂಗಳು ಕಳೆದರೂ ಸಹ ಈವರೆಗೂ ಪ್ರತ್ಯೇಕ ಉಪವಿಭಾಗ ಪ್ರಾರಂಭಿಸದೇ ನಿರ್ಲಕ್ಷ್ಯ ವಹಿಸಲಾಗಿದೆ. ಇದರಿಂದ ನೀರಿನ ಸಮಸ್ಯೆ ನಗರದಲ್ಲಿ ತೀವ್ರಗೊಂಡಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಸಮರ್ಪಕವಾಗಿ ಪರಿಹರಿಸುವ ಸಲುವಾಗಿ ಮಂಡ್ಲಿ ಹಳೆ ಪಂಪ್ ಹೌಸ್ ಬಳಿ ತುಂಗಾ ನದಿಗೆ ಅಡ್ಡಲಾಗಿ ತಡೆಗೋಡೆ ನಿರ್ಮಿಸಿ 50 ಎಚ್.ಪಿ. ಸಾಮರ್ಥ್ಯದ ಎರಡು ವಿದ್ಯುತ್ ಪಂಪ್ ಗಳನ್ನು ಅಳವಡಿಸಿ ತುಂಗಾ ನದಿ ಮಧ್ಯ ಭಾಗದಿಂದ ನೀರು ಶೇಖರಣಾ ವ್ಯವಸ್ಥೆ ಕೈಗೊಳ್ಳುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ತೋರಲಾಗಿದೆ. ಪಾಲಿಕೆ ವ್ಯಾಪ್ತಿಯ ನಿತ್ಯ ಕುಡಿಯುವ ನೀರಿನ ಸಮಸ್ಯೆಗಳನ್ನು ಪರಿಹರಿಸಲು ಸಿಬ್ಬಂದಿ ನೇಮಕ ಮಾಡಿಕೊಳ್ಳದೆ ನಿರ್ಲಕ್ಷ್ಯ ತೋರಲಾಗಿದೆ ಎಂದು ದೂರಿದರು.
ಅವೈಜ್ಞಾನಿಕವಾಗಿ ನಿರಂತರ ಕುಡಿಯುವ ನೀರಿನ ಸರಬರಾಜು ಯೋಜನೆಗೆ ತೆರಿಗೆ ವಿಧಿಸಿರುವುದನ್ನು ಪುನರ್ ಪರಿಶೀಲಿಸಲು ಹಾಗೂ ಈ ಬಗ್ಗೆ ಬಳಕೆದಾರರ ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಹಾಗೂ ನಾಗರಿಕ ಸಂಘಟನೆಗಳ ವಿಶೇಷ ಸಭೆ ಕರೆಯುವಂತೆ ಮಹಾಪೌರರಿಗೆ ಮನವಿ ಮಾಡಿಕೊಂಡರೂ ಸಭೆ ಕರೆಯದೆ ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದರು.
ಮೆಸ್ಕಾಂ, ನಗರ ನೀರು ಸರಬರಾಜು ಮಂಡಳಿ, ಮಹಾನಗರ ಪಾಲಿಕೆ ಅಧಿಕಾರಿಗಳ ನಡುವೆ ಸಮನ್ವಯತೆ ಕೊರತೆಯಿಂದಾಗಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಈ ಕೂಡಲೇ ಗಮನಹರಿಸಿ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಈ ಬಗ್ಗೆ ವಿಶೇಷ ಸಭೆ ಆಯೋಜಿಸಬೇಕು ಎಂದು ಒತ್ತಾಯಿಸಿದರು.
ಪಾಲಿಕೆ ವಿಪಕ್ಷ ನಾಯಕಿ ಯಮುನಾ ರಂಗೇಗೌಡ, ಸದಸ್ಯರಾದ ಯೋಗೀಶ್, ರಮೇಶ್ ಹೆಗಡೆ, ರೇಖಾ ರಂಗನಾಥ್, ಪ್ರಮುಖರಾದ ರಂಗೇಗೌಡ, ರಂಗನಾಥ್, ಚೇತನ್, ಮಧುಸೂದನ್ ಮೊದಲಾದವರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.