ರೈತ ಸಂಘಟನೆಗಳಿಂದ ರಸ್ತೆ ತಡೆ
ತಿದ್ದುಪಡಿ ವಾಪಸ್ ಪಡೆಯಲು ರೈತ ಸಂಘಟನೆಗಳ ಒತ್ತಾಯ •ರಸ್ತೆ ತಡೆದು ಪ್ರತಿಭಟನೆ
Team Udayavani, Jun 11, 2019, 9:24 AM IST
ಶಿವಮೊಗ್ಗ: ಭೂಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತರು ರಸ್ತೆತಡೆ ನಡೆಸಿದರು.
ಶಿವಮೊಗ್ಗ: ಭೂಸ್ವಾಧೀನ ಕಾಯ್ದೆ ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಸೋಮವಾರ ನಗರದ ಸಂಗೊಳ್ಳಿರಾಯಣ್ಣ ಸರ್ಕಲ್ನಲ್ಲಿ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭೂಸ್ವಾಧೀನ ಕಾಯ್ದೆ ತಿದ್ದುಪಡಿ ರೈತರಿಗೆ ಮರಣ ಶಾಸನವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು. ದೇಶದಲ್ಲಿ 2014ನೇ ಸಾಲಿಗಿಂತ ಮೊದಲು ಇದ್ದ ಭೂಸ್ವಾಧೀನ ಕಾಯ್ದೆ ರಿಯಲ್ ಎಸ್ಟೇಟ್ ಕುಳಗಳು ರೈತರ ಜಮೀನನ್ನು ಅಕ್ರಮವಾಗಿ ಪಡೆಯಲು ಅನುಕೂಲಕರವಾಗಿತ್ತು. ಇದೇ ಸಮಯದಲ್ಲಿ ಎಸ್‌ಇಝಡ್ ಕೈಗಾರಿಕೆಗಳ ಮತ್ತು ನಗರೀಕರಣದ ಹೆಸರಿನಲ್ಲಿ ದೇಶಾದ್ಯಂತ ರೈತರ ಭೂಮಿಯನ್ನು ಸ್ವಾಧೀನಪಡಿಸಿ ಕೊಳ್ಳುತ್ತಿದ್ದರು ಎಂದರು.
ರೈತರ ಭೂಮಿಯನ್ನು ಮೂರು ಕಾಸಿಗೆ ಕಸಿದುಕೊಳ್ಳುವ ಇದು ದಂಧೆಯಾಗಿದ್ದನ್ನು ಗಮನಿಸಿದ ರೈತ ಸಂಘ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದು, ಇದರ ಪರಿಣಾಮ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕೇಂದ್ರದಲ್ಲಿದ್ದ ಯುಪಿಎ ಸರ್ಕಾರ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದಿತ್ತು. ಇದರ ಪ್ರಕಾರ, ರೈತರ ಒಪ್ಪಿಗೆ ಇಲ್ಲದೆ ಯಾವುದೇ ಕಾರಣಕ್ಕೂ ಭೂಮಿ ಸ್ವಾಧೀನಪಡಿಸಿಕೊಳ್ಳುವಂತಿಲ್ಲ ಎಂದು ತಿಳಿಸಲಾಗಿದೆ ಎಂದರು.
ರೈತರಿಗೆ ಕೊಡುವ ಪರಿಹಾರ ಮಾರುಕಟ್ಟೆ ದರದ ನಾಲ್ಕು ಪಟ್ಟು ಕೊಡಬೇಕು. ನಗರಪ್ರದೇಶಕ್ಕೆ ಒಳಪಟ್ಟಿದ್ದರೆ ಮಾರುಕಟ್ಟೆ ದರದ ಎರಡು ಪಟ್ಟು ದರ ಕೊಡಬೇಕು ಎಂದು ಒತ್ತಾಯಿಸಿದರು.
ಭೂಮಿಯನ್ನು 5 ವರ್ಷದೊಳಗೆ ಉದ್ದೇಶಿತ ಯೋಜನೆಗೆ ಬಳಕೆ ಮಾಡದಿದ್ದರೆ ರೈತರಿಗೆ ವಾಪಸ್ ಕೊಡಬೇಕು. ಪುನರ್ವಸತಿ ಪರಿಹಾರ ಹಣದ ರೂಪದಲ್ಲೇ ಇರಬೇಕು ಎಂದು ಕಾಯ್ದೆಯಲ್ಲಿ ಹೇಳಲಾಗಿದೆ ಎಂದು ತಿಳಿಸಿದರು.
ಈ ರೀತಿ ಇದ್ದ ಕಾಯ್ದೆಯನ್ನು ರಾಜ್ಯದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ತಿದ್ದುಪಡಿ ಮಾಡಿದೆ. ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದು ಎಲ್ಲ ಅಂಶಗಳನ್ನು ಕೈಬಿಟ್ಟು ಜಿಲ್ಲಾಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡಿ ರಾಜ್ಯದ ರೈತರಿಗೆ ಮರಣ ಶಾಸನ ಬರೆದಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರೈತ ಸಮುದಾಯಕ್ಕೆ ದ್ರೋಹ ಬಗೆದಿದೆ. ಕೂಡಲೇ ತಿದ್ದುಪಡಿಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಬರಗಾಲದಿಂದ ಸಮಸ್ಯೆಯಾಗಿದ್ದು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು. ನೀರು, ಮೇವಿನ ಅಭಾವದಿಂದ ರೈತರು ಜಾನುವಾರುಗಳನ್ನು ಮಾರಾಟ ಮಾಡುತ್ತಿದ್ದು, ಕೆಲಸಕ್ಕಾಗಿ ನಗರಕ್ಕೆ ಹೋಗುವಂತಾಗಿದೆ. ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಮುಖಂಡರಾದ ಎಚ್.ಆರ್. ಬಸವರಾಜಪ್ಪ, ರಾಘವೇಂದ್ರ, ಶಿವಮೂರ್ತಿ ಹಿಟ್ಟೂರು ರಾಜು ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸಾಗರ: ಭೂ ಸ್ವಾಧೀನ ಕಾಯ್ದೆಗೆ ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿಗೆ ವಿರೋಧ, ಬರಗಾಲ ಪರಿಹಾರ ಘೋಷಿಸಲು ಆಗ್ರಹ, ರೈತರಿಗೆ ಸಾಲಮನ್ನಾದ ಋಣಮುಕ್ತ ಪತ್ರಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯಿಂದ ನಗರದ ಜೋಗ ರಸ್ತೆಯ ವರದಹಳ್ಳಿ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರೈತಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಕೆ. ಮಂಜುನಾಥ್‌ಗೌಡ, ದೇಶವನ್ನು ರೈತರ ದೇಶ ಎಂದು ಕರೆಯುತ್ತಾರೆ. ಆದರೆ, ನಮ್ಮ ದೇಶದಲ್ಲಿ ದಿನದಿಂದ ದಿನಕ್ಕೆ ರೈತರ ಜೀವನ ಸ್ಥಿತಿ ಅಧೋಗತಿಗೆ ಇಳಿಯುತ್ತಿದೆ. ಆಳುವ ಸರ್ಕಾರಗಳು ರೈತರ ಹೆಸರಿನಲ್ಲಿ ಮತ ಪಡೆಯುವುದಕ್ಕೆ ಬೇಕಾಗಿ ಎಲ್ಲ ರೀತಿಯ ಆಶ್ವಾಸನೆ ನೀಡಿ ಯಾವುದನ್ನು ಅನುಷ್ಠಾನಕ್ಕೆ ತರುತ್ತಿಲ್ಲ ಎಂದು ದೂರಿದರು.
ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ತರುವುದಾಗಿ ಹೇಳಿರುವ ಕೇಂದ್ರ ಸರ್ಕಾರ ನಂತರ ಮೌನವಾಗಿದೆ. ಇತ್ತ ರಾಜ್ಯದ ಎಲ್ಲ ರೈತರ ಎಲ್ಲ ಬಗೆಯ ಸಾಲವನ್ನು ಮನ್ನಾ ಮಾಡಿ ಋಣಮುಕ್ತ ಪತ್ರ ನೀಡುವುದಾಗಿ ಹೇಳಿಕೆ ನೀಡಿರುವ ರಾಜ್ಯ ಸರ್ಕಾರ ಇಂದಿಗೂ ರೈತರನ್ನು ಋಣಮುಕ್ತಗೊಳಿಸಿಲ್ಲ ಎಂದು ಆರೋಪಿಸಿದರು.
ರಾಜ್ಯ ದೇಶದಲ್ಲಿಯೇ ಬರಪೀಡಿತ ಪ್ರದೇಶದಲ್ಲಿ 2ನೇ ಸ್ಥಾನ ಹೊಂದಿದೆ. ಆದರೂ ಬರದಿಂದ ತತ್ತರಿಸಿರುವ ರೈತರಿಗೆ ಇದುವರೆಗೂ ಸರ್ಕಾರ ಪರಿಹಾರ ಘೋಷಣೆ ಮಾಡಿಲ್ಲ, ಈ ನಡುವೆ ಭೂ ಸ್ವಾಧಿಧೀನ ಕಾಯ್ದೆಗೆ ರಾಜ್ಯ ಸರ್ಕಾರ ತಿದ್ದುಪಡಿ ತರುವ ಮೂಲಕ ರೈತರಿಗೆ ಮರಣ ಶಾಸನ ಬರೆಯುತ್ತಿದೆ ಎಂದು ದೂರಿದರು.
2014 ರಲ್ಲಿ ಕಾಯ್ದೆ ರೈತರ ಅನುಕೂಲಕ್ಕಾಗಿ ಮಾರ್ಪಾಡಾಗಿತ್ತು. ಅದರಿಂದಾಗಿ ರೈತರ ಒಪ್ಪಿಗೆ ಇಲ್ಲದೆ ಯಾವುದೇ ರೈತರ ಭೂಮಿ ಸ್ವಾಧೀನ ಪಡಿಸಿಕೊಳ್ಳುವುದಾಗಲಿ ಮತ್ತು ದರ ನಿಗದಿ ಮಾಡುವುದಾಗಲಿ ಸಾಧ್ಯವಿರಲಿಲ್ಲ. ಆದರೆ ಈಗಿನ ರಾಜ್ಯ ಸರ್ಕಾರದ ಆದೇಶದಿಂದ ರೈತರಿಗೆ ದ್ರೋಹವಾಗಲಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸಾಗರ ತಾಲೂಕು ಸಂಘದ ಅಧ್ಯಕ್ಷ ಎಚ್.ಟಿ. ಕನ್ನಪ್ಪ ಮಾತನಾಡಿ, ರಾಜ್ಯ ಸರ್ಕಾರ ರೈತರ ಪರವಾದ ಯೋಜನೆಗಳನ್ನು ಚುನಾವಣೆಯ ಆರಂಭದಿಂದಲೂ ಹೇಳುತ್ತ ಬಂದಿದೆ. ಆದರೆ ಯಾವುದನ್ನು ಈಡೇರಿಸಿಲ್ಲ. ಸರ್ಕಾರ ನಡೆಸುವುದೇ ಕಷ್ಟ ಎನ್ನುವ ರೀತಿಯಲ್ಲಿ ತಮ್ಮ ಸಮಸ್ಯೆಯನ್ನೇ ನಿತ್ಯದ ಸಮಸ್ಯೆಯಾಗಿಸಿಕೊಂಡು ರಾಜ್ಯದ ರೈತರ ಹಾಗೂ ಜನ ಸಾಮಾನ್ಯರ ಸಮಸ್ಯೆ ಆಲಿಸದಿರುವುದು ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಸಮಿತಿಯ ಪದಾಧಿಕಾರಿಗಳಾದ ಈರಣ್ಣ ಅರೆಬಿಳಚಿ, ಉಮೇಶ್ ಎನ್. ಪಾಟೀಲ್, ಸಿ.ಕೆ. ಬಲೀಂದ್ರಪ್ಪ, ವೀರಭದ್ರನಾಯ್ಕ, ಈಶ್ವರಪ್ಪ, ಮಿಥುನ್ ಕಾರೇಮನೆ, ಈಶ್ವರಪ್ಪ ಕೊಡಕಣಿ, ಮೇಘರಾಜ್ ಬೆಟ್ಟದಕೂರ್ಲಿ, ಬಸವರಾಜ್ ಗೌಡ ಹೆಗ್ಗೋಡು ಮತ್ತಿತರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ
Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ
Sakrebailu: ತಾಂತ್ರಿಕ ದೋಷದಿಂದ ಸುಟ್ಟು ಕರಕಲಾದ ಬಸ್
ಭದ್ರಾವತಿಯ ರೈಸ್ಮಿಲ್ನಲ್ಲಿ ಬಾಯ್ಲರ್ ಸ್ಫೋಟ: ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.