Sagara: ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿರುವ ಮೆಸ್ಕಾಂ ನೀತಿ ಖಂಡನೆ; ಪ್ರತಿಭಟನೆ
Team Udayavani, Sep 19, 2024, 4:14 PM IST
ಸಾಗರ: ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್ ಬಿಲ್ ಪಾವತಿ ಮಾಡಿಲ್ಲವೆಂದು ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿರುವ ಮೆಸ್ಕಾಂ ನೀತಿ ಖಂಡಿಸಿ ಸೆ.19ರ ಗುರುವಾರ ಡಾ. ಎಚ್.ಗಣಪತಿಯಪ್ಪ ಸ್ಥಾಪಿತ ರೈತ ಸಂಘದ ವತಿಯಿಂದ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ, ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಮೆಸ್ಕಾಂ ದಬ್ಬಾಳಿಕೆ ಹೆಚ್ಚಾಗುತ್ತಿದ್ದು ವಿದ್ಯುತ್ ಬಳಕೆ ಗ್ರಾಹಕರು ತೀವ್ರ ಸಂಕಷ್ಟಕ್ಕೆ ಸಿಲುಕುವ ಸ್ಥಿತಿ ನಿರ್ಮಾಣವಾಗಿದೆ. ಮೆಸ್ಕಾಂ ಅಧಿಕಾರಿಗಳು ತಮ್ಮ ಸಿಬ್ಬಂದಿಗಳನ್ನು ಬಳಸಿಕೊಂಡು ವಿದ್ಯುತ್ ಬಿಲ್ ವಸೂಲಿ ನೆಪವೊಡ್ಡಿ ರೈತರಿಗೆ, ಸಣ್ಣಪುಟ್ಟ ವ್ಯಾಪಾರಿಗಳಿಗೆ, ಜನರ ಮನೆ ಅಂಗಡಿಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ತೊಂದರೆ ಕೊಡುತ್ತಿದ್ದಾರೆ. ಜನರು ಬಾಕಿ ಬಿಲ್ ಪಾವತಿ ಮಾಡಿದ್ದಾಗ್ಯೂ 5-6 ದಿನ ಕಳೆದರೂ ಪುನರ್ ಸಂಪರ್ಕ ಕೊಡದೆ ಸತಾಯಿಸುತ್ತಿದ್ದಾರೆ ಎಂದು ದೂರಿದರು.
ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಉದ್ದಟತನದ ಉತ್ತರ ನೀಡುತ್ತಿದ್ದಾರೆ. ನಾವು ವಿದ್ಯುತ್‌ಗಾಗಿ ಸರ್ವಸ್ವವನ್ನು ಕಳೆದುಕೊಂಡು ಬೀದಿಗೆ ಬಂದಿದ್ದೇವೆ. ಮೆಸ್ಕಾಂ ಅಧಿಕಾರಿಗಳು ನೂರು ರೂಪಾಯಿ ಬಾಕಿ ಇದ್ದರೂ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳಿಗೆ ಮೆಸ್ಕಾಂ ದೌರ್ಜನ್ಯ ಕಾಣಿಸುತ್ತಿಲ್ಲವೇ ಎಂದು ಪ್ರಶ್ನಿಸಿದ ಅವರು ನಮ್ಮ ತಾಲೂಕಿಗೆ ದಿನದ 24 ಗಂಟೆ ವಿದ್ಯುತ್ ನೀಡಬೇಕು. ರೈತರು ಮತ್ತು ಗ್ರಾಮಾಂತರ ಪ್ರದೇಶಗಳ ರೈತರಿಗೆ, ಜನರಿಗೆ ಲೋಡ್‌ಶೆಡ್ಡಿಂಗ್ ಇಲ್ಲದಂತೆ ಗುಣಮಟ್ಟದ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿ ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ರಮೇಶ್ ಈ. ಕೆಳದಿ ಮಾತನಾಡಿ, ರಾಜ್ಯ ಸರ್ಕಾರ ಐದು ಗ್ಯಾರಂಟಿಗಾಗಿ 56 ಸಾವಿರ ಕೋಟಿ ರೂ. ಖರ್ಚು ಮಾಡುತ್ತಿದೆ. ಆದರೆ ರೈತರು 100 ರೂ. ವಿದ್ಯುತ್ ಬಿಲ್ ಕಟ್ಟಲಿಲ್ಲ ಎಂದು ಏಕಾಏಕಿ ವಿದ್ಯುತ್ ಬಿಲ್ ಕಡಿತ ಮಾಡುತ್ತಿರುವುದು ಖಂಡನೀಯ. ಜನಪ್ರತಿನಿಧಿಗಳು, ಅಧಿಕಾರಿಗಳು ಗ್ಯಾರಂಟಿ ಗುಂಗಿನಲ್ಲಿದ್ದಾರೆಯೇ ವಿನಾ ಜನಸಾಮಾನ್ಯರು, ರೈತರ ಏಳಿಗೆಗೆ ಕೈಗೊಳ್ಳಬೇಕಾದ ಕೆಲಸಗಳ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ದೂರಿದರು.
ಪ್ರತಿಭಟನಕಾರರನ್ನು ಉದ್ದೇಶಿಸಿ ರೈತ ಸಂಘದ ತಾಲೂಕು ಅಧ್ಯಕ್ಷ ಡಾ. ರಾಮಚಂದ್ರಪ್ಪ ಮನೆಘಟ್ಟ ಮಾತನಾಡಿದರು. ಹೊಯ್ಸಳ ಗಣಪತಿಯಪ್ಪ, ಭದ್ರೇಶ್ ಬಾಳಗೋಡು, ಕುಮಾರ ಗೌಡ, ಕೃಷ್ಣಮೂರ್ತಿ, ಆಲಳ್ಳಿ ಚಂದ್ರು, ಗಣಪತಿ ತಾಳಗುಪ್ಪ, ಹೇಮಂತ್ ಹೆನಗೆರೆ, ಬಸವರಾಜ ಬಂಡಿ, ದೇವರಾಜ ಬೆಳಂದೂರು, ಶಿವಕುಮಾರ್ ಮೈಲಾರಿಕೊಪ್ಪ ಇನ್ನಿತರರು ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.