ಮಾರಿಜಾತ್ರೆ ಮಾದರಿಯಲ್ಲೇ ಗಣಪತಿ ಜಾತ್ರೆ: ಹಾಲಪ್ಪ
Team Udayavani, Mar 9, 2020, 6:26 PM IST
ಸಾಗರ: ಮಾರಿಜಾತ್ರೆ ಮಾದರಿಯಲ್ಲೇ ಮಹಾಗಣಪತಿ ಜಾತ್ರೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದು ಮಹಾಗಣಪತಿ ಜಾತ್ರಾ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಎಚ್. ಹಾಲಪ್ಪ ಹರತಾಳು ಹೇಳಿದರು.
ಶನಿವಾರ ನಗರದ ಉಪ ವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾ. 28ರಂದು ನಡೆಯಲಿರುವ ಮಹಾಗಣಪತಿ ಜಾತ್ರೋತ್ಸವ ಅಂಗವಾಗಿ ಕರೆಯಲಾಗಿದ್ದ ಸಾರ್ವಜನಿಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈಗಾಗಲೇ ಜಾತ್ರೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗಲು ಅನುಕೂಲವಾಗುವಂತೆ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯ ಸದಸ್ಯರ ಜೊತೆಗೆ ಸಾರ್ವಜನಿಕರು, ಆಸಕ್ತರು ವಿವಿಧ ಸಮಿತಿಗಳ ಸದಸ್ಯರಾಗಿ ಕೆಲಸ ಮಾಡುತ್ತಾರೆ ಎಂದರು.
ಈ ಬಾರಿ ಗಣಪತಿ ಜಾತ್ರೆಯಲ್ಲಿ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಜಾತ್ರೆಯು ಸಂಪ್ರದಾಯದಂತೆ ನಡೆಸಿಕೊಂಡು ಹೋಗಲು ಅಗತ್ಯ ಸೌಲಭ್ಯಗಳನ್ನು ನೀಡಲಾಗುತ್ತದೆ. ಜಾತ್ರೆ ಹಿನ್ನೆಲೆಯಲ್ಲಿ ದೇವರನ್ನು ಹತ್ತಿರದಿಂದ ನೋಡಲು ಸ್ಟೀಲ್ ಫ್ಲೈ ಓವರ್ ನಿರ್ಮಾಣ ಮಾಡಲಾಗುತ್ತಿದೆ. ರಥಕ್ಕೆ ಸ್ಟೇರಿಂಗ್ ಅಳವಡಿಸುವ ಕೆಲಸ ಸಹ ನಡೆಯುತ್ತಿದೆ. ಸಾರ್ವಜನಿಕರ ಸುರಕ್ಷತೆಯನ್ನು ಸಹ ಗಮನದಲ್ಲಿ ಇರಿಸಿಕೊಂಡು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಸಹಾಯಕ ಆಯುಕ್ತ ಮತ್ತು ಜಾತ್ರಾ ಸಮಿತಿಯ ಸದಸ್ಯ ಕಾರ್ಯದರ್ಶಿ ಡಾ|ಎಲ್.ನಾಗರಾಜ್ ಮಾತನಾಡಿ, ಸಮಿತಿಯಲ್ಲಿ ಸುಮಾರು 33 ಲಕ್ಷ ರೂ. ಹಣ ಜಮೆ ಇದೆ. ಇದನ್ನು ಸಿಬ್ಬಂದಿ ಸಂಬಳ, ದೇವಸ್ಥಾನದ ದಿನನಿತ್ಯದ ಖರ್ಚುಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ರಥೋತ್ಸವಕ್ಕೆ 10 ಲಕ್ಷ ರೂ. ತೆಗೆದಿರಿಸಲಾಗಿದ್ದು, ಇದು ಕಡಿಮೆಯಾಗುತ್ತದೆ ಎನ್ನುವ ಚರ್ಚೆ ಇರುವ ಹಿನ್ನೆಲೆಯಲ್ಲಿ ಹೆಚ್ಚಿನ ಹಣವನ್ನು ಸರ್ಕಾರದಿಂದ ತರಿಸಿಕೊಳ್ಳುವ ನಿಟ್ಟಿನಲ್ಲಿ ಶಾಸಕರ ಮೂಲಕ ಸಂಬಂಧಪಟ್ಟ ಖಾತೆ ಸಚಿವರಿಗೆ ಮನವಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಯು.ಎಚ್. ರಾಮಪ್ಪ, ಪುರುಷೋತ್ತಮ್, ಐ.ವಿ. ಹೆಗಡೆ, ಶಿವಾನಂದ ಕಾಮತ್, ಎಸ್.ವಿ. ಹಿತಕರ ಜೈನ್ ತಾರಾಮೂರ್ತಿ, ಶೋಭಾ ಲಂಬೋದರ್ ಇನ್ನಿತರರು ಸಲಹೆ ನೀಡಿದರು. ಪೌರಾಯುಕ್ತ ಎಸ್. ರಾಜು, ತಹಶೀಲ್ದಾರ್ ಚಂದ್ರಶೇಖರ ನಾಯ್ಕ, ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ನಾಗೇಂದ್ರ ಕೆ.ಎನ್., ಲೋಕೋಪಯೋಗಿ ಇಲಾಖೆಯ ದಿನೇಶ್ ಕೆ., ನಾಗಪ್ಪ ಎಚ್.ಕೆ. ಇನ್ನಿತರರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.