ಮತ್ತೆ ಮಂಗನ ಕಾಯಿಲೆ ಭೀತಿ
ಅರಳಗೋಡು ಭಾಗದಲ್ಲಿ ಕಾಣಿಸಿಕೊಂಡ ಕೆಎಫ್‌ಡಿ ವೈರಸ್‌ವಿದ್ಯಾರ್ಥಿಯೊಬ್ಬನಲ್ಲಿ ವೈರಸ್ ಪತ್ತೆ
Team Udayavani, Jan 10, 2020, 3:22 PM IST
ಸಾಗರ: ಈ ಬೇಸಿಗೆ ಋತುವಿನಲ್ಲಿ ಇದೇ ಮೊದಲ ಬಾರಿಗೆ ತಾಲೂಕಿನ ಅರಳಗೋಡು ಭಾಗದಲ್ಲಿ ಮಂಗನ ಕಾಯಿಲೆಯ ವೈರಸ್ ಮತ್ತೂಮ್ಮೆ ಕಾಣಿಸಿಕೊಂಡಿರುವುದು ದೃಢಪಟ್ಟಿದ್ದು, ಈ ಭಾಗದ ಜನರ ಬೆನ್ನಹುರಿಯಲ್ಲಿ ಭಯದ ಛಳಕು ಕಾಣಿಸಿಕೊಂಡಿದೆ. ಇಲ್ಲಿನ ಕಾನೂರಿನ ಭರತ್ ಎಂಬ ವಿದ್ಯಾರ್ಥಿಯ ರಕ್ತ ಪರೀಕ್ಷೆಯಲ್ಲಿ ಕೆಎಫ್‌ಡಿ ವೈರಸ್ ಪಾಸಿಟಿವ್ ಬಂದಿದೆ.
ಪ್ರಸ್ತುತ ಕೆಎಫ್‌ಡಿ ಪೀಡಿತ ವ್ಯಕ್ತಿ ಸಾಗರದ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚೇತರಿಕೆಯಲ್ಲಿದ್ದಾನೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಕಳೆದ ವರ್ಷ 23 ಜನರ ಸಾವಿಗೆ ಕಾರಣವಾಗಿದ್ದ ಕ್ಯಾಸನೂರು ಅರಣ್ಯ ಕಾಯಿಲೆ, ಕಳೆದ 2018ರ ನವೆಂಬರ್‌ನಿಂದಲೇ ತನ್ನ ಪ್ರಭಾವ ತೋರಿಸಿತ್ತು. ನಂತರದಲ್ಲಿ ಆರೋಗ್ಯ ಇಲಾಖೆ ಹಾಗೂ ಕೆಎಫ್‌ಡಿ ನಿಯಂತ್ರಣ ಘಟಕ ಡಿಎಂಪಿ ದ್ರಾವಣ ಹಾಗೂ ವೈರಸ್ ಪ್ರತಿಬಂಧಕ ಲಸಿಕೆ ಮೂಲಕ ರೋಗ ನಿಯಂತ್ರಣಕ್ಕೆ ಮುಂದಾಗಿತ್ತು. ಜನ ಮೊದಲಿನೆರಡು ಸುತ್ತಿನ ಲಸಿಕೆ ಪಡೆದಿದ್ದರೂ ಈ ಭಾಗದಲ್ಲಿ ಮೂರನೇ ಡೋಸ್‌ಗೆ ಕೇವಲ ಶೇ. 68 ಜನ ಸ್ಪಂದಿಸಿದ್ದುದನ್ನು “ಉದಯವಾಣಿ’ ವರದಿ ಮಾಡಿತ್ತು.
ಇದೀಗ ಜ್ವರಪೀಡಿತನಾಗಿರುವ ಭರತ್ ಕೂಡ ಎರಡು ಬಾರಿ ಮಾತ್ರ ಲಸಿಕೆ ಪಡೆದಿದ್ದ ಎಂಬುದು ತಿಳಿದುಬಂದಿದೆ. ಶಿವಮೊಗ್ಗದ ವೈರಸ್ ಪರಿಶೋಧನಾ ಕೇಂದ್ರ ಜ. 7ರಂದು ಎರಡು ದಿನಗಳ 42
ರಕ್ತ ಸ್ಯಾಂಪಲ್‌ಗಳಲ್ಲಿ ಕೆಎಫ್‌ಡಿ ವೈರಸ್ ಇರುವಿಕೆಯನ್ನು ಪರೀಕ್ಷಿಸಿದ್ದು, ಸಾಗರದ ಕಾರ್ಗಲ್ ಭಾಗದ ತಿಮ್ಮಪ್ಪ ಅವರ 18 ವರ್ಷದ ಪುತ್ರ ಭರತ್‌ರ ಸ್ಯಾಂಪಲ್ ಪಾಸಿಟಿವ್ ಬಂದಿದೆ. ಉಳಿದಂತೆ ಸಾಗರದ 23, ತೀರ್ಥಹಳ್ಳಿಯ 12, ಹೊಸನಗರದ ಹಾಗೂ ಉತ್ತರ ಕನ್ನಡದ ಸಿದ್ಧಾಪುರ ಹಾಗೂ ಚಿಕ್ಕಮಗಳೂರಿನ ಎನ್. ಆರ್.ಪುರದ ತಲಾ ಒಂದು ರಕ್ತಪರೀಕ್ಷೆಯಲ್ಲಿ ಕೆಎಫ್‌ಡಿ ವೈರಾಣು ಕಾಣಿಸಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಆರೋಗ್ಯ ಇಲಾಖೆ ಮೂಲಗಳ ಪ್ರಕಾರ, ಕಾರ್ಗಲ್ ಭಾಗದಲ್ಲಿ ತೃತೀಯ ಸುತ್ತಿನ ಲಸಿಕೆ ತೆಗೆದುಕೊಳ್ಳುವುದರಲ್ಲಿ ಜನ ಹಿಂಜರಿಕೆ ತೋರುತ್ತಿದ್ದಾರೆ. ಈವರೆಗೆ ಕೆಎಫ್‌ಡಿ ಕಾಣಿಸಿಕೊಳ್ಳದಿರುವುದು ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಆದರೆ ಕೆಎಫ್‌ಡಿ ಪ್ರಕರಣ ಬೆಳಕಿಗೆ ಬಂದಿರುವುದರಿಂದ ಇನ್ನೊಮ್ಮೆ ವ್ಯಾಪಕ ಪ್ರಚಾರ ನಡೆಸಿ ಶೇ. 95ಕ್ಕಿಂತಲೂ ಹೆಚ್ಚಿನ ಸಾಧನೆ ಮಾಡಲಾಗುತ್ತದೆ ಎಂದು ಅದು ತಿಳಿಸಿದೆ.
ಕಳೆದ ಸಾಲಿನ ಹೋಲಿಕೆಯಲ್ಲಿ ಈ ವರ್ಷ ಮಂಗಗಳ ಸಾವಿನ ಪ್ರಕರಣ ಹೆಚ್ಚಾಗಿ ಕಂಡುಬರುತ್ತಿಲ್ಲ. ತಿಂಗಳ ಅವಧಿಯಲ್ಲಿ ಅರಳಗೋಡು ಭಾಗದಲ್ಲಿ ಎರಡು ಮಂಗಗಳ ಸಾವಿನ ಪ್ರಕರಣ ನಡೆದಿದ್ದರೂ ಅವುಗಳ ಸ್ಯಾಂಪಲ್ ಪರೀಕ್ಷೆ ನಡೆದಿಲ್ಲ. ಆಗಿರುವ ಸ್ಯಾಂಪಲ್ ಪರೀಕ್ಷೆ ಹಾಗೂ ತಿಗಣೆಗಳ ಪರೀಕ್ಷೆಯಲ್ಲಿ ಅವುಗಳಲ್ಲಿ ಕೆಎಫ್‌ಡಿ ವೈರಸ್ ಇರಲಿಲ್ಲ ಎಂಬುದು ದೃಢಪಟ್ಟಿದೆ. ವಿಷಪ್ರಾಶನದಿಂದ ಮಂಗಗಳ ಸಾವು ಹೆಚ್ಚಾಗಿ ಸಂಭವಿಸುತ್ತಿದೆ ಎನ್ನಲಾಗುತ್ತಿದೆ. ಈ ನಡುವೆ ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ದಿನಕ್ಕೆ ಸರಾಸರಿ ಎರಡು ಜ್ವರದ ಪ್ರಕರಣಗಳು ದಾಖಲಾಗುತ್ತಿವೆ. ಇತರ ವೈರಸ್‌ಗಳ ಕಾರಣದ ಜ್ವರದ ಪ್ರಕರಣ ದಾಖಲಾಗುತ್ತಿವೆ ಎಂದು ಹೇಳಲಾಗಿದೆ. ಈ ಕುರಿತಂತೆ ಪತ್ರಿಕೆಯೊಂದಿಗೆ ಮಾತನಾಡಿದ ತಾಲೂಕು ಆರೋಗ್ಯಾಧಿ ಕಾರಿ ಡಾ| ಮುನಿ ವೆಂಕಟರಾಜು, ಪ್ರಯೋಗಾಲಯದ ವರದಿ ಕೈ ಸೇರುತ್ತಿದ್ದಂತೆ ನಾನು ಅರಳಗೋಡು ಭಾಗದ ಕಾನೂರು ಸೇರಿದಂತೆ ವಿವಿಧೆಡೆ ಬುಧವಾರ ಸ್ಥಳ ಪರಿಶೀಲನೆ ನಡೆಸಿದ್ದೇನೆ. ಲಸಿಕೆಯ ಮೂರನೇ ಡೋಸ್ ಪಡೆಯದವರ ಮನ ಒಲಿಸಿ ಎಲ್ಲರೂ ಲಸಿಕೆ ಪಡೆಯಬೇಕು ಎಂಬುದನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದ್ದೇನೆ.
ಕೆಎಫ್‌ಡಿ ಘಟಕದ ಮೂಲಕ ಇನ್ನೊಂದು ಸುತ್ತಿನ ಲಸಿಕೆ ಅಭಿಯಾನವನ್ನು ಸದ್ಯದಲ್ಲಿಯೇ ಕೈಗೆತ್ತಿಕೊಳ್ಳಲಾಗುತ್ತದೆ ಎಂದರು.
ನಮ್ಮಲ್ಲಿ ಸಾಕಷ್ಟು ಡಿಎಂಪಿ ಆಯಿಲ್ ಹಾಗೂ ಲಸಿಕೆಯ ಸಂಗ್ರಹವಿದೆ. ಇವರೆಡರಿಂದಲೇ ನಾವು ಮಂಗನ ಕಾಯಿಲೆಯನ್ನು
ನಿಯಂತ್ರಿಸಬೇಕಿದೆ. ಕಳೆದ ವರ್ಷದಂತೆ ಜನ ಗಾಬರಿ ಬೀಳಬೇಕಿಲ್ಲ. ಎರಡು ಬಾರಿ ಲಸಿಕೆ ತೆಗೆದುಕೊಂಡವರಲ್ಲೂ ಪ್ರತಿರೋಧಕ ಶಕ್ತಿ ಹೆಚ್ಚಿದ್ದು, ಜ್ವರದ ಸೋಂಕಿಗೆ ಒಳಗಾದವರನ್ನು ಅರಳಗೋಡು, ಸಾಗರದಲ್ಲಿ ಚಿಕಿತ್ಸೆ ಕೊಟ್ಟು ಗುಣಮುಖರಾಗಿಸುವ ವಿಶ್ವಾಸ ಮೂಡಿದೆ.
ಅರಳಗೋಡು ಭಾಗದ ಜನ ಪದೇ ಪದೇ ಜ್ವರ ಬರುತ್ತಿದ್ದರೆ ಅವರನ್ನು ತಕ್ಷಣ ಗುರುತಿಸಿ ರಕ್ತ ಪರೀಕ್ಷೆಗೆ ಒಳಪಡಿಸುತ್ತಿದ್ದೇವೆ. ತಾಲೂಕಿನ ವಿವಿಧ ಖಾಸಗಿ ಆಸ್ಪತ್ರೆಯವರಿಗೂ ಇಲಾಖೆ ಸೂಚನೆ ನೀಡಿದ್ದು, ಅರಳಗೋಡು ಭಾಗದ ಜನ ಜ್ವರ ಕಾರಣ ಚಿಕಿತ್ಸೆಗೆ ಬಂದಿದ್ದರೆ ಅವರ ರಕ್ತ ತೆಗೆದು ಪರೀಕ್ಷೆಗೆ ಆರೋಗ್ಯ ಇಲಾಖೆಗೆ ಕಳುಹಿಸಿಕೊಡಲು ಹೇಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ಈ ನಡುವೆ ಕಳೆದ ಬೇಸಿಗೆಯಲ್ಲಿ ಮಂಗನ ಕಾಯಿಲೆಗೆ ತುತ್ತಾಗಿ ಜೀವ ಕಳೆದುಕೊಂಡ ಎಂಟು ಕುಟುಂಬಗಳಿಗೆ ತಲಾ ಎರಡು ಲಕ್ಷ ರೂ. ಪರಿಹಾರ ಧನ ವಿತರಿಸಲು ಜಿಲ್ಲಾಧಿಕಾರಿಗಳು ತಹಶೀಲ್ದಾರ್‌ರಿಗೆ ಆದೇಶ ನೀಡಿದ್ದಾರೆ. ಒಟ್ಟು 23 ವ್ಯಕ್ತಿಗಳು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಉಳಿದವರಿಗೂ ಮುಂದಿನ
ಹಂತದಲ್ಲಿ ಪರಿಹಾರ ವಿತರಣೆಯಾಗುತ್ತದೆ ಎಂದು ಹೇಳಲಾಗುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.