ಅಭಿವೃದ್ಧಿಗೂ ಪಕ್ಷ ರಾಜಕಾರಣದ ಸೋಂಕು!
Team Udayavani, Sep 5, 2021, 4:39 PM IST
ಸಾಗರ: ಅಭಿವೃದ್ಧಿಯ ಹೆಸರಿನಲ್ಲಿ ಜನಪ್ರತಿನಿಧಿಗಳು ಪಕ್ಷಾಂತರಕ್ಕೆ ಮುಂದಾಗುತ್ತಿರುವ ವಿದ್ಯಮಾನ ನಡೆಯುತ್ತಿರುವ ಕಾಲದಲ್ಲಿ, ಜಿಲ್ಲೆಯ ವಿರೋಧ ಪಕ್ಷದ ಜನಪ್ರತಿನಿಧಿಯ ಅನುದಾನದಲ್ಲಿ ಮಂಜೂರಾದ ಬಸ್ ನಿಲ್ದಾಣವನ್ನು ತಮ್ಮೂರಲ್ಲಿ ನಿರ್ಮಿಸುವುದಕ್ಕೆ ಮುಜುಗರಪಟ್ಟು ಗ್ರಾಮಸ್ಥರು ವಿರೋಧಿಸಿದ ವಿಲಕ್ಷಣ ಘಟನೆ ಸಾಗರ ತಾಲೂಕಿನಲ್ಲಿ ನಡೆದಿದೆ.
ಶಿವಮೊಗ್ಗದ ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್‌ನ ಪ್ರಸನ್ನಕುಮಾರ್ ಅವರ ಮಲೆನಾಡು ಪ್ರದೇಶ ಅಭಿವೃದ್ಧಿ ಯೋಜನೆಯ ಶಾಸಕರ ಅನುದಾನದ ಕೋಟಾದಡಿಯಲ್ಲಿ ತಾಲೂಕಿನ ತುಮರಿ ಭಾಗದ ವಳಗೆರೆ ಎಂಬಲ್ಲಿಗೆ ಬಸ್ ನಿಲ್ದಾಣ ಮಂಜೂರಾಗಿದೆ. ನಾಲ್ಕಾರು ಹಳ್ಳಿಗಳಿಂದ ಬರುವ ಜನರಿಗೆ ಬಸ್‌ಗಾಗಿ ಕಾಯುವ ಸ್ಥಳವಾಗಿ ಬಸ್ ನಿಲ್ದಾಣ ಇಲ್ಲಿಗೆ ಉತ್ತಮ ಆಯ್ಕೆಯಾಗಿತ್ತು. ಈ ಮಂಜೂರಾತಿಯ ಹಿಂದೆ ಪ್ರಸನ್ನಕುಮಾರ್ ಅವರ ದೂರದೃಷ್ಟಿ ಅಥವಾ ಬಿಜೆಪಿ ಪ್ರಾಬಲ್ಯದ ಪ್ರದೇಶದಲ್ಲಿ ಪಕ್ಷ ರಾಜಕಾರಣ ಕೆಲಸ ಮಾಡಿರುವ ಬಗ್ಗೆ ಸ್ಪಷ್ಟ ನಿದರ್ಶನಗಳಿಲ್ಲ. ಆದರೆ ವಳಗೆರೆ ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಕೆರೆಕೈ ಪ್ರಸನ್ನರ ಊರು. ಈಗಲೂ ಉತ್ತರ ಕನ್ನಡ ಜಿಲ್ಲೆಯ ಬಿಜೆಪಿ ಉಸ್ತುವಾರಿ ನೋಡಿಕೊಳ್ಳುತ್ತಿರುವ ಪ್ರಸನ್ನ ಅವರ ಗ್ರಾಮದಲ್ಲಿ ಕಾಂಗ್ರೆಸ್‌ನ ಜನಪ್ರತಿನಿಧಿ ಫೋಟೋ, ಹೆಸರು ಹೊತ್ತ ಬಸ್ ನಿಲ್ದಾಣ ತಲೆ ಎತ್ತಿ ನಿಲ್ಲುವುದು ಈ ಭಾಗದ ಕೆಲವು ಬಿಜೆಪಿ ಪ್ರಮುಖರಿಗೆ ಸಹನೀಯ ಎನ್ನಿಸಲಿಲ್ಲ. ಅವರದನ್ನು ಬೇರೆ ಬೇರೆ ಕಾರಣಗಳನ್ನು ಮುಂದೊಡ್ಡಿ ವಿರೋಧಿಸಿದರು.
ಅನುದಾನಕ್ಕೊಂದು ಜಾಗ ಸಿಕ್ಕಿ ಬಸ್ ನಿಲ್ದಾಣ ನಿರ್ಮಾಣ ಆಗಲೇಬೇಕು. ಅದು ಗುತ್ತಿಗೆದಾರರಿಗೂ ಅನಿವಾರ್ಯವಾದಾಗ ಹತ್ತಿರದ ಮತ್ತೊಂದು ಹಳ್ಳಿಯನ್ನು ಹುಡುಕಲಾಯಿತು. ಬಸ್ ನಿಲ್ದಾಣ ಅತ್ಯಂತ ಅವಶ್ಯಕವಿದ್ದ ಗುಮಗೋಡು ಎಂಬ ಊರಿಗೆ ಸ್ಥಳಾಂತರಿಸಲು ಪ್ರಯತ್ನಿಸಲಾಯಿತು. ವಿಚಿತ್ರವೆಂದರೆ ಅಲ್ಲೂ ವಿರೋಧ ವ್ಯಕ್ತವಾಯಿತು. ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ ಅವರು ದೊಡ್ಡ ಪ್ರಮಾಣದಲ್ಲಿ ಸಹಾಯ ನೀಡಿದ ದೇವಸ್ಥಾನವಿರುವ ಗುಮಗೋಡು, ಆ ದೇವಸ್ಥಾನದ ಕಾರಣದಿಂದಲೇ ಈ ಭಾಗದಲ್ಲಿ ಪರಸ್ಥಳದ ಭಕ್ತರ ಗಮನ ಸೆಳೆಯುತ್ತಿರುವಾಗ, ಗುರುಮೂರ್ತಿಯವರಿಗೆ ಮುಜುಗರವನ್ನುಂಟು ಮಾಡುವ ಬಸ್ ನಿಲ್ದಾಣ ಅಲ್ಲಿನ ಜನರಿಗೆ ಬೇಡ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಗುರುಮೂರ್ತಿಯವರನ್ನು ಸಂಪರ್ಕಿಸಿದಾಗ, ಬೇರೊಂದು ಬಸ್ ನಿಲ್ದಾಣದ ಅನುದಾನ ಕೊಡಿಸುವ ಭರವಸೆಯೂ ಸಿಕ್ಕಿದೆ ಎಂದು ತಿಳಿದುಬರುತ್ತಿದೆ. ಎಲ್ಲರಿಗೂ ಬಸ್ ನಿಲ್ದಾಣ ಬೇಕಾದರೂ ಎಂಎಲ್‌ಸಿ ಪ್ರಸನ್ನಕುಮಾರ್ ಅವರ ಹೆಸರು ರಾರಾಜಿಸುವ ಬಸ್ ನಿಲ್ದಾಣ ಬೇಡ ಎಂಬ ಪರಿಸ್ಥಿತಿ ನಿರ್ಮಾಣವಾಯಿತು.
ನಗರ ಪ್ರಸೂತಿ ಕೇಂದ್ರದಲ್ಲಿಲ್ಲ ಆಂಬ್ಯುಲೆನ್ಸ್!
ಬಸ್ ನಿಲ್ದಾಣ ಎಂಬುದು ಬೇಡವಾದ ಕೂಸಾದ ಸಂದರ್ಭದಲ್ಲಿ ಕಾಂಗ್ರೆಸ್ ಬೆಂಬಲಿತ ಗ್ರಾಮಪಂಚಾಯ್ತಿ ಸದಸ್ಯ ಕಳಸವಳ್ಳಿ ಶ್ರೀಧರಮೂರ್ತಿ ತಮ್ಮೂರಲ್ಲಿ ಅದನ್ನು ನಿರ್ಮಿಸಲು ಜಾಗ ಸೂಚಿಸಿದರು. ಈ ಹಿಂದಿನ ದಾಖಲೆಯಲ್ಲಿನ ಅನುದಾನ ಮಂಜೂರಾತಿಯಂತೆಯೇ ಕಳಸವಳ್ಳಿಯಲ್ಲಿ ಅತ್ಯಾಧುನಿಕ, ಆಕರ್ಷಕ ಬಸ್‌ಸ್ಟಾಂಡ್ ನಿರ್ಮಾಣವಾಗಿದೆ. ಕಾನೂನು ಕಾರಣಕ್ಕಾಗಿ ಕಳಸವಳ್ಳಿಯಲ್ಲಿ ನಿರ್ಮಿತವಾದ ಬಸ್ ನಿಲ್ದಾಣಕ್ಕೆ ವಳಗೆರೆ ಬಸ್ ನಿಲ್ದಾಣ ಎಂದೇ ಫಲಕ ಹಾಕಲಾಗಿದೆ. ವಾಸ್ತವವಾಗಿ ತುಮರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಳಗೆರೆ ಹಾಗೂ ಕಳಸವಳ್ಳಿ ನಡುವೆ ಬರೋಬ್ಬರಿ ಐದು ಕಿಮೀ ಅಂತರವಿದೆ!
ಗುತ್ತಿಗೆದಾರರ ಬಿಲ್ ಇತ್ಯರ್ಥವಾದ ನಂತರ ರಾತ್ರೋರಾತ್ರಿ ವಳಗೆರೆಯ ಹೆಸರಿರುವ ಫಲಕ ಕಳಸವಳ್ಳಿ ಎಂದು ಬದಲಾಗಿ ಸಿಗಂದೂರಿಗೆ ಬರುವ ಪ್ರವಾಸಿಗರಿಗೆ ತಪ್ಪಾಗಿ ಸ್ಥಳ ಪರಿಚಯವಾಗುವುದು ನಿಲ್ಲಬಹುದು. ಆದರೆ ಕೇವಲ ಮೂರು ಮನೆಗಳಿರುವ ಕಳಸವಳ್ಳಿಗಿಂತ ಆದ್ಯತೆಯ ಮೇಲೆ ವಳಗೆರೆ ಅಥವಾ ಗುಮಗೋಡಿನಲ್ಲಿ ಬಸ್ ನಿಲ್ದಾಣ ನಿರ್ಮಾಣ ಆಗಿದ್ದರೆ ಸರ್ಕಾರದ ಹಣ ಅರ್ಹವಾದ ರೀತಿಯಲ್ಲಿ ಸಾರ್ವಜನಿಕ ಹಿತಕ್ಕೆ ಬಳಕೆಯಾದಂತಾಗುತ್ತಿತ್ತು ಎಂಬ ಅಭಿಪ್ರಾಯ ಈ ಭಾಗದಲ್ಲಿ ದಟ್ಟವಾಗಿದೆ.
ವರದಿ:ಪ್ರಸಾದ್ ಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga: ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಕಾಟ; ಇಲಾಖೆ ವಿರುದ್ದ ರೈತರ ಆಕ್ರೋಶ
B. Y. Raghavendra: 10 ವರ್ಷದಲ್ಲಿ ವಕ್ಫ್ ಆಸ್ತಿ ಶೇ.135 ಹೆಚ್ಚಳ
Thirthahalli: ಪಾದರಕ್ಷೆ, ಮೊಬೈಲ್ ನದಿ ದಡದಲ್ಲಿಟ್ಟು ವ್ಯಕ್ತಿ ನಾಪತ್ತೆ ಪ್ರಕರಣ; ಶವ ಪತ್ತೆ
ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಯತ್ನಕ್ಕೆ ಹಿನ್ನಡೆ?
Naxal: ವಿಕ್ರಂ ವಿರುದ್ಧ ಆಗುಂಬೆ, ತೀರ್ಥಹಳ್ಳಿ, ಚಿಕ್ಕಮಗಳೂರು ಠಾಣೆಗಳಲ್ಲಿ ಹಲವು ಪ್ರಕರಣ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.