ಸಾಗರ; ಆರು ಕಡೆ ಸೀಲ್‌ಡೌನ್
Team Udayavani, Jul 8, 2020, 3:40 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಸಾಗರ: ನಗರ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಕೋವಿಡ್ ಸೋಂಕಿತರ ಪಾಸಿಟಿವ್ ವರದಿ ಬಂದ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಒಟ್ಟು 6 ಕಡೆಗಳಲ್ಲಿ ಸೀಲ್ ಡೌನ್ ಮಾಡಿದೆ. ಮಂಗಳವಾರ ತಾಲೂಕಿನ ಮಟ್ಟಿಗೆ ಯಾವುದೇ ಕೋವಿಡ್ 19 ಪಾಸಿಟಿವ್ ಪ್ರಕರಣಗಳು ದಾಖಲಾಗಿಲ್ಲ.
ಇಕ್ಕೇರಿ ರಸ್ತೆ, ಮಾರ್ಕೆಟ್ ರಸ್ತೆ, ಕೆಳದಿ ರಸ್ತೆ, ಮೆಸ್ಕಾಂ ಕಚೇರಿ ವ್ಯಾಪ್ತಿ, ಸುಭಾಷ್ ನಗರ ಹಾಗೂ ಶ್ರೀಧರ ನಗರದ ಭಾಗಗಳಲ್ಲಿ ಸೀಲ್ ಡೌನ್ ಪ್ರದೇಶ ಹಾಗೂ ಬಫರ್ ಝೋನ್‌ಗಳನ್ನು ನಿಗದಿಪಡಿಸಿದೆ. ನಂದೀಶ್, ವಿಷ್ಣುಮೂರ್ತಿ, ಕೆ.ಮಂಜಪ್ಪ, ಹರೀಶ್ ಅವರನ್ನು ಇನ್ಸಿಡೆಂಟ್ ಕಮಾಂಡರ್‌ಗಳನ್ನಾಗಿ ನೇಮಕ ಮಾಡಲಾಗಿದೆ. ಸೀಲ್‌ಡೌನ್ ಪ್ರದೇಶದ ಜನರ ಅಗತ್ಯ ವಸ್ತುಗಳನ್ನು ಪೂರೈಸುವ ಜವಾಬ್ದಾರಿ ನಗರಸಭೆ ಅಧಿಕಾರಿ ಪ್ರಭಾಕರ್ ನೇತೃತ್ವದಲ್ಲಿ ನಡೆದಿದೆ. ಆದರೆ ಸೀಲ್‌ಡೌನ್ ಪ್ರದೇಶದ ಜನ ಕಣ್ಣು ತಪ್ಪಿಸಿ ನಗರದಲ್ಲಿ ಓಡಾಡುತ್ತಿದ್ದಾರೆ ಎಂಬ ದೂರು ಸಹ ಕೇಳಿಬಂದಿದೆ.
ಕೆಳದಿ ರಸ್ತೆ ಹಾಗೂ ಅಣೆಲೆಕೊಪ್ಪ ವ್ಯಾಪ್ತಿ 310 ಜನರಿರುವ 86 ಮನೆಗಳನ್ನು ಹಾಗೂ 7 ಅಂಗಡಿಗಳಿರುವ ಪ್ರದೇಶವನ್ನು ಸೀಲ್ ಡೌನ್ ಮಾಡಿದೆ. 1,926 ಜನರಿರುವ 630 ಮನೆಗಳನ್ನು ಮತ್ತು 12 ಅಂಗಡಿಗಳ ವ್ಯಾಪ್ತಿಯನ್ನು ಬಫರ್ ಝೋನ್ ಎಂದು ಪರಿಗಣಿಸಲಾಗಿದೆ. ಸುಭಾಷ್ ನಗರದಲ್ಲಿನ 12 ಮನೆಗಳ, 54 ನಿವಾಸಿಗಳಿರುವ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದ್ದು, ಈ ಭಾಗದಲ್ಲಿ 7 ಅಂಗಡಿಗಳು, 2 ನ್ಯಾಯಬೆಲೆ ಅಂಗಡಿ ಹಾಗೂ ತಲಾ ಒಂದು ಅಂಗನವಾಡಿ, ಖಾನಾವಳಿ ಸೀಲ್ ಡೌನ್ ಆಗಿದೆ. ಬಫರ್ ಝೋನ್ ವ್ಯಾಪ್ತಿಯಲ್ಲಿ 1386 ನಿವಾಸಿಗಳ 320 ಮನೆಗಳನ್ನು ಮತ್ತು 25 ಅಂಗಡಿಗಳನ್ನು ಪರಿಗಣಿಸಲಾಗಿದೆ.
ಶ್ರೀಧರ ನಗರ ಪ್ರದೇಶದಲ್ಲಿ 60 ಮನೆಗಳಲ್ಲಿನ 257 ಜನರು ವಾಸಿಸುವ ಹಾಗೂ 2 ಅಂಗಡಿಗಳಿರುವ ಭಾಗವನ್ನು ಸೀಲ್ ಡೌನ್ ಮಾಡಲಾಗಿದೆ. ಈ ವ್ಯಾಪ್ತಿಯಲ್ಲಿನ 1947 ನಿವಾಸಿಗಳಿರುವ 400 ಮನೆಗಳನ್ನು, 4 ಅಂಗಡಿಗಳನ್ನು ಹಾಗೂ 2 ಮರ ಕೈಗಾರಿಕೆ ಘಟಕಗಳನ್ನು ಬಫರ್‌ಝೋನ್ ಪ್ರದೇಶ ಎಂದು ಗುರುತಿಸಲಾಗಿದೆ. ಜೆಸಿ ರಸ್ತೆಯಲ್ಲಿ ಔಷಧ ಅಂಗಡಿಯ ವ್ಯಕ್ತಿಯೊಬ್ಬರಲ್ಲಿ ಕೋವಿಡ್ ಪಾಸಿಟಿವ್ ವರದಿಯಾದ ಹಿನ್ನೆಲೆಯಲ್ಲಿ 100 ಮೀಟರ್ ವ್ಯಾಪ್ತಿಯ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಿಸಲಾಗಿದ್ದು, ಔಷಧ ಅಂಗಡಿಗೆ ಅವಕಾಶ ನೀಡಲಾಗಿದೆ.
ಸಾರ್ವಜನಿಕ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೋವಿಡ್ ಪಾಸಿಟಿವ್ ವರದಿಯಾದ ವ್ಯಕ್ತಿ ಕೆಲಸ ಮಾಡುತ್ತಿದ್ದ ಔಷಧ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಉಳಿದ 7 ಜನರ ಗಂಟಲು ದ್ರವ ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಲಾಗಿದ್ದು, ಅವರಿಗೆ ಹೋಂ ಕ್ವಾರೆಂಟೈನ್ ಪಾಲಿಸಲು ಆರೋಗ್ಯ ಇಲಾಖೆ ಸೂಚಿಸಿದೆ. ಈ ನಡುವೆ ಸೋಂಕಿತ ವ್ಯಕ್ತಿಯನ್ನು ಉಡುಪಿಯಲ್ಲಿಯೇ ಕ್ವಾರಂಟೈನ್ ಮಾಡಲಾಗಿದೆ. ಮಂಗಳವಾರ ಸಾಗರದಲ್ಲಿ ಒಟ್ಟು 75 ಗಂಟಲು ದ್ರವದ ಮಾದರಿಗಳನ್ನು ಪಡೆದು ಶಿವಮೊಗ್ಗಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.