ಸಾಗರ: ಕಾಯಿಲೆಗೆ ಪರಿಹಾರ ಸಿಕ್ಕಿಲ್ಲ, ಇದು ಸ್ವಾತಂತ್ರ್ಯ ಅಲ್ಲ ಸಂತ್ರಸ್ತನಿಂದ; ಪ್ರತಿಭಟನೆ!
Team Udayavani, Aug 15, 2022, 6:29 PM IST
ಸಾಗರ: ತಾಲೂಕಿನ ಹಂದಿಗೋಡು ಕಾಯಿಲೆಗೆ ಈವರೆಗೆ ಪರಿಹಾರ ಕಂಡುಹಿಡಿಯುವ ಪ್ರಯತ್ನವನ್ನು ಸರ್ಕಾರ ಮಾಡದೆ ನಮಗೆ ನಿಜ ಅರ್ಥದಲ್ಲಿ ಸ್ವಾತಂತ್ರ್ಯ ಸಿಕ್ಕಿಲ್ಲ ಎಂದು ಆರೋಪಿಸಿ ದಲಿತ ನಾಯಕ, ಹಂದಿಗೋಡು ಕಾಯಿಲೆ ಸಂತ್ರಸ್ತ, ತಾಲೂಕಿನ ಬಂದಗದ್ದೆಯ ರಾಜೇಂದ್ರ ಸೋಮವಾರ ತಮ್ಮ ಮನೆಯವರೊಂದಿಗೆ ಸೇರಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ಈ ಸಂಬಂಧ ಮಾತನಾಡಿದ ಅವರು, ಸ್ವತಂತ್ರ ಬಂದು 75 ವರ್ಷಗಳಾಗಿದ್ದರೂ ದಲಿತರಿಗೆ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಹಾಗೂ ಆರ್ಥಿಕ ಸಮಾನತೆ ಲಭಿಸಿಲ್ಲ. ಇಂತಹ ವೇಳೆ ಬಂದ ಮಾರಕ ಹಂದಿಗೋಡು ಕಾಯಿಲೆಗೆ ಮೂರು ಸಾವಿರಕ್ಕೂ ಹೆಚ್ಚು ಜನ ಶಾಶ್ವತ ಅಂಗವಿಕಲರಾಗುವ ಪರಿಸ್ಥಿತಿ ಬಂದಿದ್ದರೂ, ಸಾವಿರಾರು ಜನ ಸತ್ತಿದ್ದರೂ, ಸಾಯುತ್ತಿದ್ದರೂ ಸರ್ಕಾರ ನಮ್ಮ ಕಡೆ ಗಮನ ಹರಿಸಿಲ್ಲ. ಸರ್ಕಾರಕ್ಕೆ ಉಳ್ಳವರು ಬೇಕೇ ವಿನಃ ದಲಿತರು ಬೇಕಾಗಿಲ್ಲ. ನಾವು ಚುನಾವಣೆಯ ಸಂದರ್ಭದಲ್ಲಿ ಮಾತ್ರ ನೆನಪಾಗುತ್ತೇವೆ ಎಂದು ಆರೋಪಿಸಿದರು.
ಹಿಂದೆ ಈ ಹಂದಿಗೋಡು ಕಾಯಿಲೆ ಬಂದಾಗ ಅವತ್ತಿನ ಸಿಎಂ ಜೆ.ಎಚ್.ಪಟೇಲ್ ಸರ್ಕಾರ ಸದನ ಸಮಿತಿ ರಚಿಸಿತು. ಐಸಿಎಂಆರ್ ಬಂದು ವರದಿ ಕೊಟ್ಟಿತು. ಇದನ್ನು ವಿಶ್ವ ಆರೋಗ್ಯ ಸಂಸ್ಥೆಯ ಮಟ್ಟದಲ್ಲಿ ವಿಶ್ಲೇಷಿಸಬೇಕು ಎಂಬ ಒತ್ತಾಯ ಕೇಳಿಬಂದಿತು. ಆದರೆ ಸರ್ಕಾರ ಇದ್ದವರಿಗೆ, ಸತ್ತವರಿಗೆ ಪರಿಹಾರ ಒದಗಿಸದೆ ನಿರ್ಲಕ್ಷ್ಯ ಮಾಡಿದೆ. ಹಾಗಾಗಿ ನಮಗೆ ಸ್ವಾತಂತ್ರ್ಯ ಬಂದಂತಹ ಅನುಭವವೇ ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂದು ತೋಟಗಳಲ್ಲಿ ರೋಗಗಳನ್ನು ಕಾಣಿಸಿಕೊಂಡರೆ ತಕ್ಷಣ ಔಷಧ ಪತ್ತೆ ಹಚ್ಚಲಾಗುತ್ತಿದೆ. ಆದರೆ ಹಂದಿಗೋಡು ಕಾಯಿಲೆಗೆ ಔಷಧೋಪಚಾರ ಇಲ್ಲದೆ ನಾನು, ನನ್ನಂತವರು ಸಾಯುತ್ತಿದ್ದೇವೆ. ಈಗಲೂ ಸಾವಿರಾರು ಜನ ಇದರಿಂದ ಸಂತ್ರಸ್ತರಾದವರಿದ್ದೇವೆ. ಸರ್ಕಾರ ಈ ರೀತಿಯ ಪ್ರತಿಭಟನೆ, ಹೋರಾಟಗಳನ್ನು ಗಮನಿಸಿದ ನಂತರವಾದರೂ ನಮ್ಮ ನೆರವಿಗೆ ಬರುತ್ತದೆ ಎಂಬ ಆಶಯ ಹೊಂದಿದ್ದೇವೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.