ಸ್ಥಳೀಯರಿಗೆ ಮಾತ್ರ ಸಾಂಸ್ಥಿಕ ಕ್ವಾರಂಟೈನ್
ಹೊರಗಿನವರಿಗೆ ವಸತಿ ನೀಡಿದ್ದಕ್ಕೆ ಜನರ ವಿರೋಧ-ಪ್ರತಿಭಟನೆ ಸುರಕ್ಷಿತ ಸ್ಥಳಕ್ಕೆ ಸಲಹೆ
Team Udayavani, May 15, 2020, 12:59 PM IST
ಸಾಂದರ್ಭಿಕ ಚಿತ್ರ
ಸಾಗರ: ತಾಲೂಕಿನ 35 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯ ವಿದ್ಯಾರ್ಥಿಗಳ ವಸತಿ ನಿಲಯಗಳಲ್ಲಿ ಪಂಚಾಯ್ತಿ ವ್ಯಾಪ್ತಿಯ ಹೊರರಾಜ್ಯ ಅಥವಾ ಹೊರದೇಶದಿಂದ ಬಂದಂತಹ ನಿವಾಸಿಗಳಿಗೆ ಮಾತ್ರ ಸಾಂಸ್ಥಿಕ ಕ್ವಾರಂಟೈನ್ ಮಾಡಲು ತಾಲೂಕು ಆಡಳಿತ ಬುಧವಾರ ಸಂಜೆ ತೀರ್ಮಾನ ತೆಗೆದುಕೊಂಡಿದೆ.
ಈ ಸಂಬಂಧ ನಗರದ ಉಪವಿಭಾಗಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶಾಸಕ ಎಚ್.ಹಾಲಪ್ಪ ಹರತಾಳು ಅವರ ಅನುಪಸ್ಥಿತಿಯಲ್ಲಿ ವಿವಿಧ ಪ್ರಮುಖ ಅ ಧಿಕಾರಿಗಳು ನಡೆಸಿದ ಕೋವಿಡ್-19 ಕಾರ್ಯಪಡೆಯ ಸಭೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ತೀರ್ಮಾನಿಸಲಾಗಿದೆ. ತಾಲೂಕಿನ ಎಡಜಿಗಳೇಮನೆ, ಕೆಳದಿ, ಆನಂದಪುರ ಮುಂತಾದ ವಿವಿಧ ಗ್ರಾಮೀಣ ಭಾಗದಲ್ಲಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಲ್ಲಿ ಹೊರಗಿನ ರಾಜ್ಯ, ದೇಶದಲ್ಲಿರುವವರು ವಾಪಾಸು ಮನೆಗೆ ಮರಳುತ್ತಿರುವ ಜಿಲ್ಲೆಯ ಜನರನ್ನು ಕೊರೊನಾ ಸೋಂಕು ಕಾರಣಕ್ಕೆ 14 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತದೆ ಎಂಬ ಸುದ್ದಿಗಳ ಹಿನ್ನೆಲೆಯಲ್ಲಿ ತಾಲೂಕಿನ ಜನ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವುದನ್ನು ಪರಿಗಣಿಸಲಾಯಿತು.
ವಿಷಯವನ್ನು ಪ್ರಸ್ತಾಪಿಸಿದ ತಾಲೂಕು ಪಂಚಾಯ್ತಿ ಅಧ್ಯಕ್ಷ ಬಿ.ಎಚ್.ಮಲ್ಲಿಕಾರ್ಜುನ ಹಕ್ರೆ, ಸುರಕ್ಷಿತ ಸ್ಥಳಗಳಲ್ಲಿ ಮಾತ್ರ ಜನರ ಕ್ವಾರೆಂಟೈನ್ ಮಾಡಬೇಕು. ಅಟ್ಯಾಚ್ ಬಾತ್‌ರೂಂಗಳಿರುವ ಕೊಠಡಿಗಳಲ್ಲಿ ಹಾಗೂ ಮಾನಸಿಕ ಸಮಾಧಾನಕ್ಕೆ ಟಿವಿ ಸೌಕರ್ಯ ಇರುವ ಖಾಸಗಿ ವಸತಿಗೃಹಗಳನ್ನು ಮೊದಲ ಆದ್ಯತೆಯಾಗಿ ಬಳಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ಚರ್ಚೆಗೆ ಪ್ರತಿಕ್ರಿಯಿಸಿದ ಸಾಗರ ಉಪವಿಭಾಗದ ಸಹಾಯಕ ಆಯುಕ್ತ ಡಾ| ನಾಗರಾಜ್ ಎನ್. ಮಾತನಾಡಿ, ಯಾವುದೇ ಕಾರಣಕ್ಕೂ ಹೊರಗಿನ ತಾಲೂಕಿನ ವ್ಯಕ್ತಿಗಳಿಗೆ ನಮ್ಮ ತಾಲೂಕಿನಲ್ಲಿ ಕ್ವಾರೆಂಟೈನ್ ಮಾಡಲು ಅವಕಾಶವಿಲ್ಲ. ಸ್ಥಳೀಯ ನಿವಾಸಿಗಳಿಗೆ ಸ್ಥಳೀಯ ವ್ಯಾಪ್ತಿಯ ಸರ್ಕಾರಿ ವಸತಿ ವಿದ್ಯಾರ್ಥಿ ನಿಲಯಗಳನ್ನು ಮಾತ್ರ ಬಳಸಿಕೊಳ್ಳಲಾಗುವುದು ಎಂದರು.
ಸಾಗರದಲ್ಲಿ 500 ಜನರನ್ನು ಕ್ವಾರಂಟೈನ್ ಮಾಡಲು ಆಸ್ಪತ್ರೆಯಲ್ಲಿ ಸ್ಥಳಾವಕಾಶವಿಲ್ಲದ ಕಾರಣ ಸರ್ಕಾರ ಮತ್ತು ಜಿಲ್ಲಾಡಳಿತದ ಆದೇಶದ ಮೇರೆಗೆ ಸರ್ಕಾರಿ ವಸತಿ ನಿಲಯಗಳನ್ನು ಕ್ವಾರಂಟೈನ್ ಸ್ಥಳಗಳನ್ನಾಗಿ ಪರಿವರ್ತಿಸಿಕೊಳ್ಳಲಾಗಿದೆ. ಕ್ವಾರಂಟೈನ್ ಮಾಡುವ ಪೂರ್ವಭಾವಿಯಾಗಿ ಎಲ್ಲ ಅನಿವಾಸಿಗರನ್ನು ಅಗತ್ಯ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತದೆ. ಯಾವುದೇ ಸೋಂಕಿಲ್ಲ ಎಂಬ ಪ್ರಾಥಮಿಕ ದೃಢೀಕರಣದ ಆಧಾರದಲ್ಲಿ ಸಾರ್ವತ್ರಿಕ ಸುರಕ್ಷತೆಯ ಉದ್ದೇಶಿತ ಮುಂಜಾಗೃತಾ ಕ್ರಮವಾಗಿ ಕ್ವಾರಂಟೈನ್ ಮಾಡಲಾಗುತ್ತದೆ. ಕ್ವಾರಂಟೈನ್ ಕೇಂದ್ರಗಳ ಮಾಹಿತಿ ಹಾಗೂ ಕ್ವಾರಂಟೈನ್‌ಗೆ ಒಳಪಟ್ಟಿರುವವರ ಸಂಪೂರ್ಣ ಪಟ್ಟಿಯನ್ನು ಆಯಾ ವ್ಯಾಪ್ತಿಯ ಗ್ರಾಮ ಪಂಚಾಯ್ತಿಗಳಿಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳ ಮೂಲಕ ನೀಡಲಾಗುವುದು ಎಂದರು.
ಸಭೆಯಲ್ಲಿ ಪೊಲೀಸ್ ಉಪಾಧಿಧೀಕ್ಷಕರಾದ ವಿನಾಯಕ್ ಎಸ್. ಶೆಟ್ಟಿಗಾರ್, ತಹಶೀಲ್ದಾರ್ ಚಂದ್ರಶೇಖರ ನಾಯ್ಕ, ತಾಪಂ ಕಾರ್ಯನಿರ್ವಹಣಾಧಿಕಾರಿ ಪುಷ್ಪ ಎಂ.ಕಮ್ಮಾರ್, ಹಿಂದುಳಿದ ವಸತಿನಿಲಯಗಳ ವಿಸ್ತರಣಾಧಿಕಾರಿ ಲಕ್ಷ್ಮೀ ನಾರಾಯಣ, ನಗರಸಭೆ ಪೌರಾಯುಕ್ತ ಎಚ್.ನಾಗಪ್ಪ, ತಾಲೂಕು ಆರೋಗ್ಯಾ ಧಿಕಾರಿ ಡಾ| ಮೋಹನ್, ಡಾ| ವಾಸುದೇವ್, ತಾಪಂ ಉಪಾಧ್ಯಕ್ಷ ಅಶೋಕ್ ಬರದವಳ್ಳಿ ಮೊದಲಾದವರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.