ನೀರಿಗಾಗಿ ವ್ಯಾಪಾರಸ್ಥರ ಹಾಹಾಕಾರ
ಶಿವಮೊಗ್ಗ ಕೆಎಸ್ಸಾರ್ಟಿಸಿ- ಖಾಸಗಿ ಬಸ್ ನಿಲ್ದಾಣಕ್ಕೆ 7 ತಿಂಗಳಿನಿಂದ ನೀರಿನ ಪೂರೈಕೆ ಇಲ್ಲ
Team Udayavani, Feb 2, 2020, 1:19 PM IST
ಶಿವಮೊಗ್ಗ: ಸಮುದ್ರದ ನೆಂಟಸ್ತನ ಉಪ್ಪಿಗೆ ಬಡತನ ಎಂಬಂತಾಗಿದೆ ಶಿವಮೊಗ್ಗದ ಕೆಎಸ್‌ಆರ್‌ಟಿಸಿ, ಖಾಸಗಿ ಬಸ್ ನಿಲ್ದಾಣ ಸ್ಥಿತಿ. ಇಲ್ಲಿನ ಕೆಎಸ್‌ಆರ್ ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣಕ್ಕೆ ಕಳೆದ ಏಳು ತಿಂಗಳಿಂದ ನೀರಿನ ಪೂರೈಕೆ ಕಟ್ ಮಾಡಲಾಗಿದ್ದು ಸಾರ್ವಜನಿಕರು, ವ್ಯಾಪಾರಸ್ಥರು ಹಾಹಾಕಾರ ಎದುರಿಸುತ್ತಿದ್ದಾರೆ.
ಯಡಿಯೂರಪ್ಪ ಅವರು ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ 2008ರಲ್ಲಿ ಬಸ್ ನಿಲ್ದಾಣವನ್ನು ಹೈಟೆಕ್ ಗೊಳಿಸಿದ್ದರು. ಆದರೆ ಇದೇ ಹೈಟೆಕ್ ಬಸ್ ನಿಲ್ದಾಣಕ್ಕೆ ಏಳು ತಿಂಗಳಿಂದ ನೀರಿನ ಪೂರೈಕೆ ಆಗುತ್ತಿಲ್ಲ. ಎಲ್ಲ ಪೈಪ್‌ಲೈನ್‌ಗಳನ್ನು ಕಟ್ ಮಾಡಲಾಗಿದೆ. ಪ್ರತಿ ದಿನ ಸಾವಿರಾರು ಜನರು ಈ ಎರಡು ಬಸ್ ನಿಲ್ದಾಣಕ್ಕೆ ಬರುತ್ತಾರೆ. ಬಸ್ ನಿಲ್ದಾಣದಲ್ಲಿ ಹೊಟೇಲ್ ಗಳಿವೆ, ಅಂಗಡಿಗಳಿವೆ, ಶೌಚಾಲಯಗಳಿವೆ. ನಿಲ್ದಾಣದ ಸ್ವಚ್ಛತಾ ಕಾರ್ಯವು ನಿರಂತರವಾಗಿ ನಡೆಯುತ್ತಿದೆ.
ನೀರಿನ ಪೂರೈಕೆಯೇ ಇಲ್ಲದೆ ಇಷ್ಟೆಲ್ಲ ಕೆಲಸಗಳು ಆಗಬೇಕಿದೆ. ಏಳು ತಿಂಗಳಿಂದ ಈ ಸಮಸ್ಯೆ ಇದ್ದು, ಇದನ್ನು ಬಗೆಹರಿಸುವತ್ತ ಯಾರೂ ಗಮನ ಹರಿಸದೆ ಇರುವುದು ವಿಪರ್ಯಾಸ. ರಸ್ತೆ ಕಾಮಗಾರಿ ವೇಳೆ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣಕ್ಕೆ ನೀರು ಪೂರೈಕೆ ಮಾಡುವ ಮೈನ್ ಪೈಪ್ ಕಟ್ ಮಾಡಲಾಗಿದೆ. ಹಾಗಾಗಿ ಎರಡು ಬಸ್ ನಿಲ್ದಾಣಕ್ಕೆ ಪಾಲಿಕೆ ವತಿಯಿಂದ ಒಂದೇ ಒಂದು ಹನಿ ನೀರು ಬರುತ್ತಿಲ್ಲ.
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಪ್ರತಿದಿನ ಅಂದಾಜು 25 ಸಾವಿರ ಲೀಟರ್ ನೀರು ಬೇಕು.
ಬೇಸಿಗೆಯಲ್ಲಿ ಈ ಬೇಡಿಕೆ ಹೆಚ್ಚಳವಾಗುತ್ತದೆ. 10 ಸಾವಿರ ಲೀಟರ್‌ನಷ್ಟಾದರೂ ಹೆಚ್ಚು ನೀರು
ಬೇಕಾಗುತ್ತದೆ. ಆದರೆ ನೀರಿನ ಸಂಪರ್ಕ ಕಡಿತಗೊಂಡಿರುವುದರಿಂದ ಬಸ್ ನಿಲ್ದಾಣದ ಬಳಕೆಗೆ ಎರಡು ಬೋರ್‌ವೆಲ್ ಮತ್ತು ಟ್ಯಾಂಕರ್‌ಗಳ ಮೇಲೆ ಅವಲಂಬಿತವಾಗಬೇಕಾಗಿದೆ.
ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ 10 ವರ್ಷ ಹಿಂದೆ ಕೊರೆಸಲಾಗಿರುವ ಎರಡು ಬೋರ್‌ವೆಲ್‌ಗಳಿವೆ. ಇವುಗಳಲ್ಲಿ ಸಾಕಷ್ಟು ಪ್ರಮಾಣ ನೀರು ಲಭ್ಯವಾಗುತ್ತಿಲ್ಲ. ಹಾಗಾಗಿ ಪ್ರತಿದಿನ 3 ರಿಂದ 4 ಟ್ಯಾಂಕರ್‌ನಲ್ಲಿ ನೀರು ತರಿಸಲಾಗುತ್ತಿದೆ. ಒಂದು ವೇಳೆ ಬೋರ್‌ವೆಲ್‌ನಿಂದ ನೀರು ಸ್ಥಗಿತಗೊಂಡರೆ, ಬಸ್ ನಿಲ್ದಾಣದಲ್ಲಿ ತೀವ್ರ ಸಮಸ್ಯೆ ಉಂಟಾಗುತ್ತದೆ. ಈ ಕುರಿತು ಮಹಾನಗರ ಪಾಲಿಕೆಗೆ ಹಲವು ಬಾರಿ ಮನವರಿಕೆ ಮಾಡಿಕೊಟ್ಟರೂ ಪ್ರಯೋಜನವಾಗಿಲ್ಲ. ಸಾಮಾನ್ಯವಾಗಿ ನೀರಿಗಾಗಿ ಅನಧಿಕೃತವಾಗಿ ಪೈಪ್‌ಲೈನ್ ಹಾಕಿಕೊಂಡಿದ್ದರೂ, ಅದನ್ನು ಕಡಿತಗೊಳಿಸುವುದಿಲ್ಲ. ಬದಲಾಗಿ ಅಧಿಕೃತಗೊಳಿಸುವಂತೆ ಸೂಚಿಸಲಾಗುತ್ತದೆ. ಅದರಲ್ಲೂ ಬಸ್ ನಿಲ್ದಾಣದಂತಹ ಸಾರ್ವಜನಿಕ ಸ್ಥಳಗಳ ಕುರಿತು ಹೆಚ್ಚಿನ ಮುತುವರ್ಜಿ ವಹಿಸಲಾಗುತ್ತದೆ. ಆದರೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದಂತೆ ಕಾಣುತ್ತದೆ. ಬಸ್ ನಿಲ್ದಾಣ ನಿರ್ವಹಣೆಯನ್ನು ಗುತ್ತಿಗೆ ನೀಡಲಾಗಿದೆ. ಹಾಗಾಗಿ ನೀರು ಪೂರೈಕೆ ಮಾಡುವುದು ಗುತ್ತಿಗೆದಾರನ ಜವಾಬ್ದಾರಿ.
ಇದೇ ಕಾರಣಕ್ಕೆ ಅಧಿಕಾರಿಗಳು ಕ್ಯಾರೇ ಅನ್ನುತ್ತಿಲ್ಲ. ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಜಲ ಮಂಡಳಿ, ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಿದರೆ, ಕೆಲಸ ಚುರುಕುಗೊಳ್ಳುತ್ತದೆ. ನೀರನ ಸಂಪರ್ಕವು ಸಿಗಲಿದೆ. ಶಿವಮೊಗ್ಗದ ಪ್ರಮುಖ ಬಸ್ ನಿಲ್ದಾಣಗಳಲ್ಲಿನ ನೀರಿನ ತತ್ವಾರವನ್ನು ನೀಗಿಸುವತ್ತ ಅಧಿಕಾರಿಗಳು ಕ್ರಮ ವಹಿಸಬೇಕಿದೆ.
24×7 ನಿಂದ ಎಡವಟ್ಟು
ನಗರಾದ್ಯಂತ 24×7 ನೀರು ಪೂರೈಕೆಗೆ ಹೊಸ ಪೈಪ್ ಲೈನ್ ಅಳವಡಿಸಲಾಗಿದ್ದು ಅದಕ್ಕಾಗಿ ಹಳೇ ಲೈನ್ ಡೆಡ್ ಮಾಡಲಾಗಿದೆ. ಬಸ್ ನಿಲ್ದಾಣದ ಮುಂದೆ ರಸ್ತೆ ಅಗೆಯಲು ಹೈವೇ ಅಧಿಕಾರಿಗಳು ಅವಕಾಶ ನೀಡದ ಕಾರಣ ಪೈಪ್ ಹಾಕಿಲ್ಲ ಎಂಬ ಆರೋಪವಿದೆ. ಬಸ್ ನಿಲ್ದಾಣ ಹಿಂದೆ ಇರುವ ಲೈನ್‌ನಿಂದ ಪ್ರತಿ ದಿನ 2 ಸಾವಿರ ಲೀಟರ್ ಪೂರೈಸಲು ಅಧಿಕಾರಿಗಳು ಒಪ್ಪಿದ್ದಾರೆ. ಆದರೆ ಇದು ಒಂದು ಮೂಲೆಗೂ ಸಾಕಾಗುವುದಿಲ್ಲ. ಬಸ್ ನಿಲ್ದಾಣದಿಂದ ಮುಂಭಾಗಕ್ಕೆ ನೀರು ಎತ್ತಲು ಮೋಟಾರ್ ಬಳಸಬೇಕು. ಈ ಕಾರಣಕ್ಕೆ ಗುತ್ತಿಗೆದಾರರು ಆಸಕ್ತಿ ತೋರಿಲ್ಲ.
ಬೋರ್‌ವೆಲ್ ನಂಬುವ ಹಾಗಿಲ್ಲ
ಬಸ್ ನಿಲ್ದಾಣದ ಆವರಣದಲ್ಲಿ ಮತ್ತೊಂದು ಬೋರ್‌ವೆಲ್ ಕೊರೆಸಲು ಅಧಿಕಾರಿಗಳು ಆಸಕ್ತರಾಗಿದ್ದಾರೆ. ಆದರೆ ನೀರು ಸಿಗದಿದ್ದರೆ ಮತ್ತೆ ಯಥಾಸ್ಥಿತಿ ಮುಂದುವರಿಯಲಿದೆ. ತುಂಗಾ ಜಲಾಶಯದಿಂದ ಪ್ರತಿ ನಿತ್ಯ ಎರಡು ಬಾರಿ ನೀರು ಪೂರೈಸಲಾಗುತ್ತಿದ್ದು, ಕೆಎಸ್ ಆರ್‌ಟಿಸಿ ಬಸ್ ನಿಲ್ದಾಣಕ್ಕೆ ನೀರು ಕೊಡದಿರುವುದು ವಿಪರ್ಯಾಸವಾಗಿದೆ, ದುಡ್ಡು ಕಟ್ಟಲು ಗುತ್ತಿಗೆದಾದರು ತಯಾರಿದ್ದರೂ ಅಧಿಕಾರಿಗಳಿಗೆ ಆಸಕ್ತಿ ಇಲ್ಲ.
ಶರತ್ ಭದ್ರಾವತಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.