ಕಮಲ ಪಾಳಯಕ್ಕೆ ಸಾಗರವೇ ಸಮಸ್ಯೆಯಾಯ್ತು!
Team Udayavani, Apr 17, 2018, 3:07 PM IST
ಶಿವಮೊಗ್ಗ: ಬಿಜೆಪಿಯ ಎರಡನೇ ಪಟ್ಟಿ ಬಿಡುಗಡೆಯಾಗಿದ್ದು, ಜಿಲ್ಲೆಯಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ಯಡಿಯೂರಪ್ಪನವರ ಆಶಯದಂತೆ ಟಿಕೆಟ್ ಹಂಚಿಕೆಯಾಗಿದೆ. ಆದರೆ ಸಾಗರದಲ್ಲಿ ಮಾತ್ರ “ತಣ್ಣಗಿನ ಬಂಡಾಯ’ ಸ್ಫೋಟಿಸುವ ಎಲ್ಲ ಸಾಧ್ಯತೆಯಿದೆ.
ಮೊದಲ ಪಟ್ಟಿಯಲ್ಲಿ ಶಿವಮೊಗ್ಗ ಮತ್ತು ಶಿಕಾರಿಪುರದಲ್ಲಿ ಕ್ರಮವಾಗಿ ಈಶ್ವರಪ್ಪ ಮತ್ತು ಯಡಿಯೂರಪ್ಪನವರಿಗೆ ಟಿಕೆಟ್ ಪ್ರಕಟಗೊಂಡಿತ್ತು. ಎರಡನೇ ಪಟ್ಟಿಯಲ್ಲಿ ಸೊರಬದಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದ ಕುಮಾರ್ ಬಂಗಾರಪ್ಪನವರಿಗೆ ಟಿಕೆಟ್ ನೀಡಲಾಗಿದೆ.
ಇದು ನಿರೀಕ್ಷಿತವಾಗಿದ್ದರಿಂದ ಅಲ್ಲಿ ಯಾವುದೇ ಬಂಡಾಯದ ಭೀತಿ ಇಲ್ಲ. ಶಿವಮೊಗ್ಗ ಗ್ರಾಮಾಂತರ ಮೀಸಲು ಕ್ಷೇತ್ರದಲ್ಲಿ ಅಶೋಕ್ ನಾಯ್ಕ ಅವರಿಗೆ ಟಿಕೆಟ್ ಪ್ರಕಟಗೊಂಡಿದ್ದು, ಹಲವು ಆಕಾಂಕ್ಷಿಗಳು ಇದ್ದರೂ ಯಾವುದೇ ಬಂಡಾಯದ ಬಿಸಿ ಪಕ್ಷಕ್ಕೆ ತಟ್ಟಿಲ್ಲ. ತೀರ್ಥಹಳ್ಳಿಯಲ್ಲಿ ಆರಗ ಜ್ಞಾನೇಂದ್ರ ಅವರೊಬ್ಬರ ಹೆಸರು ಮಾತ್ರ ಶಿಫಾರಸ್ಸುಗೊಂಡಿದ್ದು, ಅದರಂತೆ ಅವರಿಗೆ ಟಿಕೆಟ್ ನೀಡಲಾಗಿದೆ.
ಆದರೆ ಸಾಗರದಲ್ಲಿ ಮಾತ್ರ ಸೊರಬದಿಂದ ವಲಸೆ ಬಂದ ಹರತಾಳು ಹಾಲಪ್ಪ ಮತ್ತು ತಮ್ಮ ಕ್ಷೇತ್ರ ಎಂದುಕೊಂಡಿದ್ದ ಬೇಳೂರು ಗೋಪಾಲಕೃಷ್ಣ ಅವರ ನಡುವೆ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆದಿತ್ತು. ಯಡಿಯೂರಪ್ಪ ಅವರು ತಮ್ಮ ಮೊದಲ ಸುತ್ತಿನ ಪ್ರವಾಸದಲ್ಲಿಯೇ ಹಾಲಪ್ಪ ಅವರಿಗೆ ಟಿಕೆಟ್ ಕೊಡುವುದಾಗಿ ಹೇಳಿದ್ದರು. ಇದರಂತೆ ಹಾಲಪ್ಪ ಕೂಡ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಯಾವುದೇ ಕಾರಣಕ್ಕೂ ತಮ್ಮ ಹೊರತಾಗಿ ಬೇರೆಯವರಿಗೆ ಟಿಕೆಟ್ ನೀಡಬಾರದು ಎಂದು ಹಠ ಹಿಡಿದಿದ್ದ ಬೇಳೂರು ಗೋಪಾಲಕೃಷ್ಣ ವರಿಷ್ಠರನ್ನು ಕೂಡ ಸಂಪರ್ಕಿಸಿದ್ದರು. ಪಕ್ಷದ ಸಮೀಕ್ಷೆಯಲ್ಲಿ ಕೂಡ ಇವರ ಹೆಸರು ಮುಂಚೂಣಿಯಲ್ಲಿತ್ತು ಎನ್ನಲಾಗಿದ್ದು, ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದರು.
ಆದರೆ ಟಿಕೆಟ್ ಹರತಾಳು ಹಾಲಪ್ಪ ಅವರ ಪಾಲಾಗುತ್ತಿದ್ದಂತೆ ಬೇಳೂರು ಗೋಪಾಲಕೃಷ್ಣ ತೀವ್ರ ನಿರಾಶೆಗೆ ಒಳಗಾಗಿದ್ದಾರೆ. ತಮ್ಮ ಮುಂದಿನ ನಡೆ ಏನೆಂಬುದನ್ನು ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. ಪಕ್ಷದ ವಿರುದ್ಧವೂ ಮಾತನಾಡಿಲ್ಲ. ಪಕ್ಷ ಬಿಡುವ, ಪ್ರತಿಭಟನೆ ನಡೆಸುವ ಹೆಜ್ಜೆಯನ್ನು ಕೂಡ ಅವರು ಇಟ್ಟಿಲ್ಲ.
ಬದಲಾಗಿ ತಮ್ಮದೇ ಆದ ರಾಜಕೀಯ ಅಸ್ತಿತ್ವವನ್ನು ಕಂಡುಕೊಳ್ಳುವತ್ತ ಹೆಜ್ಜೆ ಹಾಕತೊಡಗಿದ್ದಾರೆ. ಅವರ ಎದುರು ಮೂರು ಹಾದಿಗಳಿದ್ದವು. ಈ ಹಿಂದೆ ಕಾಗೋಡು ತಿಮ್ಮಪ್ಪ ಅವರು ಕರೆದು ಮಾತನಾಡಿದ್ದರು. ಪಕ್ಷಕ್ಕೆ ಬಂದು ತನ್ನ ಪರವಾಗಿ ಕೆಲಸ ಮಾಡು. ಇದು ತಮ್ಮ ಕೊನೆಯ ಚುನಾವಣೆಯಾಗಿರುವುದರಿಂದ ಮುಂದೆ ಸಾಗರದಲ್ಲಿ ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿಯಬಹುದು ಎಂಬ ಮಾತನ್ನು ಆಡಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು. ಹೀಗಾಗಿ ಕಾಂಗ್ರೆಸ್‌ನತ್ತ ಹೆಜ್ಜೆ ಇಡಬಹುದು. ಈ ಹಿಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗದಾಗ ಜೆಡಿಎಸ್ ಸೇರಿ ಸ್ಪರ್ಧಿಸಿ ಎರಡನೇ ಸ್ಥಾನ ಗಳಿಸಿದ್ದರು. ಈಗಲೂ ಜೆಡಿಎಸ್ ಸಾಗರ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಪ್ರಕಟಿಸಿಲ್ಲ. ಹೀಗಾಗಿ ಆ ಪಕ್ಷದತ್ತ ವಲಸೆ ಹೋಗಬಹುದು. ಇಲ್ಲವೇ, ಬಿಜೆಪಿಯಲ್ಲಿಯೇ ಉಳಿದು ಮುಂದಿನ ಅವಕಾಶಕ್ಕಾಗಿ ಕಾಯುತ್ತಾ ಕುಳಿತುಕೊಳ್ಳುವುದು.
ಆದರೆ ಬೇಳೂರು ಹೊಸದೊಂದು ಹೆಜ್ಜೆ ಇಡಬಹುದು ಎಂದು ಅವರ ಆಪ್ತ ವಲಯದಿಂದ ಕೇಳಿ ಬರುತ್ತಿದೆ. ಯಾವುದೇ ಪಕ್ಷಕ್ಕೆ ಸೇರದೆ, ಪಕ್ಷೇತರರಾಗಿ ಸ್ಪರ್ಧಿಸುವುದು. ಬಿಜೆಪಿಯನ್ನು ಯಾವುದೇ ಕಾರಣಕ್ಕೂ ಟೀಕಿಸಿದೆ, ತಮಗೆ ತಪ್ಪಿದ ಅವಕಾಶವನ್ನು ಜನರೆದುರು ಹೇಳುತ್ತಾ, ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಈಗಲೂ ಇದ್ದೇನೆ ಎಂದು ಹೇಳಿಕೊಂಡು ಮೋದಿ ಹೆಸರಿನಲ್ಲಿ ಜನರ ವಿಶ್ವಾಸ ಗಳಿಸುವುದು. ಈ ನಿಟ್ಟಿನಲ್ಲಿ ಆಲೋಚಿಸುತ್ತಿರುವ ಬೇಳೂರು “ತಣ್ಣನೆಯ ಬಂಡಾಯ’ ಪ್ರದರ್ಶಿಸುವ ಸಾಧ್ಯತೆ ದಟ್ಟವಾಗಿದೆ.
ಇನ್ನೂ ಭದ್ರಾವತಿಯಲ್ಲಿ ಯಾರಿಗೂ ಟಿಕೆಟ್ ಪ್ರಕಟಗೊಂಡಿಲ್ಲ. ಇದುವರೆಗೆ ಇಲ್ಲಿ ಬಿಜೆಪಿ ಗೆದ್ದಿಲ್ಲ. ಮಾತ್ರವಲ್ಲ, ಹೇಳಿಕೊಳ್ಳುವಂತಹ ಮತ ಗಳಿಕೆ ಕೂಡ ಮಾಡಿಲ್ಲ. ಹೀಗಾಗಿ ಟಿಕೆಟ್‌ಗೆ ಪೈಪೋಟಿಯೂ ಇಲ್ಲ
ವಿಶೇಷ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.