ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಆದ್ಯತೆ
ಜನರೂ ಸಹ ದೇಣಿಗೆ ನೀಡಿ ಸರಕಾರದೊಂದಿಗೆ ಕೈಜೋಡಿಸಿ: ಕೋಟ ಶ್ರೀನಿವಾಸ ಪೂಜಾರಿ
Team Udayavani, Jun 29, 2020, 5:31 PM IST
ತೀರ್ಥಹಳ್ಳಿ: ಅಂಬುತೀರ್ಥ ದೇವಸ್ಥಾನದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಿದರು.
ತೀರ್ಥಹಳ್ಳಿ: ಸಿಎಂ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುತ್ತಿದೆ. ಆದರೆ, ಎಲ್ಲವನ್ನೂ ಸರ್ಕಾರದಿಂದಲೇ ನಿರೀಕ್ಷೆ ಮಾಡಬಾರದು. ಭಕ್ತಾದಿಗಳು ಕೂಡಾ ತಮ್ಮ ಯಥಾಶಕ್ತಿ ದೇಣಿಗೆ ನೀಡುವ ಮೂಲಕ ಧಾರ್ಮಿಕ ಭಾವನೆ ಮೆರೆಯಬೇಕು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಶರಾವತಿ ನದಿಯ ಉಗಮ ಸ್ಥಾನವಾದ ಪುರಾಣ ಪ್ರಸಿದ್ಧ ಅಂಬುತೀರ್ಥ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ನಂತರ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು. ದೇವಾಲಯ ಸೇರಿದಂತೆ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಸಮುದಾಯದ ಸಹಕಾರ ಅಗತ್ಯ. ದೇಗುಲದ ನಿರ್ಮಾಣದಲ್ಲಿ ಭಕ್ತಾದಿಗಳ ನೆರವು ಇಲ್ಲವಾದಲ್ಲಿ ಅದು ಬರೀ ಸರ್ಕಾರಿ ದೇವಸ್ಥಾನ ಎಂದಾಗಲಿದೆ ಎಂದರು.
ತಿರುಪತಿಯಲ್ಲಿರುವ ಕರ್ನಾಟಕ ಸರ್ಕಾರದ ವಸತಿ ಸಂಕೀರ್ಣ ಶಿಥಿಲಗೊಂಡಿದ್ದು, ಇದರ ಅಭಿವೃದ್ಧಿಗಾಗಿ ಸರ್ಕಾರ 200 ಕೋಟಿ ರೂ. ಅನುದಾನ ಮಂಜೂರು ಮಾಡಿದೆ. ರಾಮಮಂದಿರದ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪು ಹಿಂದುಗಳ ಪರವಾಗಿ ಬಂದಿದ್ದು ಇದರ ನಿರ್ಮಾಣದಲ್ಲೂ ಎಲ್ಲ ಭಗವದ್ಭಕ್ತರ ನೆರವು ಹಾಗೂ ಸಹಭಾಗಿತ್ವದ ಅಗತ್ಯವಿದೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ನಾಡಿಗೆ ಬೆಳಕನ್ನು ನೀಡುತ್ತಿರುವ ಈ ಕೇಂದ್ರವನ್ನು ಭಾಗಮಂಡಲದ ರೀತಿ ಅಭಿವೃದ್ಧಿ ಪಡಿಸಲು ತೀರ್ಮಾನಿಸಲಾಗಿದೆ. ಕೋವಿಡ್ ವಿಪತ್ತಿನ ನಡುವೆಯೂ ಈ ಕಾರ್ಯಕ್ಕೆ ಚಾಲನೆ ನೀಡಲು ವಿವಿಧ ಇಲಾಖೆಗಳ ಸಹಕಾರವೂ ಕಾರಣವಾಗಿದೆ. ಒಂದು ವರ್ಷದಲ್ಲಿ ಇದರ ನಿರ್ಮಾಣ ಕಾರ್ಯ ಆಗಲಿದೆ ಎಂದರು.
ಜನರ ಭಾವನೆಗಳಿಗೆ ಸ್ಪಂದಿಸುತ್ತಿರುವ ಕೇಂದ್ರ ಸರ್ಕಾರ ದುಡಿಯುವ ಕೈಗಳಿಗೆ ಒಂದು ಲಕ್ಷ ಕೋಟಿ ಅನುದಾನ ಬಿಡುಗಡೆ ಮಾಡಿದೆ. ಈಚೆಗೆ ನಡೆದ ಸಚಿವ ಸಂಪುಟದ ಸಭೆಯಲ್ಲಿ ಕಳೆದ ಸಾಲಿನ ನೆರೆಹಾನಿಯ ಬಗ್ಗೆ ರಸ್ತೆ ಕಾಮಗಾರಿಗೆ 1,500 ಕೋಟಿ, ಮನೆಹಾನಿಯ ಸಲುವಾಗಿ 10 ಸಾವಿರ ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ತಿಳಿಸಿದರು.
ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಮಾತನಾಡಿ, ರಾಜ್ಯ ಸರ್ಕಾರದ ಅನುದಾನದಲ್ಲಿ ಅರ್ಧ ಪಾಲು ಹಣ ಶಿವಮೊಗ್ಗ ಜಿಲ್ಲೆ ಒಂದಕ್ಕೆ ಸಂದಾಯವಾಗುತ್ತಿದೆ. ಅಂಬುತೀರ್ಥದಿಂದ ಚಿಕ್ಕಮಗಳೂರಿಗೆ ಬರುತ್ತಿದ್ದ ಬಸ್ಸಿನ ಸಂಬಂಧ ನನ್ನನ್ನು ಇಲ್ಲಿಗೆ ಕರೆ ತಂದಿದೆ. ದೇಶದ ಉದ್ದಗಲಕ್ಕೂ ವ್ಯಾಪಿಸಿರುವ ಶ್ರೀರಾಮನ ಮಹಿಮೆಯ ಹಿನ್ನೆಲೆಯ ಈ ಕ್ಷೇತ್ರ ಸಾಹಿತ್ಯ ಕ್ಷೇತ್ರದ ಕುವೆಂಪು, ರಾಜಕಾರಣಿಗಳಿಗೆ ಆದರ್ಶಪ್ರಾಯರಾಗಿದ್ದ ಶಾಂತವೇರಿ ಗೋಪಾಲಗೌಡರು ಹಾಗೂ ಕಡಿದಾಳು ಮಂಜಪ್ಪನವರ ತವರು ಎಂಬುದು ಕೂಡಾ ಅಭಿಮಾನದ ಸಂಗತಿ ಎಂದರು.
ಈ ಜಿಲ್ಲೆಯ ಪ್ರವಾಸೋದ್ಯಮ ಮತ್ತು ಧಾರ್ಮಿಕ ಕೇಂದ್ರಗಳಿಗೆ ಈಗಾಗಲೇ 28 ಕೋಟಿ ಅನುದಾನ ನೀಡಿದ್ದೇನೆ. ಇದರಲ್ಲಿ ಅಂಬುತೀರ್ಥಕ್ಕೆ 1.81 ಕೋಟಿ, ಜೋಗ ಜಲಪಾತ ಅಭಿವೃದ್ಧಿಗೆ 10 ಕೋಟಿ, ಅಕ್ಕಮಹಾದೇವಿ ಸ್ಥಳಕ್ಕೆ 5 ಕೋಟಿ, ಉಡುತಡಿಗೆ 3 ಕೋಟಿ, ಕವಲೇದುರ್ಗಕ್ಕೆ 2 ಕೋಟಿ, ಹೊಸನಗರ ಮತ್ತು ನಗರ ಕೋಟೆ ಅಭಿವೃದ್ಧಿಗೆ ತಲಾ ಒಂದು ಕೋಟಿ ನೀಡಿರುವುದಾಗಿಯೂ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಬೆಳಕಿನ ನದಿಯ ಇತಿಹಾಸದಲ್ಲಿ ಇಂದು ನೆನಪಿಡುವ ದಿನವಾಗಿದ್ದು, ನದಿಯ ಉಗಮ ಸ್ಥಾನದ ಕಾಯಕಲ್ಪಕ್ಕೆ ಚಾಲನೆ ದೊರೆತಿದೆ. ಅಂದಾಜು 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಈ ಕಾಮಗಾರಿಯಲ್ಲಿ ಶಿಲಾಮಯವಾದ ದೇವಾಲಯ ನಿರ್ಮಾಣಗೊಳ್ಳಲಿದೆ. ಈ ಧಾರ್ಮಿಕ ಕೇಂದ್ರಕ್ಕೆ ಆಗಮಿಸುವ ಯಾತ್ರಾರ್ಥಿಗಳು ತಂಗಲು ಸಮುದಾಯ ಭವನ ನಿರ್ಮಾಣ, ದೇವಸ್ಥಾನದ ಹಿಂಭಾಗದ ಬೆಟ್ಟಕ್ಕೆ ರಕ್ಷಣಾ ಗೋಡೆ ಹಾಗೂ ಕೆರೆಗಳ ಅಭಿವೃದ್ಧಿ ಕೂಡಾ ಆಗಬೇಕಿದೆ ಎಂದರು.
ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಮಳೆಗಾಲ ಆರಂಭವಾಗಿರುವ ಕಾರಣ ಮಳೆ ನಿಲ್ಲುವವರೆಗೆ ಡಾಂಬರೀಕರಣ ಮಾಡದಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದೇನೆ. ಶರಾವತಿ ನದಿಯ ಮೂಲಸ್ಥಾನದ ಸಮೀಪದಲ್ಲಿರುವ ಮೊದಲ ಜಲಪಾತವಾದ ಅಚ್ಚಕನ್ಯೆ ಫಾಲ್ಸ್‌ಗೆ ಪ್ರವಾಸೋದ್ಯಮ ಇಲಾಖೆಯಿಂದ 35 ಲಕ್ಷ ರೂ. ಮಂಜೂರಾಗಿದೆ ಎಂದು ತಿಳಿಸಿದರು.
ಮಾಜಿ ಸಚಿವ ಜೀವರಾಜ್, ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅದ್ಯಕ್ಷ ಡಿ.ಎಸ್. ಅರುಣ್, ಜಿಪಂ ಸದಸ್ಯೆ ಅಪೂರ್ವ ಶರ, ತಾಪಂ ಸದಸ್ಯೆ ಲಕ್ಷ್ಮೀ, ಗ್ರಾಪಂ ಅದ್ಯಕ್ಷ ಧರಣೇಶ್, ಜಿಲ್ಲಾಧಿಕಾರಿ ಕೆ.ವಿ. ಶಿವಕುಮಾರ್, ಜಿಪಂ ಸಿಇಒ ಎಂ.ಎಲ್. ವೈಶಾಲಿ, ತಾಲೂಕು ಎಪಿಎಂಸಿ ಅಧ್ಯಕ್ಷ ಸಾಲೆಕೊಪ್ಪ ರಾಮಚಂದ್ರ, ಅ.ಪ. ರಾಮಭಟ್, ತಹಶೀಲ್ದಾರ್ ಡಾ| ಎಸ್.ಬಿ. ಶ್ರೀಪಾದ, ತಾಪಂ ಇಒ ಆಶಾಲತಾ ಇದ್ದರು. ಡಾ| ಮುರುಳೀಧರ ಕಿರಣಕೆರೆ ನಿರ್ವಹಿಸಿದರು.
ಮಲೆನಾಡಿನ ಜೀವವೈವಿಧ್ಯತೆಯನ್ನೇ ನಾಶಪಡಿಸುತ್ತಿರುವ ನೀಲಗಿರಿ ಮತ್ತು ಅಕೇಶಿಯಾ ಪ್ಲಾಂಟೇಶನ್ ವ್ಯವಸ್ಥೆಯನ್ನು ಬೇರು ಸಹಿತ ಕಿತ್ತು ಹಾಕಬೇಕಿದೆ. ಬೀಜ ಬಿಸಾಕಿದರೆ ಮೊಳಕೆಯೊಡೆಯವ ಸತ್ವಯುತವಾದ ಈ ಮಣ್ಣಿನಲ್ಲಿ ಪರಿಸರಕ್ಕೆ ಮಾರಕವಾಗಿರುವ ಈ ಮಾರಕ ಸಸ್ಯಗಳಿಗೆ ಅವಕಾಶವಾಗಬಾರದು. ಇದು ಎಲ್ಲರ ಹೊಣೆಗಾರಿಕೆಯಾಗಿದೆ. ಜೀವವೈವಿಧ್ಯತೆಗೆ ವಿರುದ್ಧವಾಗಿ ಕಾರ್ಯನಿರ್ವಹಿಸುವ ಇಲಾಖೆ ಅಪವಾದದಂತಾಗಿದ್ದು, ನಾಲಾಯಕ್ ಆಗಿದೆ.
ಸಿ.ಟಿ. ರವಿ,
ಪ್ರವಾಸೋದ್ಯಮ ಸಚಿವರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.