ಅಡಕೆ ಕೊಳೆಯಿಂದ ಬೇಸತ್ತ ಬೆಳೆಗಾರರು : ಹೊಸ ಸಂಶೋಧನೆಗಳಿಗೆ ತೀವ್ರ ಒತ್ತಾಯ
Team Udayavani, Aug 16, 2021, 2:11 PM IST
ಸಾಗರ: ವರ್ಷದಿಂದ ವರ್ಷಕ್ಕೆ ಅಡಕೆ ಬೆಳೆಯ ಕೊಳೆ ರೋಗ ಹೆಚ್ಚುತ್ತಿದ್ದು, ಸಾಂಪ್ರದಾಯಿಕವಾದ ಮೈಲುತುತ್ತದ ಬೋರ್ಡೋ ದ್ರಾವಣ ಪರಿಣಾಮಕಾರಿಯಾಗುತ್ತಿಲ್ಲ. ಈ ವರ್ಷ ಮೂರು ನಾಲ್ಕು ಬಾರಿ ಬೋರ್ಡೋ ಸಿಂಪಡನೆ ನಡೆದಿದ್ದರೂ ಕೊಳೆ ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೃಷಿ ವಿಜ್ಞಾನಿಗಳು ತುರ್ತು ಕ್ರಮವನ್ನು ಕೈಗೊಂಡು ಕೊಳೆ ನಿಯಂತ್ರಣಕ್ಕೆ ಹೊಸ ಸಂಶೋಧನೆಗೆ ಮುಂದಾಗಬೇಕು ಎಂದು ರೈತರು ಒತ್ತಾಯಿಸಿದೆ.
ತಾಲೂಕಿನ ಭೀಮನಕೋಣೆ, ಕಲ್ಮನೆ, ಎಡಜಿಗಳೇಮನೆ, ಆವಿನಹಳ್ಳಿ, ತುಮರಿ, ಖಂಡಿಕಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಕೊಳೆ ಕಾಣಿಸಿಕೊಂಡಿದೆ. ಪೊಟಾಶಿಯಂ ಪಾಸ್ಪೊನೇಟ್, ಯೂರಿಯಾ ರಾಸಾಯನಿಕಗಳ ಮೂಲದಿಂದ ತಯಾರಿಸುವ ವಿವಿಧ ಫಂಗಸ್ ನಿರ್ಬಂಧಕಗಳು 60 ರಿಂದ 90 ದಿನಗಳವರೆಗೆ ಪರಿಣಾಮಕಾರಿ ಎಂದು ಹೇಳಲಾಗಿದ್ದುದು ಕೂಡ ಹುಸಿ ಹೋಗಿದೆ. ತುಮರಿ ಭಾಗದಲ್ಲಿ ಇಂತಹ ಔಷಧ ಬಳಸಿದ 25 ದಿನಗಳಲ್ಲಿಯೇ ಕೊಳೆ ಮಾರಿ ಆಕ್ರಮಿಸಿದೆ.
ಇದನ್ನೂ ಓದಿ : ‘ಫುಲ್ ಪೈಸಾ ವಸೂಲ್ ಸೇಲ್’ : ರಿಲಯನ್ಸ್ ರಿಟೇಲ್ ಸಂಸ್ಥೆಯಿಂದ ಭರ್ಜರಿ ಮಾರಾಟ..!
1940 ರಲ್ಲಿ ಡಾ. ಕೋಲ್ಮನ್ ಎಂಬ ಬ್ರಿಟಿಷ್ ವಿಜ್ಞಾನಿ ಕಂಡು ಹಿಡಿದ ಬೋರ್ಡೋ ದ್ರಾವಣವೊಂದನ್ನು ಬಿಟ್ಟರೆ ಕೊಳೆರೋಗ ನಿರೋಧಕ ಪರ್ಯಾಯ ಔಷಧಿಯನ್ನು ಈತನಕ ಕಂಡು ಹಿಡಿದಿಲ್ಲ. ಇದರಿಂದ ಬೆಳೆಗಾರರು ಪ್ರತಿವರ್ಷ ಅಡಕೆ ಕೊಳೆರೋಗದಿಂದ ನಷ್ಟಕ್ಕೆ ಒಳಗಾಗುತ್ತಿದ್ದಾರೆ. ಅತಿವೃಷ್ಟಿಯಿಂದ ಮಲೆನಾಡಿನ ಭಾಗದ ಅಡಕೆ ಬೆಳೆಗಾರರು ಬದುಕು ನಲುಗಿ ಹೋಗಿದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ವಿಪರೀತ ಮಳೆಯಿಂದಾಗಿ ಬೆಳೆಗೆ ಹಿಂದೆಂದೂ ಕಾಣದಷ್ಟು ಕೊಳೆರೋಗ ವ್ಯಾಪಿಸಿದೆ. ಹವಾಗುಣ ಬದಲಾವಣೆಯ ಕಾರಣಕ್ಕೆ ಸುರಿದ ಅತಿವೃಷ್ಟಿಯಿಂದ ಮಲೆನಾಡು ಭಾಗದ ಅಡಕೆ ತೋಟದಲ್ಲಿ ಕೊಳೆರೋಗ ಬಂದು ಬಹುಪಾಲು ಅಡಕೆ ಉದುರುತ್ತಿದೆ. ಅಡಕೆಗೆ ಅತ್ಯುತ್ತಮ ಬೆಲೆ ಇದ್ದರೂ ಬೆಳೆ ಉಳಿಸಿಕೊಳ್ಳಲಾಗದೆ ರೈತ ಕೈಕೈ ಹಿಸುಕಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ಹಂಸಗಾರು, ಹಕ್ರೆ, ಹೊಸಳ್ಳಿ, ಸುಳ್ಮನೆ, ಶೆಡ್ತಿಕೆರೆ, ವರದಾಮೂಲ, ಲಿಂಗದಹಳ್ಳಿ, ತೆಂಕೋಡು, ಆವಿನಹಳ್ಳಿ, ಮಾವಿನಸರ ಸೇರಿದಂತೆ ಬಹುತೇಕ ಭಾಗಗಳಲ್ಲಿ ಅಡಕೆ ತೋಟಗಳ ಗೊನೆಯಲ್ಲಿ ಕನಿಷ್ಟ ಒಂದೆರಡು ಅಡಕೆಯೂ ಇರದಂತೆ ಉದುರಿ ಹೋಗಿದೆ. ಶಿವಮೊಗ್ಗದಲ್ಲಿ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಡಿಯ ನವುಲೆಯಲ್ಲಿ ಅಡಕೆ ಸಂಶೋಧನಾ ಕೇಂದ್ರ ಆರಂಭವಾಗಿ ೨೦ ವರ್ಷ ಕಳೆದಿದೆ. ಸರ್ಕಾರ ಪ್ರತಿವರ್ಷ ಇಲಾಖೆಯ ಮೂಲಕ ಕೋಟ್ಯಾಂತರ ರೂಪಾಯಿ ಕೊಳೆ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕಂಡು ಕೊಳ್ಳಲು ಖರ್ಚು ಮಾಡುತ್ತಿದೆ. ಅಕ್ಷರಶಃ ಇಂತಹ ಕೇಂದ್ರಗಳು ಹಣ ಖರ್ಚು ಮಾಡುವ ಬಿಳಿಯಾನೆಗಳಾಗಿವೆ ಎಂದು ರೈತರು ದೂರುತ್ತಿದ್ದಾರೆ.
ಈಗ ನೀಡುತ್ತಿರುವ ಮೈಲುತುತ್ತದ ಗುಣಮಟ್ಟದ ಬಗ್ಗೆ ಅನುಮಾನಗಳಿವೆ. ಇದರಿಂದ ಕೊಳೆ ನಿಯಂತ್ರಣವಾಗಿ ತೋಟಗಳಿಗೆ ಸಿಂಪಡಣೆ ಮಾಡಿದರೂ ಪ್ರಯೋಜನಕ್ಕೆ ಬರುತ್ತಿಲ್ಲ. ಕೊಳೆರೋಗ ತರುವ ಶಿಲೀಂಧ್ರಗಳ ನಿಯಂತ್ರಣಕ್ಕೆ ಮಣ್ಣು ಪರೀಕ್ಷೆ ಮಾಡಬೇಕು. ಆದರೆ ಮಳೆಗಾಲದಲ್ಲಿ ಮಣ್ಣು ಪರೀಕ್ಷೆ ಮಾಡುವ ಯಾವ ವಿಧಾನವೂ ತೋಟಗಾರಿಕೆ ಇಲಾಖೆ ಬಳಿ ಇಲ್ಲ. ಕೊಳೆರೋಗಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದ ವಿಜ್ಞಾನಿಗಳು, ಇಲಾಖೆ, ವಿಶ್ವವಿದ್ಯಾಲಯ ಬೆಳೆಗಾರರ ಪಾಲಿಗೆ ಇದ್ದೂ ಇಲ್ಲದಂತೆ ಆಗಿದೆ. ಕಳೆದ ವರ್ಷ ವಿಜ್ಞಾನಿಗಳು ಸಾಗರದ ಹಳ್ಳಿಯೊಂದಕ್ಕೆ ಆಗಮಿಸಿ ತಮ್ಮ ವೈಜ್ಞಾನಿಕ ಮಾದರಿಯಲ್ಲಿ ಬೋರ್ಡೋ ದ್ರಾವಣ ತಯಾರಿ ಹೇಳಿ ಮಾಡಿಸಿದ್ದರು. ಅದನ್ನು ಸಿಂಪಡಿಸಿದ ತೋಟದಲ್ಲಿ ವಾಡಿಕೆಗಿಂತ ಹೆಚ್ಚು ಅಡಕೆ ಉದುರಿ ರೈತರು ತತ್ತರಿಸಿ ಹೋದ ಘಟನೆಯೂ ನಡೆದಿತ್ತು!
ಅಡಕೆಯನ್ನೇ ಅವಲಂಬಿಸಿಕೊಂಡು ಮಲೆನಾಡು ಭಾಗದಲ್ಲಿ ಲಕ್ಷಾಂತರ ಕುಟುಂಬಗಳಿವೆ. ಬಹುತೇಕ ಸಣ್ಣ ಮತ್ತು ಅತಿಸಣ್ಣ ಹಿಡುವಳಿದಾರರೇ ಅಡಕೆ ಬೆಳೆಗಾರರಾಗಿರುವುದರಿಂದ ಬೆಳೆ ನಾಶವಾದರೆ ಅವರ ಜೀವನವೂ ಸಂಕಷ್ಟಕ್ಕೆ ಸಿಲುಕುತ್ತಿದೆ. ಈಗಾಗಲೇ ಸಾಗರ ತಾಲೂಕಿನ ತೋಟಗಳಲ್ಲಿ ಶೇ. 5೦ರಷ್ಟು ಅಡಕೆ ಕೊಳೆರೋಗದಿಂದ ನಾಶವಾಗಿದೆ. ಇದರಿಂದ ಬೆಳೆಗಾರರಿಗೆ ಮುಂದಿನ ಬದುಕು ಹೇಗೆ ಎನ್ನುವ ಚಿಂತೆ ಕಾಡಲು ಪ್ರಾರಂಭವಾಗಿದೆ.
ಸರ್ಕಾರ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳಿಗೆ ಮತ್ತು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವಿಜ್ಞಾನಿಗಳಿಗೆ ನಿಗದಿತ ಅವಧಿಯಲ್ಲಿ ಕೊಳೆರೋಗಕ್ಕೆ ಔಷಧಿ ಕಂಡು ಹಿಡಿಯಲು ಸೂಚನೆ ನೀಡಬೇಕು. ಒಂದೊಮ್ಮೆ ಅವರು ವಿಫಲವಾದಲ್ಲಿ ಅವರನ್ನು ಕೆಲಸದಿಂದ ವಜಾ ಮಾಡುವ ಕಠಿಣ ನಿರ್ಧಾರ ಸರ್ಕಾರ ಕೈಗೊಳ್ಳಬೇಕು. ಬೆಳೆನಾಶವಾಗಿರುವ ಬೆಳೆಗಾರರ ಕುಟುಂಬಕ್ಕೆ ಸರ್ಕಾರ ತಕ್ಷಣ ಅತಿಹೆಚ್ಚು ಪರಿಹಾರ ನೀಡಬೇಕು. ಒಂದೊಮ್ಮೆ ಬೆಳೆನಾಶದಿಂದ ನಷ್ಟಕ್ಕೊಳಗಾಗಿ ಬೆಳೆಗಾರ ಆತ್ಮಹತ್ಯೆ ಹಾದಿ ಹಿಡಿದರೆ ಅದಕ್ಕೆ ಸರ್ಕಾರವೇ ನೇರಹೊಣೆಯಾಗುತ್ತದೆ. ಸರ್ಕಾರ ಕೊಳೆರೋಗಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಬೆಳೆಗಾರರನ್ನು ಒಳಗೊಂಡ ಸಮಿತಿಯೊಂದನ್ನು ರಚನೆ ಮಾಡುವ ಜೊತೆಗೆ ತಾಲೂಕಿನಾದ್ಯಂತ ಬೆಳೆಹಾನಿ ಕುರಿತು ಸರ್ವೇ ನಡೆಸಬೇಕು ಎಂದು ವಿವಿಧ ರೈತರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ‘ಸರಿಯಾಗಿ ರಾಷ್ಟ್ರಗೀತೆ ಹಾಡಿ’ ಎಂದ ವ್ಯಕ್ತಿಗೆ ನಟ ಸುದೀಪ್ ಹೇಳಿದ್ದೇನು ?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.