ಮಲೆನಾಡಲ್ಲಿ ಹೊಸ ರಾಜಕೀಯ ಮನ್ವಂತರ : ಕಾಂಗ್ರೆಸ್‌ಗೆ ಬಣ ರಾಜಕೀಯ ಬಿಸಿ
Team Udayavani, May 17, 2022, 6:15 AM IST
ಶಿವಮೊಗ್ಗ: 2023ರ ಚುನಾವಣೆ ಶಿವಮೊಗ್ಗ ಜಿಲ್ಲೆ ಪಾಲಿಗಷ್ಟೇ ಅಲ್ಲದೆ ರಾಜ್ಯ ರಾಜಕಾರಣದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡುವುದು ನಿಶ್ಚಿತ. ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ ನಿರ್ಗಮನದಿಂದ ತೆರವಾಗುವ ಕ್ಷೇತ್ರಗಳಿಗೆ ಮುಂದ್ಯಾರು? ಬಣ ರಾಜಕಾರಣದಿಂದ ಕಂಗೆಟ್ಟಿರುವ ಕಾಂಗ್ರೆಸ್ ವರಿಷ್ಠರು ಇದಕ್ಕೆ ಮದ್ದು ಅರೆಯುವರೆ? ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಉಳಿಸಿಕೊಳ್ಳುವುದೇ? ಎಂಬುದೆಲ್ಲ ಚುನಾವಣೆಗೆ ವರ್ಷವಿರುವಾಗಲೇ ಚರ್ಚೆಗೆ ಗ್ರಾಸವಾಗಿದೆ.
ಉತ್ತರಾಧಿಕಾರಿ ಯಾರು?: ಶಿಕಾರಿಪುರದಿಂದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪರ್ಧಿಸುವುದಿಲ್ಲ ಎಂಬ ಮಾತು ಪಕ್ಷದೊಳಗೆ ಕೇಳಿ ಬರುತ್ತಿದೆ. ಹಾಗಾದರೆ ಅವರ ಸ್ಥಾನಕ್ಕೆ ಯಾರು? ಹಿರಿಯ ಪುತ್ರ ಬಿ.ವೈ.ರಾಘವೇಂದ್ರ ಸಂಸದರಾಗಿದ್ದು, ಮತ್ತೂಬ್ಬ ಪುತ್ರ ಬಿ.ವೈ.ವಿಜಯೇಂದ್ರ ಕ್ಷೇತ್ರ ಹುಡುಕಾಟದಲ್ಲಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಸ್ಪರ್ಧೆ ಮಾಡುತ್ತಾರೆಂಬ ಮಾತುಗಳು ಕೇಳಿಬರುತ್ತಿದ್ದರೂ ಕೊನೇ ಗಳಿಗೆಯಲ್ಲಿ ಶಿಕಾರಿಪುರಕ್ಕೆ ಬಂದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ. ವಿಜಯೇಂದ್ರ ಬರದಿದ್ದರೆ ಕಾರ್ಯಕರ್ತರಿಗೆ ಟಿಕೆಟ್ ಕೊಡುತ್ತಾರಾ ಅಥವಾ ಬಿಎಸ್‌ವೈ ಕುಟುಂಬಸ್ಥರನ್ನೇ ಕಣಕ್ಕಿಳಿಸಲಾಗುತ್ತಾ ಎಂಬ ಗುಟ್ಟು ರಟ್ಟಾಗಿಲ್ಲ. ಇನ್ನು 10-20 ಸಾವಿರ ಮತಗಳಿಂದ ಸೋಲು ಕಾಣುತ್ತಿರುವ ಕಾಂಗ್ರೆಸ್‌ಗೆ ಈ ಬಾರಿ ವಿಜಯಲಕ್ಷ್ಮೀ ಒಲಿಯುವುದೆ ನೋಡಬೇಕಿದೆ. ಗೋಣಿ ಮಾಲತೇಶ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಜೆಡಿಎಸ್ ಇಲ್ಲಿ ಲೆಕ್ಕಕಿಲ್ಲ.
ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಈಗಾಗಲೇ 74 ವರ್ಷ ಪೂರೈಸಿದ್ದು ಬಿಜೆಪಿಯ ಅಲಿಖೀತ ನಿಯಮದ ಪ್ರಕಾರ ಟಿಕೆಟ್‌ನಿಂದ ವಂಚಿತರಾಗುವ ಸಾಧ್ಯತೆಯಿದೆ. ತಮ್ಮ ಜಾಗಕ್ಕೆ ಪುತ್ರ ಕಾಂತೇಶ್‌ರನ್ನು ಕೂರಿಸಲು ಒಂದು ಪ್ರಯತ್ನ ನಡೆಸಲಾಗುತ್ತಿದೆ. ಲಿಂಗಾಯತರೇ ಹೆಚ್ಚಾಗಿರುವ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಈ ಬಾರಿ ಲಿಂಗಾಯತರಿಗೆ ಟಿಕೆಟ್ ಕೊಡಬೇಕೆಂದು ಒಂದು ಬಣ ಒಳಗೊಳಗೇ ಸಭೆ ನಡೆಸುತ್ತಿದೆ. ಈ ಕ್ಷೇತ್ರವು ಆರ್‌ಎಸ್‌ಎಸ್ ಹಿಡಿತದಲ್ಲಿರುವುದರಿಂದ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಅವರು ಸೂಚಿಸಿ ದವರೆ ಅಭ್ಯರ್ಥಿಯಾಗಬಹುದು. ಕಾಂಗ್ರೆಸ್‌ನಿಂದ ಮಾಜಿ ಶಾಸಕ ಪ್ರಸನ್ನಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್. ಸುಂದ ರೇಶ್, ಪಾಲಿಕೆ ಸದಸ್ಯ ಯೋಗೀಶ್ ಆಕಾಂಕ್ಷಿ ಗಳಾಗಿದ್ದಾರೆ. ಜೆಡಿಎಸ್‌ನಿಂದ ಎಂ.ಶ್ರೀಕಾಂತ್ ಸ್ಪರ್ಧಿಸುತ್ತಾರಾ ಅಥವಾ ಕಾಂಗ್ರೆಸ್‌ಗೆ ಹೋಗುತ್ತಾರಾ ಕಾದು ನೋಡಬೇಕಿದೆ.
ಸೊರಬದಲ್ಲಿ ಕೈ ಬಲ: ಸೊರಬ ಕ್ಷೇತ್ರದಲ್ಲಿ ಶಾಸಕ ಕುಮಾರ್ ಬಂಗಾರಪ್ಪ ಬಗ್ಗೆ ಬಿಜೆಪಿ ಯೊಳಗೇ ಅಸಮಾಧಾನವಿದೆ. ಮೂಲ ಕಾರ್ಯಕರ್ತರ, ವಲಸಿಗರ ಬಣ ರಾಜ ಕೀಯ ಹೈಕಮಾಂಡ್‌ವರೆಗೂ ಹೋಗಿತ್ತು. ಈಗಲೂ ಪರಸ್ಪರ ಕಾಲೆಳೆದುಕೊಳ್ಳುವುದು ನಿಂತಿಲ್ಲ. ಬಿಜೆಪಿ ಪಾಳಯಕ್ಕೆ ಇದು ಬಿಸಿ ತುಪ್ಪವಾಗಿದೆ. ಶಾಸಕ ಕುಮಾರ್ ಬಂಗಾರಪ್ಪ ಅವರಿಗೆ ಮತ್ತೆ ಟಿಕೆಟ್ ಸಿಗುವುದೇ ಅನುಮಾನ ಎನ್ನುತ್ತಾರೆ ಕೆಲ ಕಾರ್ಯಕರ್ತರು. ಬಿಜೆಪಿ ಬಣ ರಾಜಕೀಯದಿಂದ ಕಾಂಗ್ರೆಸ್‌ಗೆ ಸ್ವಲ್ಪ ಅನುಕೂಲವಾಗಲಿದೆ ಎಂಬುದು ಸುಳ್ಳಲ್ಲ. ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿರುವ ಮಧು ಬಂಗಾರಪ್ಪ ಈ ಬಾರಿ ಗೆದ್ದೇ ಗೆಲ್ಲುತ್ತೇನೆಂಬ ಆತ್ಮವಿಶ್ವಾಸದಲ್ಲಿದ್ದಾರೆ.
ಆಕಾಂಕ್ಷಿಗಳೇ ಹೆಚ್ಚು: ಸಾಗರ ಕ್ಷೇತ್ರದಲ್ಲಿ ಹಾಲಿ ಶಾಸಕ ಹರತಾಳು ಹಾಲಪ್ಪಗೆ ಮತ್ತೆ ಬಿಜೆಪಿ ಟಿಕೆಟ್ ಸಿಗುವ ಖಾತ್ರಿಯಿದೆ. ಇನ್ನು ಕಾಂಗ್ರೆಸ್‌ನಿಂದ ಬೇಳೂರು ಗೋಪಾಲಕೃಷ್ಣ, ಪ್ರಶಾಂತ್, ಕಾಗೋಡು ಪುತ್ರಿ ರಾಜನಂದಿನಿ, ಕಲಗೋಡು ರತ್ನಾಕರ್ ಆಕಾಂಕ್ಷಿಗಳಾ ಗಿದ್ದಾರೆ. ಈ ಕ್ಷೇತ್ರದಲ್ಲೂ ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದೆ.
ಕೈ ಟಿಕೆಟ್‌ಗೆ ಪೈಪೋಟಿ: ತೀರ್ಥಹಳ್ಳಿ ಕ್ಷೇತ್ರದಲ್ಲಿ ಮೊದಲಿನಿಂದಲೂ ಕಾಂಗ್ರೆಸ್-ಬಿಜೆಪಿ ಅಧಿಕಾರ ಹಿಡಿದಿದೆ. ಬಿಜೆಪಿಯಿಂದ ಹಾಲಿ ಶಾಸಕ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಟಿಕೆಟ್ ಸಿಗಲಿದೆ. ಆದರೆ ಕಾಂಗ್ರೆಸ್‌ನಿಂದ ಯಾರು ಎಂಬ ಗೊಂದಲವಿದೆ. ಮೊದಲು ಹಾವು ಮುಂಗುಸಿಯಂತಿದ್ದ ಕಿಮ್ಮನೆ ರತ್ನಾಕರ್ ಹಾಗೂ ಆರ್.ಎಂ.ಮಂಜು ನಾಥ್‌ಗೌಡ ಈಗ ಕಾಂಗ್ರೆಸ್‌ನಲ್ಲಿದ್ದು ಇಬ್ಬರೂ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಜೆಡಿಎಸ್ ಇಲ್ಲಿ ಮತ್ತೆ ಹೊಸ ಅಭ್ಯರ್ಥಿಗೆ ಹುಡುಕಾಟ ನಡೆಸಬೇಕಿದೆ.
ತ್ರಿಕೋನ ಸ್ಪರ್ಧೆ: ಎಸ್‌ಸಿ ಮೀಸಲು ಕ್ಷೇತ್ರವಾದ ಶಿವಮೊಗ್ಗ ಗ್ರಾಮಾಂತರದಲ್ಲಿ ಕಾಂಗ್ರೆಸ್‌ನಿಂದ ಮಾಜಿ ಶಾಸಕ ಕರಿಯಣ್ಣ ಪುತ್ರ ಡಾ| ಶ್ರೀನಿವಾಸ್ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಜೆಡಿಎಸ್‌ನಿಂದ ಶಾರದಾ ಪೂರ್ಯಾನಾಯ್ಕ, ಬಿಜೆಪಿಯ ಹಾಲಿ ಶಾಸಕ ಅಶೋಕ್ ನಾಯ್ಕ ಮತ್ತೆ ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದಾರೆ.
ಕಮಲ ಅರಳ್ಳೋದು ಕಷ್ಟ: ಜಿಲ್ಲೆಯ ಏಳರಲ್ಲಿ ಆರು ಕ್ಷೇತ್ರ ಗೆದ್ದಿರುವ ಬಿಜೆಪಿಗೆ ಭದ್ರಾವತಿ ಕ್ಷೇತ್ರ ಒಮ್ಮೆಯೂ ದಕ್ಕಿಲ್ಲ. ಮುಂದಿನ ಬಾರಿಯೂ ಗೆಲ್ಲುವುದಿಲ್ಲ ಎನ್ನುತ್ತಾರೆ ಸ್ವಪಕ್ಷದ ಕಾರ್ಯಕರ್ತರು. ಇಲ್ಲಿ ಅಭ್ಯರ್ಥಿ ಹುಡುಕಾಟದಲ್ಲೇ ಬಿಜೆಪಿ ಸೋತಿದೆ. ಕಾಂಗ್ರೆಸ್-ಜೆಡಿಎಸ್ ನೇರ ಹಣಾಹಣಿ ಹೊಂದಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಬಿ.ಕೆ. ಸಂಗಮೇಶ್‌ಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ಶಾರದಾ ಅಪ್ಪಾಜಿಗೌಡ ಅಭ್ಯರ್ಥಿ ಎಂದು ಈಗಾಗಲೇ ಜೆಡಿಎಸ್ ಘೋಷಿಸಿದೆ.
ಕಾಂಗ್ರೆಸ್‌ಗೆ ಬಣ ರಾಜಕೀಯ ಬಿಸಿ
ಜಿಲ್ಲೆಯಲ್ಲಿ ಕಾಂಗ್ರೆಸ್ ಬಣ ರಾಜಕೀಯ ಜೋರಾಗಿದ್ದು ಟಿಕೆಟ್‌ಗಾಗಿ ಈಗಲೇ ಕೋಲ್ಡ್ ವಾರ್ ನಡೆಯುತ್ತಿದೆ. ಶಿವಮೊಗ್ಗ, ತೀರ್ಥಹಳ್ಳಿ, ಸಾಗರದಲ್ಲಿ ಬಣ ಜಗಳಕ್ಕೆ ವಿರಾಮ ಹೇಳಿದರೆ ಗೆಲ್ಲುವ ಅವಕಾಶಗಳು ಹೆಚ್ಚಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.