ಅಂತೂ ಬಂತು ಕಲಾ ಸಂಘಟನೆಗಳಿಗೆ ಅನುದಾನ!
•2 ಲಕ್ಷಕ್ಕಿಂತ ಅಧಿಕವಿದ್ದರೆ ಜಿಲ್ಲಾಧಿಕಾರಿಗಳಿಂದ ಬಿಡುಗಡೆ•ಅನುದಾನ ಹಂಚಿಕೆಗೂ ಬರಲಿದೆ ಹೊಸ ಸೂತ್ರ
Team Udayavani, Jul 25, 2019, 1:28 PM IST
ರಾಘವೇಂದ್ರ ಬೆಟ್ಟಕೊಪ್ಪ
ಶಿರಸಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ರಾಜ್ಯ ಸರಕಾರ ರಾಜ್ಯದ ಕಲೆಗಳ ಬೆಳವಣಿಗೆಗೆ, ಸಂಸ್ಥೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನೀಡಲಾಗುವ ವಾರ್ಷಿಕ ಅನುದಾನ ಅಂತೂ ಇಂತೂ ಬಂದಿದೆ. ಕಲಾವಿದರು ಖರೀದಿಸುವ ಪರಿಕರ ಹಾಗೂ ಕಲಾ ಸಂಸ್ಥೆಗಳು ನಡೆಸುವ ಕಾರ್ಯಕ್ರಮಗಳಿಗೆ ಅನುದಾನ ಹಂಚಿಕೆ ಮಾಡಲಾಗಿದೆ.
ಕಳೆದ ಜು.15ಕ್ಕೆ ಇಲಾಖೆ ಅಧೀನ ಕಾರ್ಯದರ್ಶಿ ಪಿ.ಎಸ್. ಮಾಲತಿ ಅಧಿಕೃತ ಆದೇಶ ಹೊರಡಿಸಿದ್ದು, ಕಲಾ ಸಂಘಟನೆಗಳು, ಕಲಾವಿದರು ತುಸು ನೆಮ್ಮದಿ ಉಸಿರು ಬಿಡುವಂತೆ ಆಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದ ಡಿ.ಕೆ. ಶಿವಕುಮಾರ ಬೇರೆ ಬೇರೆ ಹೇಳಿಕೆಗಳಿಂದಲೂ ಅನೇಕ ಗೊಂದಲ, ಅಸಮಾಧಾನ ಕೂಡ ವ್ಯಕ್ತವಾಗಿತ್ತು. ಇಲಾಖೆಯಲ್ಲೂ ಗೊಂದಲಗಳಿದ್ದವು.
ಅಂತೂ ಬಂತು: 2018ರ ಸೆಪ್ಟೆಂಬರ್‌ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಕರೆಯಲಾಗಿದ್ದ ಕಲಾವಿದರ, ಕಲಾ ಸಂಘಟನೆಗಳ ಅರ್ಜಿಗೆ ಇದೀಗ ಮೌಲ್ಯ ಬಂದಿದೆ. ಆನ್‌ಲೈನ್ ಮೂಲಕ ಅರ್ಜಿ ಹಾಕಿದವರನ್ನು ಆಯಾ ಜಿಲ್ಲಾ ಕೇಂದ್ರದಲ್ಲಿರುವ ಕನ್ನಡ ಸಂಸ್ಕೃತಿ ಇಲಾಖೆ ಕಚೇರಿಯಲ್ಲಿ ಪರಿಶೀಲನೆ ನಡೆಸಲಾಗಿತ್ತು. ಜನೆವರಿಯಲ್ಲೇ ಅನುದಾನ ಮಂಜೂರಾತಿಗೆ ಶಿಫಾರಸ್ಸು ಸಮಿತಿಗಳೂ ಸಭೆ ಸೇರಿ ತೀರ್ಮಾನಿಸಿದ್ದವು.
ಈ ಮಧ್ಯೆ ಏಪ್ರೀಲ್, ಮೇದಲ್ಲಿ ಚುನಾವಣೆ ಇರುವ ಕಾರಣದಿಂದ ಅನುದಾನ ವಾಪಸ್ ಹೋಗುತ್ತದೆ ಎಂದೂ ಹೇಳಲಾಯಿತು. ಚುನಾವಣೆ ಬಳಿಕ ಅನುದಾನ ಹಂಚಿಕೆ ಮಾಡಲು ಸಚಿವರು ಸಹಿ ಹಾಕುತ್ತಿಲ್ಲ ಎಂಬ ಆರೋಪಗಳು ಬಂದವು. ಸಚಿವ ಡಿ.ಕೆ. ಶಿವಕುಮಾರರು ಸಂಸ್ಥೆಗಳು ಕಾರ್ಯಕ್ರಮವನ್ನೇ ಮಾಡದೇ ಅನುದಾನ ನುಂಗುತ್ತಿವೆ ಎಂಬರ್ಥದಲ್ಲಿ ಆರೋಪಿಸಿದಾಗ ಕಲಾ ಸಂಘಟನೆಗಳು ಕುಪಿತವಾದವು. ಅಂತೂ ಈಗ ಅನುದಾನ ಹಂಚಿಕೆ ಯಾದಿ ಬಿಡುಗಡೆಗೊಂಡಿದ್ದು, ಕಲಾವಿದರಿಗೆ ಖುಷಿಯಾಗಿದೆ.
ಯಾರಿಗೆ ಎಷ್ಟು?: ಅರ್ಜಿ ಹಾಕಿದ ಕಲಾ ಸಂಘಟನೆಗಳು ಎರಡು ಸಾವಿರಕ್ಕೂ ಅಧಿಕ. ಅವುಗಳಲ್ಲಿ 593 ಕಲಾ ಸಂಸ್ಥೆಗಳಿಗೆ ಪ್ರಾದೇಶಿಕವಾರು ವಿಂಗಡಿಸಿ ಅನುದಾನ ಮಂಜೂರಾತಿ ಮಾಡಲಾಗಿದೆ. ಆಯ್ಕೆ ಮಾಡಿ ಸಂಸ್ಥೆಗಳಿಗೆ ತಲಾ 50 ಸಾವಿರ ರೂ.ಗಳಿಂದ 10 ಲಕ್ಷ ರೂ. ಒಟ್ಟೂ 9,14,75,000 ರೂ. ತನಕ ನೆರವು ನೀಡಲಾಗಿದೆ.
ವೈಯಕ್ತಿವಾಗಿ ಸಂಗೀತ ಉಪಕರಣ, ಯಕ್ಷಗಾನ ವೇಷ ಭೂಷಣಗಳ ಖರೀದಿಗೆ ಅರ್ಜಿ ಹಾಕಿದವರೂ ಸಾವಿರಕ್ಕೂ ಹೆಚ್ಚು. ಅವುಗಳಲ್ಲಿ 363 ಕಲಾವಿದರಿಗೆ 30ರಿಂದ 50 ಸಾವಿರ ರೂ. ನೆರವು ಒದಗಿಸಲಾಗಿದೆ. ಕಲಾ ಸಂಘಟನೆಗಳು, ಕಲಾವಿದರು ಅನುದಾನ ಬಳಕೆ ಪ್ರಮಾಣ ಪತ್ರ, ಲೆಕ್ಕಪತ್ರ ಪರಿಶೀಲನಾ ವರದಿ ಕೂಡ ಸರಕಾರಕ್ಕೆ ಸಲ್ಲಿಸಬೇಕಿದೆ. ಸರಕಾರ 11,96,48,300 ರೂ.ಅನುದಾನ ಬಿಡುಗಡೆಗೆ ಎತ್ತಿಟ್ಟುಕೊಂಡಿದ್ದು, ಇದರಲ್ಲಿ 11,60,30,000 ರೂ. ನೆರವು ಬಿಡುಗಡೆಗೊಳಿಸಿದೆ. ಈ ಕುರಿತು ಉದಯವಾಣಿ ವಿಶೇಷ ವರದಿ ಪ್ರಕಟಿಸಿತ್ತು.
ಎರಡು ಬದಲಾವಣೆ: ಸಂಘ ಸಂಸ್ಥೆಗಳಿಗೆ ಅನುದಾನ ಹಂಚಿಕೆಯಲ್ಲಿ 2 ಲಕ್ಷ ರೂ.ಗಿಂತ ಅಧಿಕ ಮೊತ್ತ ಇದ್ದರೆ ಅದನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಖಾತೆಗೆ ನೀಡಲಾಗುತ್ತಿದೆ. ಅವರು ಸಂಘ ಸಂಸ್ಥೆಗಳ ಕಾರ್ಯ ಚಟುವಟಿಕೆ ಪರಿಶೀಲನೆ ನಡೆಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಹಂಚಬೇಕಿದೆ.
ಈ ಮಧ್ಯೆ ಪ್ರಸಕ್ತ ಸಾಲಿನಿಂದ ಆನ್‌ಲೈನ್ ಅರ್ಜಿ ಸ್ವೀಕಾರಕ್ಕೆ ಸರಕಾರ ತಿಲಾಂಜಲಿ ನೀಡಲು ಮುಂದಾಗಿದೆ. ಸಂಘ ಸಂಸ್ಥೆಗಳಿಗೆ ಧನ ಸಹಾಯ ಮಾರ್ಗ ಸೂಚಿ ಅನುಬಂಧ 1 ಹಾಗೂ ಸರಕಾರದ ಅಧಿಕೃತ ಆದೇಶದ ಧನ ಸಹಾಯಕ್ಕೋಸ್ಕರ ಆನ್‌ಲೈನ್ ಮೂಲಕ ಕರೆಯುವ ಅರ್ಜಿ ಸ್ವೀಕಾರ ತಕ್ಷಣ ಜಾರಿಗೆ ಬರುವಂತೆ ನಿಲ್ಲಿಸಲಾಗಿದೆ ಎಂದೂ ಅಧೀನ ಕಾರ್ಯದರ್ಶಿಗಳು ಸ್ಪಷ್ಟವಾಗಿ ಸೂಚಸಿದ್ದಾರೆ.
ಪ್ರಸಕ್ತ ಸಾಲಿನ ಅನುದಾನ ಹಂಚಿಕೆ ಮಾಡುವ ಕುರಿತು ಇಲಾಖೆ ಹೊಸ ನೀತಿ ರೂಪಿಸಲು ಮುಂದಾಗಿದೆ. ಈ ಕಾರಣದಿಂದ ಹಾಲಿ ಆದೇಶದ ಪ್ರಕಾರ ಆನ್‌ಲೈನ್ ಅರ್ಜಿ ಪ್ರಕ್ರಿಯೆಗೆ ಇದೇ ಕೊನೇ ಮೊಳೆಯಾಗಲಿದೆ. ಮುಂದಿನ ಸರಕಾರ ಹಳೆ ಮಾದರಿ ಉಳಿಸಿಕೊಳ್ಳುವುದೋ ಅಥವಾ ಬದಲಾವಣೆ ಮಾಡುವುದೋ ಕಾದು ನೋಡಬೇಕು.
• ಹೆಸರು ಹೇಳದ ಅಧಿಕಾರಿ
ಎಷ್ಟೋ ಸಂಘಟನೆಗಳ, ವೈಯಕ್ತಿಕ ಅರ್ಜಿಗಳೂ ಇಲಾಖೆಯಲ್ಲಿ ಕಡತ ತೆರೆದಿಲ್ಲವಂತೆ. ಪರಿಶೀಲನೆ ವೇಳೆ ಝೆರಾಕ್ಸ್ ಪ್ರತಿ ನೀಡಿದರೂ ಅನುದಾನ ಬಂದಿಲ್ಲ. ಅವರ ತಪ್ಪಿಗೆ ನಮಗೆ ಬರೆ ಬಿದ್ದಂತಾಯಿತು.
• ಕಾವೇಂಶ್ರೀ,ಕಲಾ ಸಂಘಟಕ
ಎರಡು ಲಕ್ಷಕ್ಕಿಂತ ಹೆಚ್ಚಿನ ಮೊತ್ತ ಪಡೆಯಲು ಜಿಲ್ಲಾಧಿಕಾರಿಗಳ ಪರಿಶೀಲನೆಯೇ ಮುಂತಾದವುಗಳನ್ನು ವಿಧಿಸಿದ್ದು ಅನವಶ್ಯಕ ವಿಳಂಬಕ್ಕೆ ಕಾರಣವಾಗಬಹುದು. ಸರಕಾರಕ್ಕೆ ಇದನ್ನು ಕೈ ಬಿಡಲು ಕೋರಲಾಗಿತ್ತಾದರೂ ಅದನ್ನು ಪರಿಗಣಿಸಿಲ್ಲ.
• ಪ್ರೊ| ಎಂ.ಎ. ಹೆಗಡೆ,
ಅಧ್ಯಕ್ಷರು, ಯಕ್ಷಗಾನ ಅಕಾಡೆಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.