ಮೂರೇ ದಿನದಲ್ಲಿ ಅವಾಂತರ ಸೃಷ್ಟಿಸಿದ ಮಳೆ
ಮನೆ-ಬಡಾವಣೆಗಳಿಗೆ ನುಗ್ಗಿದ ನೀರು •ಸಮರೋಪಾದಿಯಲ್ಲಿ ಪರಿಹಾರಕ್ಕೆ ಸೂಚನೆ
Team Udayavani, Aug 7, 2019, 12:12 PM IST
ಶಿವಮೊಗ್ಗ: ತುಂಗಾ ಜಲಾಶಯದಿಂದ 20 ಗೇಟ್‌ಗಳ ಮೂಲಕ 76 ಸಾವಿರ ಕ್ಯೂಸೆಕ್ ನೀರು ಹೊರಬಿಟ್ಟಿರುವುದು.
ಶಿವಮೊಗ್ಗ: ಸೋಮವಾರ ಮಧ್ಯಾಹ್ನದಿಂದ ಸುರಿಯುತ್ತಿರುವ ಭಾರಿ ಮಳೆಗೆ ಶಿವಮೊಗ್ಗ ನಗರದ ವಿವಿಧೆಡೆ ತಗ್ಗು ಪ್ರದೇಶದ ಬಡಾವಣೆಗಳಲ್ಲಿನ ಮನೆಗಳಿಗೆ ನೀರು ನುಗ್ಗಿದ್ದು, ಮರಗಳು ಉರುಳಿವೆ. ಅನೇಕ ಕಡೆ ವಿದ್ಯುತ್ ವ್ಯತ್ಯಯವಾಗಿದ್ದು ಜನ ಪರದಾಡುವಂತಾಗಿತ್ತು.
ಶಿವಮೊಗ್ಗದ ಟ್ಯಾಂಕ್ ಮೊಹಲ್ಲಾ, ಬಾಪೂಜಿನಗರ ಸಂಪೂರ್ಣ ಜಲಾವೃತವಾಗಿದೆ. ನಿರಂತರ ಮಳೆಯಾಗಿದ್ದರಿಂದ ಚರಂಡಿಗಳು ತುಂಬಿ, ಮನೆಗಳಿಗೆ ನೀರು ನುಗ್ಗಿದೆ. ಇಲ್ಲಿರುವ ಗಂಗಾಮತ ಸಂಘದ ವಿದ್ಯಾರ್ಥಿನಿಲಯ ಆವರಣದಲ್ಲಿ ನೀರು ನಿಂತಿದ್ದರಿಂದ, ವಿದ್ಯಾರ್ಥಿಗಳು ತಮ್ಮ ಕೊಠಡಿ ಬಿಟ್ಟು ಹೊರಬಾರದಂತೆ ಆಗಿದೆ. ಮಹಾನಗರ ಪಾಲಿಕೆ ಸಿಬ್ಬಂದಿ ಜೆಸಿಬಿ ಮೂಲಕ ರಾಜ ಕಾಲುವೆಯಲ್ಲಿ ನೀರು ಹರಿದು ಹೋಗುವಂತೆ ತುರ್ತು ಕಾಮಗಾರಿ ನಡೆಸಿದರು.
ವೆಂಕಟೇಶ ನಗರದಲ್ಲೂ ಚರಂಡಿಗಳು ತುಂಬಿದ್ದರಿಂದ ರಸ್ತೆ ಮೇಲೆ ನಿಂತಿತ್ತು. ಮನೆಗಳಿಗೂ ನೀರು ನುಗ್ಗಿದ್ದರಿಂದ ಜನ ಸಂಕಷ್ಟಕ್ಕೀಡಾದರು. ರಾಜಕಾಲುವೆ, ಸಣ್ಣಪುಟ್ಟ ಕಾಲುವೆಗಳನ್ನು ಸ್ವಚ್ಛ ಮಾಡದ ಕಾರಣ ಕಸ ಶೇಖರಣೆಯಾಗಿ ನೀರು ಹರಿಯದೇ ರಸ್ತೆ ಮೇಲೆ ಉಕ್ಕುತ್ತಿತ್ತು.
ಹೊಸಮನೆ ಬಡಾವಣೆಯ ಅಂಬೇಡ್ಕರ್ ಭವನದ ಪಕ್ಕದಲ್ಲಿ ಲಕ್ಷ್ಮಮ್ಮ ಎಂಬುವವರ ಮನೆ ಕುಸಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಆಗಿಲ್ಲ. ಸ್ಥಳೀಯ ಮುಖಂಡರು ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.
ನಗರದ ಹೃದಯಭಾಗದ ಕಮಲಾ ನೆಹರು ಕಾಲೇಜು, ಅಂಬೇಡ್ಕರ್ ಭವನದ ಮುಂಭಾಗದ ರಸ್ತೆಯಲ್ಲಿ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗದೆ, ರಸ್ತೆ ಜಲಾವೃತವಾಗಿತ್ತು. ಇದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಬೈಪಾಸ್ ರಸ್ತೆಯ ನಂದನಾ ಸ್ಕೂಲ್ ಆವರಣಕ್ಕೆ ನೀರು ನುಗ್ಗಿದೆ. ಮನೆಗಳಿಗೆ ನುಗ್ಗಿರುವ ನೀರನ್ನು ಹೊರಗೆ ಹಾಕುವಲ್ಲಿ ಜನರು ಹೈರಾಣಾಗಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.