ಬಿಜೆಪಿ ಸರ್ಕಾರದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ
, Apr 14, 2019, 4:25 PM IST
ತೀರ್ಥಹಳ್ಳಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಅಭಿವೃದ್ಧಿಯ ಹರಿಕಾರರಾಗಿ ತಮ್ಮ ಅವಧಿಯ 5 ವರ್ಷಗಳಲ್ಲಿ ಸಾಧನೆಯ ಹಾದಿಯಲ್ಲಿ ಸಾಗಿದ್ದಾರೆ. ಭ್ರಷ್ಟಾಚಾರರಹಿತ ಪಾರದರ್ಶಕ ಆಡಳಿತ ನೀಡಿದ್ದಾರೆ ಎಂದು ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಹೇಳಿದರು.
ತಾಲೂಕಿನ ಹಣಗೆರೆ, ಕನ್ನಂಗಿ, ತೂದೂರು, ಹೆದ್ದೂರು ಮುಂತಾದೆಡೆ ನಡೆದ ಲೋಕಸಭಾ ಚುನಾವಣೆಯ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ದೇಶದ ಯುವಪೀಳಿಗೆ ಇಂದು ಭವಿಷ್ಯ ಭಾರತದ ದೃಷ್ಟಿಕೋನದೊಂದಿಗೆ ಸಾಗಬೇಕಾದರೆ ಮೋದಿ ಸರ್ಕಾರ ನೀಡಿದ
ಡಿಜಿಟಲ್ ಇಂಡಿಯಾದ ವಿಚಾರಗಳ ಬಗ್ಗೆ ಹೆಚ್ಚು ಅರಿತುಕೊಳ್ಳಬೇಕು. ದೇಶದ ಗಡಿ ಕಾಯುವ ಯೋಧರಿಗೆ ನೈತಿಕ ಸ್ಥೈರ್ಯ ತುಂಬಿದ ಏಕೈಕ ಪ್ರಧಾನ ಮಂತ್ರಿ ನರೇಂದ್ರ ಮೋದಿ. ಹಲವು ವರ್ಷಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್ ಸರ್ಕಾರ
ನಮ್ಮ ಆರ್ಥಿಕ ನೀತಿಯನ್ನು ಹದಗೆಡಿಸಿತ್ತು.
ಆದರೆ ಇಂದು ವಿಶ್ವವೇ ಭಾರತವನ್ನು ಗಮನಿಸುತ್ತಿದೆ. ಈ ಬಾರಿಯ ಲೋಕಸಭಾ ಚುನಾವಣೆಯ ರಾಜ್ಯದಲ್ಲಿ ಬಿಜೆಪಿ 22 ಕ್ಕೊ ಹೆಚ್ಚು ಸ್ಥಾನ ಗೆಲ್ಲುವುದು ಖಚಿತ ಎಂದರು. ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಬಿಜೆಪಿ ಕೇವಲ ಅಧಿ ಕಾರಕ್ಕಾಗಿ ರಾಜಕಾರಣ ಮಾಡುತ್ತಿಲ್ಲ. ರಾಜಕಾರಣ ಮತ್ತು ಅಧಿಕಾರ ಬಿಜೆಪಿಗೆ ದೇಶವನ್ನು ವಿಶ್ವಗುರು ಮಾಡಲು ಹೊರಟಿರುವ ಗುರಿಗೆ ಮುಖ್ಯ ದಾರಿಯಾಗಿದೆ. ದೇಶದಲ್ಲಿ ಮತ್ತೆ ಅಭಿವೃದ್ಧಿಯ ಹಾದಿ ಯಶಸ್ಸಿನ ಹಾದಿಯಲ್ಲಿ ಸಾಗಬೇಕಾದರೆ, ಮೋದಿ ಮತ್ತೆ ಪ್ರಧಾನಿಯಾಗಬೇಕಾದರೆ ಈ ಕ್ಷೇತ್ರದಲ್ಲಿ ಬಿ.ವೈ. ರಾಘವೇಂದ್ರ ಅತೀ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಬೇಕು. ಸಾವಿರ ಸಾವಿರ ಕಾರ್ಯಕರ್ತರ ತ್ಯಾಗದ
ಬಲಿದಾನದಿಂದ ದೇಶದಲ್ಲಿ ಬಿಜೆಪಿ ಇಂದು ಈ ಹಂತಕ್ಕೆ ತಲುಪಿದೆ. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತ ಮತ್ತೆ ಮೋದಿ ಪ್ರಧಾನಿಯಾಗುವಂತೆ ಮಾಡಲು ಪಣ ತೊಡಬೇಕು ಎಂದರು.
ಸಭೆಯಲ್ಲಿ ಬಿಜೆಪಿ ಮುಖಂಡರಾದ ಮಾಜಿ ಶಾಸಕ ಸ್ವಾಮಿರಾವ್, ಬೇಗುವಳ್ಳಿ ಸತೀಶ್, ಆರ್. ಮದನ್, ಅಶೋಕ್ ಮೂರ್ತಿ, ಕವಿರಾಜ್, ಶ್ರೀನಿವಾಸ್ ಮುಂತಾದವರು ಇದ್ದರು.