ಪರಿಹಾರಕ್ಕೆ ಕಾಯೋದೇ ಸಂತ್ರಸ್ತರ ಕಾಯಕ
ಭಾರೀ ಮಳೆಯಿಂದಾಗಿ ಮನೆ-ಕೃಷಿ ಜಮೀನು ಕಳೆದುಕೊಂಡವರ ಸ್ಥಿತಿ ದೇವರಿಗೇ ಪ್ರೀತಿ
Team Udayavani, Sep 1, 2019, 11:48 AM IST
ಶೃಂಗೇರಿ: ತಾಳಕೋಡಿನಲ್ಲಿ ಧರೆ ಕುಸಿದಿದೆ.
ರಮೇಶ್ ಕುರುವಾನೆ
ಶೃಂಗೇರಿ: ಹದಿನೈದು ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ತಾಲೂಕಿನಾದ್ಯಂತ ಮನೆ, ಕೃಷಿ ಜಮೀನು, ರಸ್ತೆ, ಕಾಲುಸಂಕ, ವಿದ್ಯುತ್ ಮಾರ್ಗ ಸಹಿತ ಅಪಾರ ಹಾನಿ ಸಂಭವಿಸಿದ್ದು, ಸಂಕಷ್ಟಕೀಡಾಗಿರುವ ಸಂತ್ರಸ್ತರು ಸರಕಾರದ ಪರಿಹಾರಕ್ಕಾಗಿ ಎದುರು ನೋಡುತ್ತಿದ್ದಾರೆ.
ಆಶ್ಲೇಷಾ ಮಳೆಯ ಆರ್ಭಟದ ನಂತರ ಮುಂಗಾರು ಶಾಂತವಾಗಿದ್ದರೂ ಅತಿವೃಷ್ಟಿಯಿಂದ ಉಂಟಾದ ಹಾನಿಯನ್ನು ಸರಿಪಡಿಸಿಕೊಳ್ಳಲಾಗದೇ ರೈತರು, ಸಾರ್ವಜನಿಕರು ಸಂಕಷ್ಟ ಪಡುವಂತಾಗಿದೆ.
ಆಗಸ್ಟ್ ತಿಂಗಳು ಆರಂಭವಾದರೂ ಮಲೆನಾಡಿನಲ್ಲೂ ಮಳೆಯ ಕೊರತೆ ಉಂಟಾಗಿದ್ದು, ಮಲೆನಾಡಿಗೂ ಬರ ಬರಬಹುದೇ ಎಂಬ ಪ್ರಶ್ನೆ ಉದ್ಭವಿಸಿತ್ತು. ಆಶ್ಲೇಷಾ ಮಳೆ ಆರಂಭವಾಗುತ್ತಿದ್ದಂತೆ ಆರಂಭವಾದ ಮಳೆ ಒಂದೇ ಸಮನೇ ಸುರಿದು ತಾಲೂಕಿನಾದ್ಯಂತ ಸಾಕಷ್ಟು ಹಾನಿ ಉಂಟು ಮಾಡಿದೆ. ತುಂಗಾ ನದಿಯಲ್ಲಿ ಸತತವಾಗಿ ಪ್ರವಾಹ ಉಂಟು ಮಾಡಿದ್ದಲ್ಲದೇ, ಪ್ರವಾಹದಿಂದ ತಗ್ಗು ಪ್ರದೇಶದಲ್ಲಿ ನೀರು ನಿಲ್ಲುವಂತಾಯಿತು.
ಸತತ ಮಳೆಯಿಂದ ಹಳ್ಳಗಳು ಉಕ್ಕಿ ಹರಿದು ಭತ್ತದ ಗದ್ದೆ, ಅಡಕೆ ತೋಟಕ್ಕೆ ತೀವ್ರ ಹಾನಿ ಸಂಭವಿಸಿದೆ. ಸತತ ಮಳೆಯಿಂದ ಕಾಫಿ, ಅಡಕೆಗೆ ತೀವ್ರ ಕೊಳೆ ರೋಗ ಬಾಧಿಸುತ್ತಿದ್ದು, ಅಡಕೆ, ಕಾಫಿ ಉದುರಿಹೋಗುತ್ತಿದೆ. ಬೇಸಿಗೆಯಲ್ಲಿ ಸಕಾಲಿಕವಾಗಿ ಮಳೆ ಸುರಿಯದೇ ಕಾಫಿ ಫಸಲು ಕುಸಿದಿದ್ದು, ಕಾಳು ಮೆಣಸು ಕಾಯಿ ಕಟ್ಟಲು ವಿಳಂಬವಾಗಿತ್ತು. ಈಗ ಅತಿಯಾದ ಮಳೆಗೆ ಕಾಳು ಮೆಣಸು ಬಳ್ಳಿಗಳು ಸಾಯುತ್ತಿದ್ದು, ಎಲ್ಲಾ ಬೆಳೆಗೂ ಅತಿವೃಷ್ಟಿ ಮಾರಕವಾಗಿದೆ.
ಕಳೆದ ವರ್ಷವೂ ಅತಿವೃಷ್ಟಿ ಪರಿಣಾಮ ತಾಲೂಕಿನಲ್ಲಿ ಅಡಕೆ, ಕಾಫಿಗೆ ವ್ಯಾಪಕ ಕೊಳೆ ರೋಗ ಕಾಣಿಸಿಕೊಂಡಿತ್ತು. ಮತ್ತೆ ಈ ವರ್ಷವೂ ಕೊಳೆ ರೋಗ ಬಾರದಂತೆ ಜೂನ್ ಮೊದಲ ವಾರದಲ್ಲಿಯೇ ಬೋರ್ಡೋ ಸಿಂಪಡಿಸಿದ್ದು, ಅನೇಕ ರೈತರು ಎರಡನೇ ಬಾರಿಯೂ ಬೋರ್ಡೋ ಸಿಂಪಡಣೆ ಮಾಡಿದ್ದರು. ಆದರೆ, ಸತತ ಮಳೆಯಿಂದ ಅಡಕೆಗೆ ಮತ್ತೆ ಕೊಳೆ ರೋಗ ಕಾಣಿಸಿಕೊಂಡಿದೆ.
ಬಾರದ ಪರಿಹಾರ-ಕಳೆದ ವರ್ಷ ಅತಿವೃಷ್ಟಿಯಿಂದ ಹಾನಿಗೊಳಗಾದ ರೈತರು ಪರಿಹಾರಕ್ಕಾಗಿ ಸರಕಾರಕ್ಕೆ ಅರ್ಜಿ ಸಲ್ಲಿಸಿದ್ದರೂ ಯಾರಿಗೂ ಪರಿಹಾರ ಬಂದಿಲ್ಲ. ಇದಲ್ಲದೇ ಬೆಳೆ ವಿಮೆ, ಸಾಲ ಮನ್ನಾದ ಹಣವೂ ರೈತರ ಖಾತೆಗೆ ಜಮಾ ಆಗದಿರುವುದು ರೈತರ ಸಂಕಷ್ಟ ಹೆಚ್ಚಾಗುವಂತೆ ಮಾಡಿದೆ. ಈ ವರ್ಷವೂ ಬೆಳೆ ನಷ್ಟ ಅನುಭವಿಸುತ್ತಿದ್ದಾರೆ.
ಹಾನಿ-ಈ ವರ್ಷದ ಅತಿವೃಷ್ಟಿಯಿಂದ ವಿದ್ಯಾರಣ್ಯಪುರ ಗ್ರಾಪಂ ವ್ಯಾಪ್ತಿಯ ತಾಳಕೋಡಿನ ರತ್ನಾಕರ ಎಂಬುವವರ ಮನೆಗೆ ದರೆ ಅಪ್ಪಳಿಸಿ ಹಾನಿಯಾಗಿದೆ. ಕಳೆದ ವರ್ಷವೂ ದರೆ ಕುಸಿದು ಮನೆಗೆ ಹಾನಿಯಾಗಿತ್ತು. ಕೆಸರಕುಡಿಗೆ ಚಂದ್ರಪ್ಪ ಅವರ ಮನೆಗೆ ಕಳೆದ ವರ್ಷದಂತೆ ಈ ವರ್ಷವೂ ಧರೆ ಕುಸಿದು ಹಾನಿಯಾಗಿದೆ. ಬೇಗಾನೆಯ ಇಂದಿರಮ್ಮ ಅವರ ಅಡಕೆ ತೋಟದ ಪಕ್ಕದ ದರೆ ಕುಸಿದು ತೋಟಕ್ಕೆ ವ್ಯಾಪಕ ಹಾನಿ ಸಂಭವಿಸಿದೆ. ಕೆರೆ ಗ್ರಾಪಂ ಯ ಹೊರಣೆ ಕಾಲುಸಂಕ ಪ್ರವಾಹಕ್ಕೆ ಸಿಲುಕಿ ಹಾನಿಯಾಗಿದೆ. ಹಂಚಿನಕೊಡಿಗೆ ಕಿರು ಸೇತುವೆಗೆ ಹಾನಿಯಾಗಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ. ರಾಜಾನಗರ ಸರಕಾರಿ ಶಾಲೆ ಬಾವಿ, ರೇಣುಕಾಂಬಾ ನಗರದ ಬಾವಿ ಕುಸಿದು ಹಾನಿಯಾಗಿದೆ.
ಕೋಗೋಡು ಗ್ರಾಮದ ವಡಗೆರೆೆಮನೆ ವಿಶ್ವನಾಥ್ ಅವರ ಗದ್ದೆಗೆ ಪ್ರವಾಹದಿಂದ ಅಪಾರ ಮಣ್ಣು ಸಂಗ್ರಹವಾಗಿದೆ. ನೀಲಂದೂರು ಗ್ರಾಮದ ಆಮ್ಟೆ ಚಂದ್ರಪ್ಪ ಮನೆ ಕುಸಿದಿದೆ. ನೆಮ್ಮಾರ್ ಗ್ರಾಮದ ಬೋಬಣ್ಣ,ಸದಾನಂದ, ಸುಮಿತ್ರಾ ಅವರ ಮನೆ ಕುಸಿದು ಹಾನಿಯಾಗಿದೆ. ಪಟ್ಟಣದ ಸಪೂರಾಬಿ ಮನೆಯ ಹಿಂಭಾಗ ಧರೆ ಕುಸಿದು ಮನೆಗೆ ಹಾನಿಯಾಗಿದೆ. ಕಲ್ಕಟ್ಟೆಯ ದುರ್ಗಾರವರ ಮನೆ ಕುಸಿದು ದುರ್ಗಾ ಗಾಯಗೊಂಡಿದ್ದರು. ರಾಜ್ಯ ಹೆದ್ದಾರಿ ರಸ್ತೆ, ಎನ್ನೆಚ್ ಹಾಗೂ ಗ್ರಾಮೀಣ ರಸ್ತೆಗಳು ಮಳೆಗೆ ತೀವ್ರ ಹಾನಿಯಾಗಿದೆ.