ಕೆರೆಗಳ ಅಭಿವೃದ್ಧಿಯಲ್ಲಿ ಗೋಲ್‌ಮಾಲ್?
ಮೆಣಸೆ ಗ್ರಾಪಂನ ಹೊಸೂರು ಬಳಿ ಸಣ್ಣ ಕೆರೆ ಹೂಳೆತ್ತುವ, ತೂಬು ದುರಸ್ತಿಯಲ್ಲಿ ಅವ್ಯವಹಾರ
Team Udayavani, Nov 4, 2019, 3:25 PM IST
ರಮೇಶ್ ಕರುವಾನೆ
ಶೃಂಗೇರಿ: ಅಂತರ್ಜಲ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಮಲೆನಾಡನಲ್ಲಿ ನೀರಿನ ಬರ ನೀಗಿಸಿ, ಅಂತರ್ಜಲ ಹೆಚ್ಚಿಸಲು ಸರ್ಕಾರ ಕೈಗೊಂಡಿರುವ ಕೆರೆಗಳ ಅಭಿವೃದ್ಧಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆಯೇ ಎಂಬ ಪ್ರಶ್ನೆ ಈಗ ಜನರನ್ನು ಕಾಡಲಾರಂಬಿಸಿದೆ. ಕಾಮಗಾರಿ ನಡೆದಿದೆ ಎಂದು ಸುಳ್ಳು ದಾಖಲೆ ಸೃಷ್ಟಿಸಿ ಅನುದಾನ ದುರ್ಬಳಕೆ ಮಾಡಿಕೊಂಡಿರುವ ವಿಷಯವೊಂದು ಮಾಹಿತಿ ಹಕ್ಕಿನಿಂದ ಬೆಳಕಿಗೆ ಬಂದಿದೆ.
ತಾಲೂಕಿನ ಮೆಣಸೆ ಗ್ರಾಪಂ ವ್ಯಾಪ್ತಿಯ ಕುಂತೂರು ಗ್ರಾಮದ ಹೊಸೂರು ಬಳಿ ಸಣ್ಣ ಕೆರೆ ಹೂಳೆತ್ತುವುದು, ಕೋಡಿ, ಏರಿ ಮತ್ತು ತೂಬು ದುರಸ್ತಿಯಲ್ಲಿ ಸಾವಿರಾರು ರೂ. ದುರ್ಬಳಕೆಯಾಗಿದೆ ಎನ್ನಲಾಗುತ್ತಿದೆ. 2018-19ನೇ ಸಾಲಿನ ಸಣ್ಣ ನೀರಾವರಿ ಕೆರೆಗಳ ವಾರ್ಷಿಕ ನಿರ್ವಹಣೆ ಮತ್ತು ದುರಸ್ತಿ ಯೋಜನೆಯಡಿಯಲ್ಲಿ ಈ ಕೆರೆಯ ದುರಸ್ತಿಗೆ 3.29 ಲಕ್ಷ ರೂ. ಅನುದಾನದೊಂದಿಗೆ ಅನುಮೋದನೆ ದೊರಕಿದೆ. ಗ್ರಾಪಂ ಸದಸ್ಯರು, ಸರ್ವೇಯರ್ ಹಾಗೂ ಸ್ಥಳೀಯರೊಂದಿಗೆ ಈ ಸರ್ಕಾರಿ ಕೆರೆಯನ್ನು ಪರಿಶೀಲಿಸಲಾಗಿತ್ತು. ಪ್ರಸ್ತುತ ಕೆರೆಯು 5ಮೀ ಉದ್ದ, 4ಮೀ ಅಗಲ ಇದ್ದು, ಉಳಿದ ಭಾಗ ಮುಚ್ಚಿ ಹೋಗಿದೆ.
ಕೆರೆ ಅಭಿವೃದ್ಧಿಪಡಿಸಲು 15ಮೀ ಉದ್ದ ಮತ್ತು 15 ಮೀ ಅಗಲಕ್ಕೆ ತೆಗೆಯುವುದರ ಜತೆಗೆ ತೂಬು ನಿರ್ಮಾಣ ಚೇಂಬರ್, ಏರಿ ಅಭಿವೃದ್ಧಿಪಡಿಸುವುದು ಸೇರಿದಂತೆ 8.50ಮೀ ಉದ್ದ ವಾಲ್ ನಿರ್ಮಾಣ ಮಾಡಲು ಒಟ್ಟು 3.29 ಲಕ್ಷ ಅನುದಾನದ ಅಂದಾಜು ಪಟ್ಟಿ ತಯಾರಿಸಲಾಗಿತ್ತು. ನಂತರ ಇದಕ್ಕೆ ತಾಂತ್ರಿಕ ಮತ್ತು ಆಡಳಿತಾತ್ಮಕ ಮಂಜೂರಾತಿ ದೊರಕಿತ್ತು.
ಕಾಮಗಾರಿ ಕೈಗೊಳ್ಳಲು ಮೊದಲ ಕಂತಲ್ಲಿ ಬಿಡುಗಡೆಯಾದ 83,765 ರೂ.ಗಳನ್ನು ಈಗಾಗಲೇ ಕಾಮಗಾರಿ ನಡೆಸದೆ ಗುಳುಂ ಮಾಡಲಾಗಿದೆ ಎಂಬ ದೂರು ಕೇಳಿ ಬಂದಿದೆ. ಕೆರೆಯಿಂದ ಒಂದು ಗುದ್ದಲಿಯಷ್ಟೂ ಮಣ್ಣು ತೆಗೆಯದೇ ಹಣ ಸ್ವಾಹಾ ಮಾಡಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಗತಿ ಮಾಹಿತಿ ಹಕ್ಕು ಕಾಯ್ದೆಯಡಿ ಮಾರನಕುಡಿಗೆ ಎಂ.ಆರ್. ಗಿರೀಶ್ ಎಂಬುವವರು ಸಂಪೂರ್ಣ ಮಾಹಿತಿ ಪಡೆದ ದಾಖಲೆಯಲ್ಲಿ ಬಹಿರಂಗಗೊಂಡಿದೆ.
ವಿಶೇಷವೆಂದರೆ ಈ ಕೆರೆ ದುರಸ್ತಿ ಕಾಮಗಾರಿಯು ಬದಲಾವಣೆಗೊಂಡ ಕಾಮಗಾರಿಯಾಗಿರುತ್ತದೆ. ಇದಕ್ಕೆ ಮೊದಲು ತಾಲೂಕಿನ ಧರೇಕೊಪ್ಪ ಗ್ರಾಪಂನ ಹೊನ್ನವಳ್ಳಿ ಗ್ರಾಮದ ಗದ್ದೆಬೈಲು ಕೆರೆಯ ದುರಸ್ತಿ ಕಾಮಗಾರಿಗಳಿಗಾಗಿ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿತ್ತು. ಆದರೆ ಜನಪ್ರತಿನಿಧಿಗಳ ಒತ್ತಾಯದ ಮೇರೆಗೆ ಅನುಮೋದನೆಗೊಂಡ ಕೆರೆ ಬದಲಾಯಿಸಿ ಮೆಣಸೆ ಗ್ರಾಪಂನ ಕುಂತೂರು ಗ್ರಾಮದ ಹೊಸೂರು ಕೆರೆಯನ್ನು ಆಯ್ಕೆ ಮಾಡಲಾಗಿತ್ತು ಎಂಬುದು ಚಿಕ್ಕಮಗಳೂರು ಪಂಚಾಯತ್ ರಾಜ ಇಂಜಿನಿಯರಿಂಗ್ ವಿಭಾಗ ತಿಳಿಸಿದೆ.
ಇದು ಸಾರ್ವಜನಿಕರಲ್ಲಿ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಜಲ ಸಂರಕ್ಷಣೆಗಾಗಿ ತಾಲೂಕಿನಲ್ಲಿ 10 ಕೆರೆಗಳ ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳಲು ಸರಕಾರ ತೀರ್ಮಾನಿಸಿತ್ತು. ಕುಂತೂರು ಗ್ರಾಮದ ಹಣಗಲಬೈಲ್ ಕೆರೆ, ಮೆಣಸೆ ಕೆರೆ, ಹೊಸ್ಕೆರೆ ಕೆರೆ, ಬಂಡ್ಲಾಪುರಕೆರೆ, ಕುಂತೂರು ಕೆರೆ, ಕಿರುಕೋಡು ದೊಡ್ಡ ಕೆರೆ ಹಾಗೂ ಮಾದಲಕೊಡಿಗೆ ಕೆರೆ ದುರಸ್ತಿಗೆ ಒಪ್ಪಿಗೆ ಕೇಳಲಾಗಿತ್ತು. ಆದರೆ ಈ ಕೆರೆಗಳ ದುರಸ್ತಿಗೆ ಇನ್ನೂ ಮುಂದಾಗದಿರುವುದು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.
ಶಾಸಕರು, ಜಿಪಂ ಸದಸ್ಯರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಅವ್ಯವಹಾರದ ಬಗ್ಗೆ ಗಮನ ಹರಿಸದಿರುವುದು ಸಹ ಆಶ್ಚರ್ಯಕ್ಕೆ ಕಾರಣವಾಗಿದೆ. ತಾಲೂಕಿನಲ್ಲಿ ಇಂತಹ ಎಷ್ಟು ಕಾಮಗಾರಿ ನಡೆದಿದೆಯೋ, ಎಷ್ಟು ಕೆರೆಗಳ ಅಭಿವೃದ್ಧಿಗೊಂಡಿದಿಯೋ ಎಂದು ಸಾರ್ವಜನಿಕರು ಪ್ರಶ್ನಿಸಲಾರಂಭಿಸಿದ್ದಾರೆ.
ಈ ಅವ್ಯವಹಾರದ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಸರ್ಕಾರ ಜಲ ಸಂರಕ್ಷಣೆಗಾಗಿ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಚೆಕ್ ಡ್ಯಾಂ, ಇಂಗುಗುಂಡಿ, ಕೃಷಿ ಹೊಂಡಗಳ ಮೂಲಕ ಜಲಸಮೃದ್ಧಿ ಮಾಡುವ ಕಾರ್ಯಕ್ಕೆ ಮುಂದಾಗಿದೆ. ಆದರೆ ದಾಖಲೆಗಳಲ್ಲಿ ಮಾತ್ರ ಕಾಮಗಾರಿ ನಡೆದಿರುವುದು ಕಂಡು ಬರುತ್ತದೆ. ರೈತರು ಶತಮಾನಗಳಿಂದ ನೆಚ್ಚಿಕೊಂಡು ಬಂದಿರುವ ದೀರ್ಘಾವಧಿ ಬೆಳೆಗಳನ್ನು ಉಳಿಸಿಕೊಳ್ಳಲು ನೀರಿನ ಆಸರೆ ಬೇಕಿದೆ. ಕೆರೆಯನ್ನು ನಿರ್ಮಿಸುವುದು ಹೂಳು ತುಂಬಿರುವ ಕೆರೆಗಳ ದುರಸ್ತಿಯ ಬಗ್ಗೆ ಅರ್ಜಿ ಸಲ್ಲಿಸುತ್ತಲೇ ಬಂದಿದ್ದಾರೆ. ಆದರೆ ಕಾಮಗಾರಿ ಮಾತ್ರ ಆಗುತ್ತಲೇ ಇಲ್ಲ. ಎಲ್ಲ ಕೆರೆಗಳ ಅಭಿವೃದ್ಧಿ ಕಾಮಗಾರಿ ಶಿಘ್ರ ಆಗಬೇಕು ಎಂಬುದು ರೈತರ ಒತ್ತಾಯವಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.