ಮಳೆ ದೇವರ ಸನ್ನಿಧಿಯಲ್ಲಿ ಪರ್ಜನ್ಯ ಜಪ
ಶ್ರೀ ಶಾಂತಾ ಸಹಿತ ಋಷ್ಯಶೃಂಗಸ್ವಾಮಿಗೆ ವಿಶೇಷ ಪೂಜೆ•20 ಮಂದಿ ಅರ್ಚಕರಿಂದ ಧಾರ್ಮಿಕ ಕಾರ್ಯಕ್ರಮ
Team Udayavani, Jun 7, 2019, 11:57 AM IST
ಶೃಂಗೇರಿ: ತಾಲೂಕಿನ ಕಿಗ್ಗಾದ ಶ್ರೀ ಋಷ್ಯಶೃಂಗ ದೇವಸ್ಥಾನದಲ್ಲಿ ನಡೆದ ಪರ್ಜನ್ಯ ಜಪದ ನಂತರ ಸಚಿವರಾದ ಡಿ.ಕೆ.ಶಿವಕುಮಾರ್ ಹಾಗೂ ಪರಮೇಶ್ವರ ನಾಯ್ಕ ಅವರಿಗೆ ಅರ್ಚಕರು ಫಲಾಮಂತ್ರಾಕ್ಷತೆ ನೀಡಿ ಗೌರವಿಸಿದರು.
ಶೃಂಗೇರಿ: ರಾಜ್ಯದಲ್ಲಿ ಉತ್ತಮ ಮಳೆ ಸುರಿದು ಸಮೃದ್ಧಿ ನೆಲೆಸಲಿ ಎಂದು ಮಳೆ ದೇವರೆಂದೇ ಕರೆಯಲ್ಪಡುವ ಕಿಗ್ಗಾದ ಶ್ರೀ ಶಾಂತಾ ಸಮೇತ ಶ್ರೀ ಋಷ್ಯ ಶೃಂಗಸ್ವಾಮಿ ಸನ್ನಿಧಿಯಲ್ಲಿ ಗುರುವಾರ ಸರಕಾರದ ಪರವಾಗಿ ಪರ್ಜನ್ಯ ಜಪ, ಹೋಮ ಹಾಗೂ ವಿಶೇಷ ಪೂಜೆಗಳು ವಿಧಿವತ್ತಾಗಿ ನೆರವೇರಿದವು.
ಕಿಗ್ಗಾದ ಸ್ವಾಮಿ ಸನ್ನಿಧಿಯಲ್ಲಿ ಗುರುವಾರ ಬೆಳಗ್ಗೆ 5ಗಂಟೆಯಿಂದಲೇ ಪರ್ಜನ್ಯ ಜಪ ಮತ್ತು ಹೋಮ ಕಾರ್ಯಗಳು ಆರಂಭಗೊಂಡವು. ಪುರೋಹಿತರಾದ ವಿಶ್ವನಾಥ ಭಟ್ಟ ಮತ್ತು ಶಿವರಾಂ ಭಟ್ಟರ ನೇತೃತ್ವದಲ್ಲಿ, 20 ಋತ್ವಿಜರ ತಂಡದಿಂದ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಸಚಿವರಾದ ಡಿ.ಕೆ.ಶಿವಕುಮಾರ್ ಹಾಗೂ ಪರಮೇಶ್ವರ ನಾಯ್ಕ ಪಾಲ್ಗೊಂಡಿದ್ದರು.
ಬುಧವಾರ ಸಂಜೆ ಶೃಂಗೇರಿ ಶ್ರೀ ಮಠಕ್ಕೆ ಆಗಮಿಸಿ ವಾಸ್ತವ್ಯ ಹೂಡಿದ್ದ ಸಚಿವದ್ವಯರು ಗುರುವಾರ ಬೆಳಗ್ಗೆ ಕಿಗ್ಗಾಕ್ಕೆ ತೆರಳಿ ಪರ್ಜನ್ಯ ಜಪದಲ್ಲಿ ಪಾಲ್ಗೊಂಡರು. ಸಚಿವರ ಸಮ್ಮುಖದಲ್ಲಿ ಸಂಕಲ್ಪ ಕೈಗೊಂಡ ಪುರೋಹಿತರು ನಂತರ ಪರ್ಜನ್ಯ ಜಪ ಹಾಗೂ ಹೋಮ ನೆರವೇರಿಸಿದರು.
ಇಷ್ಟಾರ್ಥ ಈಡೇರುತ್ತವೆ: ಮಳೆ ದೇವರೆಂದೇ ಹೆಸರಾಗಿರುವ ಸ್ವಾಮಿ ಸನ್ನಿಧಿಯಲ್ಲಿ ಮಳೆ ಕಡಿಮೆಯಾದಾಗ ಅಥವಾ ಮಳೆ ಹೆಚ್ಚಾದಾಗ ಪೂಜೆ ಸಲ್ಲಿಸದರೆ ಇಷ್ಟಾರ್ಥ ಈಡೇರುತ್ತವೆ ಎಂಬ ನಂಬಿಕೆ ಇದೆ. ಈ ಹಿಂದೆಯೂ ಸಹ ಇಲ್ಲಿ ಮಳೆಗಾಗಿ ಪ್ರಾರ್ಥಿಸಿ ಪೂಜೆ ಸಲ್ಲಿಸಲಾಗಿತ್ತು. ನಂತರ ರಾಜ್ಯಾದ್ಯಂತ ಮಳೆ ಸುರಿದಿತ್ತು. ಈ ಬಾರಿಯೂ ಬರ ಎದುರಾಗಿದ್ದರಿಂದ ವರುಣನ ಕೃಪೆಗಾಗಿ ಪರ್ಜನ್ಯಹೋಮ ಹಾಗೂ ವಿಶೇಷ ಪೂಜೆ ಸಲ್ಲಿಸಲಾಗಿದೆ.
ಪರ್ಜನ್ಯ ಜಪದ ನಂತರ ದೇವಸ್ಥಾನದಲ್ಲಿ ಮಹಾಮಂಗಳಾರತಿ ನಡೆಯಿತು. ನಂತರ ಉಭಯ ಸಚಿವರಿಗೆ ಅರ್ಚಕರು ಫಲ ಮಂತ್ರಾಕ್ಷತೆ ನೀಡಿದರು. ದೇವಸ್ಥಾನದ ಪರವಾಗಿ ಅರ್ಚಕ ಶಿವರಾಂಭಟ್ಟ ಸಚಿವರಿಗೆ ಶಾಲು ಹೊದಿಸಿ ಗೌರವಿಸಿದರು. ಶಾಸಕ ಟಿ.ಡಿ.ರಾಜೇಗೌಡ, ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕಿಗ್ಗಾ ಸುಬ್ಬಣ್ಣ, ಶ್ಯಾನುಭೊಗ್ ಅರುಣಾಚಲಾ, ತಹಶೀಲ್ದಾರ್ ಪಟ್ಟರಾಜೇಗೌಡ ಮತ್ತಿತರರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.