ಉನ್ನತಿ ಕೌಶಲ್ಯ ತರಬೇತಿ ಶಿಬಿರದ ಸದ್ಬಳಕೆ ಮಾಡಿಕೊಳ್ಳಿ
ಮೆಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಭಾರತಿ ಸಲಹೆ
Team Udayavani, Jul 21, 2019, 3:42 PM IST
ಶೃಂಗೇರಿ: ಮೆಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಉನ್ನತಿ ಕೌಶಲ್ಯ ತರಬೇತಿ ಶಿಬಿರದಲ್ಲಿ ಪ್ರಾಂಶುಪಾಲೆ ಭಾರತಿ ಮಾತನಾಡಿದರು. ತರಬೇತುದಾರ ಆಕಾಶ್, ಸಹ ಪ್ರಾಧ್ಯಾಪಕಿ ತೇಜಸ್ವಿನಿ ಇತರರಿದ್ದರು.
ಶೃಂಗೇರಿ: ರಾಜ್ಯ ಸರ್ಕಾರದ ಉನ್ನತಿ ಕೌಶಲ್ಯ ತರಬೇತಿ ಕಾರ್ಯಕ್ರಮ ವಿದ್ಯಾರ್ಥಿಗಳಲ್ಲಿ ಅಡಗಿರುವ ಬಹುಮುಖ ಪ್ರತಿಭೆಯ ವಿಕಸನಕ್ಕೆ ದಾರಿ ಮಾಡಿಕೊಡುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿ ತರಬೇತಿ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕೆಂದು ಮೆಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಭಾರತಿ ಸಲಹೆ ನೀಡಿದರು.
ಮೆಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳೆದ ಒಂದು ತಿಂಗಳಿನಿಂದ ನಡೆದ ರಾಜ್ಯ ಸರ್ಕಾರದ ಉನ್ನತಿ ಕೌಶಲ್ಯ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಹಲವಾರು ಪ್ರತಿಭೆಗಳು ಅಡಗಿವೆ. ಸರ್ಕಾರ ವಿದ್ಯಾರ್ಥಿಗಳಿಗಾಗಿ ಹತ್ತು ಹಲವು ಯೋಜನೆಗಳನ್ನು ಕಾಲೇಜಿನಲ್ಲಿ ಜಾರಿಗೆ ತರುತ್ತದೆ. ಅವೆಲ್ಲವನ್ನೂ ಬಳಸಿಕೊಂಡು ವಿದ್ಯಾರ್ಥಿಗಳು ಮುಂದೆ ಬರಬೇಕು ಎಂದು ಕಿವಿಮಾತು ಹೇಳಿದರು.
ನಿಮಗೆ ಎದುರಾಗುವ ಸ್ಪರ್ಧಾತ್ಮಕ ಪರೀಕ್ಷೆ, ಸಂದರ್ಶನ ಜೀವನ ನಿರ್ವಹಣೆಯಲ್ಲಿ ಸಹಕಾರಿಯಾಗಲಿವೆ. ಇಲ್ಲಿ ತರಬೇತಿ ಪಡೆದವರು ಅನ್ಯ ಕಾಲೇಜಿನ ವಿದ್ಯಾರ್ಥಿಗಳ ಹೋಲಿಕೆಯಲ್ಲಿ ವಿಭಿನ್ನವಾಗಿ ನಿಂತು ಸಮಾಜಕ್ಕೆ ಮಾದರಿಯಾಗಬೇಕು. ಪಡೆದ ತರಬೇತಿಯ ಫಲವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಹೇಳಿದರು.
ತರಬೇತುದಾರ ಆಕಾಶ್ ಮಾತನಾಡಿ, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ಬಗ್ಗೆ ಪದವಿ ವ್ಯಾಸಂಗದ ವೇಳೆಯಲ್ಲೇ ದೃಢ ನಿರ್ಧಾರ ತಳೆದು ಅಧ್ಯಯನಕ್ಕೆ ಮುಂದಾಗಬೇಕು. ಸುತ್ತಮುತ್ತಲ ಪ್ರದೇಶಗಳಲ್ಲಿ ನಡೆಯುವ ಘಟನೆಗಳ ಕುರಿತು ಸಾಮಾನ್ಯ ಜ್ಞಾನವನ್ನು ಸಂಪಾದಿಸಿರಬೇಕು. ನಾವು ನಡೆಸುವ ಉನ್ನತಿ ಕೌಶಲ್ಯ ತರಬೇತಿಯಲ್ಲಿ ತಾಯಿ-ತಂದೆಗೆ ಗೌರವ ಸಲ್ಲಿಸುವುದು, ಜೀವನದ ಮೌಲ್ಯ, ಕುಟುಂಬ ನಿರ್ವಹಣೆ ಹಾಗೂ ವೇದಿಕೆಗಳಲ್ಲಿ ಮಾತನಾಡುವ ಕಲೆ ಇದೆ. ತರಬೇತಿ ಪಡೆದವರು ತಮ್ಮ ಮುಂದಿನ ಜೀವನದಲ್ಲಿ ಎದುರಾಗುವ ಯಾವುದೇ ಸವಾಲುಗಳನ್ನು ಎದುರಿಸಲು ಶಕ್ತರಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಹ ಪ್ರಾಧ್ಯಾಪಕಿ ತೇಜಸ್ವಿನಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಜಯಶಾಲಿಗಳಾಗುವುದು ಒಂದು ಸವಾಲಾಗಿದೆ. ಇದಕ್ಕಾಗಿ ಅಭ್ಯರ್ಥಿಗಳು ತಮ್ಮ ಪದವಿ ವ್ಯಾಸಂಗದ ವೇಳೆಯಲ್ಲೇ ಉನ್ನತಿ ಕೌಶಲ್ಯ ತರಬೇತಿ ಪಡೆದು ತಯಾರಿ ಮಾಡಿಕೊಳ್ಳಬೇಕು. ಕಾಲೇಜು ಹಾಗೂ ಅಂತರ್ ಕಾಲೇಜು ಮಟ್ಟದಲ್ಲಿ ಹಲವು ಸ್ಪರ್ಧೆ, ಕಾರ್ಯಾಗಾರ, ವಿಚಾರ ಸಂಕಿರಣ, ಸಮಯ ನಿರ್ವಹಣೆ ಮೊದಲಾದ ಪರೀಕ್ಷೆಗಳು ಎದುರಾಗುತ್ತವೆ. ಆಗ ಇಲ್ಲಿ ನೀಡಿದ ತರಬೇತಿ ಖಂಡಿತ ನಿಮ್ಮ ನೆರವಿಗೆ ಬರುತ್ತದೆ ಎಂದು ಹೇಳಿದರು.
ಒಂದು ತಿಂಗಳ ತರಬೇತಿ ಶಿಬಿರದಲ್ಲಿ 300ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಸಹ ಪ್ರಾಧ್ಯಾಪಕರಾದ ಯೋಗಿತ, ಆಶಾ, ಮಂಜುನಾಥ್, ಕಿರಣ್‌ಕುಮಾರ್ ಮುಂತಾದವರು ಭಾಗವಹಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.