ಅಪಾಯಕಾರಿ ರಸ್ತೆ ಸೇತುವೆ ದುರಸ್ತಿ ಎಂದು?
ಶೃಂಗೇರಿ-ಕೊಪ್ಪ, ಶೃಂಗೇರಿ-ಕೆರೆಕಟ್ಟೆ ಮಾರ್ಗದ ಸೇತುವೆಗಳ ಸ್ಥಿತಿ ಅಯೋಮಯ-ಸಂಚಾರಕ್ಕೆ ಸಂಕಷ್ಟ
Team Udayavani, Oct 13, 2019, 5:00 PM IST
ರಮೇಶ್ ಕರುವಾನೆ
ಶೃಂಗೇರಿ: ಮಂಗಳೂರಿನಿಂದ ಶಿವಮೊಗ್ಗಕ್ಕೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 169ರ ರಸ್ತೆ ಸೇತುವೆಗಳಿಗೆ ವಾಹನಗಳು ಡಿಕ್ಕಿ ಹೊಡೆದು ಸೇತುವೆಗೆ ಧಕ್ಕೆಯಾಗುತ್ತಿದೆ. ಅಲ್ಲದೇ, ನಿರಂತರ ಅಪಘಾತಗಳು ಸಂಭವಿಸಿ ಸಾವು-ನೋವುಗಳಿಗೆ ಕಾರಣವಾಗುತ್ತಿದ್ದರೂ ಸರ್ಕಾರ ಸೇತುವೆಗಳ ದುರಸ್ತಿಗೆ ಮುಂದಾಗಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.
ಶೃಂಗೇರಿ-ಕೊಪ್ಪ, ಶೃಂಗೇರಿ-ಕೆರೆಕಟ್ಟೆ ಮಾರ್ಗದಲ್ಲಿರುವ 10ಕ್ಕೂ ಹೆಚ್ಚು ಸೇತುವೆಗಳು ತೀವ್ರ ಜಖಂಗೊಂಡಿದ್ದು, ರಾಜ್ಯದಲ್ಲಿ ಅತೀ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ತಾಣವಾಗಿರುವ ಶೃಂಗೇರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಪರಿಸ್ಥಿತಿ ಕಿಂಚಿತ್ ಸುಧಾರಿಸಿಲ್ಲ ಎಂಬುದು ವಾಹನ ಮಾಲಿಕರ ಆಕ್ರೋಶವಾಗಿದೆ.
ಶೃಂಗೇರಿ ಎಸ್.ಕೆ.ಬಾರ್ಡರ್, ಕಾರ್ಕಳ-ಮಂಗಳೂರು ರಸ್ತೆ ಮಲೆನಾಡು ಹಾಗೂ ಕರಾವಳಿ ನಡುವಿನ ಸಂಪರ್ಕ ಕಲ್ಪಿಸುವ ಜೀವನಾಡಿ ರಸ್ತೆಯಾಗಿದೆ. ಈ ರಸ್ತೆ ಅತ್ಯಂತ ಕಿರಿದಾಗಿದ್ದು, ಅಪಾಯಕಾರಿ ತಿರುವುಗಳಿಂದ ಕೂಡಿದೆ. ಡಾಂಬರು ಕಾಣದೆ ದಶಕಗಳೇ ಕಳೆದಿದೆ. ಅದರಲ್ಲೂ ಕೆರೆಕಟ್ಟೆ ಸಮೀಪದ ಗುಲುಗುಂಜಿಮನೆ ಸೇತುವೆ ಹಾಗೂ ಕೊರಕನಹಳ್ಳ ಸೇತುವೆಗಳು ಹಂತ ಹಂತವಾಗಿ ಕುಸಿಯುತ್ತ ರಸ್ತೆ ಸಂಪರ್ಕ ಕಡಿತಗೊಳ್ಳುವ ಅಂಚಿಗೆ ತಲುಪಿದೆ.
1955ರಲ್ಲಿ ನಿರ್ಮಿಸಿದ ಕೊರಕನಹಳ್ಳ ಸೇತುವೆಯ ತಡೆಗೊಡೆ ತುಂಡು ತುಂಡಾಗಿ ನದಿಗೆ ಬೀಳುತ್ತಿದೆ. ಸೇತುವೆ ಅಪಾಯಕಾರಿ ವಲಯವಾಗಿ ಪರಿಣಮಿಸಿದೆ. ಒಂದೆಡೆ ತಡೆಗೋಡೆ ಕೈಪಿಡಿಗಳು ಕುಸಿಯುತ್ತಿದ್ದರೆ, ಇನ್ನೊಂದೆಡೆ ವಾಹನಗಳು ಉರುಳಿ ಕೆಲ ಅಮಾಯಕ ಜೀವ ಬಲಿಪಡೆಯ ತೊಡಗಿವೆ. ಇನ್ನೂ ಶೀರ್ಲು ಹತ್ತಿರ ಹೊನ್ನೇಕಡೆಹಳ್ಳದ ಸೇತುವೆ ಜಖಂಗೊಂಡಿದ್ದು, ಇಲ್ಲಿಯೂ ಅನೇಕ ಬಾರಿ ಅಪಘಾತಗಳು ಸಂಭವಿಸಿವೆ ಎನ್ನುತ್ತಾರೆ ಸಾರ್ವಜನಿಕರು.
ಇಷ್ಟೆಲ್ಲಾ ನಡೆಯುತ್ತಿದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವಾಗಲಿ, ಸರ್ಕಾರ, ಜನಪ್ರತಿನಿಧಿಗಳಾಗಲಿ ಎಚ್ಚೆತ್ತುಕೊಳ್ಳದೆ ಗಾಢ ನಿದ್ರೆಗೆ ಜಾರಿವೆ. ಕನಿಷ್ಟ ಪಕ್ಷ ಕುಸಿದು ಬೀಳುತ್ತಿರುವ ಸೇತುವೆಯ ಕೈಪಿಡಿ ತಡೆಗೋಡೆ ನಿರ್ಮಿಸಲು ಮುಂದಾಗಿಲ್ಲ. ಅನಾಹುತ ತಪ್ಪಿಸಲು ಗ್ರಾಮಸ್ಥರು ಸೇತುವೆಯ ಎರಡೂ ಕಡೆ ತಡೆಬೇಲಿ ನಿರ್ಮಿಸಿದ್ದಾರೆ.
ರಸ್ತೆ ವಿಸ್ತರಣೆಗೆ ವಿರೋಧ: ಈ ಭಾಗದ ರಸ್ತೆ ಮತ್ತು ಸೇತುವೆ ದುರಸ್ತಿಗೆ ರಾಷ್ಟ್ರೀಯ ಉದ್ಯಾನದ ವಿರೋಧ ಇರುವ ಕಾರಣ ರಸ್ತೆ ಅಭಿವೃದ್ಧಿಗೊಳ್ಳುತ್ತಿಲ್ಲ. ಈ ಮಾರ್ಗ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯೊಳಗೆ ಬರುವುದರಿಂದ ವನ್ಯ ಜೀವಿಗಳಿಗೆ ತೊಂದರೆಯಾಗುತ್ತಿದೆ ಎಂಬ ನೆಪವೊಡ್ಡಿ ವನ್ಯಜೀವಿ ಇಲಾಖೆ ಇಲ್ಲಿನ ರಸ್ತೆ ಅಗಲೀಕರಣ, ರಸ್ತೆ ದುರಸ್ತಿ, ಸೇತುವೆ ದುರಸ್ತಿ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಪಡಿಸುತ್ತಲೇ ಬಂದಿದೆ. ಇತ್ತ ಹೆದ್ದಾರಿ ಪ್ರಾಧಿಕಾರ, ಜನಪ್ರತಿನಿಧಿಗಳ ನಿರ್ಲಕ್ಷ್ಯ
ವಹಿಸುತ್ತಲೇ ಬಂದಿದ್ದಾರೆ. ವನ್ಯಜೀವಿ ಇಲಾಖೆ ಹಾಗೂ ಹೆದ್ದಾರಿ ಪ್ರಾಧಿಕಾರದ ಜಂಗಿಕುಸ್ತಿ ನಡುವೆ ರಸ್ತೆ ಕಾಮಗಾರಿ ನನೆಗುದಿಗೆ ಬಿದ್ದಿದೆ. ಜನಪ್ರತಿನಿಧಿಗಳು ಇದು ರಾಜ್ಯ ಸರ್ಕಾರ, ಇದು ಕೇಂದ್ರ ಸರ್ಕಾರ ಅಧೀನದ್ದೆಂದು ಹೇಳಿ ಹಗ್ಗಾಜಗ್ಗಾಟ ಮಾಡುತ್ತಿದ್ದರೆ,
ಹೆದ್ದಾರಿ ಪ್ರಾಧಿಕಾರದವರು ವನ್ಯಜೀವಿ ಇಲಾಖೆ ಅಡ್ಡಿ ಎಂದು ತೋರಿಸುತ್ತಿವೆ. ವನ್ಯಜೀವಿ ಇಲಾಖೆ ಪ್ರಾಣಿಗಳಿಗೆ ತೊಂದರೆಯಾಗುತ್ತಿದೆ ಎಂಬ ಸಬೂಬು ಹೇಳುತ್ತಿವೆ.
ಒಟ್ಟಾರೆ ಪರಿಣಾಮ ಪ್ರತಿನಿತ್ಯ ಇಲ್ಲಿ ಸರಣಿ ಅಪಘಾತಗಳು ಸಂಭವಿಸುತ್ತಲೇ ಇವೆ. ಹೆಸರಿಗೆ ಮಾತ್ರ ರಾಷ್ಟ್ರೀಯ ಹೆದ್ದಾರಿಯಾದರೂ ಇಲ್ಲಿನ ತಿರುವುಗಳಿಂದ ಕೂಡಿದ ಇಕ್ಕಟ್ಟಾದ ರಸ್ತೆಯಲ್ಲಿ ಏಕಮುಖ ಸಂಚಾರ ಮಾತ್ರ ಸಾಧ್ಯ ಒಮ್ಮೆಲೆ ವಾಹನಗಳು ಎದುರು ಬದುರಾದರೆ ಅಪಘಾತ ಸಂಭವಿಸುವುದು ನಿಶ್ಚಿತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.