ಅನ್ನಭಾಗ್ಯ ಫಲಾನುಭವಿಗಳ ಪರದಾಟ
•ಇ-ಕೆವೈಸಿಯಿಂದ ಅಕ್ಕಿ ವಿತರಣೆಯಲ್ಲಿ ವಿಳಂಬ•ಮೇಲಿಂದ ಮೇಲೆ ಕೈಕೊಡುತ್ತಿರುವ ಸರ್ವರ್
Team Udayavani, Sep 20, 2019, 2:59 PM IST
ಸಿಂದಗಿ: ಪಟ್ಟಣದ ಪದ್ಮಾವತಿ ಮಹಿಳಾ ಸ್ವ-ಸಹಾಯ ಸಂಘದ ಪಡಿತರ ಅಂಗಡಿ ಮುಂದೆ ಜಮಾಯಿಸಿರುವ ಫಲಾನುಭವಿಗಳು.
ರಮೇಶ ಪೂಜಾರ
ಸಿಂದಗಿ: ರಾಜ್ಯ ಸರಕಾರ ಆಹಾರ ಸುರಕ್ಷಾ ಮಾಹೆ ಎಂಬ ಕಾರ್ಯಕ್ರಮ ಅನುಷ್ಠಾನಗೊಳಿಸಿದೆ. ಇದರಿಂದ ಅನ್ನಭಾಗ್ಯ ಯೋಜನೆಯಡಿ ಪಡಿತರ ಫಲಾನುಭವಿಗಳು ಅಕ್ಕಿ ಪಡೆಯಲು ಸೆ.11ರಿಂದ ಪರದಾಡುವ ಸ್ಥಿತಿ ಬಂದೋದಗಿದೆ.
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಸರ್ವರ್ ತೊಂದರೆಯಿಂದ ಪಡಿತರ ಫಲಾನುಭವಿಗಳಿಗೆ ಅಕ್ಕಿ ವಿತರಣೆಯಲ್ಲಿ ವಿಳಂಬವಾಗುತ್ತಿದೆ.
ಈ ಕಾರ್ಯಕ್ರಮದ ಮೂಲಕ ಪಡಿತರ ಚೀಟಿಗಳನ್ನು ಪರಿಶೀಲಿಸಿ ಅನರ್ಹ ಪಡಿತರ ಚೀಟಿಗಳನ್ನು ಗುರುತಿಸಿ ರದ್ದುಪಡಿಸಿ ಅರ್ಹರಿಗೆ ಪಡಿತರ ಚೀಟಿ ನೀಡಲಾಗುತ್ತಿದೆ. ಮೊದಲ ಹಂತದಲ್ಲಿ ಆಧಾರ್ ದೃಢೀಕರಣವನ್ನು (ಇ-ಕೆವೈಸಿ) ಮಾಡಲು ಸೆ.11ರಿಂದ ಪ್ರಾರಂಭಿಸಿದೆ. ಹೀಗಾಗಿ ಇಲಾಖೆಯ ಸರ್ವರ್ ಮೇಲೆ ಹೆಚ್ಚಿನ ಒತ್ತಡ ಬಿಳುತ್ತಿರುವುದರಿಂದ ಸರ್ವರ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇದರಿಂದ ಫಲಾನುಭವಿಗಳಿಗೆ ಅಕ್ಕಿ ವಿತರಣೆ ಸಮರ್ಪಕವಾಗಿಲ್ಲ.
ಆಧಾರ್ ದೃಢೀಕರಣವನ್ನು (ಇ-ಕೆವೈಸಿ) ಕಾರ್ಯ ಸೆ.11ರಿಂದ ಪ್ರಾರಂಭವಾಗಿ 3 ತಿಂಗಳ ಕಾಲ ನಡೆಯುತ್ತದೆ. ಈ ಕಾರ್ಯ ಸಂಪೂರ್ಣಗೊಳ್ಳುವವರೆಗೂ ಪಡಿತರ ವಿತರಣೆಯಲ್ಲಿ ವಿಳಂಬವಾಗುವ ಸಾಧ್ಯತೆಗಳು ಹೆಚ್ಚಿದೆ. ಆದ್ದರಿಂದ ಸರಕಾರ ಶೀಘ್ರದಲ್ಲಿ ಈ ಕಾರ್ಯ ಪೂರ್ಣಗೊಳಿಸಿ ಫಲಾನುಭವಿಗಳು ಅಲೆದಾಡುವುದನ್ನು ತಪ್ಪಿಸಬೇಕು.
ತಾಲೂಕಿನಲ್ಲಿ ಅಂತ್ಯೋದಯ ಅನ್ನ ಯೋಜನೆಯಡಿ 6,718 ಕುಟುಂಬಗಳಲ್ಲಿ 22,544 ಫಲಾನುಭವಿಗಳಿದ್ದಾರೆ. ಎಪಿಎಲ್ ಯೋಜನೆಯಡಿ 7,883 ಕುಟುಂಬಗಳಲ್ಲಿ 13,338 ಫಲಾನುಭವಿಗಳಿದ್ದಾರೆ. ಬಿಪಿಎಲ್ ಯೋಜನೆಯಡಿ 91,962 ಕುಟುಂಬಗಳಲ್ಲಿ 2,93,024 ಫಲಾನುಭವಿಗಳಿದ್ದಾರೆ. ಒಟ್ಟು 1,06,563 ಕುಟುಂಬಗಳಲ್ಲಿ 3,28,906 ಫಲಾನುಭವಿಗಳಿದ್ದಾರೆ. ಈ ಎಲ್ಲ ಪಡಿತರ ಫಲಾನುಭವಿಗಳು ಸೆಪ್ಟೆಂಬರ್ ತಿಂಗಳಿನಲ್ಲಿ ಅಕ್ಕಿ ಪಡೆಯಲು ಪರದಾಡುತ್ತಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.